ಶುಕ್ರವಾರ, ಏಪ್ರಿಲ್ 06, 2012

6-4-2012ರ ಶುಕ್ರವಾರ, ಕನ್ನಡ ಪ್ರಭ ದಲ್ಲಿ ಪ್ರಕಟವಾದ ನನ್ನ ಲೇಖನ

ಕಾಲಗತಿ ತಡೆಯಲು ಹೋಗಿ ಗತಕಾಲ ಸೇರಿಬಿಟ್ಟರೆ?
ಖಳನಟ ವಜ್ರಮುನಿ ಕೆನ್ನೆಯಂತಹ ರಸ್ತೆಗಳಲ್ಲಿ ಕುಟುಕುಟು ಶಬ್ದ ಮಾಡಿಕೊಂಡು, ಇವತ್ತೇ ಮನೆ ಸೇರುತ್ತೇನೋ ಇಲ್ಲವೋ ಎನ್ನುತ್ತಿದ್ದ ಲೂನಾದಂತೆ ಚಲಿಸುತ್ತಿದ್ದ ಕಾಲಚಕ್ರ ಇಂದು ಹೇಮಾಮಾಲಿನಿ ಕೆನ್ನೆಯಂತಹ ನ್ಯಾಷನಲ್ ಹೈವೇಗಳಲ್ಲಿ 200ಕಿ.ಮೀ ವೇಗದಲ್ಲಿ ಹಾರ್ಲೆ ಡೇವಿಡ್‌ಸನ್‌ನಂತೆ ಚಲಿಸುತ್ತಿದೆಯೇನೋ ಎನ್ನಿಸುತ್ತಿದೆ. 
ಕರ್ನಾಟಕದ ಜನಸಂಖ್ಯೆಯನ್ನು ಅದಷ್ಟೋ ವರ್ಷ ಮುಕ್ಕೋಟಿ-ಮುಕ್ಕೋಟಿ ಎನ್ನುತ್ತಲೇ ಇದ್ದರು. ಆದರೆ ಅದ್ಯಾವಾಗ ಚತುಷ್ಕೋಟಿ, ಪಂಚಕೋಟಿಯಾಗಿ, ಆರುಕೋಟಿಗೆ ಬಂದಿತೋ ಎಂಬುದು ತಿಳಿಯಲೇ ಇಲ್ಲ. ಇತಿಹಾಸ ಬರೆಯುವುದು ಈಗ ಅಷ್ಟೇನೂ ಸುಲಭದ ಕೆಲಸವಲ್ಲ. 1095ರಿಂದ 1272ರ ವರೆಗಿನ 179ವರ್ಷಗಳಲ್ಲಿ ಕ್ರಿಶ್ಚಿಯನ್ನರು ಮುಸ್ಲಿಮರ ವಿರುದ್ಧ 9ಬಾರಿ ಕ್ರೂಸೆಡ್ ನಡೆಸಿದರು ಎಂದು ಹೈಸ್ಕೂಲ್ ಪಾಠಗಳಲ್ಲಿ ಹೇಳಿದಷ್ಟು ಸಲೀಸಾಗಿ, ಕೇವಲ 239 ದಿನಗಳ ಸದಾನಂದಗೌಡರ ಆಡಳಿತವನ್ನು ವರ್ಣಿಸಲು ನಮಗೆ ಸಾಧ್ಯವಿಲ್ಲ. ದಿನಕ್ಕೆ ನೂರಾರು ಬೆಳವಣಿಗೆಗಳು, ಕನ್ನಡದ ನಾಲ್ಕೈದು-ಹಿಂದಿ ಇಂಗ್ಲಿಷ್‌ನ ಏಳೆಂಟು ನ್ಯೂಸ್‌ಚಾನೆಲ್‌ಗಳು, ಊರುತುಂಬಾ ಅಂತರ್ಜಾಲ, ತಲೆತುಂಬಾ ಮಾಹಿತಿಯ ಮಹಾಪೂರ. ಸೋಜಿಗವೆಂದರೆ ಇಷ್ಟೆಲ್ಲಾ ಇದ್ದೂ ಸಹ ವೋಟಿಗಾಗಿ ನೊಟು ಪ್ರಕರಣದಲ್ಲಿ ಬಿ.ಜೆ.ಪಿ ಸಂಸದರನ್ನು ಜೈಲಿಗಟ್ಟಿದ್ದು ಸರಿಯೋ ತಪ್ಪೋ ಎಂದು ಎದುರಾಳಿಗಳಿಗೂ ಮನವರಿಕೆಯಾಗುವಂತೆ-ಗಂಟೆಗಟ್ಟಲೆ ಚರ್ಚೆಯ ನಂತರವೂ-ಮಾಡಲು ಘಟಾನುಘಟಿ ವಕೀಲರಾದ ಅರುಣ್ ಜೈಟ್ಲಿ, ಅಭಿಷೇಕ್ ಸಿಂಘ್ವಿ, ಆನಂದ್ ಶರ್ಮ, ಕಪಿಲ್ ಸಿಬಲ್, ರವಿಶಂಕರ್ ಪ್ರಸಾದ್ ಅಂಥವರಿಗೇ ಸಾಧ್ಯವಾಗುತ್ತಿಲ್ಲ. ಟಿ.ವಿ ಚರ್ಚೆಯ ನಂತರ ಯಾವೊಬ್ಬನೂ ಸಹ ತನ್ನ ಮೊದಲಿದ್ದ ಮನೋಭಾವವನ್ನು ಬದಲಿಸಿಕೊಂಡು ತೆರಳಿದ ಒಂದೇ ಒಂದು ಉದಾಹರಣೆ ಇಲ್ಲ. ಹಾಗಿದ್ದಾಗ, ಮೊಘಲರ ಆಡಳಿತದಲ್ಲಿ ಜನಜೀವನ, ಕೃಷ್ಣದೇವರಾಯನ ಕಾಲದ ಆಡಳಿತ ಎಂದೆಲ್ಲಾ ಇದಮಿತ್ಥಂ ಎಂದು ಹೇಗೆ ಹೇಳಲು ಸಾಧ್ಯ? ತನ್ನ ಓದಿಗೆ ನಿಲುಕಿದ, ತನ್ನ ಜ್ಞಾಪಕದಲ್ಲಿ ಉಳಿದ, ತನ್ನ ಪೂರ್ವಾಗ್ರಹ ಮನಸ್ಸಿನಿಂದ ಒಬ್ಬ ತಜ್ಞ ಬರೆದ ಲೇಖನವನ್ನೇ ಇತಿಹಾಸ ಎನ್ನಬಹುದೇ ಹೊರತು ಇತಿ + ಹಾಸ ಎನ್ನುವಂತೆ ಹೀಗೇನಡೆದದ್ದು ಎನ್ನಲಾಗದು.
ಎರಡು ದಿನ ಟಿ.ವಿ, ಪೇಪರ್ ನೋಡದೇ ನಿಮ್ಮ ಸ್ನೇಹಿತರ ಅಡ್ಡಾಗೆ ಹೋಗಿ ಅವರ ಮಾತು ಕೇಳಿಸಿಕೊಳ್ಳಿ. ಏನೋ ಹೊಸ ವಿಚಾರಗಳು, ಒಂದಕ್ಕೂ ಲಿಂಕ್ ಸಿಗುತ್ತಾ ಇಲ್ಲ, ಯಾವುದೋ ಹೊಸ ಪ್ರಪಂಚಕ್ಕೆ ಬಂದಂತಹ ಅನುಭವ. ಎರಡೇ ದಿನದಲ್ಲಿ ನೀವು ಔಟ್‌ಡೇಟೆಡ್ ಆಗಿರುತ್ತೀರಿ. ಕಾಲದ ವೇಗಕ್ಕೆ ಸೆಡ್ಡು ಹೊಡೆದು ವರ್ಷಗಟ್ಟಲೆ ನಿಂತಲ್ಲೇ ನಿಂತಿರುವುದು ಟಿ.ವಿ ಧಾರಾವಾಹಿಗಳೆಂಬ ಗಟ್ಟಿಗಿತ್ತಿಯರೇ ಹೊರತು, ಸುದ್ದಿಗಳೆಂಬ ಮಿಣುಕು ಹುಳಗಳಲ್ಲ. 
ಈ ವೇಗದ ಚಕ್ರಕ್ಕೆ ಸಿಕ್ಕಿ ನರಳಿದ ಮತ್ತೊಬ್ಬ, ನಮ್ಮ ರೈತ. ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಅವನನ್ನು ಇದ್ದಕ್ಕಿದ್ದಂತೆ ಜಾಗತೀಕರಣ ಎಂಬ ಒಲಿಂಪಿಕ್ ರೇಸ್‌ಗಿಳಿಸಿ, ಇಲ್ಲಿ ಎಲ್ಲರೂ ಸಮಾನರು, ಸಮಾನ ಅವಕಾಶಗಳು ಎನ್ನಲಾಯಿತು. ಫಲಿತಾಂಶ-ಓಡಲಾಗದ ರೈತ ಮುಗ್ಗರಿಸಿ ಬಿದ್ದ. ಮಣ್ಣು ಮುಕ್ಕಿದ್ದು ಇಡೀ ದೇಶ. ಮಕಾಡೆ ಮಲಗಿದ ಅವನ ಮೇಲೆ ರತ್ನಗಂಬಳಿ ಹಾಸಿ ಎಂ.ಎನ್.ಸಿ ಗಳಿಗೆ ಸ್ವಾಗತ, ಗ್ಲೋಬಲ್ ಇನ್ವೆಸ್ಟರ್ಸ್‌ ಮೀಟ್‌ಗಳು, ರೈತರ ಫಲವತ್ತಾದ ಭೂಮಿ ಅವರ ಕೈಗಿತ್ತು ಭರ್ಜರಿ ಒಚಿಣ ಊಟಗಳು. ಬೆಳೆದ ಫಸಲಿನ ಬೆಲೆ ಇಳಿಕೆ, ಮಾರುಕಟ್ಟೆ ಸಮಸ್ಯೆ, ದಲ್ಲಾಳಿಗಳ ದಬ್ಬಾಳಿಕೆ ನಡುವೆಯೂ ತಾನು ಕೃಷಿ ಮಾಡುತ್ತೇನೆಂದರೆ ಬಂಗಾಳದಲ್ಲಿ ಗುಂಡಿನ ಧಾಳಿ, ಕರ್ನಾಟಕದಲ್ಲಿ ಗ್ರೆಗೊರಿ ಪತ್ರಾವೋನ ಮನೆ ನೆಲಸಮ, ಕೊನೆಗೆ ತನ್ನ ಜಮೀನಿಗೇ ತಾನು ಅತಿಕ್ರಮ ಪ್ರವೇಶಿಗ ಎಂಬ ಹಣೆಪಟ್ಟಿ. 
ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಂತೂ ಹಿಂದುಳಿದವರ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಕಂಪ್ಯೂಟರ್ ಕ್ಲಾಸ್‌ಗಳಿಗೆ ಹೋಗಿ ವಿಂಡೋಸ್ ಎಕ್ಸ್‌ಪಿ ಯನ್ನು ಕಲಿತು ಹೊರಗೆ ಬರುವಷ್ಟರಲ್ಲಿ ವಿಂಡೋಸ್ 7, 8ರ ಅವತಾರ ಆಗಿಹೋಗಿವೆ. ನನ್ನದು ಕಲರ್ ಮೊಬೈಲ್ ಗೊತ್ತಾ ! ಎಂದು ಹೆಮ್ಮೆಪಡುತ್ತಿರುವಾಗಲೇ ಐಫೋನ್ ಗಳು ಲಗ್ಗೆ ಇಟ್ಟಿವೆ. ಸಾಲ ತೀರಿಸಿಕೊಂಡ ದ್ವಿಚಕ್ರ ವಾಹನ ಪೂರ್ಣ ತನ್ನದಾಗುವ ಮೊದಲೇ ಅದು ಹಳೇ ಮಾಡೆಲ್ ಪಟ್ಟಿ ಸೇರಿಬಿಟ್ಟಿರುತ್ತದೆ.
ಎಲ್ಲಿಗೆ ಮುಟ್ಟಬಹುದು ಈ ವೇಗದ ಸ್ಪರ್ಧೆ? ಇದಕ್ಕೆಲ್ಲ ಮೂಲ ಪುರುಷರು ಯಾರು? ಅಮೆರಿಕ, ಚೀನಾ, ರಷ್ಯಾ, ರಾಜಕಾರಣಿಗಳು, ಬಹುರಾಷ್ಟ್ರೀಯ ಕಂಪೆನಿಗಳು, ಸರ್ಕಾರಿ ಅಧಿಕಾರಿಗಳು,.... ಯಾರು? ಕಾರಣ ಯಾರೇ ಇರಲಿ. ನಿಜವಾಗಲೂ ಬೇಕಿತ್ತಾ ಕಣ್ಣಿಗೆ ಏನೂ ಕಾಣದಂತೆ ಮಾಡುವ, ಗೊಂದಲದ ಧೂಳಲ್ಲಿ ನಮ್ಮನ್ನು ದಾರಿತಪ್ಪಿಸುವ ಈ ವೇಗ?
               

ಗುರುವಾರ, ಜುಲೈ 21, 2011

ಸರ್ಕಾರಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಕಲಿಯುವ ಹಕ್ಕಿಲ್ಲವೇ?


ಗೀತೋಪದೇಶ
         ರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎಂದರೆ ಪ್ರಯೋಗಾಲಯದಲ್ಲಿ ಸಾಕುವ ಇಲಿಗಳಂತೆ ಆಗಿದ್ದಾರೆ. ಅವರಿಗೆ ತಮ್ಮದೇ ಆದ ಭಾವನೆಗಳಿಲ್ಲ, ತಮಗೆ ಬೇಕಾಗಿರುವುದನ್ನು ಕೇಳುವ ಸ್ವಾತಂತ್ರ್ಯವೂ ಇಲ್ಲ. ದೇಶದಲ್ಲಿ ನಡೆಯುವ ಯಾವುದೇ ಹೊಸ ಪ್ರಯೋಗಗಳು ಸರ್ಕಾರಿ ಶಾಲೆಗಳಲ್ಲೇ ನಡೆಯುತ್ತವೆ ಅವಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಹಾಗೂ ಶಿಕ್ಷರನ್ನೇ ಉಪಯೋಗಿಸಿಕೊಳ್ಳಲಾಗುತ್ತದೆ. ಬುದ್ದಿಜೀವಿಗಳು, ಸಮಾಜವಾದಿಗಳೆನಿಸಿಕೊಂಡವರು ಎ.ಸಿ ರೂಮ್‌ಗಳಲ್ಲಿ ಕೂತು ತಾವು ವಿಶ್ವವಿದ್ಯಾಲಯದ ಮಟ್ಟದಲ್ಲಿ ಓದಿದ ವಿದೇಶೀ ಹರುಕು-ಮುರುಕು ಸರಕುಗಳನ್ನು ಸರ್ಕಾರಿ ಶಾಲಾ ಮಕ್ಕಳ ತಲೆಗೆ ಕಟ್ಟುತ್ತಿದ್ದಾರೆ.
  
ಇತ್ತ ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಪಠ್ಯದಲ್ಲಿ ಹಿಂದೆಲ್ಲಾ ಇದ್ದ ದೇಸೀ, ಸ್ಥಳೀಯ, ಭಾವನಾತ್ಮಕ ಪಾಠಗಳನ್ನೆಲ್ಲಾ ಕಳೆದುಕೊಂಡು ಕಾಗಕ್ಕ-ಗೂಬಕ್ಕನ ಕಥೆಗಳನ್ನು ಕಲಿಯುತ್ತಿದ್ದರೆ, ಅತ್ತ ಖಾಸಗಿ ಶಾಲೆಗಳು, International ಶಾಲೆಗಳು ತಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದಗಣಿತ, ಸಂಸ್ಕ್ಕತಗಳನ್ನು ಸರ್ಕಾರಿ ಪಠ್ಯಕ್ರಮದ ಹೊರತಾಗಿ ಕಲಿಸುತ್ತಿವೆ. ಶಾಲೆಗಳಲ್ಲಿ ಹೇಳಿಕೊಡದಿದ್ದಲ್ಲಿ ವಿಶೇಷವಾದ ಭಗವದ್ಗೀತೆ, ವೇದಗಣಿತ ಕ್ಲಾಸ್‌ಗಳಿಗೆ ಹಣತೆತ್ತು ಹೋಗುತ್ತಿದ್ದಾರೆ. ತಮ್ಮ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳು ಬರುತ್ತವೆ ಎಂದು ಹೇಳಿಕೊಳ್ಳುವುದು ಇಂದು ನಗರಗಳ ಪೋಷಕರಿಗೆ ಹೆಮ್ಮೆಯ ಮಾತಾಗಿದೆ. ಆದರೆ, ಸರಿಯಾಗಿ ಶಾಲೆಯ ಫೀಸನ್ನೇ ಕಟ್ಟಲು ಹೆಣಗುವ  ಸರ್ಕಾರಿ ಶಾಲಾ ಮಕ್ಕಳಿಗೆಲ್ಲಿಂದ ಬರಬೇಕು ಭಗವದ್ಗೀತೆ ಕ್ಲಾಸ್‌ನ ಭಾಗ್ಯ? 

Students of Universal Public School
 receiving their prizes  for Bhagavadgita Competition 
ಸಮಾಜ, ಸಮಾಜವಾದ ಎಂದೆಲ್ಲಾ ಹಾರಾಡುವ ನಮ್ಮ ಬುದ್ದಿಜೀವಿಗಳೆನ್ನುತ್ತಾರೆ, ’ಶಾಲೆಗಳಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಪಾಠಗಳನ್ನು ಕಲಿಸಬೇಕು, ಪಾಠಗಳು ಜಾತ್ಯಾತೀತವಾಗಿರಬೇಕು’ ಎಂದು. ಆದರೆ ಅವರು ಸಮಾಜಶಾಸ್ತ್ತ್ರದ ಮೂಲತತ್ವಗಳಲ್ಲೇ ಇರುವ, ’ಕಲೆ, ಮೌಲ್ಯ, ನೈತಿಕತೆ, ನಂಬುಗೆಗಳು, ಆದರ್ಶಗಳು-ಇಂತಹ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪದ್ಧತಿಯನ್ನು ಬಳಸುವುದು ಹಾಗೂ ಅದನ್ನು ಅಳೆಯುವುದು ಸಾಧ್ಯವಿಲ್ಲ’ ಎಂಬ ಮಾತನ್ನು ಮರೆತಂತಿದೆ. ಇವರ ’ವೈಜ್ಞಾನಿಕ’ ಎಂಬ ಪದ ಹಿಡಿದುಕೊಂಡು ಶಾಲಾ ಪಠ್ಯಕ್ರಮ ತಯಾರಿಸಿದರೆ, ಮಕ್ಕಳಿಗೆ ಮೇಲೆ ಹೇಳಿದ ಯಾವ ವಿಷಯಗಳನ್ನೂ ಕಲಿಸಲಾಗುವುದಿಲ್ಲ. ಬದಲಿಗೆ ಮಕ್ಕಳ ತಲೆ ಇಂಟರ್ನೆಟ್‌ನಂತೆ ಬೇಕು-ಬೇಡದ ಎಲ್ಲಾ ವಿಷಯಗಳನ್ನೂ ತುಂಬಿಕೊಂಡಿರುವ ಗೊಬ್ಬರ ಗುಂಡಿಯಾಗುತ್ತದೆ. ಇನ್ನು ಇವರು ಹೇಳುವ ಜಾತ್ಯಾತೀತ ಎಂಬ ತತ್ವವನ್ನು ಪ್ರಪಂಚದ ಯಾವ ದೇಶ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಹೇಳಿ? ಅದೊಂದು ಮುಖವಾಡ ಅಷ್ಟೆ. 

          ಇಂದಿನ ಶಿಕ್ಷಣದಲ್ಲಿ IQ(Intelligent Quotient) ಅನ್ನು ಮಾತ್ರ ಬೋಧಿಸಲಾಗುತ್ತಿದೆ. ಆದಷ್ಟೂ ಮಾಹಿತಿಗಳನ್ನು ಮಕ್ಕಳ ತಲೆಗೆ ತುಂಬುವುದು ಅದರ ಉದ್ದೇಶ. ಇದರ ಮಧ್ಯೆ ಕಳೆದು ಹೋಗುತ್ತಿರುವ EQ(Emotional Quotient) ಎಂಬ ಮೌಲ್ಯ, ನೈತಿಕತೆ, ಭಕ್ತಿಗಳಂತಹ ಗುಣಗಳನ್ನು ಕಲಿಸುವ ಗೋಜಿಗೆ ಇಂದಿನ ಶಿಕ್ಷಣ ಪದ್ಧತಿ ಹೋಗುತ್ತಿಲ್ಲ. 

          ಯಾವುದೇ ದೇಶದ ಅಭಿವೃದ್ದಿಯಾದರೂ ಕೂಡಾ ಅದು ಅಲ್ಲಿನ ಸ್ಥಳೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎನ್ನುವುದೂ ಸಹ ಸಮಾಜಶಾಸ್ತ್ತ್ರದ ಇನ್ನೊಂದು ಮಾತು. ಭಾರತೀಯ ಸಮಾಜವು ಭಗವದ್ಗೀತೆ, ರಾಮಾಯಣ, ಮಹಾಭಾರತಗಳನ್ನು ತನ್ನ ಮನಸ್ಸಿನಲ್ಲಿ ಸಾವಿರಾರು ವರ್ಷಗಳಿಂದಲೂ ಉಳಿಸಿಕೊಂಡು ಬಂದಿದೆ, ಅದರಂತೆಯೇ ನಡೆಯುತ್ತಿದೆ. ಅಥವಾ ಸಮಾಜ ಇರುವಂತೆಯೇ ಈ ಗ್ರಂಥಗಳು ರಚನೆಗೊಂಡಿವೆ, ಎರಡೂ ಒಂದಕ್ಕೊಂದು ಪೂರಕ. ಭಾರತ ಅಭಿವೃದ್ದಿಯಾಗಬೇಕಾದರೆ ಅದು ಈ ಸಮಾಜದ ಅವಿಭಾಜ್ಯ ಅಂಗಗಳಾದ ಇವುಗಳನ್ನು ತಿಳಿದುಕೊಂಡವರಿಂದ ಮಾತ್ರವೇ ಹೊರತು, ಕೇವಲ ವಿದೇಶೀ ತತ್ವಜ್ಞಾನಿಗಳ ಪುಸ್ತಕಗಳಿಂದ ಪದಗಳನ್ನು ಗಟ್ಟು ಹೊಡೆದವರಿಂದ ಅಲ್ಲ. 

          ಭಗವದ್ಗೀತೆಯನ್ನು ಕೇವಲ ಒಂದು ಧರ್ಮದ ಗ್ರಂಥ ಎಂದು ಯಾರಾದರೂ ಹೇಳಿದರೆ, ಮಹಾತ್ಮಾ ಗಾಂಧಿಯವರನ್ನು ’ರಾಷ್ಟ್ತ್ರಪಿತ’ ಎಂದು ಕರೆಯುವ ಹಾಗೆಯೇ ಇಲ್ಲ. ಕಾರಣ, ಅವರೇ ಹೇಳಿರುವಂತೆ ತಮ್ಮ ಮನಸ್ಸಿನಲ್ಲಿ ಗೊಂದಲಗಳು ಉಂಟಾದಾಗಲೆಲ್ಲಾ ಆ ಸ್ಥಿತಿಯಿಂದ ಹೊರಬರಲು ಅವರಿಗೆ ಸಹಕರಿಸುತ್ತಿದ್ದುದು ಭಗವದ್ಗೀತೆಯ ಶ್ಲೋಕಗಳೇ ಹೊರತು, ’ಸರ್ವಸಮಾನತೆಯನ್ನು ಸಾರುವ’ ! ಬುದ್ದಿಜೀವಿಗಳು ಬರೆದ ಪಠ್ಯಪುಸ್ತಕಗಳಲ್ಲ. ಇನ್ನು, ಭಗವದ್ಗೀತೆಯನ್ನು ಅವೈಜ್ಞಾನಿಕ ಎಂದು ಯಾರಾದರೂ ಹೇಳಿದರೆ, ಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ವಿಜ್ಞಾನಿಯಲ್ಲ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಐನ್‌ಸ್ಟೀನ್‌ಗೆ ಭಗವದ್ಗೀತೆಯ ಮುಂದೆ  ಪ್ರಪಂಚದ ಉಳಿದೆಲ್ಲಾ ಜ್ಞಾನವೂ ಅನುಪಯೋಗಿಯಂತೆ ಕಾಣುತ್ತಿತ್ತು.

          ಕೇವಲ, ಬಿಜೆಪಿ ಸರ್ಕಾರ ಭಗವದ್ಗೀತೆಗೆ ಬೆಂಬಲವಾಗಿ ನಿಂತಿದೆ ಎಂದೋ, ಒಬ್ಬರು ಸ್ವಾಮೀಜಿಯವರ ನೇತೃತ್ವದಲ್ಲಿ ಇದರ ಅಭಿಯಾನ ನಡೆಯುತ್ತಿದೆ ಎಂದೋ, ಕಾಗೇರಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿಯೋ ಅರಚಾಡುವ ಬದಲು, ಭಾರತದ ಮಾನಸಿಕತೆಯನ್ನೊಮ್ಮೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಭಗವದ್ಗೀತೆಯಲ್ಲಿ ಇಲ್ಲಿನ ಮಣ್ಣಿನ ವಾಸನೆ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವರ್ಷಗಳಿಂದ ಅದು ಜನಮಾನಸದಲ್ಲಿ ಉಳಿದುಕೊಂಡು ಬಂದಿದೆ. ಬಿಜೆಪಿ ಸರ್ಕಾರ, ಕಾಗೇರಿ, ಸ್ವಾಮೀಜಿಗಳು ಇರಲಿ-ಬಿಡಲಿ, ಬುದ್ದಿಜೀವಿಗಳು ಎಷ್ಟೇ ಅರಚಾಡಲಿ, ಅದು ಇದ್ದೇ ಇರುತ್ತದೆ, ಇದು ಸತ್ಯ. ಆದರೆ, ಈ ಸತ್ಯ ಕೇವಲ ಹಣವಂತರ ಮಕ್ಕಳಿಗೆ, ಖಾಸಗಿ ಶಾಲಾ ಮಕ್ಕಳಿಗೆ ಸಿಕ್ಕರೆ ಸಾಕೇ ಅಥವಾ ನಮ್ಮ ಸರ್ಕಾರೀ ಶಾಲೆಗೆ ಬರುವ ಬಡ ಮಕ್ಕಳಿಗೂ ಬೇಕೇ-ಬೇಡವೇ ಎಂಬುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ.