ಭಗವದ್ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಗವದ್ಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಅಕ್ಟೋಬರ್ 15, 2021

ರಾಜಕೀಯ ದೃಷ್ಟಿಯಲ್ಲಿ ಮೋಹನ ಭಾಗವತ್‌ ಭಾಷಣ

ವಿಶ್ವದ ಅತಿದೊಡ್ಡ ಮಾನವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಸದ್ಯದಲ್ಲೆ, ಅಂದರೆ 2025ರಲ್ಲಿ 100ನೇ ಸಂಸ್ಥಾಪನಾ ವರ್ಷವನ್ನು ಆಚರಿಸಲಿದೆ. ಪ್ರತಿ ವರ್ಷ ಆರೆಸ್ಸೆಸ್‌ ಸರಸಂಘಚಾಲಕರು ನಾಗಪುರದಿಂದ ನೀಡುವ ವಿಜಯದಶಮಿ ಭಾಷಣ ಸಂಘದ ಕಾರ್ಯಕರ್ತರ ಜತೆಗೆ ಸರ್ಕಾರಗಳು, ಸಾಮಾನ್ಯ ಜನರು, ತಜ್ಞರು, ವಿವಿಧ ಕ್ಷೇತ್ರದವರನ್ನು ಕುರಿತಾಗಿರುತ್ತದೆ. ಇತ್ತೀಚಿನ ದಶಕದಲ್ಲಿ ವಿಜಯ ದಶಮಿ ಭಾಷಣಕ್ಕೆ ಹೆಚ್ಚಿನ ಕುತೂಹಲ ಏರ್ಪಡುತ್ತಿದೆ. ಅದಕ್ಕೆ ಮೊದಲ ಕಾರಣ, ದೇಶದ ರಾಜಕಾರಣದ ಮೇಲೆ ಆರೆಸ್ಸೆಸ್‌ ಹೊಂದಿರುವ ಪ್ರಭಾವ. ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಾಂಸ್ಕೃತಿಕ ಭಾರತ ನಿರ್ಮಾಣಕ್ಕೆ ರಾಜಕೀಯವೂ ಒಂದು ಸಾಧನ ಎಂದು ಭಾವಿಸಿರುವುದರಿಂದ ರಾಜಕೀಯದಿಂದ ಸಂಪೂರ್ಣ ವಿಮುಖತೆ ಆರೆಸ್ಸೆಸ್ಸಿಗೆ ಇಲ್ಲ. ಎರಡನೇ ಸರಸಂಘಚಾಲಕ ಗೋಳ್ವಲ್ಕರ್‌ ಗುರೂಜಿ ಅವರ ನಿರ್ದೇಶನದ ಮೇರೆಗೆ, ಕಾರ್ಮಿಕ, ರೈತ, ವಿದ್ಯಾರ್ಥಿ, ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನ ಕಾರ್ಯಕರ್ತರ ಮೂಲಕ ಸಂಘಟನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಜನಸಂಘ ಎಂದಿದ್ದ ಆ ಸಂಘಟನೆ ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಗಿದೆ. ಸದ್ಯ ಕಳೆದ 7 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ವಿಜಯ ದಶಮಿ ಭಾಷಣವು ರಾಜಕೀಯವಾಗಿದ್ದಲ್ಲ, ಅದು ಒಟ್ಟಾರೆ ಸಮಾಜ, ಇತಿಹಾಸ, ಮುಂದಿನ ದಿಕ್ಕುಗಳ ಕುರಿತಾಗಿದ್ದು ಎಂದು ಹೇಳಿದರೂ, ಚಲನಶೀಲ ಸಂಘಟನೆಯಾಗಿ ತತ್ಕಾಲೀನ ರಾಜಕೀಯ ಪರಿಸ್ಥಿತಿಗಳಿಗೂ ಸ್ಪಂದಿಸುವುದು ಸಹಜವಾಗಿಯೇ ಇರುತ್ತದೆ. ಕೆಲವೊಮ್ಮೆ ನೇರವಾಗಿ, ಆದರೆ ಬಹುತೇಕ ಬಾರಿ ಪರೋಕ್ಷವಾಗಿ ದೇಶದ ರಾಜಕೀಯ ಸ್ಥಿತಿಗತಿಗೆ ವಿಜಯದಶಮಿ ಭಾಷಣ ಸ್ಪಂದಿಸಿದೆ.

ಈ ವರ್ಷದ ವಿಜಯ ದಶಮಿ ಭಾಷಣದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ರಾಜಕೀಯವಾಗಿ ಅನೇಕ ಸಂದೇಶಗಳನ್ನು ನೀಡಿದ್ದಾರೆ.

1. ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ಶಾಂತಿಯ ಮಾರ್ಗದ ಜತೆಗೆ ಸಶಸ್ತ್ರ ಕ್ರಾಂತಿಯ ಮೂಲಕವೂ ಹೌದು ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಸಶಸ್ತ್ರ ಕ್ರಾಂತಿಯಿಂದಲೇ ಸ್ವತಂತ್ರ್ಯ ದೊರಕಿದ್ದು, ಶಾಂತಿಯ ಪಾತ್ರ ಅತ್ಯಂತ ಕಡಿಮೆ ಎಂದು ಕ್ಲೆಮೆಂಟ್‌ ಆಟ್ಲಿಯನ್ನು ಉದಾಹರಿಸುತ್ತಿದ್ದ ಸ್ಥಿತಿಯಿಂದ ಇದು ಸ್ವಲ್ಪ ಮಟ್ಟಿಗೆ ಹೊರಳಿ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಹೆಚ್ಚೆಚ್ಚು ಧನಾತ್ಮಕ ಸ್ವರೂಪದಲ್ಲಿ ಉದಾಹರಿಸಲಾಗುತ್ತಿರುವುದೂ ಕಳೆದ ಕೆಲವು ವರ್ಷಗಳಲ್ಲಾದ ಬದಲಾವಣೆ.

2. ಜಾತಿಗಳ ನಡುವೆ ಸಮರಸತೆಯ ಬದಲಿಗೆ ಪರಸ್ಪರ ಧ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ, ನೇರವಾಗಿ ರಾಜಕೀಯ ಕ್ಷೇತ್ರದತ್ತ ಬೊಟ್ಟು ಮಾಡಿದ್ದಾರೆ. ಏಕೆಂದರೆ ಜಾತಿಗಳು ಇಂದಿನ ಚುನಾವಣೆಯ ಕೇಂದ್ರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗಷ್ಟೇ ಒಂದು ಭಾಷಣದಲ್ಲಿ, ರಾಜಕಾರಣವು ಸಮಾಜವನ್ನು ಒಡೆಯುವ ಶಕ್ತಿಯನ್ನು ಮಾತ್ರ ಹೊಂದಿದೆಯೇ ಹೊರತು, ಜೋಡಿಸುವುದು ಅದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರ ಮುಂದುವರಿದ ಭಾಗದಂತೆ ಇದು. ಜತೆಗೆ, ಇತ್ತೀಚೆಗೆ ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವೆ ನಡೆದ ರಕ್ತಸಹಿತ ಸಂಘರ್ಷದ ಕುರಿತು ಪರೋಕ್ಷವಾಗಿ, ಕಟುವಾಗಿ ಟೀಕಿಸುತ್ತ, ಒಂದೇ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಎರಡು ರಾಜ್ಯಗಳು ಹೊಡೆದಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಾಷೆಯ ವಿಚಾರದಲ್ಲೂ ವಿಭಜನೆ ಸೃಷ್ಟಿಸಿ ಅರಾಜಕತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

3.  ಒಟಿಟಿ ಪ್ಲಾಟ್‌ಫಾರಂ, ಬಿಟ್‌ಕಾಯಿನ್‌, ಡ್ರಗ್ಸ್‌ಗಳ ಹಾವಳಿ ತಿಳಿಸುತ್ತಲೇ ಈಗಷ್ಟೇ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರನಟ ಶಾಹ್‌ರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿಚಾರವನ್ನು “ಉಚ್ಛ ವರ್ಗದವರಿಂದ” ಎಲ್ಲರಿಗೂ ಇದರ ತೊಂದರೆ ತಟ್ಟಿದೆ ಎಂದು ಉದಾಹರಿಸಿದರು. ಇವುಗಳನ್ನು ತಡೆಯಲು ಕುಟುಂಬ ವ್ಯವಸ್ಥೆ, ಮನಸ್ಸಿನ ನಿಯಂತ್ರಣಕ್ಕೆ ಒತ್ತು ನೀಡಿದರು.

4. ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ನೀಡುತ್ತ ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್‌ ಅವರ ಉದಾಹರಿಸಿ, ನಂತರದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದನ್ನು ಉದಾಹರಿಸಿದರು. ಪರಸ್ಪರ ಎರಡೂ ಪ್ರದೇಶಗಳಲ್ಲಿ ಸಂವಹನ ಇಲ್ಲದೆಯೂ ಸಮಾನ ಆಲೋಚನೆ ಇಡೀ ದೇಶದಲ್ಲಿ ಇದೆ ಎನ್ನುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತ ಪ್ರತ್ಯೇಕ ಎನ್ನುವ ಮಾತಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ದಕ್ಷಿಣದಲ್ಲೂ ವಿಶೇಷವಾಗಿ, ಪ್ರತ್ಯೇಕತೆಯ ಮಾತನ್ನು ತೀವ್ರವಾಗಿ ಪ್ರತಿಪಾದಿಸುವ ತಮಿಳುನಾಡಿನ ಉದಾಹರಣೆಯನ್ನೇ ನೀಡಿದ್ದು ವಿಶೇಷವಾಗಿತ್ತು.

5. ದೇಶದ ಅಖಂಡತೆ, ಸ್ವತಂತ್ರ ಹೋರಾಟಗಳ ಕುರಿತು ವಿವರಿಸುವಾಗ ಮೋಹನ್‌ ಭಾಗವತ್‌ ಅವರು ಆಯ್ಕೆ ಮಾಡಿಕೊಂಡ ಉದಾಹರಣೆಗಳು ಇಂದಿನ ರಾಜಕೀಯ ಸ್ಥಿತಿಗೆ ಅನುಗುಣವಾಗಿವೆ. ಮೊದಲಿಗೆ, ಧರ್ಮವನ್ನು ಉಳಿಸುವ ಸಲುವಾಗಿ ಬಲಿದಾನಗೈದ ಗುರು ತೇಗ್‌ಬಹದ್ದೂರ್‌ ಅವರ ಉದಾಹರಣೆಯನ್ನು ಮೊದಲಿಗೆ ನೀಡಿದ್ದಾರೆ. ಇದು ಪಂಜಾಬ್‌ ಕೇಂದ್ರಿತವಾಗಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧವಾದ ಮಾತಿಗಿಂತಲೂ, ಆ ಹೋರಾಟದೊಳಗೆ ನುಸುಳಿರುವ ಖಾಲಿಸ್ಥಾನ ಮಾನಸಿಕತೆಯನ್ನು ಉದ್ದೇಶಿಸಿದಂತಿದೆ. ತೇಗ್‌ ಬಹದ್ದೂರ್‌ “ಹಿಂದ್‌ ಕಾ ಚಾದರ್‌ʼ, “ವೀರರ ಆಕಾಶಗಂಗೆಯ ಸೂರ್ಯ” ಎಂದು ಬಣ್ಣಿಸಿದ್ದಾರೆ.

-ಎರಡನೆಯದಾಗಿ ಸ್ವತಂತ್ರ ಜೀವನಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ ಎನ್ನುತ್ತ, ಮೊದಲಿಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಪಸಾಯನದಾನ ಹಾಗೂ ಎರಡನೆಯದಾಗಿ ಪಶ್ಚಿಮ ಬಂಗಾಳದ ರವೀಂದ್ರನಾಥ ಠಾಗೋರರ ಕವಿತೆಯನ್ನು ಉದಾಹರಿಸಿದರು. ಮುಂದುವರಿದು, ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರುಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದಿರುವುದು ಈ ಎರಡೂ ರಾಜ್ಯಗಳಲ್ಲಿರುವ, ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಡೆಯನ್ನು ಟೀಕಿಸಿದ್ದು ಎಂದು ಅರ್ಥೈಸಬಹುದು.

6. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವ ಮೂಲಕ, ಕರೊನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಅಲೋಪತಿ ನಡುವೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ಎಲ್ಲ “ಪಥಿ”ಗಳೂ ತಮ್ಮತನವನ್ನು ಉಳಿಸಿಕೊಂಡು, ತಮ್ಮದೇ ಶ್ರೇಷ್ಠ ಎಂಬ ಅಹಂಕಾರವನ್ನು ತ್ಯಜಿಸಬೇಕು ಎಂದು ಹೇಳಿದರಾದರೂ, ಈ ಮಾತು, ಆಯುರ್ವೇದದ ಕುರಿತು ಬಹಿರಂಗ ಸಮರ ಸಾರಿದ್ದ ಅಲೋಪಥಿ ಕ್ಷೇತ್ರದತ್ತ ಬೊಟ್ಟುಮಾಡಿದಂತಿತ್ತು.

7. ಭಾರತೀಯ ದೃಷ್ಟಿಯ ಧರ್ಮ ಕೇಂದ್ರಿತ ಅರ್ಥ ಮತ್ತು ಕಾಮಗಳನ್ನೊಳಗೊಂಡ ಆರ್ಥಿಕತೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಏಳು ವರ್ಷದಲ್ಲಿ ಈ ಕುರಿತು ನಡೆದಿರಬಹುದಾದ ಅಂತಹ ಯಾವುದೇ ಉದಾಹರಣೆಯನ್ನು ನೀಡದೆ ಸಮಸ್ಯೆಯನ್ನಷ್ಟೆ ಪಟ್ಟಿ ಮಾಡಿದ್ದು ಗಮನಿಸಿದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸೂಚಿಸುವಂತಿತ್ತು. ಇನ್ನಾದರೂ ಇತ್ತ ಗಮನ ಹರಿಸಿ ಎಂದು ತಿಳಿಸಿದಂತಿತ್ತು.

8. ಜನಸಂಖ್ಯಾ ನಿಯಂತ್ರಣದ ಕುರಿತು ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲೆ ನೇರ ಆರೋಫ ಮಾಡದೆ, ಬಹಳ ರಾಜತಾಂತ್ರಿಕವಾದ ಭಾಷೆಯನ್ನು ಬಳಸುವ ಮೂಲಕ ಸಮರ್ಥನೆ ಮಾಡಿದರು. ಜತೆಗೆ, ಈ ವಿಷಯವನ್ನು 2015ರ ಸಭೆಯಲ್ಲೇ ನಿರ್ಣಯ ಮಾಡಲಾಗಿದೆ ಎಂದು ಅಲ್ಲಿನ ನಿರ್ಣಯವನ್ನು ಓದಿದರು. ಬಹುಶಃ ಸಮಾನ ನಾಗರಿಕ ಸಂಹಿತೆ ಎಂಬುದು ಸದ್ಯದಲ್ಲೆ ಅಥವಾ 2024ರ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲ ಲಕ್ಷಣಗಳೂ ಇವೆ. ಚುನಾವಣೆ ಕಾಲದಲ್ಲಿ ಆರೆಸ್ಸೆಸ್‌ ಈ ವಿಚಾರ ಪ್ರಸ್ತಾಪಿಸುತ್ತಿದೆ ಎಂಬ ಆರೋಪ ಬಾರದಂತೆ 2015ರ ನಿರ್ಣಯವನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ.

9. ದೇವಸ್ಥಾನಗಳನ್ನು ಸರ್ಕಾರ ನಿರ್ವಹಣೆ ಮಾಡುವುದರ ಕುರಿತು ಬಹುತೇಕ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಮಾಜಕ್ಕೆ ದೇವಸ್ಥಾನವನ್ನು ನೀಡಿದರೆ ಅದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಸಮಾಜ ಹೊಂದಿದೆಯೇ ಎಂಬುದನ್ನೂ ಪ್ರಶ್ನಿಸಿದರು. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿ, ಕರ್ನಾಟಕದಲ್ಲಿ ದೇವಸ್ಥಾನದ ಕುರಿತು ಇತ್ತೀಚೆಗೆ ನಡೆದ ವ್ಯಾಪಕ ಚರ್ಚೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನಗಳ ಕುರಿತು ಏಕಾಭಿಪ್ರಾಯ ಮೂಡಿಸುವ ಪ್ರಯತ್ನ ಇದ್ದಂತಿದೆ. ಭೂಮಿಯ ವಿಚಾರವು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾದ್ಧರಿಂದ ದೇವಸ್ಥಾನ ರಕ್ಷಣೆಗಾಗಿ ಕೇಂದ್ರದಿಂದ ಕಾಯ್ದೆ ತರಲಾಗದು.

10. ಇತ್ತೀಚಿನ ದಿನಗಳಲ್ಲಿ ಮೋಹನ್‌ ಭಾಗವತ್‌ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಹಿಂದು ಮುಸ್ಲಿಂ ಏಕ ಮೂಲದ ವಿಚಾರವನ್ನು ಇಲ್ಲಿಯೂ ಪ್ರಬಲವಾಗಿ ಮಂಡಿಸಿದರು. “ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು” ಎನ್ನುತ್ತ ಹಸನ್ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂದು ಸ್ಮರಿಸಿದರು.

11. ಇತ್ತೀಚೆಗಷ್ಟೆ ಸಾವರ್ಕರ್‌ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್‌ ಭಾಗವತ್‌ ಈ ಭಾಷಣದಲ್ಲೂ ಸಾವರ್ಕರ್‌ ಉದಾಹರಣೆ ನೀಡಿದರು. ಇದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿ, ಸಾವರ್ಕರ್‌ ಕ್ಷಮಾಪಣೆ ಕೋರಿದ್ದು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಎಂದಿದ್ದರು. ಜಾಗೃತ ಭಾರತವು ಗೀತೆಯ ಸಾರವನ್ನೇ ಹೇಳುತ್ತದೆ ಎಂಬ ಸಾವರ್ಕರ್‌ ಮಾತನ್ನು ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಉದಾಹರಿಸಿದರು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‌ ಕುರಿತ ಮಾತುಗಳು ರಾಷ್ಟ್ರ ರಾಜಕಾರಣ, ಚರ್ಚೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಕರ್ನಾಟಕದವರೇ ಆದ ವಿಕ್ರಂ ಸಂಪತ್‌ ಅವರು ಸಾವರ್ಕರ್‌ ಕುರಿತು ರಚಿಸಿದ ಕೃತಿಯೂ ಬಿಡುಗಡೆ ಆಗಿದೆ. ಇದೆಲ್ಲದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಇದೇ ದಿನದಂದು ಅಂಡಮಾನ್‌ನ ಸೆಲ್ಯುಲರ್‌ ಜೈಲಿಗೆ ಭೇಟಿ ನೀಡಿದರು. ಸಾವರ್ಕರ್‌ ಅವರನ್ನು ಕೂಡಿಟ್ಟಿದ್ದ ಕೋಣೆ, ಅವರ ಸ್ಮರಣೆಯುಳ್ಳ ಬರಹಗಳನ್ನು ವೀಕ್ಷಿಸಿದರು. ಸಾವರ್ಕರ್‌ ಅವರ ಜೀವನವನ್ನು ಅನುಮಾನದಿಂದ ನೋಡುವವರನ್ನು ಟೀಕಿಸಿದರು. ಸದ್ಯದಲ್ಲೇ ಸಾವರ್ಕರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಬಹುದು. ಸಾವರ್ಕರ್‌ ಹೆಸರು ಸದಾ ಸಂಚಲನ ಸೃಷ್ಟಿಸುವ ಶಕ್ತಿ ಹೊಂದಿದ್ದು, ಲೋಕಸಭೆ ಚುನಾವಣೆಗೂ ಇದು ಬಿಜೆಪಿಗೆ ಸಹಾಯವಾಗುವ ಎಲ್ಲ ಸಾಧ್ಯತೆ ಇದೆ.

ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಗುರುವಾರ, ಜುಲೈ 21, 2011

ಸರ್ಕಾರಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಕಲಿಯುವ ಹಕ್ಕಿಲ್ಲವೇ?


ಗೀತೋಪದೇಶ
         ರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎಂದರೆ ಪ್ರಯೋಗಾಲಯದಲ್ಲಿ ಸಾಕುವ ಇಲಿಗಳಂತೆ ಆಗಿದ್ದಾರೆ. ಅವರಿಗೆ ತಮ್ಮದೇ ಆದ ಭಾವನೆಗಳಿಲ್ಲ, ತಮಗೆ ಬೇಕಾಗಿರುವುದನ್ನು ಕೇಳುವ ಸ್ವಾತಂತ್ರ್ಯವೂ ಇಲ್ಲ. ದೇಶದಲ್ಲಿ ನಡೆಯುವ ಯಾವುದೇ ಹೊಸ ಪ್ರಯೋಗಗಳು ಸರ್ಕಾರಿ ಶಾಲೆಗಳಲ್ಲೇ ನಡೆಯುತ್ತವೆ ಅವಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಹಾಗೂ ಶಿಕ್ಷರನ್ನೇ ಉಪಯೋಗಿಸಿಕೊಳ್ಳಲಾಗುತ್ತದೆ. ಬುದ್ದಿಜೀವಿಗಳು, ಸಮಾಜವಾದಿಗಳೆನಿಸಿಕೊಂಡವರು ಎ.ಸಿ ರೂಮ್‌ಗಳಲ್ಲಿ ಕೂತು ತಾವು ವಿಶ್ವವಿದ್ಯಾಲಯದ ಮಟ್ಟದಲ್ಲಿ ಓದಿದ ವಿದೇಶೀ ಹರುಕು-ಮುರುಕು ಸರಕುಗಳನ್ನು ಸರ್ಕಾರಿ ಶಾಲಾ ಮಕ್ಕಳ ತಲೆಗೆ ಕಟ್ಟುತ್ತಿದ್ದಾರೆ.
  
ಇತ್ತ ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಪಠ್ಯದಲ್ಲಿ ಹಿಂದೆಲ್ಲಾ ಇದ್ದ ದೇಸೀ, ಸ್ಥಳೀಯ, ಭಾವನಾತ್ಮಕ ಪಾಠಗಳನ್ನೆಲ್ಲಾ ಕಳೆದುಕೊಂಡು ಕಾಗಕ್ಕ-ಗೂಬಕ್ಕನ ಕಥೆಗಳನ್ನು ಕಲಿಯುತ್ತಿದ್ದರೆ, ಅತ್ತ ಖಾಸಗಿ ಶಾಲೆಗಳು, International ಶಾಲೆಗಳು ತಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದಗಣಿತ, ಸಂಸ್ಕ್ಕತಗಳನ್ನು ಸರ್ಕಾರಿ ಪಠ್ಯಕ್ರಮದ ಹೊರತಾಗಿ ಕಲಿಸುತ್ತಿವೆ. ಶಾಲೆಗಳಲ್ಲಿ ಹೇಳಿಕೊಡದಿದ್ದಲ್ಲಿ ವಿಶೇಷವಾದ ಭಗವದ್ಗೀತೆ, ವೇದಗಣಿತ ಕ್ಲಾಸ್‌ಗಳಿಗೆ ಹಣತೆತ್ತು ಹೋಗುತ್ತಿದ್ದಾರೆ. ತಮ್ಮ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳು ಬರುತ್ತವೆ ಎಂದು ಹೇಳಿಕೊಳ್ಳುವುದು ಇಂದು ನಗರಗಳ ಪೋಷಕರಿಗೆ ಹೆಮ್ಮೆಯ ಮಾತಾಗಿದೆ. ಆದರೆ, ಸರಿಯಾಗಿ ಶಾಲೆಯ ಫೀಸನ್ನೇ ಕಟ್ಟಲು ಹೆಣಗುವ  ಸರ್ಕಾರಿ ಶಾಲಾ ಮಕ್ಕಳಿಗೆಲ್ಲಿಂದ ಬರಬೇಕು ಭಗವದ್ಗೀತೆ ಕ್ಲಾಸ್‌ನ ಭಾಗ್ಯ? 

Students of Universal Public School
 receiving their prizes  for Bhagavadgita Competition 
ಸಮಾಜ, ಸಮಾಜವಾದ ಎಂದೆಲ್ಲಾ ಹಾರಾಡುವ ನಮ್ಮ ಬುದ್ದಿಜೀವಿಗಳೆನ್ನುತ್ತಾರೆ, ’ಶಾಲೆಗಳಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಪಾಠಗಳನ್ನು ಕಲಿಸಬೇಕು, ಪಾಠಗಳು ಜಾತ್ಯಾತೀತವಾಗಿರಬೇಕು’ ಎಂದು. ಆದರೆ ಅವರು ಸಮಾಜಶಾಸ್ತ್ತ್ರದ ಮೂಲತತ್ವಗಳಲ್ಲೇ ಇರುವ, ’ಕಲೆ, ಮೌಲ್ಯ, ನೈತಿಕತೆ, ನಂಬುಗೆಗಳು, ಆದರ್ಶಗಳು-ಇಂತಹ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪದ್ಧತಿಯನ್ನು ಬಳಸುವುದು ಹಾಗೂ ಅದನ್ನು ಅಳೆಯುವುದು ಸಾಧ್ಯವಿಲ್ಲ’ ಎಂಬ ಮಾತನ್ನು ಮರೆತಂತಿದೆ. ಇವರ ’ವೈಜ್ಞಾನಿಕ’ ಎಂಬ ಪದ ಹಿಡಿದುಕೊಂಡು ಶಾಲಾ ಪಠ್ಯಕ್ರಮ ತಯಾರಿಸಿದರೆ, ಮಕ್ಕಳಿಗೆ ಮೇಲೆ ಹೇಳಿದ ಯಾವ ವಿಷಯಗಳನ್ನೂ ಕಲಿಸಲಾಗುವುದಿಲ್ಲ. ಬದಲಿಗೆ ಮಕ್ಕಳ ತಲೆ ಇಂಟರ್ನೆಟ್‌ನಂತೆ ಬೇಕು-ಬೇಡದ ಎಲ್ಲಾ ವಿಷಯಗಳನ್ನೂ ತುಂಬಿಕೊಂಡಿರುವ ಗೊಬ್ಬರ ಗುಂಡಿಯಾಗುತ್ತದೆ. ಇನ್ನು ಇವರು ಹೇಳುವ ಜಾತ್ಯಾತೀತ ಎಂಬ ತತ್ವವನ್ನು ಪ್ರಪಂಚದ ಯಾವ ದೇಶ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಹೇಳಿ? ಅದೊಂದು ಮುಖವಾಡ ಅಷ್ಟೆ. 

          ಇಂದಿನ ಶಿಕ್ಷಣದಲ್ಲಿ IQ(Intelligent Quotient) ಅನ್ನು ಮಾತ್ರ ಬೋಧಿಸಲಾಗುತ್ತಿದೆ. ಆದಷ್ಟೂ ಮಾಹಿತಿಗಳನ್ನು ಮಕ್ಕಳ ತಲೆಗೆ ತುಂಬುವುದು ಅದರ ಉದ್ದೇಶ. ಇದರ ಮಧ್ಯೆ ಕಳೆದು ಹೋಗುತ್ತಿರುವ EQ(Emotional Quotient) ಎಂಬ ಮೌಲ್ಯ, ನೈತಿಕತೆ, ಭಕ್ತಿಗಳಂತಹ ಗುಣಗಳನ್ನು ಕಲಿಸುವ ಗೋಜಿಗೆ ಇಂದಿನ ಶಿಕ್ಷಣ ಪದ್ಧತಿ ಹೋಗುತ್ತಿಲ್ಲ. 

          ಯಾವುದೇ ದೇಶದ ಅಭಿವೃದ್ದಿಯಾದರೂ ಕೂಡಾ ಅದು ಅಲ್ಲಿನ ಸ್ಥಳೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎನ್ನುವುದೂ ಸಹ ಸಮಾಜಶಾಸ್ತ್ತ್ರದ ಇನ್ನೊಂದು ಮಾತು. ಭಾರತೀಯ ಸಮಾಜವು ಭಗವದ್ಗೀತೆ, ರಾಮಾಯಣ, ಮಹಾಭಾರತಗಳನ್ನು ತನ್ನ ಮನಸ್ಸಿನಲ್ಲಿ ಸಾವಿರಾರು ವರ್ಷಗಳಿಂದಲೂ ಉಳಿಸಿಕೊಂಡು ಬಂದಿದೆ, ಅದರಂತೆಯೇ ನಡೆಯುತ್ತಿದೆ. ಅಥವಾ ಸಮಾಜ ಇರುವಂತೆಯೇ ಈ ಗ್ರಂಥಗಳು ರಚನೆಗೊಂಡಿವೆ, ಎರಡೂ ಒಂದಕ್ಕೊಂದು ಪೂರಕ. ಭಾರತ ಅಭಿವೃದ್ದಿಯಾಗಬೇಕಾದರೆ ಅದು ಈ ಸಮಾಜದ ಅವಿಭಾಜ್ಯ ಅಂಗಗಳಾದ ಇವುಗಳನ್ನು ತಿಳಿದುಕೊಂಡವರಿಂದ ಮಾತ್ರವೇ ಹೊರತು, ಕೇವಲ ವಿದೇಶೀ ತತ್ವಜ್ಞಾನಿಗಳ ಪುಸ್ತಕಗಳಿಂದ ಪದಗಳನ್ನು ಗಟ್ಟು ಹೊಡೆದವರಿಂದ ಅಲ್ಲ. 

          ಭಗವದ್ಗೀತೆಯನ್ನು ಕೇವಲ ಒಂದು ಧರ್ಮದ ಗ್ರಂಥ ಎಂದು ಯಾರಾದರೂ ಹೇಳಿದರೆ, ಮಹಾತ್ಮಾ ಗಾಂಧಿಯವರನ್ನು ’ರಾಷ್ಟ್ತ್ರಪಿತ’ ಎಂದು ಕರೆಯುವ ಹಾಗೆಯೇ ಇಲ್ಲ. ಕಾರಣ, ಅವರೇ ಹೇಳಿರುವಂತೆ ತಮ್ಮ ಮನಸ್ಸಿನಲ್ಲಿ ಗೊಂದಲಗಳು ಉಂಟಾದಾಗಲೆಲ್ಲಾ ಆ ಸ್ಥಿತಿಯಿಂದ ಹೊರಬರಲು ಅವರಿಗೆ ಸಹಕರಿಸುತ್ತಿದ್ದುದು ಭಗವದ್ಗೀತೆಯ ಶ್ಲೋಕಗಳೇ ಹೊರತು, ’ಸರ್ವಸಮಾನತೆಯನ್ನು ಸಾರುವ’ ! ಬುದ್ದಿಜೀವಿಗಳು ಬರೆದ ಪಠ್ಯಪುಸ್ತಕಗಳಲ್ಲ. ಇನ್ನು, ಭಗವದ್ಗೀತೆಯನ್ನು ಅವೈಜ್ಞಾನಿಕ ಎಂದು ಯಾರಾದರೂ ಹೇಳಿದರೆ, ಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ವಿಜ್ಞಾನಿಯಲ್ಲ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಐನ್‌ಸ್ಟೀನ್‌ಗೆ ಭಗವದ್ಗೀತೆಯ ಮುಂದೆ  ಪ್ರಪಂಚದ ಉಳಿದೆಲ್ಲಾ ಜ್ಞಾನವೂ ಅನುಪಯೋಗಿಯಂತೆ ಕಾಣುತ್ತಿತ್ತು.

          ಕೇವಲ, ಬಿಜೆಪಿ ಸರ್ಕಾರ ಭಗವದ್ಗೀತೆಗೆ ಬೆಂಬಲವಾಗಿ ನಿಂತಿದೆ ಎಂದೋ, ಒಬ್ಬರು ಸ್ವಾಮೀಜಿಯವರ ನೇತೃತ್ವದಲ್ಲಿ ಇದರ ಅಭಿಯಾನ ನಡೆಯುತ್ತಿದೆ ಎಂದೋ, ಕಾಗೇರಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿಯೋ ಅರಚಾಡುವ ಬದಲು, ಭಾರತದ ಮಾನಸಿಕತೆಯನ್ನೊಮ್ಮೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಭಗವದ್ಗೀತೆಯಲ್ಲಿ ಇಲ್ಲಿನ ಮಣ್ಣಿನ ವಾಸನೆ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವರ್ಷಗಳಿಂದ ಅದು ಜನಮಾನಸದಲ್ಲಿ ಉಳಿದುಕೊಂಡು ಬಂದಿದೆ. ಬಿಜೆಪಿ ಸರ್ಕಾರ, ಕಾಗೇರಿ, ಸ್ವಾಮೀಜಿಗಳು ಇರಲಿ-ಬಿಡಲಿ, ಬುದ್ದಿಜೀವಿಗಳು ಎಷ್ಟೇ ಅರಚಾಡಲಿ, ಅದು ಇದ್ದೇ ಇರುತ್ತದೆ, ಇದು ಸತ್ಯ. ಆದರೆ, ಈ ಸತ್ಯ ಕೇವಲ ಹಣವಂತರ ಮಕ್ಕಳಿಗೆ, ಖಾಸಗಿ ಶಾಲಾ ಮಕ್ಕಳಿಗೆ ಸಿಕ್ಕರೆ ಸಾಕೇ ಅಥವಾ ನಮ್ಮ ಸರ್ಕಾರೀ ಶಾಲೆಗೆ ಬರುವ ಬಡ ಮಕ್ಕಳಿಗೂ ಬೇಕೇ-ಬೇಡವೇ ಎಂಬುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ.