Kashmir ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kashmir ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 03, 2011

ಸಿಯಾಚಿನ್ ಮಹತ್ವ-- ಸೇನೆಗಷ್ಟೇ ಅಲ್ಲ, ರಾಜಕಾರಣಿಗಳಿಗೂ ತಿಳಿಯಲಿ



           ಜಾಗದಲ್ಲಿ ಭಾರತದ ನೂರಾರು ಸೈನಿಕರು ಪಹರೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಚೆಕ್‌ಪೋಸ್ಟ್‌ನಿಂದ ಕೇವಲ 400 ಮೀಟರ್ ದೂರದಲ್ಲಿ ಭಾರತದ ಸೈನ್ಯ ಇದೆ. ಭಾರತ ತಾನೇ ಅಭಿವೃದ್ದಿ ಪಡಿಸಿದ ಚೀತಾ ಹೆಲಿಕಾಪ್ಟರ್‌ಗಳು ಮಾತ್ರ ಅಲ್ಲಿಗೆ ಹೋಗಬಲ್ಲವು. 2 ರಿಂದ 30 ಸೆಕೆಂಡ್‌ನೊಳಗೆ ತನ್ನ ಕೆಲಸ ಮುಗಿಸಿ ಅಲ್ಲಿನ ಹೆಲಿಪ್ಯಾಡ್‌ನಿಂದ ಹಾರದಿದ್ದರೆ, ಶತ್ರುಗಳ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಇಂತಹ ದುರ್ಗಮ ಸ್ಥಳವೇ ಸಿಯಾಚಿನ್ ಗ್ಲೇಸಿಯರ್.

  ಕುಮಾವೂನ್ ರೆಜಿಮೆಂಟ್‌ನ ಮೇಜರ್ ಆರ್.ಎಸ್ ಸಂಧು ಅವರ ನೇತೃತ್ವದ ಬೆಟಾಲಿಯನ್ 1984ರಲ್ಲಿ ಕಾರ್ಗಿಲ್‌ನಿಂದ ಈಶಾನ್ಯಕ್ಕಿರುವ-ಎಪ್ಪತ್ತು ಕಿಲೋಮೀಟರ್ ಉದ್ದದ, ಸಮುದ್ರ ಮಟ್ಟದಿಂದ ಇಪ್ಪತ್ತು ಸಾವಿರ ಅಡಿ ಎತ್ತರವಿರುವ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿಕೊಂಡಿತು. ಸಾಮಾನ್ಯವಾಗಿ ಮೈನಸ್ 50 ಡಿಗ್ರಿ ತಾಪಮಾನವಿರುವ  ಸಿಯಾಚಿನ್ ಇಂದು ಭಾರತ-ಪಾಕಿಸ್ತಾನ ನಡುವಿನ ಮಾತುಕತೆಗಳ ಕೇಂದ್ರಬಿಂದುವಾಗಿದೆ. ಇದೇ ಪ್ರಕ್ರಿಯೆಯ ಮುಂದಿನ ಭಾಗವಾಗಿ ಕಳೆದ ತಿಂಗಳು 31ನೇ ತಾರೀಖು ಮಂಗಳವಾರ(ಮೇ 2011) ನವದೆಹಲಿಯಲ್ಲಿ ನಡೆದ 12ನೇ ಸುತ್ತಿನ ಮಾತುಕತೆಯೂ ಯಾವುದೇ ಫಲಿತಾಂಶವಿಲ್ಲದೇ ಮುಗಿದಿದೆ.
ಭಾರತ ನಿರ್ಮಿತ ಚೀತಾ ಹೆಲಿಕಾಪ್ಟರ‍್
1947ರಲ್ಲಿ ಜನಿಸಿದಾಗಿನಿಂದಲೂ  ಕಾಶ್ಮೀರವನ್ನು ಪಡೆಯುವುದೇ ತನ್ನ ಏಕೈಕ ಗುರಿ ಎಂದು ಹೋರಾಡುತ್ತಿರುವ ಪಾಕಿಸ್ತಾನ, ಭಾರತದ ಮೇಲೆ ಬೇರೆ-ಬೇರೆ ರೀತಿಯಿಂದ ಒತ್ತಡ ಹೇರುತ್ತಲೇ ಬಂದಿದೆ. 48, 65, ಹಾಗೂ 99ರಲ್ಲಿ ಭಾರತದೊಂದಿಗೆ ನೇರ ಯುದ್ಧವನ್ನೇ ಮಾಡಿ ಅದು ಸೋತಿದೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅದೇ ಪಾಕಿಸ್ತಾನ 90, 95, 96 ಹಾಗೂ 99ರಲ್ಲಿ ನಾಲ್ಕು ಬಾರಿ ಸಿಯಾಚಿನ್ ಮೇಲೆ ದಾಳಿ ಮಾಡಿರುವುದು ಹಲವರಿಗೆ ಗೊತ್ತಿಲ್ಲ. 1999ರಲ್ಲಂತೂ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ನವಾಜ್ ಷರೀಫ್, ಐತಿಹಾಸಿಕ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ಕೇವಲ 17 ದಿನಗಳಲ್ಲಿ ಸಿಯಾಚಿನ್ ಮೇಲೆ ಪಾಕ್ ದಾಳಿ ಮಾಡಿತು. 

          ಸಿಯಾಚಿನ್ ಎಂದರೆ ಕಾಡು ಗುಲಾಬಿಗಳು ಇರುವ ಸ್ಥಳ ಎಂದರ್ಥ. ಅದು ಯಾರು ಈ ಹೆಸರಿಟ್ಟರೋ, ಇಲ್ಲಿ ಗುಲಾಬಿಯ ಮಾತಿರಲಿ, ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತ ನೋಡಿದರೂ ಕಣ್ಣಿಗೆ ರಾಚುವ ಬಿಳಿ ಬಣ್ಣ. ಆದರೆ, ಕೆಲಕಾಲ ಇಲ್ಲಿ ಕಂಡದ್ದು ಎರಡೂ ದೇಶಗಳ ಸೈನಿಕರ ರಕ್ತದ ಕೆಂಪು ಬಣ್ಣ ಮಾತ್ರ. 95ರ ದಾಳಿಯಲ್ಲಿ ಪಾಕ್‌ನ 40 ಸೈನಿಕರು ಸಾವನ್ನಪ್ಪಿದರೆ, 96ರ ದಾಳಿಯಲ್ಲಿ ಭಾರತದ ಎಂ.ಐ-17 ಹೆಲಿಕಾಪ್ಟರ್ ನೆಲಕ್ಕುರುಳಿತು. ಸಿಯಾಚಿನ್‌ನ ಮತ್ತೊಂದು ವಿಶೇಷತೆ, ಅಲ್ಲಿ ಮದ್ದು ಗುಂಡಿಗಿಂತ ಹೆಚ್ಚಾಗಿ ಸೈನಿಕರು ಸಾಯುವುದು ವಾತಾವರಣದ ವೈಪರೀತ್ಯದಿಂದಾಗಿ ಎನ್ನುವುದು. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಗಡಿತ(Frostbite) ಹಾಗೂ ಹಿಮಪಾತಗಳಿಂದ ಅಲ್ಲಿ ಸಾವನ್ನಪ್ಪುತ್ತಿದ್ದರು. ಆದರೆ, ಆ ನಂತರ ಅದು ವರ್ಷಕ್ಕೆ 20-22 ಕ್ಕೆ ಇಳಿದು ಇದೀಗ ಸೈನ್ಯದ ’ಅಚ್ಚುಕಟ್ಟಿನ’ ವ್ಯವಸ್ಥೆಯ ಪರಿಣಾಮ, ಆರೋಗ್ಯದ ಕಾರಣಕ್ಕೆ ಯಾರೂ ಸಾಯುತ್ತಿಲ್ಲ. ಆದರೆ, ಈ ಅಚ್ಚುಕಟ್ಟಿನ ವ್ಯವಸ್ಥೆಗೆ ತಗಲುವ ವೆಚ್ಚ ಬಲು ದುಬಾರಿ. ಭಾರತದ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್‌ನಲ್ಲಿ ಸಾಗಿಸಬೇಕಾಗುತ್ತದೆ. ಅಲ್ಲಿಗೆ ತಲುಪುವ ಹೊತ್ತಿಗೆ ಒಂದು ಚಪಾತಿಯ ವೆಚ್ಚ ಬರೋಬ್ಬರಿ 500ರೂಪಾಯಿ ಆಗಿರುತ್ತದೆ. ಭಾರತ ಸರ್ಕಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 10 ಲಕ್ಷದಿಂದ 2ಕೋಟಿಯವರೆಗೆ!!. ಇಷ್ಟೆಲ್ಲಾ ಕಷ್ಟಪಟ್ಟು ಆ ಭೂಮಿಗಾಗಿ ಏಕೆ ಹೋರಾಡಬೇಕು? ಸುಮ್ಮನೆ ಸೈನ್ಯ ಹಿಂತೆಗೆದುಕೊಳ್ಳಬಾರದೇ ಎಂದು ಹಲವರು ಭಾರತಕ್ಕೆ ಉಪದೇಶ ನೀಡುತ್ತಾರೆ. ಆದರೆ, ಭಾರತೀಯ ಸೈನ್ಯ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಕಾರಣ, ಸಿಯಾಚಿನ್‌ಗಿರುವ Geographical ಹಾಗೂ Stratigical ಮಹತ್ವ.

ಐತಿಹಾಸಿಕ ಲಾಹೋರ್‌ ಒಪ್ಪಂದ
ಸಿಯಾಚಿನ್ ಇರುವುದು ಅಧಿಕೃತವಾಗಿ ಭಾರತ-ಪಾಕ್ ಗಡಿಗಳಲ್ಲಾದರೂ, ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ, ಯುದ್ಧದಲ್ಲಿ ಭಾರತದಿಂದ ವಶಪಡಿಸಿಕೊಂಡ POK ಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಆ ಪ್ರದೇಶದ ಮೂಲಕ ಅರಬ್ ದೇಶಗಳಿಗೆ ರಸ್ತೆ ನಿರ್ಮಿಸಿಕೊಂಡು ತನ್ನ ತೈಲ ಸಾಗಣಿಕೆಯನ್ನು ಸುಲಭಗೊಳಿಸಿಕೊಳ್ಳುವುದು ಚೀನಾದ ಹೊರ ಉದ್ದೇಶವಾದರೆ, ಗ್ಯಾಸ್ ಪೈಪ್‌ಲೈನ್ ಹೆಸರಿನಲ್ಲಿ ಸುರಂಗಗಳನ್ನು ಅಗೆದು ಮಿಸೈಲ್ ಅಡಗಿಸಿಟ್ಟು ಭಾರತವನ್ನು ಬೆದರಿಸುವುದು ಅದರ ಒಳ ಮರ್ಮ. ಪಾಕ್ ಚೀನಾಕ್ಕೆ ಬಿಟ್ಟುಕೊಟ್ಟಿರುವ ಪ್ರದೇಶ ಇರುವುದು ಸಿಯಾಚಿನ್‌ಗೆ ಹೊಂದಿಕೊಂಡಂತೆಯೇ. ಅಂದರೆ, ಸಿಯಾಚಿನ್ ಮೇಲೆ ನಿಂತರೆ, ಪಾಕಿಸ್ತಾನ-ಚೀನಾ ಎರಡೂ ದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸಬಹುದು, ಅಕ್ರಮ ಒಳನುಸುಳುವಿಕೆಯನ್ನು ತಡೆಯಬಹುದು. ಸಿಯಾಚಿನ್‌ಗಿರುವ ನಿಜವಾದ ಮಹತ್ವ ಅದು.

          1984ರಿಂದಲೂ ಸಿಯಾಚಿನ್ ತನಗೆ ಸೇರಬೇಕೆಂದು ವಾದಿಸುತ್ತಿದ್ದ ಪಾಕಿಸ್ತಾನ ಈಗ ರಾಗ ಬದಲಾಯಿಸಿದೆ. ಸಿಯಾಚಿನ್‌ನ ನಿರ್ವಹಣೆಗಾಗಿ ಎರಡೂ ದೇಶಗಳಿಗೆ ತಗಲುವ ವೆಚ್ಚ, ಸೈನಿಕರ ಮರಣವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಂದ ಎರಡೂ ಸೈನ್ಯಗಳನ್ನು ಹಿಂತೆಗೆದುಕೊಳ್ಳೋಣ ಎಂಬ ವಾದವನ್ನು ಮಂಡಿಸುತ್ತಿದೆ. ಕೇವಲ ಭಾರತದ ರಾಜಕಾರಣಿಗಳೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಸಾಧ್ಯವಾಗಿದ್ದರೆ, ಈ ಹಿಂದಿನ ಯುದ್ಧಗಳಲ್ಲಿ ಗೆದ್ದ ಭೂಮಿಯನ್ನು ವಾಪಸ್ ಪಾಕ್‌ಗೆ ಬಿಟ್ಟುಕೊಟ್ಟಂತೆ ಇದನ್ನೂ ನಮ್ಮ ನಾಯಕರು ಕೊಟ್ಟಿರುತ್ತಿದ್ದರೇನೋ!!. ಆದರೆ, ಭಾರತ ಸೇನೆಯ ಪ್ರಬಲ ವಿರೋಧದ ಪರಿಣಾಮ ಅದು ಇನ್ನೂ ನಮ್ಮ ಕೈಲಿದೆ. ಅಲ್ಲಿಂದ ಕಾಲ್ತೆಗೆದಂತೆ ನಟಿಸಿ, ಭಾರತದ ಸೇನೆ ವಾಪಸಾದ ನಂತರ ಸಿಯಾಚಿನ್ಅನ್ನು ಆಕ್ರಮಿಸಿಕೊಳ್ಳುವ ಪಾಕಿಸ್ತಾನದ ಬುದ್ದಿ ನಮ್ಮ ನಾಯಕರಿಗಿಂತ ಸೇನೆಯ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತು. ಯುದ್ಧ ನಡೆಸುತ್ತಿರುವುದು ನಾವಲ್ಲ, ಮುಜಾಹೀದೀನ್‌ಗಳು ಎಂದು ಕಾರ್ಗಿಲ್ ಯುದ್ಧದ ಪ್ರಾರಂಭದಲ್ಲಿ ಪಾಕ್ ಸೇನೆ ನೀಡಿದ್ದ ಮೋಸದ ಮಾತನ್ನು ನಮ್ಮ ಸೇನೆ ಇನ್ನೂ ಮರೆತಿಲ್ಲ.
          ಸುಮಾರು ಕೊನೆ ಹಂತಕ್ಕೆ ಬಂದ್ದಿದ್ದ ಸಿಯಾಚಿನ್ ಮಾತುಕತೆಯನ್ನು 2008ರಲ್ಲಾದ ಮುಂಬೈ ದಾಳಿಯ ನಂತರ ಭಾರತ ಸ್ತಗಿತಗೊಳಿಸಿತು. ಇದೀಗ ಅಮೆರಿಕದ ಕಡೆಯಿಂದ ಒತ್ತಡ ಹೇರುತ್ತಿರುವ ಪಾಕ್, ಮಾತುಕತೆಯನ್ನು ಮತ್ತೆ ಆರಂಭಿಸಿದೆ. ಮೊನ್ನೆ ದಿಲ್ಲಿಯಲ್ಲಿ ಭಾರತದ ರಕ್ಷಣಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಪಾಕಿಸ್ತಾನದ ಸೈಯದ್ ಅಥರ್ ಅಲಿ ನಡುವೆ ನಡೆದ ಮಾತುಕತೆಯೂ ಎಂದಿನಂತೆ ಮುರಿದು ಬಿದ್ದಿದೆ. ಕಾರಣ, 84ರಿಂದ ಅನುಸರಿಸಿಕೊಂಡು ಬರುತ್ತಿರುವ Actual Ground Position Line(AGPL) ಅನ್ನು ಅಧಿಕೃತ ಎಂದು ಪಾಕ್ ಒಪ್ಪಿಕೊಂಡರೆ ಮಾತ್ರ ಸೈನ್ಯದ ಹಿಂತೆಗೆತ ಎಂಬ ಭಾರತದ ಕಠಿಣ ನಿಲುವು. ಆದರೆ, ಎಂದಿನಂತೆ ಪಾಕ್ ಈ ನಿಬಂಧನೆಗೆ ಒಪ್ಪಿಲ್ಲ. ಇಲ್ಲೇ ತಿಳಿಯುತ್ತದೆ ಪಾಕ್‌ನ ಕುತಂತ್ರ! AGPL ಅನ್ನು ಅಧಿಕೃತ ಎಂದು ಒಪ್ಪಿಕೊಂಡರೆ ಸಿಯಾಚಿನ್ ಶಾಶ್ವತವಾಗಿ ಭಾರತಕ್ಕೆ ಸೇರುತ್ತದೆ, ತಾನು ಅದಕ್ಕಾಗಿ ಪಟ್ಟ ’ಶ್ರಮ’ವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬುದು ಅದಕ್ಕೆ ಗೊತ್ತು.

Click on Image to Enlarge
          ಪಾಕ್‌ನ ಇನ್ನೊಂದು ವಾದವೆಂದರೆ, ಸಿಯಾಚಿನ್ ಸಹ ಕಾಶ್ಮೀರಕ್ಕೇ ಸೇರಿರುವುದರಿಂದ ಅದನ್ನು ವಿವಾದಗ್ರಸ್ತ ಭೂಮಿ ಎಂದು ಪರಿಗಣಿಸಿ ಕಾಶ್ಮೀರ ಮಾತುಕತೆಯಲ್ಲೇ ಅದನ್ನೂ ಸೇರಿಸಬೇಕು ಎಂಬುದು. ಇದಕ್ಕೆ ಆಸ್ಪದ ಕೊಡದ ಭಾರತ, ಸಿಯಾಚಿನ್ ಅನ್ನು ಕಾಶ್ಮೀರ ಮಾತುಕತೆಯಿಂದ ದೂರವೇ ಇಟ್ಟಿದೆ. ಒಮ್ಮೆ ಪಾಕ್ ಕೈಗೆ ಸಿಯಾಚಿನ್ ಸಿಕ್ಕಿತೆಂದರೆ, ಅದನ್ನು ಪಡೆಯುವುದು ಚೀನಾಕ್ಕೆ ಬಹಳ ಸುಲಭದ ಕೆಲಸ. ಆ ಮೂಲಕ ಭಾರತವನ್ನು ಹೆದರಿಸಬಹುದು ಎಂಬುದು ರಕ್ಷಣಾ ವಿಮರ್ಷಕರ ಅಭಿಪ್ರಾಯ.

          ಪಾಕಿಸ್ತಾನದ ಮೇಲಿರುವ ಅಪನಂಬಿಕೆಯಿಂದ ಭಾರತವು ಸಿಯಾಚಿನ್‌ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿಲ್ಲ ಎಂಬುದು ಹೊರಗಿನ ಚಿತ್ರವಾದರೂ, ಸೇನೆ ಹಿಂತೆಗೆದುಕೊಂಡರೆ ಶಾಂತಿಯ ಹೆಸರಿನಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದು ನಮ್ಮ ನಾಯಕರು ಅದನ್ನು ಪಾಕಿಸ್ತಾನಕ್ಕೆ ಒಪ್ಪಿಸುತ್ತಾರೆ ಎಂಬ, ನಮ್ಮ ನಾಯಕರ ಮೇಲೆ ಸೇನೆಗಿರುವ ಬಲವಾದ (ಅಪ)ನಂಬಿಕೆಯೇ ಕಾರಣ ಎಂಬುದು ಸತ್ಯ. ಒಟ್ಟಿನಲ್ಲಿ ಇತಿಹಾಸದಿಂದ ನಾವು ಈಗಲಾದರೂ ಪಾಠ ಕಲಿಯಲೇ ಬೇಕು. ಪಾಕ್‌ನೊಂದಿಗೆ ವ್ಯವಹರಿಸುವಾಗ ಹಿಂದೆ ಆದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು, ಸೇನೆಯ ಮೇಲೆ ಅನಗತ್ಯ ಒತ್ತಡ ಹೇರದಿರುವುದು ನಮ್ಮ ನಾಯಕರ ಕರ್ತವ್ಯ.

          ಕೊನೆ ಹನಿ: ಇಡೀ ದೇಶದಲ್ಲಿ ನಮ್ಮ ನಾಯಕರ ನಿಜವಾದ ಬಂಡವಾಳ ಗೊತ್ತಿರುವುದು ಭಾರತೀಯ ಸೈನ್ಯಕ್ಕೆ ಮಾತ್ರ !. ನಮ್ಮ ಸೈನ್ಯದ ಮೇಲೆ ಅಭಿಮಾನ ಪಡಲು ಇನ್ನೊಂದು ಕಾರಣ ಸಿಕ್ಕಂತಾಯಿತು.

ಬುಧವಾರ, ನವೆಂಬರ್ 03, 2010

ಹಸಿದವರಾರು, ಬೆತ್ತಲಾದವರಾರು ಎಂದು ಇಡೀ ದೇಶಕ್ಕೇ ಗೊತ್ತಿದೆ


          ಭೂಕೇ ನಂಗೇ ಹಿಂದುಸ್ಥಾನ್ ಸೆ ಕಶ್ಮೀರ್ ಕೋ ಆಜಾದೀ ಚಾಹಿಯೇ(ಹಸಿದ, ಬೆತ್ತಲಾದ ಭಾರತದಿಂದ ಕಾಶ್ಮೀರಕ್ಕೆ ಸ್ವತಂತ್ರ್ಯ ಬೇಕು) ಎಂದು ದೆಹಲಿಯಲ್ಲಿರುವ ಕೋಪರ್ನಿಕಸ್ ಮಾರ್ಗದಲ್ಲಿರುವ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಅಕ್ತೊಬರ್ ಇಪ್ಪತ್ತೊಂದನೇ ತಾರೀಖು ಅರುಂಧತಿ ರಾಯ್ ಘಂಟಾಘೋಷವಾಗಿ ನುಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ನಮ್ಮ ಕೇಂದ್ರ ಸರ್ಕಾರ. ಕ್ರಮ ಕೈಗೊಳ್ಳಲಿಲ್ಲ ಎನ್ನುವುದಕ್ಕಿಂತ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಗೊತ್ತಿದ್ದೇ ಹಾಗೆ ಮಾತನಾಡಲಾಯಿತು ಎನ್ನಬಹುದು. ಕಾರಣ, ಇದೇ ವರ್ಷದ ಸೆಪ್ಟೆಂಬರ್ ಹತ್ತೊಂಭತ್ತರಂದು ಉತ್ತರ ಅಮೇರಿಕಾದ ಜನಪ್ರಿಯ ಟಿ.ವಿ ವಾಹಿನಿ 'ಡೆಮಾಕ್ರಸಿ ನೌ' ನ ವರದಿಗಾರ್ತಿ ಅಮಿ  ಗುಡ್ಮನ್ ಅವರಿಗೆ ಅರುಂಧತಿ ಸಂದರ್ಶನ ನೀಡಿದರು. ಕಾಶ್ಮೀರದ ಸಮಸ್ಯೆ, ಆಜಾದೀ ಯ ಬಗೆಗೇ ನಡೆಯುತ್ತಿದ್ದ ಸಂದರ್ಶನದಲ್ಲಿ ಅರುಂಧತಿ ಹೇಳಿದ ಒಂದು ಮಾತು,'ದೆಹಲಿಯ ಕಾಮನ್ವೆಲ್ತ್ ಗೇಮ್ಸ್ ಗಾಗಿ ಅಲ್ಲಿರುವ ಬಡವರನ್ನೆಲ್ಲಾ ಪಾರ್ಕ್ ಗಳಿಗೆ ತಳ್ಳಿ, ಅವರು ಕಾಣದಂತೆ ಬಿಲ್ ಬೋರ್ಡ್ ಗಳನ್ನು ಹಾಕಲಾಗಿದ್ದಂತೆ, ಅಮೇರಿಕಾ ಅಧ್ಯಕ್ಷ ಒಬಾಮಾ ಭಾರತಕ್ಕೆ ಬರುವ ವೇಳೆಗೆ ಕಾಶ್ಮೀರ ವಿಷಯವನ್ನೂ ಮುಚ್ಚಿ ಹಾಕುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡುತ್ತಿದೆ' ಎಂದರು. ಇದರರ್ಥ, ಕಾಶ್ಮೀರದಲ್ಲಿ ಬಿದ್ದಿರುವ ಕಲ್ಲೇಟಿನಿಂದ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿರುವ ಭಾರತ ಸರ್ಕಾರ, ಒಬಾಮಾ ಬರುವ ವೇಳೆಗೆ ಯಾವುದೇ ಹೊಸ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ ಎಂಬ ಸ್ಪಷ್ಟ ಅರಿವು ಅರುಂಧತಿ ಅವರಿಗಿದೆ. ಹಾಗಾಗಿಯೇ ಅಷ್ಟೊಂದು ಧೈರ್ಯವಾಗಿ ದೆಹಲಿಯಲ್ಲೇ ಸಭೆನಡೆಸಿ, ದೇಶ ಒಡೆಯುವ ಮಾತಾಡಿದ್ದು.

          ಭಾರತದಲ್ಲಿ ಹಲವು ದೇವಾಲಯಗಳಿವೆ, ವ್ಯಾಪಾರ ಕೇಂದ್ರಗಳಿವೆ, ಪ್ರವಾಸೀ ತಾಣಗಳಿವೆ ಭಯೋತ್ಪಾದಕರು ಬಾಂಬ್ ಸಿಡಿಸಲು. ಆದರೆ, 2001ರ ಡಿಸೆಂಬರ್ 13ರಂದು ಅವರು ದೇಶದ ಆಡಳಿತ ಸೌಧವಾದ ಪಾರ್ಲಿಮೆಂಟ್ ಮೇಲೆ ಧಾಳಿ ನಡೆಸಿದ್ದು, ತಮಗೆ ಭಾರತದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಪೋಟಿಸುವ ಶಕ್ತಿ ಇದೆ ಎಂದು ತೋರಿಸಲು ಹಾಗೂ ಆಕ್ರಮಣದ ಈ ಸುದ್ದಿ ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಪ್ರಚಾರವಾಗಿ ಭಾರತದ ಮಾನ ಹೋಗಲೆಂದು. ಹಾಗೆಯೇ, 21ನೇ ತಾರೀಖು 'ಆಜಾದೀ: ದಿ  ಓನ್ಲಿ ವೇ' ಎಂಬ ಹೆಸರಿನಡಿ ದೆಹಲಿಯಲ್ಲಿ ನಡೆದ ವಿಚಾ(ಕಾ)ರ ಸಭೆಯಿಂದಲೂ ಸಹ ಪ್ರತ್ಯೇಕತಾವಾದಿಗಳು ಸಂದೇಶ ಕಳುಹಿಸಿದ್ದಾರೆ. ಸೂಪರ್ ಪವರ್ ಆಗುತ್ತಿದೆ ಎಂದು ಹೇಳಲಾಗುತ್ತಿರುವ ದೇಶದ ರಾಜಧಾನಿಯಲ್ಲೇ ಕುಳಿತು ಅದೇ ದೇಶವನ್ನು ಒಡೆಯುವ ಮಾತನಾಡುವ ತಾಕತ್ತು ತಮಗಿದೆ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ, ಇಡೀ ದೇಶಕ್ಕೆ ಹಾಗೂ ವಿಶ್ವ ಸಮುದಾಯಕ್ಕೆ ತಿಳಿಸುವಲ್ಲಿ ಈ ಸಭೆ ಯಶಸ್ವಿಯಾಗಿದೆ. ಸಂಸತ್ ಮೇಲಿನ ಧಾಳಿ ಹಾಗೂ ಈ ಸಭೆಗಿರುವ ವ್ಯತ್ಯಾಸವೆಂದರೆ, ಅದರಲ್ಲಿ ಎಲ್ಲಾ ಭಯೋತ್ಪಾದಕರನ್ನೂ ಹೊಡೆದುರುಳಿಸಲಾಯಿತು, ಆದರೆ ಇದರಲ್ಲಿ ಮೊಕದ್ದಮೆಯನ್ನೂ ಹಾಕದೆ ಸುಮ್ಮನೆ ಬಿಡಲಾಯಿತು.
          ಈ ಸಭೆಯ ಕುರಿತು ಯೊಚಿಸಬೇಕಾದ ಇನ್ನೊಂದು ವಿಷಯವೆಂದರೆ, ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದು. ಸಭೆಯಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿಶಾ ಗಿಲಾನಿ ಹೊರತುಪಡಿಸಿ, ನಾಗಾಲ್ಯಾಂಡ್ಅನ್ನು ಭಾರತದಿಂದ ಪ್ರತ್ಯೇಕಿಸಲು ಹಗಲಿರುಳೂ ಶ್ರಮಿಸುತ್ತಿರುವ ನಾಗಾ ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್(NPMHR) ನ ಪ್ರಧಾನ ಕಾರ್ಯದರ್ಶಿ Dr.N Venuh, ಮಣಿಪುರದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿಸುತ್ತಿರುವ ಕಮಿಟಿ ಫಾರ್ ಪೀಸ್ ಅಂಡ್ ಡೆಮಾಕ್ರಸಿ (CPDM) Malem Ningthouja, ಲಡಾಯೀ ಹಾರೇ ಹೈ ಮಗರ್ ಆಜಾದೀ ಕಾ ಜಂಗ್ ನಹೀ ಚೋಡೇ ಹೈ ಹಮ್( ಕದನ ಸೋತಿದ್ದರೂ ಸ್ವಾತಂತ್ರ್ಯದ ಯುದ್ಧ ಬಿಟ್ಟಿಲ್ಲ) ಎಂದು ಹೇಳಿದ- ಸತ್ತು ಹೋಗಿದೆ ಎಂದು ಹೇಳಲಾಗುತ್ತಿರುವ ಪಂಜಾಬ್ ಪ್ರತ್ಯೇಕತಾವಾದಿ 'ದಲ್ ಖಾಲ್ಸಾ'ದ ಕನ್ವರ್ಪಾಲ್ ಸಿಂಗ್ ಮತ್ತು ಹರಚರಣ್ಜೀತ್ ಸಿಂಗ್, ಆಂಧ್ರ ಪ್ರದೇಶದಲ್ಲಿ ರಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಗುಂಪು ಮಾಡಿಕೊಂಡು, ಸರ್ಕಾರ 1991ರಲ್ಲಿ ಅದರ ಮೇಲೆ ನಿಷೇಧ ಹೇರಿದ ನಂತರ ಇದೀಗ ರೆವಲ್ಯೂಷನರಿ ಡೆಮಾಕ್ರಟಿಕ್ ಪಾರ್ಟಿ(ಆರ್.ಡಿ.ಪಿ) ಎಂಬ ಮಾವೋಗಳೊಂದಿಗೆ ಸಹಮತ ಹೊಂದಿರುವ ಸಂಘಟನೆಯ ಜಿ.ಎನ್. ಸಾಯಿಬಾಬಾ, ಪ್ರತ್ಯೇಕ ತಮಿಳುನಾಡಿಗೆ ಆಗ್ರಹಿಸುತ್ತಿರುವ ತಮಿಳ್ ನ್ಯಾಷನಲ್ ಲಿಬರೇಷನ್ ಮೂವ್ಮೆಂಟ್ ನ ಕಾರ್ಯದರ್ಶಿ  Thaigu , ಮಾವೋವಾದಿಗಳ ನಾಗರಿಕ ಮುಖವಾಗಿರುವ ಆಂಧ್ರದ ವರವರರಾವ್ ಹಾಗೂ ಬಂಗಾಳದ ಸುಜಾತೋ ಭದ್ರ- ಶುದ್ಧಭ್ರತ ಸೇನ್ ಗುಪ್ತ, ಜಮ್ಮುವಿನ ಶಿವನಂದನ್- ಶೇಖ್ ಶೌಕತ್ ಹುಸೇನ್ ಅವರುಗಳು.
          2008ರಲ್ಲಿ ಇದೇ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಪ್ರಾರಂಭವಾದ ಕಮಿಟೀ ಫಾರ್ ದಿ ರೀಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್(CRPP) ಎಂಬ ಹೆಸರಿನಡಿ ನಡೆದ ಈ ಸಭೆಯು ಮಣಿಪುರ, ನಾಗಾಲ್ಯಾಂಡ್, ಬಂಗಾಳ, ಪಂಜಾಬ್, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಅಂದರೆ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಎಲ್ಲ ಭಾರತದಿಂದಲೂ ಪ್ರತಿನಿಧಿಗಳು ಆಗಮಿಸಿದ್ದ, ಒಂದರ್ಥದಲ್ಲಿ 'ಭಾರತದ ರಾಷ್ಟ್ತ್ರೀಯತೆಯನ್ನೇ ಪ್ರಶ್ನಿಸಲು ಮಾಡಲಾದ ರಾಷ್ಟ್ತ್ರೀಯ ಸಮ್ಮೇಳನ!' ಇದಾಗಿತ್ತು. ಇಂದು ಇವರೆಲ್ಲಾ ಒಟ್ಟಾಗಿ ಕೇವಲ ಕಾಶ್ಮೀರದ ಪ್ರತ್ಯೇಕತೆಯ ಕುರಿತು ಮಾತ್ರ ಮಾತನಾಡುತ್ತಿದ್ದಾರೆ. ಈ ಕೆಲಸ ಆದರೆ ದೇಶದ ವಿವಿಧೆಡೆಗಳಲ್ಲಿಯೂ ಇದೇ ದಾರಿ ಅನುಸರಿಸಿ ದೇಶವನ್ನು ಛಿದ್ರ-ಛಿದ್ರ ಮಾಡುವ ಹುನ್ನಾರ ಇವರಿಗಿದೆ.
          ಈ ಸಭೆಯ ತೀರ್ಮಾನಗಳಲ್ಲಿ ಮೊದಲನೆಯದೆಂದರೆ, 'ಭಾರತ ಸರ್ಕಾರವು ಕಾಶ್ಮೀರವನ್ನು ಅಂತಾರಾಷ್ಟ್ತ್ರೀಯ ಸಮಸ್ಯೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕು' ಎಂಬುದು. ಆ ಮೂಲಕ ಅಮೆರಿಕಾದ ಮಧ್ಯಸ್ಥಿಕೆ ಏರ್ಪಡಿಸಿ 'ಕೋತಿ ನ್ಯಾಯ' ಮಾಡಿಸುವ ಹುನ್ನಾರ ಇದು. ಕಳೆದ ವಾರವಷ್ಟೇ, ಕಾಶ್ಮೀರ ವಿಷಯದಲ್ಲಿ ತಾನು ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಿನಂತಿಯನ್ನು ಅಮೇರಿಕಾ ನಯವಾಗಿ ತಳ್ಳಿಹಾಕಿದೆ. ಆದರೆ ಮನದಾಳದಲ್ಲಿ ಮಧ್ಯಸ್ಥಿಕೆಯ ಆಸೆ ಹೊಂದಿರುವ ಅದು, 'ಒತ್ತಡ'! ಹೆಚ್ಚಾದಾಗ ಕಾಶ್ಮೀರ ವಿಷಯದಲ್ಲಿ ತನ್ನ ಮೂಗುತೂರಿಸುವುದು ನಿಶ್ಚಿತ. ನಂತರ ತನ್ನ ಸೇನೆಯನ್ನು ಅಲ್ಲಿ ನುಗ್ಗಿಸಿ ತಂತ್ರಜ್ಞಾನದ ಸಹಾಯದಿಂದ ಭಾರತ-ಚೀನಾಗಳ ಮೇಲೆ ಒಂದು ಕಣ್ಣಿಡುವುದು ಅದರ ದೂ(ದು)ರಾಲೋಚನೆ. ಒಂದು ಕಡೆ ಪಾಕಿಸ್ತಾನದಿಂದ ಇನ್ನೊಂದು ಕಡೆ ದೇಶದ ಒಳಗಿನಿಂದ ಎರಡೂ ಕಡೆ ಯುದ್ಧವಾಗುವಂತೆ ಮಾಡಿ ಭಾರತವನ್ನು ಸೋಲಿಸುವುದು ಅಮೆರಿಕಾದಿಂದ ಹಿಡಿದು ಅರುಂಧತಿ ರಾಯ್ ವರೆಗಿನ ಎಲ್ಲರ ಕನಸು.
          ಕಳ್ಳಕಾಕರನ್ನು, ಸುಲಿಗೆಕೋರರನ್ನು, ಅತ್ಯಾಚಾರಿಗಳನ್ನು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟು, ನ್ಯಾಯ ಕೇಳುವ ಲೇಖಕರ ಬಾಯಿಮುಚ್ಚಿಸುತ್ತಿರುವ ದೇಶವನ್ನು(ಭಾರತವನ್ನು) ಕಂಡರೆ ಮರುಕ ಬರುತ್ತದೆ ಎಂದಿರುವ ಅರುಂಧತಿ ರಾಯ್ ತಿಳಿಯಬೇಕಾದ್ದೆಂದರೆ, ಭಾರತದಲ್ಲಾಗಿರುವುದಕ್ಕೇ ಅವರು ಇಷ್ಟೊಂದು ಮಾತನಾಡಲು ಆಗುತ್ತಿರುವುದು ಎಂಬ ವಿಷಯವನ್ನು. ಹಾಗೂ ಬಾಂಗ್ಲಾದ ತಸ್ಲೀಮಾ ನಸ್ರೀನ್, ಮ್ಯಾನ್ಮಾರ್ ನ ಆಂಗ್ ಸಾನ್ ಸುಕಿ ಯಂತಹ ಲೇಖಕಿಯರ ಪರಿಸ್ಥಿತಿ ಏನಾಗಿದೆ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು. ಭಾರತಕ್ಕೆ ಯಾವ ಸಮಯದಲ್ಲಿ ಯಾವಪೆಟ್ಟು ನೀಡಬೇಕು ಎಂಬುದನ್ನು ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅರುಂಧತಿ ರಾಯ್ ಗೆ ಚೆನ್ನಾಗಿ ತಿಳಿದಿದೆ. ಒಂದು ಅಣುಬಾಂಬ್ ನಿಂದ ಮಾಡಬಹುದಾದಷ್ಟು ವಿಚ್ಛಿದ್ರಕಾರಿ ಬೆಳವಣಿಗೆಯನ್ನು ಒಂದು ಸೆಮಿನಾರ್ ನಿಂದ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ, ಹಸಿದು-ಬೆತ್ತಲಾಗಿರುವುದು ಭಾರತವಲ್ಲ, ಭಾರತೀಯರ ರಕ್ತಕ್ಕಾಗಿ ಹಸಿದು ತಮ್ಮ ಎಲ್ಲಾ ಷಡ್ಯಂತ್ರ ಬಯಲಾದ ಮೇಲೆ ಭಾರತದ ಮುಂದೆ ಬೆತ್ತಲಾಗಿರುವುದು ತಾವೇ ಎಂಬುದನ್ನು ರಾಯ್, ಗಿಲಾನಿ ಮುಂತಾದವರು ತಿಳಿಯಬೇಕು.

ಲಾಸ್ಟ್ ಡ್ರಾಪ್: ದೇಶದ ಹೆಸರು ಕೆಡುತ್ತದೆ ಎಂದು ಅರುಂಧತಿ, ಗಿಲಾನಿ ವಿರುದ್ಧ ಮೊಕದ್ದಮೆ ಹೂಡದ ಕೇಂದ್ರ ಸರ್ಕಾರ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆನ್ನುವ ಕಾರಣವೊಡ್ಡಿ ದಾಖಲಿಸಿರುವ ಮೋದಿ-ಪ್ರವೀಣ್ ತೊಗಾಡಿಯಾ-ಪ್ರಮೋದ್ ಮುತಾಲಿಕ್ ಮೇಲಿರುವ ಮೊಕದ್ದಮೆಗಳನ್ನು ಮಾತ್ರ ಹಿಂದಕ್ಕೆ ಪಡೆಯುವುದಿಲ್ಲ. Double Standard ಅಂದರೆ ಇದೇನಾ?