ಭಾನುವಾರ, ಡಿಸೆಂಬರ್ 22, 2024

ಮೋಹನ್‌ ಭಾಗವತ್‌ ಅವರ ಮಾತು: ಬೆತ್ತಲಾದ ಬುದ್ಧಿಜೀವಿಗಳು!

ಕೆಲವರು ಎಲ್ಲ ಮಸೀದಿಗಳ ಕೆಳಗೂ ದೇವಸ್ಥಾನವೊಂದನ್ನು ಹುಡುಕಲು ಮುಂದಾಗುವ ಮೂಲಕ ಹಿಂದೂ ಮುಖಂಡರಾಗಲು ಯತ್ನಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಡಿ.19ರಂದು ಪುಣೆಯಲ್ಲಿ ಮಾತನಾಡುತ್ತಾ ಹೇಳಿರುವುದು ಈಗ ಚರ್ಚೆಯ ವಿಷಯ.

ಮುಖ್ಯವಾಗಿ ಈ ಮಾತಿಗೆ ವಿರೋಧ ಬರುತ್ತಿರುವುದು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಬಹುಪಾಲು ಒಪ್ಪುವ, ಅದನ್ನು ಗೌವರಿಸುತ್ತಾ ಬಂದಿರುವ ಸ್ವತಂತ್ರ ಚಿಂತಕರುಗಳು. ʼನಿಮ್ಮದು ಒಂದು ಸಂಘಟನೆ ಮಾತ್ರ. ನೀವೇನು ಇಡೀ ಹಿಂದೂ ಸಮಾಜದ ವಕ್ತಾರರಲ್ಲʼ ಎಂದು ಕೆಲವರು ಹೇಳಿದರೆ ʼಮೋಹನ್‌ ಭಾಗವತ್ ಅವರಿಗೆ ವಯಸ್ಸಾಗಿದೆ, ಮೊದಲು ʼರಾಜೀನಾಮೆ  ಕೊಡಿʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼಮೋಹನ್‌ ಭಾಗವತ್‌ ಅವರು ಮೋಹನ್‌ದಾಸ್‌ (ಕರಮ್‌ಚಂದದದ ಗಾಂಧಿ ಗಾಂಧಿ) ರೀತಿಯಲ್ಲಿ ಮಾತನಾಡುತ್ತಿದ್ದಾರೆʼ ಎಂದೂ ಆಕ್ಷೇಪಿಸಿದ್ದಾರೆ.

ಅಷ್ಟಕ್ಕೂ ಯಾವುದೇ ಸಂದರ್ಭದಲ್ಲೂ ಇಡೀ ಹಿಂದೂ ಸಮಾಜ ತನ್ನ ಅಣತಿಯಂತೇ ನಡೆಯಬೇಕು ಎಂದು ಆರ್‌ಎಸ್‌ಎಸ್‌ ಎಂದಿಗೂ ಹೇಳಿದಂತೆ ನನ್ನ ಸೀಮಿತ ತಿಳುವಳಿಕೆಯಲ್ಲಿ ಇಲ್ಲ. ಹಿಂದೂ ಸಮಾಜವೇ ಆರ್‌ಎಸ್‌ಎಸ್‌ ಅನ್ನು ತನ್ನ ರಕ್ಷಣೆ, ದೇಶದ ಅಭಿವೃದ್ಧಿಗೆ ಒಂದು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡಿದೆ. ಹೀಗೆ ಆರ್‌ಎಸ್‌ಎಸ್‌ ಅನ್ನು ಹಿಂದೂ ಮುಖಂಡರು ಟೀಕಿಸುವುದು ಹೊಸದೇನೂ ಅಲ್ಲವಲ್ಲ? ಇಸ್ಲಾಮಿಕ್‌ ಆಕ್ರಮಣಗಳ ಕುರಿತು ಆಳವಾದ ಅಧ್ಯಯನ ನಡೆಸಿ ಸರಣಿ ಪುಸ್ತಕಗಳನ್ನು ರಚಿಸಿದ ಸೀತಾರಾಂ ಗೋಯೆಲ್‌ ಅವರು ಅನೇಕ ಬಾರಿ ಆರ್‌ಎಸ್‌ಎಸ್‌ ಅನ್ನು ಟೀಕಿಸಿದ್ದಾರೆ. “The RSS is the biggest collection of duffers that ever came together in world history” (1989) ಎನ್ನುವಂತೆ ಅನೇಕ ಬಾರಿ ತೆಗಳಿದ್ದಾರೆ. ವಾಯ್ಸ್‌ ಆಫ್‌ ಇಂಡಿಯಾ ಎಂಬ ಪುಸ್ತಕ ಸರಣಿಗಳ ಮೂಲಕ ಹಿಂದೂಗಳನ್ನು ಜಾಗೃತಗೊಳಿಸಿದ್ದ ಸೀತಾರಾಮ್‌ ಗೋಯೆಲ್‌, ರಾಮಸ್ವರೂಪ್‌ ಅವರನ್ನು ಆರ್‌ಎಸ್‌ಎಸ್‌ ಎಂದಿಗೂ ತಿರಸ್ಕರಿಸಿಲ್ಲ. ಅಸಲಿಗೆ ಇಂದಿಗೂ ವಾಯ್ಸ್‌ ಆಫ್‌ ಇಂಡಿಯಾ ಸರಣಿಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿರುವುದು, ಅದನ್ನು ಅನುವಾದಿಸಿ ಬೇರೆ ಬೇರೆ ಭಾಷೆಯ ಜನರಿಗೆ ನೀಡುತ್ತಿರುವುದು ಆರ್‌ಎಸ್‌ಎಸ್‌ಗೆ ಜತೆಗಿರುವ ಸಂಘಟನೆ/ಸಂಸ್ಥೆಗಳೆ..

ಅಂದು ಸೀತಾರಾಮ್‌ ಗೋಯಲ್‌ ಮುಂತಾದವರಾದರೆ ಇಂದು ಆನಂದ ರಂಗನಾಥನ್‌, ಸಾಯಿ ದೀಪಕ್‌, ಜಿ.ಬಿ. ಹರೀಶ್‌‌ ಮುಂತಾದ ಚಿಂತಕರು ಆರ್‌ಎಸ್‌ಎಸ್‌ ಸರಸಂಘಚಾಲಕರನ್ನು ಟೀಕಿಸುತ್ತಿದ್ದಾರೆ. ಈ ಟೀಕೆಯೂ ಮೊದಲನೆಯದಲ್ಲ. ʼಎಲ್ಲ ಮಸೀದಿಗಳ ಕೆಳಗೆ ಶಿವಲಿಂಗವನ್ನು ಏಕೆ ಹುಡುಕಬೇಕು?ʼ ಎಂದು ಈ 2021ರ ಜೂನ್‌ನಲ್ಲಿ ಮೋಹನ್‌ ಭಾಗವತ್‌ ಅವರು ಹೇಳಿದಾಗಲೂ ಈ ರೀತಿ ಅನೇಕರು ಟೀಕಿಸಿದ್ದರು. ಇದು ʼಹಿಂದುತ್ವʼ ಗುಂಪುಗಳಲ್ಲಿ, ವ್ಯಕ್ತಿಗಳಲ್ಲಿ, ಸಂಘಟನೆಗಳಲ್ಲಿ ಇರುವ ಮುಕ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಏಕೆಂದರೆ  ನನಗೆ ತಿಳಿದ ಮಟ್ಟಿಗೆ ಈಗಲೂ ಟೀಕೆ ಮಾಡುತ್ತಿರುವ ಚಿಂತಕರನ್ನು ಆರ್‌ಎಸ್‌ಎಸ್‌ ನೇರವಾಗಿಯಾಗಲಿ, ಅದರ ವಲಯವಾಗಲಿ ʼಬ್ಲಾಕ್‌ʼ ಮಾಡುವ ʼತಿರಸ್ಕರಿಸುವʼ ಕೆಲಸ ಮಾಡಿಲ್ಲ.

ಮೋಹನ್‌ ಭಾಗವತ್‌ ಅವರು ಕಳೆದ ನಾಲ್ಕೈದು ವಷಗಳಿಂದ ಆಡುತ್ತಿರುವ ಮಾತಿನಲ್ಲಿ ಒಂದು ಸಮಾನ ಅಂಶವಿರುವುದನ್ನು ಯಾರಾದರೂ ಗಮನಿಸಬಹುದು. ಅದು ಸಾಮಾಜಿಕ ಸದ್ಭಾವನೆ. 2021ರಲ್ಲಿ ಮೋಹನ್‌ ಭಾಗವತ್‌ ಅವರು ಮಾಡಿದ್ದ ಒಂದು ಭಾಷಣವನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯವಾಗಬಹುದು. ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ 2021ರ ಜುಲೈಯಲ್ಲಿ ಆಯೋಜಿಸಿದ್ದ ಡಾ. ಖ್ವಾಜಾ ಇಫ್ತಿಕಾರ್‌ ಅಹಮದ್‌ ಅವರ 'The Meeting of Minds': A bridging initiativeʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರು ಎಂದು ಹೇಳುವವರು ಹೆದರುವ ಅಗತ್ಯವಿಲ್ಲ, ಈ ದೇಶದ ಎಲ್ಲರ ಡಿಎನ್‌ಎ ಒಂದೇ ಎಂದು ಅಲ್ಲಿ ಪುನರುಚ್ಚರಿಸಿದ್ದರು. ಜತೆಗೆ, ಇಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದೇ ಹಿಂದೂಗಳ ಕಾರಣಕ್ಕೆ ಎಂದಿದ್ದರು. “ಯಾವುದೇ ಕಡೆಯಿಂದ ಅತಿಯಾದದ್ದು ನಡೆದರೆ ಅದನ್ನು ಇಲ್ಲಿನ ಬಹುಸಂಖ್ಯಾತರೇ ವಿರೋಧ ಮಾಡುತ್ತಾರೆ. ನಾನು ಉಗ್ರ ಭಾಷಣ ಮಾಡಿ ಕೆಲವು ಹಿಂದೂಗಳ ನಡುವೆ ಪ್ರಸಿದ್ಧ ಆಗಬಹುದು. ಆದರೆ ಇಡೀ ಹಿಂದೂ ಸಮಾಜ ನನ್ನನ್ನು ವಿರೋಧಿಸುತ್ತದೆ. ಹಿಂದೂ ಸಮಾಜ ಯಾವುದೇ ತೀವ್ರವಾದಕ್ಕೆ (ಅತಿ) ಬೆಲೆ ನೀಡುವುದಿಲ್ಲ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಕೋವಿಡ್‌ 19ರ ಸಂದರ್ಭದಲ್ಲಿ ಆನ್‌ಲೈನ್‌ ಭಾಷಣ ಸರಣಿಯಲ್ಲಿ ಮಾತನಾಡಿದ್ದ ಭಾಗವತ್‌ ಅವರು, “ಕೆಲವರು ಏನೋ ಮಾಡಿದರೆಂಬ ಕಾರಣಕ್ಕೆ ಇಡೀ ಸಮೂಹವನ್ನು ದೂಷಿಸಬಾರದು. ಭಾರತದ 130 ಕೋಟಿ ಜನರೂ ಭಾರತ ಮಾತೆಯ ಮಕ್ಕಳು, ಎಲ್ಲರೂ ಬಂಧುಗಳು ಎಂದು ತಿಳಿಯಬೇಕು.” ಎಂದಿದ್ದರು. ಇದು ಮುಸ್ಲಿಮರು ಕೋವಿಡ್‌ ನಿಯಮ ಮೀರುತ್ತಿರುವುದರಿಂದಲೇ ಕೋವಿಡ್‌ ಹರಡುತ್ತಿದೆ ಎಂಬ ನರೇಟಿವ್‌ ಕುರಿತು ಹೇಳಿದ ಮಾತು. ʼಯಾವುದೇ ಅತಿಗಳಿಗೆ ಬಲಿಯಾಗದೆ ಮಧ್ಯಮ ಮಾರ್ಗದಲ್ಲಿ ನಡೆಯಬೇಕಿದೆʼ ಎಂದೂ ಮೋಹನ್‌ ಭಾಗವತ್‌ ಅವರು ಭಾಷಣಗಳಲ್ಲಿ ಹೇಳಿದ್ದಾರೆ.

ಇದೀಗ ಮೋಹನ್‌ ಭಾಗವತ್‌ ಆಡಿರುವುದೂ ʼಎಲ್ಲ ಮಸೀದಿಗಳಲ್ಲಿ ಶಿವಲಿಂಗ ಏಕೆ ಹುಡುಕಬೇಕು?ʼ ಎಂಬ ಹೇಳಿಕೆಯ ಮುಂದುವರಿಕೆಯ ಭಾಗವೆ. “ಯಾವುದೇ ಅತಿವಾದವು ಇಲ್ಲಿನ ಸಮಾಜದ ಲಕ್ಷಣವಲ್ಲ., ಅದನ್ನು ಒಪ್ಪಲಾಗದು. ಭಾರತ ವಿಶ್ವಗುರು ಆಗಬೇಕಾದರೆ ತನ್ನ ಮೂಲ ಸ್ವಭಾವವನ್ನು ಬಿಡಬಾರದು” ಎಂದಿದ್ದಾರೆ. ಯಾರು ಮೋಹನ್‌ ಭಾಗವತ್‌ ಅವರ ಮಾತುಗಳನ್ನು ವಿರೋಧಿಸುತ್ತಿದ್ದಾರೋ ಅವರು ಒಂದು ಪ್ರಮುಖ ವಿಚಾರ ಮರೆಯುತ್ತಿದ್ದಾರೆ. ಅದೆಂದರೆ 1991ರಲ್ಲಿ ಜಾರಿಗೆ ಬಂದ ಪೂಜಾ ಸ್ಥಳಗಳ ಕಾಯ್ದೆ (ಪ್ಲೇಸಸ್‌ ಆಫ್‌ ವರ್ಷಿಪ್‌ ಆಕ್ಟ್‌). ಇದರ ಪ್ರಕಾರ, ಅಯೋಧ್ಯೆ ರಾಮಜನ್ಮಭೂಮಿ ವಿಚಾರವೊಂದನ್ನು ಬಿಟ್ಟು 1947ರ ಆಗಸ್ಟ್‌ 15ಕ್ಕೆ ಮುಂಚೆ ಇದ್ದ ಎಲ್ಲ ನಂಬಿಕೆಗಳ ಪೂಜಾ ಕೇಂದ್ರಗಳೂ ಅಂದಿನ ಸ್ಥಿತಿಗೇ ಫ್ರೀಜ್‌ ಆಗುತ್ತವೆ. ಅವುಗಳ ಸ್ವರೂಪದಲ್ಲಿ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಇಂತಹ ಅರ್ಜಿಗಳನ್ನು ನ್ಯಾಯಾಲಯವೂ ವಿಚಾರಣೆ ಮಾಡುವಂತಿಲ್ಲ ಎಂದು ಕಾಯ್ದೆ ಹೇಳುತ್ತದೆ. ಒಂದೆಡೆ ಕಾಯ್ದೆಯನ್ನು ಇಟ್ಟುಕೊಂಡು ಇನ್ನೊಂದೆಡೆ ಮಸೀದಿಗಳನ್ನು ಉತ್ಖನನ ಮಾಡಿ ಎಂದು ಹೇಳುವುದು ಹೇಗೆ ಸರಿಯಾಗುತ್ತದೆ ಎನ್ನುವುದೂ ಪ್ರಶ್ನೆ. ಈಗಾಗಲೆ ಈ ಕಾಯ್ದೆಯನ್ನು ರದ್ದುಪಡಿಸುವಂತೆ 2020ರಿಂದಲೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆ ಕಾಯ್ದೆಯನ್ನು ರದ್ದುಪಡಿಸಲು ಸುಪ್ರೀಂಕೋರ್ಟ್‌ ಆದೇಶಿಸಬೇಕು ಅಥವಾ ಸ್ವತಃ ಕೇಂದ್ರ ಸರ್ಕಾರವೇ ಈ ಕಾಯ್ದೆಯನ್ನು ರದ್ದುಪಡಿಸಬೇಕು. ಈ ದೇಶವು ನೀತಿಗಳಿಂದ ನಡೆಯಬೇಕೆ ವಿನಃ ನ್ಯಾಯಾಲಯಗಳಿಂದ ಅಲ್ಲ ಎನ್ನುವುದನ್ನೂ ಅನೇಕರು ಮರೆತಂತೆ ಕಾಣುತ್ತದೆ.

ಇಷ್ಟಕ್ಕೂ ಮೋಹನ್‌ ಭಾಗವತ್‌ ಅವರು ಹೇಳಿದ ತಕ್ಷಣ, ಮಸೀದಿಗಳ ಕುರಿತು ಪ್ರಕರಣ ದಾಖಲಿಸುವ ಪ್ರಕ್ರಿಯೆ ರದ್ದಾಗಿಬಿಡುವುದಿಲ್ಲ. ತಂತಮ್ಮ ಪ್ರದೇಶಗಳಲ್ಲಿ ಮಸೀದಿಗಳ ಕುರಿತು ದಾಖಲಾಗಿರುವ ಪ್ರಕರಣಗಳು ಮೋಹನ್‌ ಭಾಗವತ್‌ ಅವರು ಹೇಳಲಿ, ಹೇಳದಿರಲಿ ಸ್ಥಗಿತವಾಗುವುದಿಲ್ಲವಾದ್ಧರಿಂದ ಆ ಪ್ರಕ್ರಿಯೆಗೆ ತೊಂದರೆಯೇನೂ ಇಲ್ಲ. ರಾಮಮಂದಿರ ಹೋರಾಟದಲ್ಲಿ, ದೇವಸ್ಥಾನವನ್ನು ಹೇಗೆ ಮುಕ್ತಗೊಳಿಸಬೇಕು ಎಂದು ಆರ್‌ಎಸ್‌ಎಸ್‌ ತೋರಿಸಿಕೊಟ್ಟಿದೆ. ತಾನು ಇನ್ನುಮುಂದೆ ಅಂತಹ ಆಂದೋಲನಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಆರ್‌ಎಸ್‌ಎಸ್‌ ನಿಲುವು. ನೂರು ವರ್ಷದ ಸಂಘಟನೆಯೊಂದು ತನ್ನ ಕುರಿತು ನಿಲುವನ್ನು ತೆಗೆದುಕೊಳ್ಳಲು ಸ್ವತಂತ್ರ ಹೊಂದಿದೆ, ಅದನ್ನು ಯಾರೂ ಪ್ರಶ್ನಿಸಲಾಗದು. 

ಇದು ಬಲಪಂಥೀಯ ಎಂದು ಕರೆಯಲಾಗುವಕಡೆಯ ವಿಚಾರ. ಎಡಪಂಥೀಯ ಹಾಗೂ ʼಪ್ರಗತಿಪರರುʼ ಎಂದು ಹೇಳಿಕೊಳ್ಳುವವರಂತೂ ಕಳೆದ ನಾಲ್ಕೈದು ವರ್ಷಗಳಿಂದ ಬೆತ್ತಲಾಗಿದ್ದಾರೆ. ಆರ್‌ಎಸ್‌ಎಸ್‌ ಎಂದಕೂಡಲೆ ಮುಸ್ಲಿಂ ವಿರೋಧಿ, ಸಂವಿಧಾನ ವಿರೋಧಿ, ಕೋಮುವಾದಿ ಎಂದು ದಿನಬೆಳಗಾದರೆ ಅರಚಿಕೊಳ್ಳುತ್ತಿದ್ದವರು ಮೇಲೆ ಉಲ್ಲೇಖಿಸಿದ ಮೋಹನ್‌ ಭಾಗವತ್‌ ಅವರ ಮಾತುಗಳಿಗೆ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. ಹಿಂದೂ ಮುಸ್ಲಿಂ ಒಂದೇ ಡಿಎನ್‌ಎ, ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸೇರಿ ಯಾವದೇ ಹೇಳಿಕೆಯನ್ನೂ ಈ ʼಪ್ರಗತಿಪರರುʼ ಸ್ವಾಗತಿಸಿಲ್ಲ. ದೇಶದಲ್ಲಿ ಸಾಮಾಜಿಕ ಸಾಮರಸ್ಯ ಮೂಡಬೇಕು, ಅದು ಕಾಂಗ್ರೆಸ್‌ ಪಕ್ಷದಿಂದಲೇ ಆಗಬೇಕು ಎಂಬ ಧೋರಣೆ ಇವರಲ್ಲಿ ಕಾಣುತ್ತಿದೆ. ಆರ್‌ಎಸ್‌ಎಸ್‌, ಬಿಜೆಪಿ ಸದಾ ಮುಸ್ಲಿಮರ ವಿರುದ್ಧ ಮಾತನಾಡುತ್ತಿರಬೇಕು, ಆಗಮಾತ್ರ ತಮ್ಮ ಬೇಳೆ ಬೇಯುತ್ತದೆ ಎಂಬ ಮಾನಸಿಕೆಯನ್ನು ಹೊಂದಿದ್ದಾರೆ. ಹಾಗಾಗಿಯೇ ಕಾಂಗ್ರೆಸ್‌ ಮಾಡಿದ ಕಾನೂನುಬಾಹಿರ ಕ್ರಮಗಳನ್ನೂ ಈ ವರೆಗೆ ಖಂಡಿಸುತ್ತಿಲ್ಲ.

ಉದಾಹರಣೆಗೆ, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ನಿಧಿಯಿಂದ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಇದು ಎಸ್‌ಸಿಎಸ್‌ಟಿ ಸಮುದಾಯಕ್ಕೆ ನೇರವಾಗಿ ಸಲ್ಲಬೇಕಿದ್ದ ಹಣ. ಆದರೆ ಜನರಲ್‌ ಆಗಿ ಎಲ್ಲರಿಗೂ ಬಳಕೆ ಆಗುವ ಯೋಜನೆಗಳಲ್ಲಿ, ನಿರ್ದಿಷ್ಟ ಫಲಾನುಭವಿಗಳನ್ನು ಗುರುತಿಸದೇ ಇರುವ ಯೋಜನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕರ್ನಾಟಕದ ಪ್ರಗತಿಪರ ಸಮುದಾಯವಾಗಲಿ, ತಾವು ದಲಿತ ಪರ ಎಂದು ಹೇಳಿಕೊಳ್ಳುವವರಾಗಲಿ ಈ ಕುರಿತು ಸರ್ಕಾರವನ್ನು ಟೀಕಿಸಲೇ ಹೋಗುತ್ತಿಲ್ಲ. ಅಲ್ಲಿಗೆ, ಕಾಂಗ್ರೆಸ್‌ ಪಕ್ಷಕ್ಕೆ ತಮ್ಮನ್ನು ತಾವು ಮಾರಿಕೊಂಡಿರುವುದು ಕಾಣುತ್ತದೆ. ಇದರ ಬದಲಿಗೆ ಮನೀಶ್‌ ತಿವಾರಿಯವರಂತಹ ಕಾಂಗ್ರೆಸ್‌ ನಾಯಕರು, ʼಈ ಮಾತನ್ನು ಮೋಹನ್‌ ಭಾಗವತ್‌ ಅವರು ತಮ್ಮ ಬೆಂಬಲಿಗರಿಗೆ ಹೇಳಲಿʼ ಎನ್ುವಂತಹ ಉಡಾಫೆ ಮಾತನ್ನು ಆಡಿದ್ದಾರೆ.

ಯಾವುದೇ ವ್ಯವಸ್ಥೆಯಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿರುವ ಆಂತರಿಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕಾಗುತ್ತದೆ. ಮೋಹನ್‌ ಭಾಗವತ್‌ ಅವರ ಮಾತುಗಳನ್ನು ಟೀಕಿಸುವ, ಹಾಗೂ ಟೀಕಿಸಿದವರನ್ನೂ ಒಟ್ಟಿಗೆ ಕರೆದೊಯ್ಯುವ ಸಂಪ್ರದಾಯ ರಾಷ್ಟ್ರೀಯ ವಿಚಾರಧಾರೆಯಲ್ಲಿ ಕಂಡುಬರುತ್ತಿದೆ. ಆದರೆ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರೂ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲೂ ಆಗದಂತಹ ಸ್ಥಿತಿಗೆ ಎಡಪಂಥ ಅಥವಾ ʼಪ್ರಗತಿಪರʼ ವಲಯ ತಲುಪಿದೆ. ಅಲ್ಲಿ ಸ್ವತಂತ್ರ ಚಿಂತನೆ ಎನ್ನುವುದೇ ಮಾಯವಾದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಮೋಹನ್‌ ಭಾಗವತ್‌ ಅವರ  ಹೇಳಿಕೆಗಳ ಹಿನ್ನೆಲೆಯಲ್ಲಿ ನೋಡಿದಾಗ ಚಿಂತಕ ವಲಯ (ಬುದ್ಧಿಜೀವಿಗಳು) ಬೆತ್ತಲಾಗಿದೆʼ ಎಂದು ಹೇಳಬಹುದು.

ಲೇಖಕ: ರಮೇಶ ದೊಡ್ಡಪುರ, ಪತ್ರಕರ್ತ. (ಲೇಖನದಲ್ಲಿನ ಅನಿಸಿಕೆಗಳು ವೈಯಕ್ತಿಕ)

ಶುಕ್ರವಾರ, ಅಕ್ಟೋಬರ್ 15, 2021

ರಾಜಕೀಯ ದೃಷ್ಟಿಯಲ್ಲಿ ಮೋಹನ ಭಾಗವತ್‌ ಭಾಷಣ

ವಿಶ್ವದ ಅತಿದೊಡ್ಡ ಮಾನವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಸದ್ಯದಲ್ಲೆ, ಅಂದರೆ 2025ರಲ್ಲಿ 100ನೇ ಸಂಸ್ಥಾಪನಾ ವರ್ಷವನ್ನು ಆಚರಿಸಲಿದೆ. ಪ್ರತಿ ವರ್ಷ ಆರೆಸ್ಸೆಸ್‌ ಸರಸಂಘಚಾಲಕರು ನಾಗಪುರದಿಂದ ನೀಡುವ ವಿಜಯದಶಮಿ ಭಾಷಣ ಸಂಘದ ಕಾರ್ಯಕರ್ತರ ಜತೆಗೆ ಸರ್ಕಾರಗಳು, ಸಾಮಾನ್ಯ ಜನರು, ತಜ್ಞರು, ವಿವಿಧ ಕ್ಷೇತ್ರದವರನ್ನು ಕುರಿತಾಗಿರುತ್ತದೆ. ಇತ್ತೀಚಿನ ದಶಕದಲ್ಲಿ ವಿಜಯ ದಶಮಿ ಭಾಷಣಕ್ಕೆ ಹೆಚ್ಚಿನ ಕುತೂಹಲ ಏರ್ಪಡುತ್ತಿದೆ. ಅದಕ್ಕೆ ಮೊದಲ ಕಾರಣ, ದೇಶದ ರಾಜಕಾರಣದ ಮೇಲೆ ಆರೆಸ್ಸೆಸ್‌ ಹೊಂದಿರುವ ಪ್ರಭಾವ. ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಾಂಸ್ಕೃತಿಕ ಭಾರತ ನಿರ್ಮಾಣಕ್ಕೆ ರಾಜಕೀಯವೂ ಒಂದು ಸಾಧನ ಎಂದು ಭಾವಿಸಿರುವುದರಿಂದ ರಾಜಕೀಯದಿಂದ ಸಂಪೂರ್ಣ ವಿಮುಖತೆ ಆರೆಸ್ಸೆಸ್ಸಿಗೆ ಇಲ್ಲ. ಎರಡನೇ ಸರಸಂಘಚಾಲಕ ಗೋಳ್ವಲ್ಕರ್‌ ಗುರೂಜಿ ಅವರ ನಿರ್ದೇಶನದ ಮೇರೆಗೆ, ಕಾರ್ಮಿಕ, ರೈತ, ವಿದ್ಯಾರ್ಥಿ, ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನ ಕಾರ್ಯಕರ್ತರ ಮೂಲಕ ಸಂಘಟನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಜನಸಂಘ ಎಂದಿದ್ದ ಆ ಸಂಘಟನೆ ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಗಿದೆ. ಸದ್ಯ ಕಳೆದ 7 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ವಿಜಯ ದಶಮಿ ಭಾಷಣವು ರಾಜಕೀಯವಾಗಿದ್ದಲ್ಲ, ಅದು ಒಟ್ಟಾರೆ ಸಮಾಜ, ಇತಿಹಾಸ, ಮುಂದಿನ ದಿಕ್ಕುಗಳ ಕುರಿತಾಗಿದ್ದು ಎಂದು ಹೇಳಿದರೂ, ಚಲನಶೀಲ ಸಂಘಟನೆಯಾಗಿ ತತ್ಕಾಲೀನ ರಾಜಕೀಯ ಪರಿಸ್ಥಿತಿಗಳಿಗೂ ಸ್ಪಂದಿಸುವುದು ಸಹಜವಾಗಿಯೇ ಇರುತ್ತದೆ. ಕೆಲವೊಮ್ಮೆ ನೇರವಾಗಿ, ಆದರೆ ಬಹುತೇಕ ಬಾರಿ ಪರೋಕ್ಷವಾಗಿ ದೇಶದ ರಾಜಕೀಯ ಸ್ಥಿತಿಗತಿಗೆ ವಿಜಯದಶಮಿ ಭಾಷಣ ಸ್ಪಂದಿಸಿದೆ.

ಈ ವರ್ಷದ ವಿಜಯ ದಶಮಿ ಭಾಷಣದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ರಾಜಕೀಯವಾಗಿ ಅನೇಕ ಸಂದೇಶಗಳನ್ನು ನೀಡಿದ್ದಾರೆ.

1. ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ಶಾಂತಿಯ ಮಾರ್ಗದ ಜತೆಗೆ ಸಶಸ್ತ್ರ ಕ್ರಾಂತಿಯ ಮೂಲಕವೂ ಹೌದು ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಸಶಸ್ತ್ರ ಕ್ರಾಂತಿಯಿಂದಲೇ ಸ್ವತಂತ್ರ್ಯ ದೊರಕಿದ್ದು, ಶಾಂತಿಯ ಪಾತ್ರ ಅತ್ಯಂತ ಕಡಿಮೆ ಎಂದು ಕ್ಲೆಮೆಂಟ್‌ ಆಟ್ಲಿಯನ್ನು ಉದಾಹರಿಸುತ್ತಿದ್ದ ಸ್ಥಿತಿಯಿಂದ ಇದು ಸ್ವಲ್ಪ ಮಟ್ಟಿಗೆ ಹೊರಳಿ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಹೆಚ್ಚೆಚ್ಚು ಧನಾತ್ಮಕ ಸ್ವರೂಪದಲ್ಲಿ ಉದಾಹರಿಸಲಾಗುತ್ತಿರುವುದೂ ಕಳೆದ ಕೆಲವು ವರ್ಷಗಳಲ್ಲಾದ ಬದಲಾವಣೆ.

2. ಜಾತಿಗಳ ನಡುವೆ ಸಮರಸತೆಯ ಬದಲಿಗೆ ಪರಸ್ಪರ ಧ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ, ನೇರವಾಗಿ ರಾಜಕೀಯ ಕ್ಷೇತ್ರದತ್ತ ಬೊಟ್ಟು ಮಾಡಿದ್ದಾರೆ. ಏಕೆಂದರೆ ಜಾತಿಗಳು ಇಂದಿನ ಚುನಾವಣೆಯ ಕೇಂದ್ರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗಷ್ಟೇ ಒಂದು ಭಾಷಣದಲ್ಲಿ, ರಾಜಕಾರಣವು ಸಮಾಜವನ್ನು ಒಡೆಯುವ ಶಕ್ತಿಯನ್ನು ಮಾತ್ರ ಹೊಂದಿದೆಯೇ ಹೊರತು, ಜೋಡಿಸುವುದು ಅದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರ ಮುಂದುವರಿದ ಭಾಗದಂತೆ ಇದು. ಜತೆಗೆ, ಇತ್ತೀಚೆಗೆ ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವೆ ನಡೆದ ರಕ್ತಸಹಿತ ಸಂಘರ್ಷದ ಕುರಿತು ಪರೋಕ್ಷವಾಗಿ, ಕಟುವಾಗಿ ಟೀಕಿಸುತ್ತ, ಒಂದೇ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಎರಡು ರಾಜ್ಯಗಳು ಹೊಡೆದಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಾಷೆಯ ವಿಚಾರದಲ್ಲೂ ವಿಭಜನೆ ಸೃಷ್ಟಿಸಿ ಅರಾಜಕತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

3.  ಒಟಿಟಿ ಪ್ಲಾಟ್‌ಫಾರಂ, ಬಿಟ್‌ಕಾಯಿನ್‌, ಡ್ರಗ್ಸ್‌ಗಳ ಹಾವಳಿ ತಿಳಿಸುತ್ತಲೇ ಈಗಷ್ಟೇ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರನಟ ಶಾಹ್‌ರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿಚಾರವನ್ನು “ಉಚ್ಛ ವರ್ಗದವರಿಂದ” ಎಲ್ಲರಿಗೂ ಇದರ ತೊಂದರೆ ತಟ್ಟಿದೆ ಎಂದು ಉದಾಹರಿಸಿದರು. ಇವುಗಳನ್ನು ತಡೆಯಲು ಕುಟುಂಬ ವ್ಯವಸ್ಥೆ, ಮನಸ್ಸಿನ ನಿಯಂತ್ರಣಕ್ಕೆ ಒತ್ತು ನೀಡಿದರು.

4. ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ನೀಡುತ್ತ ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್‌ ಅವರ ಉದಾಹರಿಸಿ, ನಂತರದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದನ್ನು ಉದಾಹರಿಸಿದರು. ಪರಸ್ಪರ ಎರಡೂ ಪ್ರದೇಶಗಳಲ್ಲಿ ಸಂವಹನ ಇಲ್ಲದೆಯೂ ಸಮಾನ ಆಲೋಚನೆ ಇಡೀ ದೇಶದಲ್ಲಿ ಇದೆ ಎನ್ನುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತ ಪ್ರತ್ಯೇಕ ಎನ್ನುವ ಮಾತಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ದಕ್ಷಿಣದಲ್ಲೂ ವಿಶೇಷವಾಗಿ, ಪ್ರತ್ಯೇಕತೆಯ ಮಾತನ್ನು ತೀವ್ರವಾಗಿ ಪ್ರತಿಪಾದಿಸುವ ತಮಿಳುನಾಡಿನ ಉದಾಹರಣೆಯನ್ನೇ ನೀಡಿದ್ದು ವಿಶೇಷವಾಗಿತ್ತು.

5. ದೇಶದ ಅಖಂಡತೆ, ಸ್ವತಂತ್ರ ಹೋರಾಟಗಳ ಕುರಿತು ವಿವರಿಸುವಾಗ ಮೋಹನ್‌ ಭಾಗವತ್‌ ಅವರು ಆಯ್ಕೆ ಮಾಡಿಕೊಂಡ ಉದಾಹರಣೆಗಳು ಇಂದಿನ ರಾಜಕೀಯ ಸ್ಥಿತಿಗೆ ಅನುಗುಣವಾಗಿವೆ. ಮೊದಲಿಗೆ, ಧರ್ಮವನ್ನು ಉಳಿಸುವ ಸಲುವಾಗಿ ಬಲಿದಾನಗೈದ ಗುರು ತೇಗ್‌ಬಹದ್ದೂರ್‌ ಅವರ ಉದಾಹರಣೆಯನ್ನು ಮೊದಲಿಗೆ ನೀಡಿದ್ದಾರೆ. ಇದು ಪಂಜಾಬ್‌ ಕೇಂದ್ರಿತವಾಗಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧವಾದ ಮಾತಿಗಿಂತಲೂ, ಆ ಹೋರಾಟದೊಳಗೆ ನುಸುಳಿರುವ ಖಾಲಿಸ್ಥಾನ ಮಾನಸಿಕತೆಯನ್ನು ಉದ್ದೇಶಿಸಿದಂತಿದೆ. ತೇಗ್‌ ಬಹದ್ದೂರ್‌ “ಹಿಂದ್‌ ಕಾ ಚಾದರ್‌ʼ, “ವೀರರ ಆಕಾಶಗಂಗೆಯ ಸೂರ್ಯ” ಎಂದು ಬಣ್ಣಿಸಿದ್ದಾರೆ.

-ಎರಡನೆಯದಾಗಿ ಸ್ವತಂತ್ರ ಜೀವನಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ ಎನ್ನುತ್ತ, ಮೊದಲಿಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಪಸಾಯನದಾನ ಹಾಗೂ ಎರಡನೆಯದಾಗಿ ಪಶ್ಚಿಮ ಬಂಗಾಳದ ರವೀಂದ್ರನಾಥ ಠಾಗೋರರ ಕವಿತೆಯನ್ನು ಉದಾಹರಿಸಿದರು. ಮುಂದುವರಿದು, ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರುಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದಿರುವುದು ಈ ಎರಡೂ ರಾಜ್ಯಗಳಲ್ಲಿರುವ, ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಡೆಯನ್ನು ಟೀಕಿಸಿದ್ದು ಎಂದು ಅರ್ಥೈಸಬಹುದು.

6. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವ ಮೂಲಕ, ಕರೊನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಅಲೋಪತಿ ನಡುವೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ಎಲ್ಲ “ಪಥಿ”ಗಳೂ ತಮ್ಮತನವನ್ನು ಉಳಿಸಿಕೊಂಡು, ತಮ್ಮದೇ ಶ್ರೇಷ್ಠ ಎಂಬ ಅಹಂಕಾರವನ್ನು ತ್ಯಜಿಸಬೇಕು ಎಂದು ಹೇಳಿದರಾದರೂ, ಈ ಮಾತು, ಆಯುರ್ವೇದದ ಕುರಿತು ಬಹಿರಂಗ ಸಮರ ಸಾರಿದ್ದ ಅಲೋಪಥಿ ಕ್ಷೇತ್ರದತ್ತ ಬೊಟ್ಟುಮಾಡಿದಂತಿತ್ತು.

7. ಭಾರತೀಯ ದೃಷ್ಟಿಯ ಧರ್ಮ ಕೇಂದ್ರಿತ ಅರ್ಥ ಮತ್ತು ಕಾಮಗಳನ್ನೊಳಗೊಂಡ ಆರ್ಥಿಕತೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಏಳು ವರ್ಷದಲ್ಲಿ ಈ ಕುರಿತು ನಡೆದಿರಬಹುದಾದ ಅಂತಹ ಯಾವುದೇ ಉದಾಹರಣೆಯನ್ನು ನೀಡದೆ ಸಮಸ್ಯೆಯನ್ನಷ್ಟೆ ಪಟ್ಟಿ ಮಾಡಿದ್ದು ಗಮನಿಸಿದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸೂಚಿಸುವಂತಿತ್ತು. ಇನ್ನಾದರೂ ಇತ್ತ ಗಮನ ಹರಿಸಿ ಎಂದು ತಿಳಿಸಿದಂತಿತ್ತು.

8. ಜನಸಂಖ್ಯಾ ನಿಯಂತ್ರಣದ ಕುರಿತು ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲೆ ನೇರ ಆರೋಫ ಮಾಡದೆ, ಬಹಳ ರಾಜತಾಂತ್ರಿಕವಾದ ಭಾಷೆಯನ್ನು ಬಳಸುವ ಮೂಲಕ ಸಮರ್ಥನೆ ಮಾಡಿದರು. ಜತೆಗೆ, ಈ ವಿಷಯವನ್ನು 2015ರ ಸಭೆಯಲ್ಲೇ ನಿರ್ಣಯ ಮಾಡಲಾಗಿದೆ ಎಂದು ಅಲ್ಲಿನ ನಿರ್ಣಯವನ್ನು ಓದಿದರು. ಬಹುಶಃ ಸಮಾನ ನಾಗರಿಕ ಸಂಹಿತೆ ಎಂಬುದು ಸದ್ಯದಲ್ಲೆ ಅಥವಾ 2024ರ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲ ಲಕ್ಷಣಗಳೂ ಇವೆ. ಚುನಾವಣೆ ಕಾಲದಲ್ಲಿ ಆರೆಸ್ಸೆಸ್‌ ಈ ವಿಚಾರ ಪ್ರಸ್ತಾಪಿಸುತ್ತಿದೆ ಎಂಬ ಆರೋಪ ಬಾರದಂತೆ 2015ರ ನಿರ್ಣಯವನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ.

9. ದೇವಸ್ಥಾನಗಳನ್ನು ಸರ್ಕಾರ ನಿರ್ವಹಣೆ ಮಾಡುವುದರ ಕುರಿತು ಬಹುತೇಕ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಮಾಜಕ್ಕೆ ದೇವಸ್ಥಾನವನ್ನು ನೀಡಿದರೆ ಅದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಸಮಾಜ ಹೊಂದಿದೆಯೇ ಎಂಬುದನ್ನೂ ಪ್ರಶ್ನಿಸಿದರು. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿ, ಕರ್ನಾಟಕದಲ್ಲಿ ದೇವಸ್ಥಾನದ ಕುರಿತು ಇತ್ತೀಚೆಗೆ ನಡೆದ ವ್ಯಾಪಕ ಚರ್ಚೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನಗಳ ಕುರಿತು ಏಕಾಭಿಪ್ರಾಯ ಮೂಡಿಸುವ ಪ್ರಯತ್ನ ಇದ್ದಂತಿದೆ. ಭೂಮಿಯ ವಿಚಾರವು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾದ್ಧರಿಂದ ದೇವಸ್ಥಾನ ರಕ್ಷಣೆಗಾಗಿ ಕೇಂದ್ರದಿಂದ ಕಾಯ್ದೆ ತರಲಾಗದು.

10. ಇತ್ತೀಚಿನ ದಿನಗಳಲ್ಲಿ ಮೋಹನ್‌ ಭಾಗವತ್‌ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಹಿಂದು ಮುಸ್ಲಿಂ ಏಕ ಮೂಲದ ವಿಚಾರವನ್ನು ಇಲ್ಲಿಯೂ ಪ್ರಬಲವಾಗಿ ಮಂಡಿಸಿದರು. “ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು” ಎನ್ನುತ್ತ ಹಸನ್ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂದು ಸ್ಮರಿಸಿದರು.

11. ಇತ್ತೀಚೆಗಷ್ಟೆ ಸಾವರ್ಕರ್‌ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್‌ ಭಾಗವತ್‌ ಈ ಭಾಷಣದಲ್ಲೂ ಸಾವರ್ಕರ್‌ ಉದಾಹರಣೆ ನೀಡಿದರು. ಇದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿ, ಸಾವರ್ಕರ್‌ ಕ್ಷಮಾಪಣೆ ಕೋರಿದ್ದು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಎಂದಿದ್ದರು. ಜಾಗೃತ ಭಾರತವು ಗೀತೆಯ ಸಾರವನ್ನೇ ಹೇಳುತ್ತದೆ ಎಂಬ ಸಾವರ್ಕರ್‌ ಮಾತನ್ನು ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಉದಾಹರಿಸಿದರು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‌ ಕುರಿತ ಮಾತುಗಳು ರಾಷ್ಟ್ರ ರಾಜಕಾರಣ, ಚರ್ಚೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಕರ್ನಾಟಕದವರೇ ಆದ ವಿಕ್ರಂ ಸಂಪತ್‌ ಅವರು ಸಾವರ್ಕರ್‌ ಕುರಿತು ರಚಿಸಿದ ಕೃತಿಯೂ ಬಿಡುಗಡೆ ಆಗಿದೆ. ಇದೆಲ್ಲದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಇದೇ ದಿನದಂದು ಅಂಡಮಾನ್‌ನ ಸೆಲ್ಯುಲರ್‌ ಜೈಲಿಗೆ ಭೇಟಿ ನೀಡಿದರು. ಸಾವರ್ಕರ್‌ ಅವರನ್ನು ಕೂಡಿಟ್ಟಿದ್ದ ಕೋಣೆ, ಅವರ ಸ್ಮರಣೆಯುಳ್ಳ ಬರಹಗಳನ್ನು ವೀಕ್ಷಿಸಿದರು. ಸಾವರ್ಕರ್‌ ಅವರ ಜೀವನವನ್ನು ಅನುಮಾನದಿಂದ ನೋಡುವವರನ್ನು ಟೀಕಿಸಿದರು. ಸದ್ಯದಲ್ಲೇ ಸಾವರ್ಕರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಬಹುದು. ಸಾವರ್ಕರ್‌ ಹೆಸರು ಸದಾ ಸಂಚಲನ ಸೃಷ್ಟಿಸುವ ಶಕ್ತಿ ಹೊಂದಿದ್ದು, ಲೋಕಸಭೆ ಚುನಾವಣೆಗೂ ಇದು ಬಿಜೆಪಿಗೆ ಸಹಾಯವಾಗುವ ಎಲ್ಲ ಸಾಧ್ಯತೆ ಇದೆ.

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)



ಗುರುವಾರ, ಜುಲೈ 01, 2021

ಚೀನಾ ಕಮ್ಯುನಿಸ್ಟ್‌ ಸರ್ಕಾರದ ಸಾಫ್ಟ್‌ ಪವರ್‌ ಭಾರತದಲ್ಲೂ ಇದೆ: ತನಿಖಾ ವರದಿ

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್‌ ಸರ್ಕಾರಕ್ಕೆ ಇಂದಿಗೆ ನೂರು ವರ್ಷವಾಗಿದೆ. ರಾಷ್ಟ್ರೀಯವಾದಿ ರಿಪಬ್ಲಿಕ್‌ ಆಫ್‌ ಚೀನಾ ಸರ್ಕಾರದ ಜತೆಗೆ ನಾಗರಿಕ ಸಂಘರ್ಷದ ನಂತರ 1949ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೈನಾ(ಪಿಆರ್‌ಸಿ) ಹೆಸರಿನಲ್ಲಿ ಸರ್ಕಾರ ಸ್ಥಾಪನೆ ಮಾಡಲಾಯಿತು. ತನ್ನ ಸರ್ಕಾರದ ಕುರಿತು ಸದಭಿಪ್ರಾಯ, ಸಾಫ್ಟ್‌ಕಾರ್ನರ್‌ ಹಾಗೂ ರಾಜತಾಂತ್ರಿಕ ಮೇಲುಗೈ ಸಾಧನೆಗೆ ವಿಶ್ವದ ಅನೇಕ ದೇಶಗಳಲ್ಲಿ ಸಮಾನಾಂತರ ಮಾರ್ಗವನ್ನು ಪಿಆರ್‌ಸಿ ಕಂಡುಕೊಂಡಿದೆ. ಅಂತಹ "ಫ್ರೆಂಡ್‌ಷಿಪ್ ಅಸೋಸಿಯೇಷನ್‌"ಗಳ ಕುರಿತು ಈ ತನಿಖಾ ವರದಿ.


ಚೀನಾ ಸ್ನೇಹ ಜಾಲ

"ಈಚೆಗೆ 1962 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ‘ದಾಗಲೂ ಪೀಕಿಂಗ್‌ವಾದಿ ಕಮ್ಯುನಿಸ್ಟರು ಅದನ್ನು ಆಕ್ರಮಣ ಎಂದು ಕರೆಯಲು ಸಿದ್ಧರಾಗಲಿಲ್ಲ. ಬದಲಾಗಿ, ಭಾರತವೇ ಚೀನದ ಭೂಭಾಗಗಳನ್ನು ಆಕ್ರಮಿಸಿದೆ ಎಂದು ಆಪಾದಿಸಿದರು. ಸರಕಾರವು ಭದ್ರತಾ ಕ್ರಮವಾಗಿ ಕೆಲವು ಪ್ರಮುಖ ಪೀಕಿಂಗ್‌ವಾದಿ ಪಿತೂರಿಗಾರ ಕಮ್ಯುನಿಸ್ಟರನ್ನು ಬಂಧಿಸಿದೊಡನೆ ಇಡೀ ಕಮ್ಯುನಿಸ್ಟ್ ಲೋಕವೆಲ್ಲ - ಎಡ, ಬಲ, ಮಧ್ಯ ಎಲ್ಲ’ಒಂದೇ ಸಮನೆ ಬೊಬ್ಬೆ ಇಟ್ಟವು. ರಷ್ಯದ ʼಪ್ರಾವ್ಡಾ’ ಭಾರತ ಸರ್ಕಾರದ ಕ್ರಮವನ್ನು ಉಗ್ರವಾಗಿ ಟೀಕಿಸಿತು. ಭಾರತ ಸರ್ಕಾರವೂ ಅದಕ್ಕೆ ಮಣಿದು -ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಿತು..."

"ಇದುವರೆಗಿನ ಮಿಕ್ಕೆಲ್ಲ ಆಕ್ರಮಣಕಾರಿಗಳಿಗಿಂತ ರಷ್ಯ-ಚೀನ ಆಕ್ರಮಣದ ಈ ಸ್ವರೂಪವು ಸಾವಿರ ಪಾಲು ಘಾತಕರವಾಗಿದೆ. ಏಕೆಂದರೆ ಈ ಆಕ್ರಮಣವನ್ನು ಆಕ್ರಮಣವೆಂದೇ ಭಾವಿಸದೆ ಅದನ್ನು ತಾತ್ವಿಕವಾಗಿ ಸ್ವಾಗತಿಸುವ ಗುಂಪು ಒಂದೊಂದು ದೇಶದಲ್ಲಿ ತಯಾರಾಗುತ್ತದೆ. ಇದು ವರೆಗಿನ ಅನ್ಯಾನ್ಯ ಆಕ್ರಮಕರು ಪರದೇಶದವರಾಗಿದ್ದು, ಅವರೇ ನೇರವಾಗಿ ಬಂದು ತಮ್ಮ ರಾಜ್ಯ ಚಲಾಯಿಸುತ್ತಿದ್ದುದರಿಂದ ಅವರನ್ನು ಶತ್ರುಗಳೆಂದು ಗುರುತಿಸಲು ಅಲ್ಲಿನ ಜನಕ್ಕೆ ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟರಾದರೋ ಆಯಾ ದೇಶದವರೇ ಆಗಿರುವ ಕಾರಣ, ಅವರ ನಿಜವಾದ ಬಣ್ಣ ಗೊತ್ತಾಗುವುದು ಸಾಮಾನ್ಯ ಜನಕ್ಕೆ ಕಷ್ಟವಾಗುತ್ತದೆ..."

ಇವು ಕರ್ನಾಟಕದ ಪ್ರಮುಖ ಚಿಂತಕರಲ್ಲೊಬ್ಬರಾದ ಹೊ.ವೆ. ಶೇಷಾದ್ರಿ ಅವರು ತಮ್ಮ ಕ್ರಾಂತಿಯಲ್ಲ, ಭ್ರಾಂತಿ(1970) ಕೃತಿಯಲ್ಲಿ ಕಮ್ಯುನಿಸ್ಟ್ ಕುರಿತು ಹೇಳುವ ಮಾತುಗಳು.

ಇನ್ನೊಂದೆಡೆ ಚಿಂತಕ ದೀನದಯಾಳ್ ಉಪಾಧ್ಯಾಯ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಹೀಗೆ ಬರೆಯುತ್ತಾರೆ. "ದೇಶದಲ್ಲಿ ಕಮ್ಯುನಿಸ್ಟ್ ಶಕ್ತಿಗೆ ನೆರವಾಗುತ್ತಿರುವ ಅತ್ಯಂತ ಹೆಚ್ಚಿನ ಒಂದೇ ಒಂದು ಸಹಕಾರೀ ಅಂಶವೆಂದರೆ ಪ್ರಧಾನ ಮಂತ್ರಿಯವರು ಅದರ ಬಗೆಗೆ ತಳೆದಿರುವ ಮೃದುಧೋರಣೆ, ಕಮ್ಯುನಿಸಮ್ ಸರಿಯಾದದ್ದೇ ಆಗಿದೆ. ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಕೆಟ್ಟವರೆಂಬ ಅವರ ಸಿದ್ಧಾಂತವು ದೇಶದಲ್ಲಿ ಕಮ್ಯುನಿಸಮ್ ಅನ್ನು ಗೌರವಾರ್ಹವನ್ನಾಗಿ ಮಾಡಿದೆ. ಅವರು ಮತ್ತು ಕಾಂಗ್ರೆಸ್ಸಿನ ಇತರ ಅವರ ಸಹ ಪ್ರಯಾಣಿಕರು ಸಿಪಿಐನ ನಿಜವಾದ ಶಕ್ತಿಯಾಗಿದ್ದಾರೆ. (ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರೆಹಗಳು- ಸಂಪುಟ 8- ಪುಟ76)".

ಭಾರತದ ರಾಜಕಾರಣ ಹಾಗೂ ಯುದ್ಧದ ಮೇಲೆ ಚೀನಾ ಪ್ರಭಾವದ ಕುರಿತು ರಾಷ್ಟ್ರೀಯ ಮಟ್ಟದ ಅನೇಕ ಚಿಂತಕರು ಈ ಮೇಲಿನಂತೆ ಗಮನ ಸೆಳೆದಿದ್ದಾರೆ. ಚೀನಾ ಎಂದೊಡನೆ ಪ್ರಮುಖವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಮೇಲೆ ಸಹಜವಾಗಿ ದೃಷ್ಟಿ ಹರಿಯುತ್ತದೆ. ಎರಡನೆಯದು, 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ಸಾರಿದಾಗ ನಮ್ಮ ನಾಯಕರು(ಪ್ರಧಾನಿ ನೆಹರೂ) ಸರಿಯಾಗಿ ನಿಭಾಯಿಸದೆ ತಲೆತಗ್ಗಿಸುವಂತಹ ಸೋಲನುಭವಿಸಬೇಕಾಯಿತು ಎಂಬುದು. ಮೂರನೆಯದು, ನಮ್ಮ ದೇಶದಲ್ಲಿರುವ ಕಮ್ಯುನಿಸ್ಟರು ಭಾರತದ ಸಂವಿಧಾನಕ್ಕೆ ಬದ್ಧವಾಗಿರದೆ ಚೀನಾ ಪರ ವಾಲುತ್ತಾರೆ ಎನ್ನುವುದು. ನಾಲ್ಕನೆಯದು, ಇತ್ತೀಚಿನ ದಶಕಗಳಲ್ಲಿ ಚೀನಾ ತನ್ನ ಅಗ್ಗದ ಸರಕನ್ನು ಭಾರತದಲ್ಲಿ ಡಂಪಿಂಗ್ ಮಾಡುತ್ತ ದೇಶಿ ಮಾರುಕಟ್ಟೆಯನ್ನು ಕಸಿದುಕೊಳ್ಳುತ್ತಿದೆ ಎಂಬುದು. ರಾಷ್ಟ್ರೀಯ ವಿಚಾರಧಾರೆಯ ಸಾಕಷ್ಟು ಚರ್ಚೆಗಳಲ್ಲಿ ಈ ವಿಚಾರಗಳು ವಿಸ್ತೃತವಾಗಿ ಬಹಿರಂಗಗೊಂಡಿವೆ. ಆದರೆ ಹೆಚ್ಚು ಪ್ರಚಲಿತವಿಲ್ಲದ ಅಂಶವೆಂದರೆ ಸದ್ಯ ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಣದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಎಂಬ ಆಡಳಿತವು ಸರ್ಕಾರ ಭಾರತ ಸೇರಿದಂತೆ ವಿವಿಧ ದೇಶಗಳ ಜನರಲ್ಲಿ ತನ್ನ ಪರ ಮೃದು ಧೋರಣೆ ತಳೆಯಲು ಬಳಸುವ ತಂತ್ರಗಳು.


ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳು

ಚೀನಾ ಗಣತಂತ್ರವನ್ನು ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.

Formation of Sino -India Friendship Association in may 16, 1952
1952ರ ಮೇ 16ರಂದು ಚೀನಾ-ಭಾರತ ಫ್ರೆಂಡ್‌ಷಿಪ್‌
ಅಸೋಸಿಯೇಷನ್‌ ಉದ್ಘಾಟನೆ.

ಈಗಾಗಲೆ ಅನೇಕರು ತಿಳಿಸಿರುವಂತೆ ಪಿಆರ್‌ಸಿ ಕುರಿತು ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಭಿಮಾನ. ಪಿಆರ್‌ಸಿಯನ್ನು ಒಂದು ದೇಶವಾಗಿ ಅನೇಕ ದೇಶಗಳಿಗೂ ಮೊದಲೇ ಗುರುತಿಸಿದರು. ಆದರೆ ಚೀನಾದ ಆಡಳಿತ, ನೆಹರೂ ತಿಳಿದಷ್ಟು ಪಾರದರ್ಶಕವಾಗಿರಲಿಲ್ಲ. ವಿಸ್ತಾರ ಮನೋಭಾವ ಹೊಂದಿದ್ದ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ, ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಆಕ್ರಮಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(ಸಿಪಿಎಎಫ್‌ಎಫ್‌ಸಿ) ಸ್ಥಾಪಿಸಿತು. ಸಿಪಿಎಎಫ್‌ಎಫ್‌ಸಿ ಮೂಲಕ ಭಾರತದಲ್ಲಿ ಐಸಿಎಫ್‌ಎ ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.

ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಐಸಿಎಫ್‌ಎ ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.


ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ

ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.



2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು.

ಸಿಪಿಎಎಫ್‌ಎಫ್‌ಸಿ ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗೆಯೇ ಉದಾಹರಣೆ. ಸಿಪಿಎಎಫ್‌ಎಫ್‌ಸಿಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. ಕಳೆದ ವರ್ಷದ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಇದೀಗ ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕುರಿತು ಸುದ್ದಿಯಾಗಿದ್ದರು. ಚೀನಾದ ವುಹಾನ್‌ನಲ್ಲಿ ಕರೊನಾ ವೈರಸ್ ಹರಡುವಿಕೆ ಆರಂಭವಾಯಿತು ಎನ್ನುವುದು ಇದೀಗ ಬಹುತೇಕ ಎಲ್ಲರೂ ಒಪ್ಪುವ ಮಾತು. ಆದರೆ ಚೀನಾದಲ್ಲಿ ಈ ಕುರಿತ ಅನೇಕ ಅಂತೆ ಕಂತೆಗಳು ಚಾಲ್ತಿಯಲ್ಲಿವೆ. ವುಹಾನ್‌ಗೆ ಕಳೆದ ವರ್ಷ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂಬುದು ಈ ಕಥೆಗಳ ಕೇಂದ್ರಬಿಂದು. ಇದೇ ಕಥೆಯನ್ನು ಜಗತ್ತಿಗೆ ಮಾರಲು ಹೊರಟ ಮೊದಲಿಗರೆಂದರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವ್ ಲಿಜಿಯಾನ್. ಬಹುಶಃ ವುಹಾನ್‌ಗೆ ಚೀನಾ ಸೇನೆಯು ಕರೊನಾ ವೈರಸ್ ಅನ್ನು ಪಸರಿಸಿತು ಎಂದು ಅವರು ತಿಳಿಸಿದ್ದರು. ನಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ಕಥೆ ಮಾರಲು ಸಹಾಯ ಮಾಡಿದವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದರು.

ಇಷ್ಟ ಮಟ್ಟಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನೆಚ್ಚಿನ ಸೇನಾನಿಯಾದ ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ಒಂದು ವರ್ಷದಿಂದ ದಕ್ಷಿಣ ಆಫ್ರಿಕಾ ದೇಶವು ಚೀನಾದ ಬೀಜಿಂಗ್‌ನಲ್ಲಿ ತನ್ನ ರಾಯಭಾರಿಯನ್ನು ನೇಮಿಸದೆ ಅವಮಾನ ಮಾಡಿದೆ, ಈ ಸಿಟ್ಟಿಗಾಗಿ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಕರೆಸಿಕೊಳ್ಳುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಅಸಲಿ ಬಣ್ಣ ಬಯಲಾಯಿತು. ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಚೀನಾದ, ಅದಕ್ಕಿಂತಲೂ ಹೆಚ್ಚಾಗಿ ಈಗಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ. ಆದರೆ ಸ್ನೇಹದ ಕುರಿತ ವೇದಿಕೆಯೊಂದಕ್ಕೆ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯನ್ನು ಚೀನಾ ನೇಮಕ ಮಾಡಿರುವುದರಿಂದಲೇ ಈ ಸಿಪಿಎಎಫ್‌ಎಫ್‌ಸಿ ಒಟ್ಟಾರೆ ಮನೋಭಾವನೆ ತಿಳಿಯುತ್ತದೆ.



ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ.

ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ. ಅಷ್ಟಕ್ಕೂ ಪ್ರಾಚೀನ ಚೀನ ಹಾಗೂ ಭಾರತದ ಸಂಸ್ಕೃತಿಯ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಈಗ 7 ದಶಕದಿಂದ ಚೀನಾದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಆ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುವುದಿಲ್ಲ.


ಇಂತಹ ಪ್ರವಾಸ ಆಯೋಜನೆಯ ಬಲೆಗೆ ಭಾರತದ, ಅದರಲ್ಲೂ ಕರ್ನಾಟಕದ ರಾಜಕಾರಣಿಗಳೂ ಬಿದ್ದಿದ್ದಾರೆ. 2001ರಲ್ಲಿ ಈ ರೀತಿಯ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು ತೆರಳಿದ್ದರು. ಇದೀಗ ಅಖಿಲ ಭಾರತ ಪಟ್ಟದ ಐಸಿಎಎಫ್‌ಗೆ ಕರ್ನಾಟಕದವರೇ ಆದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷರು. ಕರ್ನಾಟಕ ಶಾಖೆಗೆ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು, ವಿ. ಭಾಸ್ಕರನ್ ಪ್ರಧಾನ ಕಾರ್ಯದರ್ಶಿ. 2020ರ ಜ.19ಕ್ಕೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಐಸಿಎಫ್‌ಎನ 70ನೇ ವರ್ಷದ ಕಾರ್ಯಕ್ರಮ ನಡೆಯಿತು. ಭಾರತಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೀನಾವನ್ನು ಹಾಡಿ ಹೊಗಳಿದ್ದರು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ. ಇದರಿಂದಾಗಿಯೇ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಕ್ತವಾದಷ್ಟು ಧೋರಣೆಗಳು ಚೀನಾ ವಿರುದ್ಧ ಆಗುವುದೇ ಇಲ್ಲ. ಹಾಗೆಂದು ಈ ಸಂಘಟನೆ ಜತೆಗೆ ಗುರುತಿಸಿಕೊಂಡ ಮೇಲಿನ ಯಾವುದೇ ರಾಜಕೀಯ ನಾಯಕರ ದೇಶಭಕ್ತಿ ಪ್ರಶ್ನಿಸುವುದು ಇಲ್ಲಿನ ಉದ್ದೇಶವಲ್ಲ. ಅವರಿಗೇ ಅರಿವಿಲ್ಲದಂತೆ ಚೀನಾ ಯಾವ ರೀತಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.

ನೇರವಾಗಿ ಕಮ್ಯುನಿಸ್ಟರ ಜತೆಗೆ ಗುರುತಿಸಿಕೊಂಡವರು 1962ರ ಯುದ್ಧದಲ್ಲಿ ಭಾರತದ ಸೇನೆಯನ್ನೇ ಟೀಕಿಸಿದ್ದರು. ಆದರೆ ಇದೀಗ ಚೀನಾದ ಈ ಸ್ನೇಹ ಜಾಲಕ್ಕೆ ಸಿಲುಕುವ ಅನೇಕ ನೀತಿ ನಿರೂಪಕರು ಚೀನಾ ವಿರುದ್ಧ ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ. ಅಷ್ಟರ ಮಟ್ಟಿಗೆ ಚೀನಾ ಗೆದ್ದಂತೆ. ದೇಶದೊಳಗಿನವರ ಮನಸ್ಸಿನಲ್ಲಿ ತನ್ನ ಪರ ಧೋರಣೆಯನ್ನು ಬಿತ್ತಿ ಬಿಆರ್‌ಐನಂತಹ ಭಾರತ ವಿರೋಧಿ ಯೋಜನೆಯನ್ನು ಸಲೀಸಾಗಿ ಜಾರಿಗೊಳಿಸುವುದು ಚೀನಾದ ಉದ್ದೇಶ. ಭವಿಷ್ಯದಲ್ಲಿ ಬಿಆರ್‌ಐ ಕುರಿತ ಚರ್ಚೆ ಸಂಸತ್ತಿನಲ್ಲೊ, ಸಾರ್ವಜನಿಕ ವಲಯದಲ್ಲೊ ಬಂದರೆ ಈ ಮೃದುಧೋರಣೆ ಹೊಂದಿರುವ ನಾಯಕರು ಚೀನಾ ಸಹಾಯಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ಆ ದೇಶದ್ದು.


(ವರದಿಯನ್ನು ಬೇರೆಡೆ ಬಳಸಬಹುದು. ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಬಳಸಿಕೊಂಡರೆ ಮೂಲ ಲೇಖಕರ ಹಾಗೂ ಬ್ಲಾಗ್‌ ವಿಳಾಸವನ್ನು ನಮೂದಿಸುವಂತೆ ಮನವಿ

ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಗುರುವಾರ, ಡಿಸೆಂಬರ್ 10, 2020

ಸೀತೆ ಯಾವತ್ತೂ ಪುರುಷ ವಿರೋಧಿ ಆಗಲಿಲ್ಲ : ಉತ್ತರಕಾಂಡ ಇಂಗ್ಲಿಷ್ ಅನುವಾದದ ಸಂದರ್ಭದಲ್ಲಿ ‘ಡಾ. ಎಸ್. ಎಲ್. ಭೈರಪ್ಪ’ ಸಂದರ್ಶನ

ನಲವತ್ತು ವರ್ಷದ ಹಿಂದೆ ಮಹಾಭಾರತದಲ್ಲಿನ ದ್ರೌಪತಿ, ಕುಂತಿ, ಗಾಂಧಾರಿಯನ್ನು ಚಿತ್ರಿಸಿ ‘ಪರ್ವ’ ಕಾದಂಬರಿ ರಚಿಸಿದ್ದ ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ಮುರು ವರ್ಷದ ಹಿಂದೆ, ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿರಿಸಿಕೊಂಡು ‘ಉತ್ತರಕಾಂಡ’ ಕಾದಂಬರಿ ಹೊರತಂದಿದ್ದರು. ಇದೀಗ ಉತ್ತರಕಾಂಡವನ್ನು ‘ರಶ್ಮಿ ತೇರದಾಳ್’ ಇಂಗ್ಲಿಷ್‌ಗೆ ಅನುವಾದಿಸಿದ್ದು, ಏಕಾ(ವೆಸ್ಟ್‌ಲ್ಯಾಂಡ್) ಪ್ರಕಟಿಸಿದೆ. ಈ ಕುರಿತು ಭೈರಪ್ಪ ತಮ್ಮ ಮನದಾಳವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ. 

----------------------------------------


-ರಮೇಶ ದೊಡ್ಡಪುರ 

*ವಾಲ್ಮೀಕಿ ರಾಮಾಯಣದಲ್ಲಿದ್ದ ಸೀತೆಯ ಧ್ವನಿಯನ್ನು ಉತ್ತರ ಕಾಂಡವು ಹೆಚ್ಚು ಮಾಡಿತೇ? ಅಥವಾ ಅದು ಮೂಲದಲ್ಲಿಲ್ಲದ ಧ್ವನಿಯೇ?

-ನಾನು ಉತ್ತರಕಾಂಡ ಬರೆಯುವಾಗ ಮುಖ್ಯವಾದ ಅಂಶಗಳೆಲ್ಲಾ ರಾಮಾಯಣದಲ್ಲಿ ಇದ್ದ ಕಥೆಯೇ. ಉದಾಹರಣೆಗೆ ನೇಗಿಲ ಗೆರೆಯಲ್ಲಿ ಹೆಣ್ಣು ಮಗು ಜನಕನಿಗೆ ಸಿಕ್ಕಿದ್ದು, ನಂತರದಲ್ಲಿ ಜನಕನ ಹೆಂಡತಿಯೂ ಗರ್ಭಿಣಿಯಾಗಿ ಮತ್ತೊಂದು ಹೆಣ್ಣು ಜನಿಸಿ, ಅದಕ್ಕೆ ಊರ್ಮಿಳಾ ಎಂದು ಹೆಸರಿಟ್ಟಿದ್ದು, ಸೀತೆ ರಾ

ವಣನಿಂದ ಬಿಡುಗಡೆ ಹೊಂದಿ ಬರುವಾಗ ಅಲಂಕೃತಳಾಗಿ ಬರಲೆಂದು ರಾಮ ಆದೇಶಿಸಿದ್ದು, ನಂತರದಲ್ಲಿ ರಾಮ ತನ್ನ ವಂಶದ ಕೀರ್ತಿಗಾಗಿ ಯುದ್ಧಮಾಡಿ ನಿನ್ನನ್ನು ಬಿಡಿಸಿದ್ದೇನೆ. ನೀನು ಈಗ ಮುಕ್ತಳು. ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಹೇಳಿದ್ದು ಇವೆಲ್ಲಾ ರಾಮಾಯಣದ ಮೂಲ ಕಥೆಯೇ. ಸೀತೆ ವನವಾಸದಲ್ಲಿದ್ದಾಗ ಮಕ್ಕಳಿಗಾಗಿ ಹಂಬಲಿಸಿದ್ದು, ಅದನ್ನು ಧ್ವನಿಸಲೆಂದೇ ಸೀತೆ ಚಿನ್ನದ ಬಣ್ಣದ ಜೀವಂತ ಜಿಂಕೆ ಮರಿಯನ್ನು ಬೇಕೆಂದು ರಾಮನಲ್ಲಿ ಬೇಡಿಕೆ ಇಟ್ಟಿದ್ದು, ಜಿಂಕೆಯ ಮೇಲೆ ಪ್ರೀತಿ ಹುಟ್ಟಿದ್ದು ಸಹ ಒಂದು ಹೆಣ್ಣು ಸಹಜವಾಗಿ ವ್ಯಕ್ತಪಡಿಸುವ ಆಸೆಗಳಲ್ಲವೇ? ತನ್ನ ಗಂಡ ತನ್ನನ್ನು ತಿರಸ್ಕರಿಸಿದನೆಂದು ಸೀತೆ ಆಹಾರ ತೆಗೆದುಕೊಳ್ಳದೇ ಇರುವುದು, ಇದರಿಂದ ತನ್ನ ಸಖಿ ಸುಕೇಶಿ ಎದೆ ಹಾಲಿನ ಮಹತ್ವದ ಬಗ್ಗೆ ಹೇಳುವ ಮಾತನ್ನು ಸೀತೆ ನೆನೆಯುತ್ತಾಳೆ. ’ಊರ್ಮಿಳೆಯಲ್ಲಿರುವ ಆತ್ಮವಿಶ್ವಾಸ ನನ್ನಲ್ಲಿಲ್ಲ. ಏಕೆಂದರೆ ನಾನು ತಾಯಿಯ ಹಾಲು ಕುಡಿದು ಬೆಳೆದ ಮಗುವಲ್ಲ.’ ತಾಯಿಯ ಹಾಲು ಕುಡಿದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚೆಂಬ ಅರಿವು ಸೀತೆಗೆ ಉಂಟಾಗಿ ತನ್ನ ಮಕ್ಕಳಿಗೆ ಹಾಲುಣಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತಾಳೆ. ಇವೆಲ್ಲಾ ಸಹಜ ಪ್ರಕ್ರಿಯೆಗಳು. ’ತಾಯಿ ಹಾಲು ಕುಡಿಸುವುದು’, ’ವನವಾಸದ ಬಗ್ಗೆ ಸೀತೆಯ ಮಾತುಗಳು’, ’ಕಾಡಿನಲ್ಲಿ ಕಲ್ಲು, ಮುಳ್ಳು ಚುಚ್ಚುವುದು’ ಇವೆಲ್ಲಾ ನಿಜ ಜೀವನಕ್ಕೆ ಹತ್ತಿರವಾಗಿವೆ. ಲವ-ಕುಶರಿಗೆ ಜನ್ಮವಿತ್ತ ನಂತರ ರಾಮಾಯಣವನ್ನು ವಾಲ್ಮೀಕಿ ಪದ್ಯ ರೂಪದಲ್ಲಿ ರಚಿಸಿ ರಾಮನ ಮುಂದೆ ಹಾಡಿದಾಗ ರಾಮನಿಗೆ ಆಶ್ಚರ್ಯವಾಗಿ ಈ ಬಾಲಕರು ತನ್ನ ಮಕ್ಕಳೆಂದು ವಾಲ್ಮೀಕಿಯಿಂದ ತಿಳಿಯುತ್ತಾನೆ. ಅಂದರೆ ಹದಿನಾರು ವರ್ಷವಾದರೂ ಅವನಿಗೆ ತನ್ನ ಮಕ್ಕಳ ಗುರುತೂ ಸಿಕ್ಕುವುದಿಲ್ಲ. ಅದು ಮೂಲ ಉತ್ತರಕಾಂಡದಲ್ಲಿದೆ. ಸೀತೆಯ ಪ್ರತಿ ನಡೆಯೂ ವಾಲ್ಮೀಕಿ ರಾಮಾಯಣದಲ್ಲಿ ವ್ಯಕ್ತವಾಗಿದೆ. ಅದರಲ್ಲಿಲ್ಲದ ಸೀತೆಯ ಮನಸ್ಸಿನ್ನ ಅಂತರಾಳವನ್ನು ಉತ್ತರಕಾಂಡದಲ್ಲಿ ಸೇರಿಸಿಲ್ಲ.

ಸೀತೆಯ ಪ್ರತಿ ನಡೆಯನ್ನೂ ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ವರ್ಣಿಸಿದ್ದಾರೆ. ಮೂಲ ರಾಮಾಯಣದಲ್ಲಿ ಏನೇನು ಅಂಶಗಳಿವೆಯೋ ಅವನ್ನೇ ತೆಗೆದುಕೊಂಡು ನಾನು ಸಾಮಾನ್ಯ ಮನುಷ್ಯನ ಸಹಜ ಜೀವನಕ್ಕೆ ಹೊಂದುವಂತೆ ಕಥೆ ಬೆಳೆಸಿದ್ದೇನೆ.

*ಭಾರತದ ಮಹಾಕಾವ್ಯಗಳ ಆಧಾರಿತ ಕಾದಂಬರಿಗಳು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರವಾಗುವಾಗಿನ ಸಂದರ್ಭದ ಕುರಿತು.

-ಭಾರತದ ಯಾವುದೇ ಭಾಷೆಯ ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ಭಾರತದಲ್ಲಿರುವ ಓದುಗರಿಗಾಗಿಯೇ ಹೊರತು ಹೊರದೇಶದ ಜನಗಳಿಗಲ್ಲ. ಏಕೆಂದರೆ ಅನ್ಯದೇಶಗಳ ಜನಕ್ಕೆ ಮೊದಲನೆಯದಾಗಿ ರಾಮಾಯಣ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಪರದೇಶದ ಮೂಲ ಅನುವಾದಕರು ಮತ್ತು ಭಾರತೀಯ ಇಂಗ್ಲಿಷ್ ಅನುವಾದಕರು ಸೇರಿ ಕೃತಿಗಳನ್ನು ಅನುವಾದ ಮಾಡಬೇಕು. ಹಾಗಾಗಿ ಇಂಗ್ಲಿಷ್‌ಗೆ ಅನುವಾದ ಮಾಡುವುದು ಕಷ್ಟಕರ. ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಹೆಚ್ಚು ಕಷ್ಟವಲ್ಲ. ಏಕೆಂದರೆ ಎರಡೂ ಭಾಷೆಗಳ ಮಾತ್ರವಲ್ಲ ಇಡೀ ಭಾರತದಲ್ಲಿ ಸಂಸ್ಕೃತಿಗಳು, ನಿಜ ಜೀವನಕ್ಕೆ ಸಂಬಂಧಪಟ್ಟ ವಿವರಗಳು ಒಂದೇ ರೀತಿಯದ್ದು. ಇನ್ನೂರು ವರ್ಷ ಇಂಗ್ಲಿಷ್ ಭಾಷೆಯು ನಮ್ಮನ್ನು ಆಳಿದರೂ ಭಾಷೆಯ ಬೇರು ಆದ ಸಂಸ್ಕೃತಿಗಳು ದೂರದೂರಾದವು. ಆದ್ದರಿಂದ ಭಾರತೀಯ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಅನುವಾದ ಬಹಳ ಕಷ್ಟ.

*ಅನ್ಯ ಭಾಷೆ, ಸಂಸ್ಕೃತಿಗಳ ಅನುವಾದಿತ ಕೃತಿ ಓದುವಾಗಿನ ನಮ್ಮ ಮಾನಸಿಕ ಸಿದ್ಧತೆ ಹೇಗಿರಬೇಕು?

-ಉದಾಹರಣೆಗೆ ರಷ್ಯನ್ನಿನಿಂದ ಅನುವಾದ ಕೃತಿ ಓದುತ್ತೇವೆ ಎಂದಿಟ್ಟುಕೊಳ್ಳೋಣ. ಚಳಿ ಎಂದು ಅದರಲ್ಲಿ ಬರೆದಿದ್ದರೆ, ಅಲ್ಲಿನ ಚಳಿ ಎಂಥದ್ದು? ಎಂಬುದು ತಿಳಿದಿರಬೇಕು. ಅಲ್ಲಿನ ಚಳಿ ಮೈನಸ್ 15ರಿಂದ 20ರವರೆಗೆ ಇರುತ್ತದೆ. ರಷ್ಯಾಕ್ಕೆ ಪ್ರವಾಸ ತೆರಳಿದ್ದರೆ ಸರಿ. ಇಲ್ಲದಿದ್ದರೆ ಆ ಚಳಿ ವಾತಾವರಣದ ೆಟೊ, ವಿವಿರಗಳನ್ನಾದರೂ ತಿಳಿದಿರಬೇಕು. ಮದುವೆ ಎಂದು ಬರೆದಿರುತ್ತಾರೆ. ಮದುವೆ ಎಂದ ಕೂಡಲೆ ನಮ್ಮ ಸಮಾಜದ ಮದುವೆಯೇ ನೆನಪಾಗುತ್ತದೆ. ಅಪ್ಪ ಅಮ್ಮ ಮುಂದೆ ನಿಂತು ಮದವೆ ಮಾಡುವುದು, ಮದುವೆ ನಂತರ ಹುಡುಗನ ಮನೆಗೆ ತೆರಳುವುದು, ವಿಚ್ಛೇದನ ಆಗದೇ ಇರುವುದು, ತವರು ಮನೆಯಲ್ಲೆ ಮೊದಲ ಬಾಣಂತನ ಆಗುವುದು ಇಲ್ಲಿನ ನಂಬಿಕೆ. ಅಲ್ಲಿ ಮದುವೆಯಾದ ಕೂಡಲೆ ಅಪ್ಪ ಅಮ್ಮನಿಂದ ಬೇರೆ ಮನೆ ಮಾಡುತ್ತಾರೆ. ಸಂಸ್ಕೃತಿಯಲ್ಲಿನ ಈ ಭಿನ್ನತೆಯನ್ನು ಅರಿತು ಓದಬೇಕು.



*ಸೀತೆಯ ಧ್ವನಿಯು ಫೆಮಿನಿಸಂ ಹೆಸರಿನಲ್ಲಿ ನಡೆಯುತ್ತಿುವ ಪುರುಷ ವಿರೋಧಿ ಆಂದೋಲನಕ್ಕೆ ಪೂರಕವಾಗುವ ಸಾಧ್ಯತೆ ಇದೆಯೇ?

-ಸೀತೆ ಯಾವತ್ತೂ ಪುರುಷ ವಿರೋಧಿ ಆಗಲೇ ಇಲ್ಲ. ಅವಳ ಅಸಮಾಧಾನವೇನಿದ್ದರೂ ರಾಮನ ಕೆಲವು ನಿರ್ಧಾರಗಳ ಮೇಲೆ ಮಾತ್ರ. ಸೀತೆಗೆ ತನ್ನ ತಂದೆ ಜನಕ ಮಹಾರಾಜನ ಬಗ್ಗೆ ಅಪಾರ ಗೌರವವಿತ್ತು. ಆಶ್ರಯ ಕೊಟ್ಟ ವಾಲ್ಮೀಕಿ ಮಹರ್ಷಿಗಳು ಪುರುಷರೇ. ಅವರಲ್ಲಿಯೂ ಗೌರವ ಭಾವದಿಂದಲೇ ಇದ್ದಳು. ಮೈದುನ ಲಕ್ಷ್ಮಣನ ಮೇಲೆ ಸಹ ಅತ್ತಿಗೆ ತೋರುವಂತಹ ಅಂತಃಕರಣ ಇದ್ದೇ ಇತ್ತು. ಆದ್ಧರಿಂದ ‘ಇಡೀ ಪುರುಷ ಜಾತಿಯೇ ನಮ್ಮ ಶತ್ರು. ಪುರುಷ ಜಾತಿಯಿಂದ ದೂರ ಇರಬೇಕೆಂಬ’ ಪಾಶ್ಚಾತ್ಯ ಆಧುನಿಕ ಫೆಮಿನಿಸ್ಟ್ ರೋಷವು ಸೀತೆಯಲ್ಲಿ ಇರಲಿಲ್ಲ.

*ಭಾರತೀಯ ನೆಲೆಯ ಸ್ತ್ರೀವಾದದ ಪ್ರತೀಕ ಉತ್ತರಕಾಂಡ ಎಂದು ಅನೇಕರು ಹೇಳಿದ್ದಾರೆ. ಅದು ಸತ್ಯವೇ? ಹಾಗಾದರೆ ಭಾರತೀಯ ನೆಲೆಯಲ್ಲಿ ಸ್ತ್ರೀವಾದ ಎಂಬುದೊಂದು ಇದೆಯೇ? ಇದ್ದರೆ ಹೇಗೆ?

-ಪಶ್ಚಿಮ ದೇಶದಲ್ಲಿರುವ ಸ್ತ್ರೀವಾದವೇ ಬೇರೆ, ಭಾರತದ ಸ್ತ್ರೀ ವಾದವೇ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೇ ಸ್ತ್ರೀಯರಿಗೆ ಮತದಾನದ ಹಕ್ಕು ಕೊಟ್ಟಿದೆ. ಅನೇಕ ಮಹಿಳೆಯರು ರಾಯಭಾರಿಗಳಾದರು. ಇಂದಿರಾಗಾಂಧಿ ನಮ್ಮ ದೇಶದ ಪ್ರಧಾನಿ ಆಗಿದ್ದರು. ನಮ್ಮ ದೇಶದ ಮನೆಗಳಲ್ಲಿ ಯಜಮಾನಿಕೆ ನಡೆಯುವುದು ಹೆಣ್ಣಿನಿಂದಲೇ. ಸಂಸಾರ ನಿಭಾವಣೆಯೂ ಹೆಣ್ಣಿನದೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಶೇ.30ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಾಲಿಡುತ್ತಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಈಗಿನ ಸಮಾಜದಲ್ಲಿ ಗಂಡು ಮಕ್ಕಳಿಗೂ, ಹೆಣ್ಣು ಮಕ್ಕಳಿಗೂ ಬೇಧ ಮಾಡುವ ಹಳೆಯ ವರ್ತನೆ ಇಲ್ಲ. ಸಮಾನ ವಿದ್ಯಾಭ್ಯಾಸ ನೀಡುವ ಮನಸ್ಥಿತಿ ಅಧಿಕವಾಗಿದೆ. ಆದ್ದರಿಂದ ಭಾರತೀಯ ನೆಲೆಯ ಸ್ತ್ರೀವಾದ ಎಂಬುದು ಸರಿಯಲ್ಲ.

ಉತ್ತರಕಾಂಡದಲ್ಲಿ ಕೌಸಲ್ಯೆಗೆ ಅವಳ ತಂದೆ ಪುಟ್ಟ ರಾಜ್ಯವನ್ನೇ ಕೊಟ್ಟಿರುವ ಉಲ್ಲೇಖವಿದೆ. ಅದನ್ನೂ ನಾನು ಉತ್ತರಕಾಂಡದಲ್ಲಿ ನಮೂದಿಸಿದ್ದೇನೆ. ನಮ್ಮ ಧರ್ಮಶಾಸ್ತ್ರದಲ್ಲಿ ‘ಸ್ತ್ರೀಧನ’ ಎಂಬುದನ್ನು ಉಲ್ಲೇಖಿಸಿದೆ. ಯಾರೇ ಸ್ತ್ರೀಯರಿಗೆ ಕಾಣಿಕೆ ರೂಪದಲ್ಲಿಯೋ ಅಥವಾ ದಾನದ ರೂಪದಲ್ಲಿಯೋ ಏನೇ ಕೊಟ್ಟರೂ ಅದು ಅವಳಿಗೆ ಮಾತ್ರ ಸಲ್ಲುತ್ತದೆ. ಅದರಲ್ಲಿ ಗಂಡನಿಗೆ ಪಾಲಿಲ್ಲ. ಆದ್ದರಿಂದ ವಿದೇಶಿಯರ ಸ್ತ್ರೀವಾದ ಭಿನ್ನವಾದುದು. ಸ್ವೇಚ್ಛೆಯನ್ನೇ ಸ್ತ್ರೀವಾದ ಎಂದು ಒಪ್ಪುವವರು ವಿದೇಶಿಯರು. ನಮ್ಮ ದೇಶದಲ್ಲಿ ಸಂಸ್ಕೃತಿ, ಕೌಟುಂಬಿಕ ಬಂಧಗಳ ಗಟ್ಟಿತನ, ಸೋದರ ಸಂಬಂಧಗಳ ಬೆಸುಗೆ ಇವೆಲ್ಲಕ್ಕೂ ಗೌರವದ ಸ್ಥಾನವಿದೆ. ಆದ್ದರಿಂದ ಭಾರತದಲ್ಲಿ ಪಶ್ಚಿಮ ದೇಶಗಳಲ್ಲಿರುವಂಥ ಸ್ತ್ರೀವಾದ ಗಟ್ಟಿಯಾಗಿ, ವ್ಯಾಪಕವಾಗಿ ಬೇರುಬಿಟ್ಟಿಲ್ಲ.


*ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ವಿಶ್ಲೇಷಿಸಿದ ಅನೇಕ ಸಂದರ್ಭಗಳಲ್ಲಿ ಆಕ್ಷೇಪಗಳು, ಲೇಖಕನ ವಿರುದ್ಧ ಮಾತುಗಳು ಕೇಳಿಬರುತ್ತಿವೆ. ಆದರೆ ಭೈರಪ್ಪನವರು ಬರೆದಾಗ ಸಮಾಜ ಸ್ವೀಕರಿಸುತ್ತದೆ. ಕಾವ್ಯಗಳನ್ನು ಕಾದಂಬರಿಯಾಗಿಸುವಾಗ ಲೇಖಕನ ವೈಯಕ್ತಿಕ ಜೀವನವೂ ಗಣನೆಗೆ ಬರಬಹುದೇ?

-ನವ್ಯ ಸಾಹಿತ್ಯ ಬಂದ ಮೇಲೆ ಲೇಖಕ ತನ್ನ ದೌರ್ಬಲ್ಯಗಳನ್ನು ಹೊರ ಪ್ರಪಂಚಕ್ಕೆ ತಿಳಿಯುವಂತೆ ಘೋಷಿಸಿಕೊಳ್ಳುವುದು ಹೆಚ್ಚಾಗಿದೆ. ತಮ್ಮಲ್ಲೇ ದೌರ್ಬಲ್ಯಗಳಿರುವ ಮನುಷ್ಯ ಶುದ್ಧತೆಗೆ ಹೆಸರಾದ ಸೀತೆಯ ಕಥೆ ಬರೆದಾಗ ಅವಳಲ್ಲಿಯೂ ಆ ದೌರ್ಬಲ್ಯಗಳನ್ನು ಆರೋಪಿಸುತ್ತಾನೆ. ಅವಳ ಘನತೆಯನ್ನು ನಾಶಪಡಿಸುತ್ತಾನೆ. ಇದನ್ನು ಜನತೆ ಒಪ್ಪುವುದಿಲ್ಲ. ಆದರೆ ನನ್ನ ಕೃತಿಗಳನ್ನು ಜನತೆ ಒಪ್ಪಿಕೊಂಡಿದೆ. ಕಾರಣ ನಾನು ನಮ್ಮ ದೇಶದ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದೇನೆ. ಸಮಾಜದ ಸಂಸ್ಕೃತಿ ಆಧುನಿಕ ಕಾಲಕ್ಕೆ ಯಾವ ರೀತಿ ಇರಬೇಕು ಎಂಬುದಷ್ಟನ್ನೇ ನಾನು ವಿವರಿಸಿ ಬರೆಯುತ್ತೇನೆ. ನಮ್ಮ ದೇಶದಸಂಸ್ಕೃತಿಯನ್ನು ಲೇಖಕ ಒಪ್ಪುವುದಾದರೆ ಅದರ ಆಧಾರದ ಮೇಲೆ ಅವನು ವಿಮರ್ಶೆಗಳನ್ನುಮಾಡಲುಯೋಗ್ಯ. ಆದ್ದರಿಂದ ವೈಯಕ್ತಿಕ ಜೀವನ, ಅವನ ಬರವಣಿಗೆಯ ಮೇಲೆ ಮತ್ತು ಓದುಗರು ಕೃತಿಗಳನ್ನು ಸ್ವೀಕರಿಸುವುದರ ಮೇಲೆ ಪ್ರಭಾವ ಬೀರುತ್ತದೆ.

*ಕಾದಂಬರಿಗಳು ಮಾರಾಟ ಆಗುತ್ತವೆ. ಆದರೆ ತಾವೇ ಒಮ್ಮೆ ಹೇಳಿದಂತೆ ಅಂಚು ಕಾದಂಬರಿಯ ಕುರಿತು ಕರ್ನಾಟಕದಲ್ಲಿ ಚರ್ಚೆ, ಕ್ರಿಟಲ್ ಅನಾಲಿಸಿಸ್ ನಡೆಯಲೇ ಇಲ್ಲ. ಇತರ ಲೇಖಕರ ಕೃತಿಗಳೂ ಹೀಗೆ ಆಗುತ್ತಿವೆ. ಕಾದಂಬರಿಗಳ ಕುರಿತು ಸಾಹಿತ್ಯ ವಲಯದಲ್ಲಿ ಈ ಮೌನದ ಕುರಿತು ತಮ್ಮ ಅಭಿಪ್ರಾಯ?

-ನನ್ನ ಪುಸ್ತಕಗಳ ಮೇಲೆ ಸುಮಾರು 30ಕ್ಕೂ ಹೆಚ್ಚು ವಿಮರ್ಶಾತ್ಮಕ ಪುಸ್ತಕಗಳು ಬಂದಿವೆ. ಪತ್ರಿಕೆಗಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಬರೆಯುತ್ತಾರೆ. ‘ಅಂಚು’ ಕಾದಂಬರಿ ನನ್ನ ಬೇರೆಲ್ಲಾ ಕಾದಂಬರಿಗಳಿಗಿಂತ ಭಿನ್ನವಾಗಿದೆ. ಈ ಕಾದಂಬರಿ ತಕ್ಷಣಕ್ಕೆ ಅರ್ಥವಾಗದೆ ‘ಇದೊಂದು ಬೇರೆ ರೀತಿಯ ಕಾದಂಬರಿ’ ಎಂದು ಅನೇಕ ಓದುಗರು ಹೇಳಿದ್ದಾರೆ. ಆದರೆ ‘ಬೇರೆ ರೀತಿಯಲ್ಲಿ ಬರೆದಿರುವ ಕಾದಂಬರಿಯನ್ನು ಬೇರೆ ರೀತಿಯಲ್ಲೇ ಓದಿ ಅರ್ಥೈಸಿಕೊಳ್ಳಬೇಕು’. ಅದನ್ನು ಅರ್ಥಮಾಡಿಕೊಂಡು ಓದಿದರೆ ‘ಅಂಚು’ ಸಹಾ ರಸಮಯವಾದ ಕಾದಂಬರಿಯೇ. ಚರ್ಚೆ ನಡೆಯಲಿಲ್ಲ ಎಂಬುದನ್ನು ಅಂಚು ಕಾದಂಬರಿಯ ವೆಬಿನಾರ್‌ಗೆ ಸಂಬಂಧಪಟ್ಟಂತೆ ಹೇಳೀದ್ದೇ ಹೊರತು, ಬೇರೆ ಕಾದಂಬರಿಗಳಿಗಲ್ಲ. ಮುಂಬೈನ ಮನಃಶಾಸ್ತ್ರಜ್ಞೆ ಅಂಜಲಿ ಜೋಷಿ ಎಂಬುವವರು ‘ಅಂಚು’ ಕಾದಂಬರಿ ಬಹಳ ಗುಣಮಟ್ಟದ್ದೆಂದು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾರೂ ಈ ರೀತಿ ವಿಶ್ಲೇಷಣೆ ಮಾಡಲೇ ಇಲ್ಲ. ಕಾರಣ ಮನಃಶಾಸ್ತ್ರ ಓದಿರುವವರು ಕಡಿಮೆ ಇರಬಹುದೋ ಅಥವಾ ಕನ್ನಡ ಮನಃಶಾಸ್ತ್ರಜ್ಞರು ‘ಅಂಚು’ ಕಾದಂಬರಿಯನ್ನು ಓದಿಲ್ಲದೇ ಇರಬಹುದು.

*ಸೀತಾರಾಮ, ರಾಜಾರಾಮನಾಗುವ ಸಂದರ್ಭದಲ್ಲಿ ಅವನಲ್ಲಿ ಬದಲಾವಣೆಗಳು ಕಂಡವು ಎಂದು ಹೇಳಿದ್ದೀರಿ. ರಾಜನಾಗಿಯೂ ರಾಮನು ಒಬ್ಬ ಪತಿಯಾಗಿಯೇ ನಡೆದುಕೊಂಡಿದ್ದರೆ, ರಾಮ ಪೂಜ್ಯನಾಗುತ್ತಿದ್ದನೇ?

-ದೇವರ ಅವತಾರ ಎಂಬುದು ಪುರಾಣದಲ್ಲಿ ಬಂದಿದೆ. ರಾಮ, ಕೃಷ್ಣ, ಸೀತೆ, ಲಕ್ಷ್ಮಣ ಇವರೆಲ್ಲಾ ಅವತಾರ ರೂಪ ಎಂದು ಪುರಾಣದಲ್ಲಿ ಓದುತ್ತಲೇ ಬಂದಿದ್ದೇವೆ. ದೇವರ ಅವತಾರ ಎಂದರೆ ಅವನು ಆದರ್ಶನೇ ಆಗಿರಬೇಕು. ಅವನು ಮಾಡಿದ್ದೆಲ್ಲಾ ಸರಿಯಾಗಿಯೇ ಇರಬೇಕು. ರಾಮನಿಗೆ ಸೀತೆ ಶುದ್ಧಳೆಂದು ಗೊತ್ತಿತ್ತು. ಕಾವಲು ಕಾಯುತ್ತಿದ್ದ ರಾಕ್ಷಸ ಹೆಂಗಸರು, ವಿಭೀಷಣನ ಹೆಂಡತಿ ಇವರೆಲ್ಲಾ ಸೀತೆಯ ಶುದ್ಧತೆಗೆ ಸಾಕ್ಷಿ ಹೇಳಿದರೂ ರಾಮ ಈ ಸಾಕ್ಷಿಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾನೆ. ಅದು ರಾಮನಿಗೆ ಸಲ್ಲುವಂಥ ಮಾತೇ ಎಂಬ ಪ್ರಶ್ನೆ ಹುಟ್ಟುತ್ತೆ. ಭರತನ ಆಡಳಿತದಲ್ಲಿ ಪ್ರಜೆಗಳು ತೆರಿಗೆ ಕಟ್ಟದೇ ಬೊಕ್ಕಸ ಬರಿದು ಮಾಡಿರುತ್ತಾರೆ. ಆಡಳಿತ ಸುಸೂತ್ರವಾಗಿರಲಿಲ್ಲ. ರಾಜ್ಯದಲ್ಲಿ ದಾರಿದ್ರ್ಯ ತುಂಬಿತ್ತು. ಈ ಸಂದರ್ಭದಲ್ಲಿ ರಾಮ, ರಾಜ್ಯ ವಹಿಸಿಕೊಂಡು ಸುಸೂತ್ರವಾಗಿ ನಡೆಸಬೇಕಾದರೆ ಬೊಕ್ಕಸಕ್ಕೆ ಬರುವಂತಹ ತೆರಿಗೆ ಸಲ್ಲಬೇಕು. ಆದರೆ ತೆರಿಗೆ ಕಟ್ಟಲು ವಿರೋಧಿಸುವವರು ಸೀತೆಯ ಬಗ್ಗೆ ಗುಸುಗುಟ್ಟುವಿಕೆ ಶುರುಮಾಡಿದರು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಸೀತೆಯ ಶುದ್ಧತೆಯ ಪ್ರಶ್ನೆ ಎತ್ತುತ್ತಾರೆ. ಆದರೆ ರಾಮ, ರಾಜನಾಗಿದ್ದವನು ಗೂಢಚಾರರನ್ನು ಬಿಟ್ಟು ಯಾರು ಅಂತಹ ವದಂತಿ ಹಬ್ಬಿಸುತ್ತಿದ್ದಾರೋ ಅವರಿಗೆ ಶಿಕ್ಷೆ ಕೊಟ್ಟಿದ್ದರೆ ಜನತೆ ವದಂತಿಗಳನ್ನು ಕೈಬಿಟ್ಟು ಸುಮ್ಮನಾಗುತ್ತಿದ್ದರು. ಆದರೆ ರಾಮ, ಸೀತೆಯನ್ನು ಕಾಡಿಗೆ ಕಳಿಸಿ, ಇಬ್ಬರೂ ದುಃಖ ಅನುಭವಿಸುವ ಮೂಲಕ ಜನತೆಗೆ ಆದರ್ಶವನ್ನು ತೋರಿಸಬೇಕೆಂದು ಯೋಚಿಸುತ್ತಾನೆ. ವದಂತಿ ಹಬ್ಬಿಸಿದ ಪ್ರಜೆಗಳು ಸಹ ರಾಮ ಹೆಂಡತಿಯನ್ನು ತ್ಯಜಿಸಿದ್ದು ನೋಡಿ ‘ಸೀತೆ ಶುದ್ಧಳಲ್ಲವೆಂದು ರಾಮನು ಒಪ್ಪಿದನು’ ಎಂದು ತಿಳಿಯಬಹುದಿತ್ತಲ್ಲವೇ? ಗೌತಮ ಅಹಲ್ಯೆಯರನ್ನು ಕ್ಷಮಿಸಿ ಒಂದುಗೂಡಿಸಿದ ರಾಮ ತನ್ನ ಹೆಂಡತಿಯನ್ನೇಕೆ ತ್ಯಸಿಜಿದ? ಜನಕನ ಹೆಂಡತಿಯ ಗರ್ಭಸಂಜಾತೆ ಅಲ್ಲದ ಸೀತೆಯನ್ನು ಮದುವೆಯಾಗಲು ದಶರಥ ಒಪ್ಪದೇ ಇದ್ದರೂ, ಬಿಲ್ಲು ಮುರಿದಿದ್ದೇನೆ. ಸೀತೆಯನ್ನೇ ಮದುವೆಯಾಗುವುದಾಗಿ, ಇಲ್ಲವಾದಲ್ಲಿ ಮದುವೆಯೇ ಬೇಡವೆಂದು ತಿಳಿಸಿದ್ದ ಆದರ್ಶಪುರುಷ ರಾಮ. ಶಂಭೂಕನೆಂಬ ಶೂದ್ರನು ತ್ರೇತಾಯುಗದಲ್ಲಿ ತಪಸ್ಸು ಮಾಡುತ್ತಿರುವಾಗ ತಪಸ್ಸು ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಮಾಡುತ್ತಾನೆ. ಶೂದ್ರನಾದ ಅವನನ್ನು ಕೊಂದುಹಾಕುತ್ತಾನೆ. ಶಂಭೂಕ ವಧೆ ಮೂಲ ರಾಮಾಯಣದಲ್ಲೇ ಇದೆ. ಆದರ್ಶ ರಾಮನ ಗುಣಗಳು ರಾಜ್ಯಭಾರ ಮಾಡುವ ಹೊತ್ತಿಗೆ ಬದಲಾವಣೆಯಾಗಿದ್ದವು. ಎಂಬುದು ನನ್ನ ಭಾವನೆ. ಆದ್ದರಿಂದ ಮೊದಲು ಸೀತಾರಾಮನಾಗಿದ್ದವನು ನಂತರದಲ್ಲಿ ರಾಜಾರಾಮನಾದ. ರಾಮನ ಅವತಾರವನ್ನು ಒಪ್ಪಿಕೊಂಡರೆ ‘ಪೂಜ್ಯ’ ಎನ್ನಬಹುದು. ಅವನೊಬ್ಬ ಸಾಮಾನ್ಯ ಮನುಷ್ಯ ಎಂದು ಭಾವಿಸಿದರೆ ‘ಒಳ್ಳೆಯ ಮನುಷ್ಯ’ ಎನ್ನಬಹುದು. ಪೂಜ್ಯ ಎಂಬ ಶಬ್ದ ಇಲ್ಲಿ ಹೊಂದುವುದಿಲ್ಲ.


*ಉತ್ತಮ ಕಾದಂಬರಿ ಹೊರಬರಲು ಕಾದಂಬರಿಕಾರ ಜನಸಂಪರ್ಕ, ಪುಸ್ತಕ ಓದು, ಪ್ರವಾಸಗಳಲ್ಲಿ ಯಾವುದರ ಕುರಿತು ಹೆಚ್ಚು ಗಮನ ಕೇಂದ್ರೀಕಿರಸಬೇಕು? ವಸ್ತು ಆಯ್ಕೆಯಲ್ಲಿ ಲೇಖಕನ ಹಿನ್ನೆಲೆ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ?

-ಪುಸ್ತಕದ ಓದು, ಪ್ರವಾಸ, ಜನಸಂಪರ್ಕ ಎಲ್ಲವೂ ಕಾದಂಬರಿಕಾರನಿಗೆ ಮುಖ್ಯ. ನನ್ನ ಅನುಭವದಲ್ಲಿ ವಸ್ತುವನ್ನು ನಾನಾಗಿಯೇ ಆಯ್ಕೆ ಮಾಡಲ್ಲ. ಅದು ತಾನೇ ಹುಟ್ಟುತ್ತೆ. ತಾನೇ ಬೆಳೆಯುತ್ತೆ. ನಂತರದಲ್ಲಿ ನಾನು ಬರೆಯಲು ತೊಡಗುತ್ತೇನೆ. ನನ್ನ ಅನುಭವದಿಂದಲೇ ಪಾತ್ರಗಳು ಸೃಷ್ಟಿಯಾಗುವುದು. ನಮ್ಮ ಅನುಭವದ ಪ್ರಕಾರವೇ ನಮ್ಮ ಮನಸ್ಸು ಚಲಿಸುತ್ತೆ. ನೀವ್ಯಾಕೆ ಶ್ರೀನಿವಾಸ ಶ್ರೋತ್ರಿಗಳ ಪಾತ್ರವನ್ನು ಸೃಷ್ಟಿ ಮಾಡಿದಿರಿ, ಅಂಥವರನ್ನು ಎಲ್ಲಿ ನೋಡಿದ್ರಿ? ಅಂದರೆ ಅಂತಹ ಗುಣವುಳ್ಳ ಹಲವಾರು ಜನರನ್ನು ನೋಡಿದ್ದೆ. ಆ ಗುಣಗಳು ಬಹಳಷ್ಟು ಜನರಲ್ಲಿ ಇತ್ತು. ಈಗಲೂ ಕೆಲವರು ಇದ್ದಾರೆ.


*ಸೀತೆಯ ಪಾತ್ರವನ್ನು ಈಗಿನ ಸಮಾಜದ ಜನರ ಮಾನಸಿಕತೆಗೆ, ಸ್ಪಂದನೆಗೆ ಅನುಗುಣವಾಗಿ ಧ್ವನಿಸಲಾಗಿದೆ ಎಂದು ತಾವು ಹೇಳಿದ್ದೀರಿ. ಅಂದರೆ ಇನ್ನು 20-30 ವರ್ಷ ನಂತರ ಈ ಕಾದಂಬರಿಯನ್ನು ಮತ್ತೊಬ್ಬರು ಬರೆದರೆ ಅಂದಿನ ಸಮಾಜಕ್ಕೆ ಧ್ವನಿ ಬದಲಾಗುತ್ತದೆಯೇ? ಅಥವಾ ಕಾದಂಬರಿಯು ಮಾನವನ ಸಾರ್ವಕಾಲಿಕ ಸ್ವಭಾವವನ್ನು ಧ್ವನಿಸಿದೆಯೇ?

-ಇದು ಸಾರ್ವಕಾಲಿಕ. ವಾಸ್ತವವಾಗಿ ನಾನು ‘ವಂಶವೃಕ್ಷ’ಕ್ಕೆ ಹಿನ್ನುಡಿ ಬರೆದಿದ್ದೇನೆ. ಅದಕ್ಕೆ ‘ಯುಗಸಂಧಿ’ ಅಂತ ಹೆಸರಿಟ್ಟಿದ್ದೇನೆ. ಒಂದು ಸಮಾಜದ ನಂಬಿಕೆ ಯಾವಾಗ ಪೂರ್ತಿಯಾಗಿ ಬದಲಾಗುತ್ತೋ, ಆಗ ಮಾತ್ರ ಹೊಸ ಯುಗ ಎಂದು ಕರೆಯುವುದು. ರಾಮಾಯಣವನ್ನು ಹೊರತುಪಡಿಸಿ ನಮ್ಮ ಇಡೀ ಸಮಾಜದ ಆದರ್ಶ ಹೆಣ್ಣು ಎಂಬ ಕಲ್ಪನೆ ಬದಲಾದರೆ, ಮುಂದೆ ಬದಲಾದ ಸಮಾಜದಲ್ಲಿ ರಾಮಾಯಣ ಓದಿದರೆ ಸೀತೆ ಮತ್ತು ರಾಮನ ಪಾತ್ರ ಮತ್ತಷ್ಟು ಭಿನ್ನವಾಗಿ ಕಾಣಬಹುದು. ಆಧುನಿಕ ವಿಜ್ಞಾನ ಮತ್ತು ಆಧುನಿಕ ಕೈಗಾರಿಕೀಕರಣ ಬಂದ ಮೇಲೆ, ಖಗೋಳ ಜ್ಞಾನ ಮತ್ತು ಖಗೋಳ ಭೌತಶಾಸ್ತ್ರ, ಬಿಗ್ ಬ್ಯಾಂಗ್ ಥಿಯರಿ ಇವೆಲ್ಲಾ ಬಂದ ಮೇಲೆ ಪ್ರಪಂಚದ ದೃಷ್ಟಿಯ ಮೇಲೆ ಪ್ರಭಾವ ಬೀರಿವೆ. ಮೌಲ್ಯಗಳ ಬಗ್ಗೆ ಯೋಚಿಸಿದರೆ ಈಗಲೂ ಮೌಲ್ಯಗಳು ಮನುಷ್ಯನಲ್ಲಿ ಕಾಣುತ್ತಲೇ ಇವೆ. ಉದಾಹರಣೆಗೆ ಬಿಲ್‌ಗೇಟ್ಸ್ ದುಡಿದ ಹಣವನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ವೈಜ್ಞಾನಿಕವಾಗಿ ಯೋಚಿಸಿದರೂ ’ದುರಾಸೆ ಬೇಡ, ನಾವು ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ’ ಎಂಬ ಮನೋಭಾವ ಇದ್ದೇ ಇದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವವರು ಇದ್ದಾರೆ. ತಾನು ಮಾಡಿದ್ದು ತನ್ನ ಮಕ್ಕಳಿಗೆ ಮಾತ್ರ ಎಂಬ ಮನೋಭಾವ ಇರುವವರಿಗೆ ನೈತಿಕತೆ ಇರುವುದಿಲ್ಲ.


*ಪ್ರಸ್ತುತ ಸಂದರ್ಭದ ಬಗ್ಗೆ ಕೇಳುವುದದರೆ, ಅಂತಧರ್ಮೀಯ/ ಅನ್ಯ ನಂಬಿಕೆಗಳ ನಡುವೆ ಮದುವೆ ಆಗುವುದನ್ನು ತಡೆಯುವುದು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎನ್ನಲಾಗುತ್ತಿದೆಯಲ್ಲ?

-ಲವ್ ಜಿಹಾದ್ ಮೂಲಕವೂ ಮುಸ್ಲಿಮರು ಆಕ್ರಮಣ ನಡೆಸುತ್ತಿರುತ್ತಾರೆ. ಮುಸ್ಲಿಮರಲ್ಲಿ ಸೀಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಕಡಿಮೆ, ಹೋದರೂ ಬುರ್ಖಾ ಧರಿಸಿರುತ್ತಾರೆ. ಅವರು ಹೆಣ್ಣು ಎನ್ನುವುದು ತಿಳಿಯುತ್ತದೆಯೇ ವಿನಃ ಅವರ ಮುಖ ಕಾಣಿಸುವುದಿಲ್ಲ. ಆದರೆ ಹಿಂದುಗಳಲ್ಲಿ ಹೆಣ್ಣುಮಕ್ಕಳಿಗೆ ನಿರ್ಬಂಧಗಳು ಕಡಿಮೆ. ಯಾರನ್ನು ಬೇಕಾದರೂ ಮಾತನಾಡಿಸಬಹುದು, ತಡವಾಗಿಯೂ ಮನೆಗೆ ಬರಬಹುದು. ಇದನ್ನೇ ಬಳಸಿಕೊಳ್ಳುವ ಮುಸ್ಲಿಂ ಹುಡುಗರು ಅವರ ಸ್ನೇಹ ಸಂಪಾದಿಸಿ, ಹೋಟೆಲ್, ಪಾರ್ಕುಗಳಲ್ಲಿ ಸುತ್ತಾಡುತ್ತಾರೆ. ಲೈಂಗಿಕ ಆಸಕ್ತಿ ಕೆರಳುವ ವಯಸ್ಸಿನಲ್ಲಿರುವ ಹೆಣ್ಣುಮಕ್ಕಳು ಇದನ್ನು ನಿಜವೆಂದು ನಂಬುತ್ತಾರೆ. ೆಟೊಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ. ಮದುವೆ ಆಗಲು ಹುಡುಗಿ ಒಪ್ಪದಿದ್ದಾಗ ೆಟೊಗಳನ್ನು ತೋರಿಸಿ ಬೆದರಿಸುತ್ತಾರೆ, ತಮ್ಮ ಮತಕ್ಕೆ ಮತಾಂತರವಾಗುವಂತೆ ಮನವೊಲಿಸುತ್ತಾರೆ. ಇದರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಾನೂನು ರೂಪಿಸಿದೆ. 18 ವರ್ಷವಾದ ಹೆಣ್ಣು ಮಕ್ಕಳು, 21 ವರ್ಷವಾದ ಗಂಡು ಮಕ್ಕಳು ತಮಗಿಚ್ಛೆ ಬಂದವರನ್ನು ಮದುವೆಯಾಗಲು ಸಂವಿಧಾನಬದ್ಧ ಅಧಿಕಾರವಿದೆ. ನ್ಯಾಯಾಲಯದಲ್ಲಿ ಈ ಕಾನೂನು ಮಾನ್ಯತೆ ಕಳೆದುಕೊಳ್ಳಬಹುದು. ಹಿಂದು ಸಮಾಜ ಒಗ್ಗೂಡುವುದೊಂದೇ ಈ ಸಮಸ್ಯೆಗೆ ಪರಿಹಾರ. ಲವ್ ಜಿಹಾದ್ ನಡೆಸಿದವರ ಜತೆಗೆ ಉದ್ಯಮ, ವ್ಯಾಪಾರ ನಡೆಸದಿದ್ದರೆ ಸರಿಯಾಗುತ್ತದೆ. ಆದರೆ ಹಿಂದುಗಳಲ್ಲಿ ಒಗ್ಗಟ್ಟು ಇಲ್ಲ. ಅವನ ಮಗಳು ತಾನೆ ಎಂದುಕೊಂಡು ಸುಮ್ಮನಾಗುತ್ತಾರೆ.