ಭೂಕೇ ನಂಗೇ ಹಿಂದುಸ್ಥಾನ್ ಸೆ ಕಶ್ಮೀರ್ ಕೋ ಆಜಾದೀ ಚಾಹಿಯೇ(ಹಸಿದ, ಬೆತ್ತಲಾದ ಭಾರತದಿಂದ ಕಾಶ್ಮೀರಕ್ಕೆ ಸ್ವತಂತ್ರ್ಯ ಬೇಕು) ಎಂದು ದೆಹಲಿಯಲ್ಲಿರುವ ಕೋಪರ್ನಿಕಸ್ ಮಾರ್ಗದಲ್ಲಿರುವ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಅಕ್ತೊಬರ್ ಇಪ್ಪತ್ತೊಂದನೇ ತಾರೀಖು ಅರುಂಧತಿ ರಾಯ್ ಘಂಟಾಘೋಷವಾಗಿ ನುಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ನಮ್ಮ ಕೇಂದ್ರ ಸರ್ಕಾರ. ಕ್ರಮ ಕೈಗೊಳ್ಳಲಿಲ್ಲ ಎನ್ನುವುದಕ್ಕಿಂತ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಗೊತ್ತಿದ್ದೇ ಹಾಗೆ ಮಾತನಾಡಲಾಯಿತು ಎನ್ನಬಹುದು. ಕಾರಣ, ಇದೇ ವರ್ಷದ ಸೆಪ್ಟೆಂಬರ್ ಹತ್ತೊಂಭತ್ತರಂದು ಉತ್ತರ ಅಮೇರಿಕಾದ ಜನಪ್ರಿಯ ಟಿ.ವಿ ವಾಹಿನಿ 'ಡೆಮಾಕ್ರಸಿ ನೌ' ನ ವರದಿಗಾರ್ತಿ ಅಮಿ ಗುಡ್ಮನ್ ಅವರಿಗೆ ಅರುಂಧತಿ ಸಂದರ್ಶನ ನೀಡಿದರು. ಕಾಶ್ಮೀರದ ಸಮಸ್ಯೆ, ಆಜಾದೀ ಯ ಬಗೆಗೇ ನಡೆಯುತ್ತಿದ್ದ ಸಂದರ್ಶನದಲ್ಲಿ ಅರುಂಧತಿ ಹೇಳಿದ ಒಂದು ಮಾತು,'ದೆಹಲಿಯ ಕಾಮನ್ವೆಲ್ತ್ ಗೇಮ್ಸ್ ಗಾಗಿ ಅಲ್ಲಿರುವ ಬಡವರನ್ನೆಲ್ಲಾ ಪಾರ್ಕ್ ಗಳಿಗೆ ತಳ್ಳಿ, ಅವರು ಕಾಣದಂತೆ ಬಿಲ್ ಬೋರ್ಡ್ ಗಳನ್ನು ಹಾಕಲಾಗಿದ್ದಂತೆ, ಅಮೇರಿಕಾ ಅಧ್ಯಕ್ಷ ಒಬಾಮಾ ಭಾರತಕ್ಕೆ ಬರುವ ವೇಳೆಗೆ ಕಾಶ್ಮೀರ ವಿಷಯವನ್ನೂ ಮುಚ್ಚಿ ಹಾಕುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡುತ್ತಿದೆ' ಎಂದರು. ಇದರರ್ಥ, ಕಾಶ್ಮೀರದಲ್ಲಿ ಬಿದ್ದಿರುವ ಕಲ್ಲೇಟಿನಿಂದ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿರುವ ಭಾರತ ಸರ್ಕಾರ, ಒಬಾಮಾ ಬರುವ ವೇಳೆಗೆ ಯಾವುದೇ ಹೊಸ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ ಎಂಬ ಸ್ಪಷ್ಟ ಅರಿವು ಅರುಂಧತಿ ಅವರಿಗಿದೆ. ಹಾಗಾಗಿಯೇ ಅಷ್ಟೊಂದು ಧೈರ್ಯವಾಗಿ ದೆಹಲಿಯಲ್ಲೇ ಸಭೆನಡೆಸಿ, ದೇಶ ಒಡೆಯುವ ಮಾತಾಡಿದ್ದು.

ಈ ಸಭೆಯ ಕುರಿತು ಯೊಚಿಸಬೇಕಾದ ಇನ್ನೊಂದು ವಿಷಯವೆಂದರೆ, ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದು. ಸಭೆಯಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿಶಾ ಗಿಲಾನಿ ಹೊರತುಪಡಿಸಿ, ನಾಗಾಲ್ಯಾಂಡ್ಅನ್ನು ಭಾರತದಿಂದ ಪ್ರತ್ಯೇಕಿಸಲು ಹಗಲಿರುಳೂ ಶ್ರಮಿಸುತ್ತಿರುವ ನಾಗಾ ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್(NPMHR) ನ ಪ್ರಧಾನ ಕಾರ್ಯದರ್ಶಿ Dr.N Venuh, ಮಣಿಪುರದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿಸುತ್ತಿರುವ ಕಮಿಟಿ ಫಾರ್ ಪೀಸ್ ಅಂಡ್ ಡೆಮಾಕ್ರಸಿ (CPDM) ಯ Malem Ningthouja, ಲಡಾಯೀ ಹಾರೇ ಹೈ ಮಗರ್ ಆಜಾದೀ ಕಾ ಜಂಗ್ ನಹೀ ಚೋಡೇ ಹೈ ಹಮ್( ಕದನ ಸೋತಿದ್ದರೂ ಸ್ವಾತಂತ್ರ್ಯದ ಯುದ್ಧ ಬಿಟ್ಟಿಲ್ಲ) ಎಂದು ಹೇಳಿದ- ಸತ್ತು ಹೋಗಿದೆ ಎಂದು ಹೇಳಲಾಗುತ್ತಿರುವ ಪಂಜಾಬ್ ಪ್ರತ್ಯೇಕತಾವಾದಿ 'ದಲ್ ಖಾಲ್ಸಾ'ದ ಕನ್ವರ್ಪಾಲ್ ಸಿಂಗ್ ಮತ್ತು ಹರಚರಣ್ಜೀತ್ ಸಿಂಗ್, ಆಂಧ್ರ ಪ್ರದೇಶದಲ್ಲಿ ರಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಗುಂಪು ಮಾಡಿಕೊಂಡು, ಸರ್ಕಾರ 1991ರಲ್ಲಿ ಅದರ ಮೇಲೆ ನಿಷೇಧ ಹೇರಿದ ನಂತರ ಇದೀಗ ರೆವಲ್ಯೂಷನರಿ ಡೆಮಾಕ್ರಟಿಕ್ ಪಾರ್ಟಿ(ಆರ್.ಡಿ.ಪಿ) ಎಂಬ ಮಾವೋಗಳೊಂದಿಗೆ ಸಹಮತ ಹೊಂದಿರುವ ಸಂಘಟನೆಯ ಜಿ.ಎನ್. ಸಾಯಿಬಾಬಾ, ಪ್ರತ್ಯೇಕ ತಮಿಳುನಾಡಿಗೆ ಆಗ್ರಹಿಸುತ್ತಿರುವ ತಮಿಳ್ ನ್ಯಾಷನಲ್ ಲಿಬರೇಷನ್ ಮೂವ್ಮೆಂಟ್ ನ ಕಾರ್ಯದರ್ಶಿ Thaigu , ಮಾವೋವಾದಿಗಳ ನಾಗರಿಕ ಮುಖವಾಗಿರುವ ಆಂಧ್ರದ ವರವರರಾವ್ ಹಾಗೂ ಬಂಗಾಳದ ಸುಜಾತೋ ಭದ್ರ- ಶುದ್ಧಭ್ರತ ಸೇನ್ ಗುಪ್ತ, ಜಮ್ಮುವಿನ ಶಿವನಂದನ್- ಶೇಖ್ ಶೌಕತ್ ಹುಸೇನ್ ಅವರುಗಳು.
2008ರಲ್ಲಿ ಇದೇ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಪ್ರಾರಂಭವಾದ ಕಮಿಟೀ ಫಾರ್ ದಿ ರೀಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್(CRPP) ಎಂಬ ಹೆಸರಿನಡಿ ನಡೆದ ಈ ಸಭೆಯು ಮಣಿಪುರ, ನಾಗಾಲ್ಯಾಂಡ್, ಬಂಗಾಳ, ಪಂಜಾಬ್, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಅಂದರೆ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಎಲ್ಲ ಭಾರತದಿಂದಲೂ ಪ್ರತಿನಿಧಿಗಳು ಆಗಮಿಸಿದ್ದ, ಒಂದರ್ಥದಲ್ಲಿ 'ಭಾರತದ ರಾಷ್ಟ್ತ್ರೀಯತೆಯನ್ನೇ ಪ್ರಶ್ನಿಸಲು ಮಾಡಲಾದ ರಾಷ್ಟ್ತ್ರೀಯ ಸಮ್ಮೇಳನ!' ಇದಾಗಿತ್ತು. ಇಂದು ಇವರೆಲ್ಲಾ ಒಟ್ಟಾಗಿ ಕೇವಲ ಕಾಶ್ಮೀರದ ಪ್ರತ್ಯೇಕತೆಯ ಕುರಿತು ಮಾತ್ರ ಮಾತನಾಡುತ್ತಿದ್ದಾರೆ. ಈ ಕೆಲಸ ಆದರೆ ದೇಶದ ವಿವಿಧೆಡೆಗಳಲ್ಲಿಯೂ ಇದೇ ದಾರಿ ಅನುಸರಿಸಿ ದೇಶವನ್ನು ಛಿದ್ರ-ಛಿದ್ರ ಮಾಡುವ ಹುನ್ನಾರ ಇವರಿಗಿದೆ.
ಈ ಸಭೆಯ ತೀರ್ಮಾನಗಳಲ್ಲಿ ಮೊದಲನೆಯದೆಂದರೆ, 'ಭಾರತ ಸರ್ಕಾರವು ಕಾಶ್ಮೀರವನ್ನು ಅಂತಾರಾಷ್ಟ್ತ್ರೀಯ ಸಮಸ್ಯೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕು' ಎಂಬುದು. ಆ ಮೂಲಕ ಅಮೆರಿಕಾದ ಮಧ್ಯಸ್ಥಿಕೆ ಏರ್ಪಡಿಸಿ 'ಕೋತಿ ನ್ಯಾಯ' ಮಾಡಿಸುವ ಹುನ್ನಾರ ಇದು. ಕಳೆದ ವಾರವಷ್ಟೇ, ಕಾಶ್ಮೀರ ವಿಷಯದಲ್ಲಿ ತಾನು ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಿನಂತಿಯನ್ನು ಅಮೇರಿಕಾ ನಯವಾಗಿ ತಳ್ಳಿಹಾಕಿದೆ. ಆದರೆ ಮನದಾಳದಲ್ಲಿ ಮಧ್ಯಸ್ಥಿಕೆಯ ಆಸೆ ಹೊಂದಿರುವ ಅದು, 'ಒತ್ತಡ'! ಹೆಚ್ಚಾದಾಗ ಕಾಶ್ಮೀರ ವಿಷಯದಲ್ಲಿ ತನ್ನ ಮೂಗುತೂರಿಸುವುದು ನಿಶ್ಚಿತ. ನಂತರ ತನ್ನ ಸೇನೆಯನ್ನು ಅಲ್ಲಿ ನುಗ್ಗಿಸಿ ತಂತ್ರಜ್ಞಾನದ ಸಹಾಯದಿಂದ ಭಾರತ-ಚೀನಾಗಳ ಮೇಲೆ ಒಂದು ಕಣ್ಣಿಡುವುದು ಅದರ ದೂ(ದು)ರಾಲೋಚನೆ. ಒಂದು ಕಡೆ ಪಾಕಿಸ್ತಾನದಿಂದ ಇನ್ನೊಂದು ಕಡೆ ದೇಶದ ಒಳಗಿನಿಂದ ಎರಡೂ ಕಡೆ ಯುದ್ಧವಾಗುವಂತೆ ಮಾಡಿ ಭಾರತವನ್ನು ಸೋಲಿಸುವುದು ಅಮೆರಿಕಾದಿಂದ ಹಿಡಿದು ಅರುಂಧತಿ ರಾಯ್ ವರೆಗಿನ ಎಲ್ಲರ ಕನಸು.
ಕಳ್ಳಕಾಕರನ್ನು, ಸುಲಿಗೆಕೋರರನ್ನು, ಅತ್ಯಾಚಾರಿಗಳನ್ನು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟು, ನ್ಯಾಯ ಕೇಳುವ ಲೇಖಕರ ಬಾಯಿಮುಚ್ಚಿಸುತ್ತಿರುವ ದೇಶವನ್ನು(ಭಾರತವನ್ನು) ಕಂಡರೆ ಮರುಕ ಬರುತ್ತದೆ ಎಂದಿರುವ ಅರುಂಧತಿ ರಾಯ್ ತಿಳಿಯಬೇಕಾದ್ದೆಂದರೆ, ಭಾರತದಲ್ಲಾಗಿರುವುದಕ್ಕೇ ಅವರು ಇಷ್ಟೊಂದು ಮಾತನಾಡಲು ಆಗುತ್ತಿರುವುದು ಎಂಬ ವಿಷಯವನ್ನು. ಹಾಗೂ ಬಾಂಗ್ಲಾದ ತಸ್ಲೀಮಾ ನಸ್ರೀನ್, ಮ್ಯಾನ್ಮಾರ್ ನ ಆಂಗ್ ಸಾನ್ ಸುಕಿ ಯಂತಹ ಲೇಖಕಿಯರ ಪರಿಸ್ಥಿತಿ ಏನಾಗಿದೆ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು. ಭಾರತಕ್ಕೆ ಯಾವ ಸಮಯದಲ್ಲಿ ಯಾವಪೆಟ್ಟು ನೀಡಬೇಕು ಎಂಬುದನ್ನು ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅರುಂಧತಿ ರಾಯ್ ಗೆ ಚೆನ್ನಾಗಿ ತಿಳಿದಿದೆ. ಒಂದು ಅಣುಬಾಂಬ್ ನಿಂದ ಮಾಡಬಹುದಾದಷ್ಟು ವಿಚ್ಛಿದ್ರಕಾರಿ ಬೆಳವಣಿಗೆಯನ್ನು ಒಂದು ಸೆಮಿನಾರ್ ನಿಂದ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ, ಹಸಿದು-ಬೆತ್ತಲಾಗಿರುವುದು ಭಾರತವಲ್ಲ, ಭಾರತೀಯರ ರಕ್ತಕ್ಕಾಗಿ ಹಸಿದು ತಮ್ಮ ಎಲ್ಲಾ ಷಡ್ಯಂತ್ರ ಬಯಲಾದ ಮೇಲೆ ಭಾರತದ ಮುಂದೆ ಬೆತ್ತಲಾಗಿರುವುದು ತಾವೇ ಎಂಬುದನ್ನು ರಾಯ್, ಗಿಲಾನಿ ಮುಂತಾದವರು ತಿಳಿಯಬೇಕು.
ಲಾಸ್ಟ್ ಡ್ರಾಪ್: ದೇಶದ ಹೆಸರು ಕೆಡುತ್ತದೆ ಎಂದು ಅರುಂಧತಿ, ಗಿಲಾನಿ ವಿರುದ್ಧ ಮೊಕದ್ದಮೆ ಹೂಡದ ಕೇಂದ್ರ ಸರ್ಕಾರ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆನ್ನುವ ಕಾರಣವೊಡ್ಡಿ ದಾಖಲಿಸಿರುವ ಮೋದಿ-ಪ್ರವೀಣ್ ತೊಗಾಡಿಯಾ-ಪ್ರಮೋದ್ ಮುತಾಲಿಕ್ ಮೇಲಿರುವ ಮೊಕದ್ದಮೆಗಳನ್ನು ಮಾತ್ರ ಹಿಂದಕ್ಕೆ ಪಡೆಯುವುದಿಲ್ಲ. Double Standard ಅಂದರೆ ಇದೇನಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ