ಹೌದು, ಯಡ್ಯೂರಪ್ಪ ಅವರ ನಿಜವಾಜ ಶಕ್ತಿ ಇರುವುದು ಯಾವುದರಲ್ಲಿ? ಅಭಿವೃದ್ದಿಯಲ್ಲೇ?, ತಮ್ಮದೇ ಆದ ರೀತಿಯಲ್ಲಿ ವಿವಾದಗಳನ್ನು ಬಗೆಹರಿಸುವ ಪರಿಯಲ್ಲೇ?, ರಾಜಕೀಯ ಜನಪ್ರಿಯ ಕಾರ್ಯಕ್ರಮಗಳೇ?, ಸಂಘ ಪರಿವಾರದ ಬೆಂಬಲವೇ?, ಪಕ್ಷದ ಕಾರ್ಯಕರ್ತರೇ? ಅಥವಾ ಇವೆಲ್ಲವುಗಳನೊಳಗೊಂಡ ಗುಚ್ಛವೇ? ಎಂದು ಕಳೆದವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಹಿರಿಯ ಪತ್ರಕರ್ತರೊಬ್ಬರು ಕೇಳಿದರು.
ಉದಾಹರಣೆಗೆ ಕರುಣಾನಿಧಿಯವರನ್ನು ತೆಗೆದುಕೊಂಡರೆ ದ್ರಾವಿಡ ಚಳುವಳಿ, ಸಮಗ್ರ ಅಭಿವೃದ್ದಿ, ನಗರ-ಗ್ರಾಮೀಣ ಪ್ರದೇಶಗಳ ಸಮತೋಲಿತ ಬೆಳವಣಿಗೆ ಹಾಗೂ ಕಾವೇರಿ ವಿವಾದ, ಶ್ರೀಲಂಕಾ ತಮಿಳರು, ತಮಿಳು ಭಾಷೆಯಂತಹ ಭಾವನಾತ್ಮಕ ವಿಷಯಗಳು ಅವರ ಶಕ್ತಿ.
ಹಾಗೆಯೇ ರಾಜ್ಯದ ಅಭಿವೃದ್ದಿಯ ಕುರಿತು ಪ್ರಶ್ನಾತೀತವಾದ ಬದ್ಧತೆ, ಶುದ್ಧಹಸ್ತ, ನೇರ ಆಡಳಿತ ಹಾಗೂ ತಮ್ಮ ರಾಜಕೀಯ ವಿರೋಧಿಗಳಿಂದಾಗುವ ಸತತ ಧಾಳಿಗಳೇ ನರೇಂದ್ರ ಮೋದಿಯವರ ಶಕ್ತಿ ಕೇಂದ್ರಗಳು. ಅಲ್ಲಿಂದಲೇ ಅವರಿಗೆ ಶಕ್ತಿ ಲಭಿಸುವುದು.
ಹಾಗೆ ಯಡ್ಯೂರಪ್ಪನವರ 'ಶಕ್ತಿ' ಯಾವುದು? ಹೆಚ್ಚೆಂದರೆ ದಿನಕ್ಕೆ ನಾಲ್ಕು ಗಂಟೆ ನಿದ್ದೆ ಮಾಡುವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ, ಸತತ ಪ್ರವಾಸ, ಕೆಲಸಗಂಟುಕತನಗಳಂತಹ ಧನಾತ್ಮಕ ಅಂಶಗಳೇ ಅವರ ಶಕ್ತಿ ಅನ್ನಬಹುದೇ? ಸಮಾಜದ ಬಗೆಗಿನ ಕಾಳಜಿಯನ್ನು ಅವರ ಭಾಷಣಗಳಲ್ಲಂತೂ ಢಾಳಾಗಿ ಕಾಣಬಹುದು.
ಆದರೆ, ಪ್ರಸಕ್ತ ರಾಜಕೀಯ ಸನ್ನಿವೇಷದಲ್ಲಿ, ಅವರ ಸಮುದಾಯವೇ(ಲಿಂಗಾಯತ) ಅವರ ನೈಜ ಶಕ್ತಿ. ಅವರು ಲಿಂಗಾಯತರಾಗದೇ ಇದ್ದಿದ್ದರೆ, ಪದೇಪದೇ ಒಳಗಿನಿಂದ ಹಾಗೂ ಹೊರಗಿನಿಂದ ಒಂದರ ಮೇಲೊಂದರಂತೆ ಬಂದ ಬಿಕ್ಕಟ್ಟುಗಳ ನಡುವೆಯೂ ಮುಖ್ಯಮಂತ್ರ್ರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ.
ಹಾಗೆ ನೋಡಿದರೆ, ಜಾತಿ ರಾಜಕೀಯ ಕರ್ನಾಟಕ್ಕೆ ಹೊಸದೇನೂ ಅಲ್ಲ. ದೇವರಾಜ ಅರಸು ಉಳಿದದ್ದು ಹಿಂದುಳಿದ ವರ್ಗಗಳ ಬೆಂಬಲದಿಂದ, ಬ್ರಾಹ್ಮಣರಾದರೂ ಲಿಂಗಾಯತ ಸಮುದಾಯದ ಬೆಂಬಲದಿಂದ ಅಧಿಕಾರ ಅನುಭವಿಸಿದ ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ, ಹಾಗೆಯೇ, ವೀರೇಂದ್ರ ಪಾಟೀಲ್, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಮತ್ತು ಕುಮಾರಸ್ವಾಮಿ ಎಲ್ಲರೂ ಬದುಕಿದ್ದೂ-ಬದುಕುತ್ತಿರುವುದೂ ಒಂದಲ್ಲಾ ಒಂದು ಜಾತಿಯ ಬಲದಿಂದಲೇ.
ಈಗ ಕಾಂಗ್ರೆಸ್ ಗೆ ತನ್ನದೇ ಆದ ಜಾತಿಯ ತಳಹದಿ ಇಲ್ಲ. ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಓಲೈಸಲು ಅದು ಎಷ್ಟು ಪ್ರಯತ್ನಿಸಿದರೂ ಅವೆರಡೂ ಸಹ ಕಾಂಗ್ರೆಸ್ ನಿಂದ ದೂರ ಸರಿದಿವೆ. ಅಲ್ಪಸಂಖ್ಯಾತರ ದೃಷ್ಟಿ ಯಾವಾಗಲೂ ಬಿ.ಜೆ.ಪಿಯನ್ನು ಸೋಲಿಸಬಲ್ಲಂತಹ ಪ್ರಬಲ ವಿರೋಧಿ ಬಣದ ಹುಡುಕಾಟದಲ್ಲಿ ಇದೆ. ದೇಶದೆಲ್ಲೆಡೆಯ ಇಂದಿನ ಸ್ಥಿತಿಯೇನೆಂದರೆ, ತೃತೀಯ ರಂಗದ ಶಕ್ತಿಗಳು ಉಳಿಯಬೇಕೆಂದರೆ ಅವಕ್ಕೆ ಯಾವುದಾದರೊಂದು ಜಾತಿಯ ಬೆಂಬಲ ಇರಲೇಬೇಕು. ಆ ನಿಟ್ಟಿನಲ್ಲಿ ವಕ್ಕಲಿಗ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಜೆ.ಡಿ.ಎಸ್, ಕರ್ನಾಟಕದ ಮಟ್ಟಿಗೆ ಯಶಸ್ವಿಯಾಗಿದೆ.
ಹೀಗಾಗಿ ಬಿ.ಜೆ.ಪಿ ಯು ಲಿಂಗಾಯತ ಮತಗಳನ್ನು ಸೆಳೆಯುವುದನ್ನು ಬಿಟ್ಟಿದ್ದರೆ ಅಧಿಕಾರಕ್ಕೆ ಬರುವ ಮಾತೇ ಇರುತ್ತಿರಲಿಲ್ಲ. ಹಾಗೆಯೇ ಲಿಂಗಾಯತರಿಗೂ ಯಡ್ಯೂರಪ್ಪನವರನ್ನು ಬಿಟ್ಟರೆ ತಮ್ಮ ಸಮುದಾಯದ ಬೇರೆ ಯಾವ ನಾಯಕರೂ ಕಾಣುತ್ತಿಲ್ಲ. ಬೇರೆ ಯಾವ ಪಕ್ಷದಲ್ಲೂ, ಅಷ್ಟೇ ಏಕೆ? ಸ್ವತಃ ಬಿ.ಜೆ.ಪಿಯಲ್ಲೂ ಯಡ್ಯೂರಪ್ಪನವರನ್ನು ಬಿಟ್ಟರೆ, ಅವರ ಸರಿಸಮಾನವಾಗಿ ನಿಲ್ಲಬಲ್ಲ ಇನ್ನೊಬ್ಬ ಲಿಂಗಾಯತ ನಾಯಕ ಯಾರೂ ಕಾಣುತ್ತಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಷದಲ್ಲಿ ಯಡ್ಯೂರಪ್ಪ, ಬಿ.ಜೆ.ಪಿ ಹಾಗೂ ಲಿಂಗಾಯತ ಎಂಬುದು ಹೇಳಿ ಮಾಡಿಸಿದ ಜೋಡಿಯಂತಿವೆ. ಆದರೆ, ಈ ಮೂರೂ ಅಂಶಗಳೂ ಒಂದರ ಮೇಲೊಂದು ಅವಲಂಬಿತವಾಗಿರುವುದರ ಅಪಾಯವೇನೆಂದರೆ, ಮೂರರಲ್ಲಿ ಯಾವುದೇ ಎರಡರ ಮಧ್ಯದ ಕೊಂಡಿ ಕಳಚಿಕೊಂಡರೂ ರಾಜಕೀಯ ವ್ಯವಸ್ಥೆ ಅಲ್ಲೋಲಕಲ್ಲೋಲವಾಗುತ್ತದೆ ಹಾಗೂ ಕರ್ನಾಟಕದಲ್ಲಿನ ಇನ್ನೊಂದು ಕಾಂಗ್ರೆಸ್ಆಗಿ ಬಿ.ಜೆ.ಪಿ ಮಾರ್ಪಡುತ್ತದೆ.
ಅಲ್ಪಸಂಖ್ಯಾತರು, ದಲಿತರ ಹೊರತಾಗಿ ಪ್ರಮುಖವಾಗಿ ಲಿಂಗಾಯತ ಹಾಗೂ ವಕ್ಕಲಿಗ ಮತಗಳನ್ನು ಸೆಳೆದುಕೊಂಡು ಜನಪ್ರಿಯ ಪಕ್ಷವಾಗಿದ್ದ ಕಾಂಗ್ರೆಸ್ ಗೆ ದೇವರಾಜ್ಅರಸು ಬಂದ ಮೇಲೆ ಹಿಂದುಳಿದ ವರ್ಗಗಳ ಬೆಂಬಲವೂ ದೊರಕಿ ಅತ್ಯಂತ ಗಟ್ಟಿಮುಟ್ಟಾಗಿತ್ತು. ಆದರೆ, 1983ರ ನಂತರದ ರಾಜಕೀಯದಲ್ಲಿ, ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬಂದಮೇಲೆ ಕಾಂಗ್ರೆಸ್ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ಕಳೆಗುಂದಿತು.
ಸಂಘಟನಾ ಬಲದಲ್ಲಿ ನಡೆಯುತ್ತಿದ್ದ ಬಿ.ಜೆ.ಪಿಗೆ ಹೋರಾಟದ ಮೂಲಕ ಜನಪ್ರಿಯತೆಯನ್ನು ತಂದು ಪಕ್ಷಕ್ಕೆ ಹೊಸ ರೂಪವನ್ನು ಕೊಟ್ಟಿದ್ದು ಯಡ್ಯೂರಪ್ಪ. ಈಗಿನ ಹಗ್ಗಜಗ್ಗಾಟದ ರಾಜಕೀಯಕ್ಕಾಗಿ, ಪಕ್ಷದ ಮೂಲ ಸಿದ್ದಾಂತದಲ್ಲೇ ರಾಜಿ ಮಾಡಿಕೊಂಡಿದ್ದೂ ಸಹ ಅದೇ ಯಡ್ಯೂರಪ್ಪ. ಅವರು ಈಗ ಒಬ್ಬ ಪಕ್ಕಾ ಜಾತೀವಾದಿ ಮನುಷ್ಯನಂತೆ ಕಾಣುತ್ತಾರೆ. ಈ ಎಲ್ಲಾ ಮೇಲಾಟಗಳೂ ಅವರಿಗೆ ತಕ್ಷಣದ ಮೇಲುಗೈ ತಂದುಕೊಡಬಹುದು. ಆದರೆ, ಸಂಘಟನೆಯನ್ನು ಮರೆತು ಕೇವಲ ತಮ್ಮ ಸಮುದಾಯದಿಂದಲೇ ತಾಕತ್ತು ಪಡೆಯುತ್ತಾ ಹೋದರೆ ದೂರಗಾಮಿ ಓಟದಲ್ಲಿ ಕಾಂಗ್ರೇಸ್ ನಂತೆಯೇ ಬಿ.ಜೆ.ಪಿಯೂ ರೋಗಗ್ರಸ್ತಗೊಳ್ಳುತ್ತದೆ, ಇದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಮೂಲ ಲೇಖನ: ಅರುಣ್, ಇಂಡಿಯನ್ ಎಕ್ಸ್ ಪ್ರೆಸ್ (5-11-10)
ಅನುವಾದ:- ರಮೇಶ ದೊಡ್ಡಪುರ(9-11-10)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ