ಪ್ರತಾಪ್ ಸಿಂಹ ನಮ್ಮ ಕಾಲದ ಸೋಕ್ಷ್ಮ ಹಾಗೂ ತೀಕ್ಷ್ಣ ಪತ್ರಕರ್ತ. ಎಷ್ಟೋ ಯುವಕರಿಗೆ ಪತ್ರಿಕೆ ಓದಲು ಇರುವ ಕಾರಣವೇ ಪ್ರತಾಪ್ ಸಿಂಹ ಲೇಖನ ಎಂದರೆ ಅಚ್ಚರಿಯಿಲ್ಲ. ಕಾರಣ, ಭಾನುವಾರದಿಂದ ಶುಕ್ರವಾರದವರೆಗೆ ನೋಡಿದ-ಓದಿದ ಸುದ್ದಿಗಳು ಪರಿಹಾರ ಕಾಣದೇ ಓದುಗರ ಮನಸ್ಸಿನಲ್ಲಿ ಸುತ್ತುತ್ತಿರುವಾಗ, ಅದಕ್ಕೆ ಸರಿಯಾಗಿ ಪ್ರತಾಪ್ ಸಿಂಹ ಅಂತಹದೇ ಒಂದು ವಿಷಯವನ್ನು ತೆಗೆದುಕೊಂಡು ಲೇಖನ ಬರೆಯುತ್ತಾರೆ. ಓದುಗನ ಮನದಲ್ಲಿ ಸುತ್ತುತ್ತಿದ್ದ ಸಂಶಯದ ಪ್ರಶ್ನೆಗಳಿಗೆಲ್ಲಾ ಒಂದು ಸಮಾಧಾನ ಕೊಡುತ್ತದೆ ಅವರ ಲೇಖನ. 2000ನೇ ಇಸವಿಯಲ್ಲಿ ಬರೆಯುತ್ತಿದ್ದ ಅವರ ಲೇಖನಗಳಷ್ಟೇ 2011ರ ಲೇಖನಗಳೂ ತೀಕ್ಷಣವಾಗಿವೆ, ಅದರಲ್ಲಿ ಎರಡು ಮಾತಿಲ್ಲ.
ಆದರೆ, ಇತ್ತೀಚೆಗೆ ಪ್ರತಾಪ್ ಫೇಸ್‌ಬುಕ್‌ನಲ್ಲಿ ಬೆಳೆಸಿಕೊಂಡಿರುವ ಪರಿಪಾಠದ ಬಗ್ಗೆ ನನ್ನ ಪ್ರಶ್ನೆ. ಮೊದಲನೆಯದಾಗಿ, ಇದೇ ವರ್ಷ ಮೇ ೨೮ರಂದು ಸ್ವಾತಂತ್ರ್ಯವೀರ ಸಾವರ್ಕರ‍್ ಮತ್ತು ಬಾರ್ಸಿಲೋನಾ ಹಾಗೂ ಮ್ಯಾಂಚೆಸ್ಟರ‍್ ಯುನೈಟೆಡ್ ನಡುವಿನ UEFA ಚಾಂಪಿಯನ್ ಲೀಗ್ ಫೈನಲ್ ಪಂದ್ಯ ಒಂದೇ ದಿನ ಬಂದಿದ್ದವು. "ಇವೆರಡೂ ವಿಷಯಗಳು ಬಹಳ ಒಳ್ಳೆಯವು, ಯಾವುದನ್ನೂ ಬಿಡಲು ಮನಸ್ಸಾಗುತ್ತಿಲ್ಲ. ಯಾವುದರ ಬಗ್ಗೆ ಲೇಖನ ಬರೆಯಲಿ?" ಎಂದು ಪ್ರತಾಪ್ ಫೇಸ್‌ಬುಕ್ ಸ್ನೇಹಿತರಲ್ಲಿ ಕೇಳಿದರು. ಅದಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಗಳಿಗೆ ಸೋತೋ ಎನೋ ತಮ್ಮ ಸಂಪಾದಕ ವಿಶ್ವೇಶ್ವರ ಭಟ್ಟರ ಅನುಮತಿ ಪಡೆದು, ಎರಡೂ ಲೇಖನಗಳನ್ನು ಮುಖಾಮುಖಿಯಾಗಿ ಒಂದೇ ದಿನ ಪ್ರಕಟಿಸಿದರು.
ಇನ್ನೊಂದು ಪ್ರಸಂಗ, ಇದೀಗ ನಡೆಯುತ್ತಿರುವ ಕಪ್ಪು ಹಣದ ವಿರುದ್ಧ ಬಾಬಾ ರಾಮದೇವ್ ಅವರ ಪ್ರತಿಭಟನೆ ಹಾಗೂ ಮೊನ್ನೆ(ಜೂನ್9) ಮೃತರಾದ ಪ್ರಸಿದ್ಧ ಚಿತ್ರಕಾರ ಎಂ.ಎಫ್.ಹುಸೇನರ ವಿಚಾರಗಳ ಕುರಿತು. ಈಗಲೂ ಪ್ರತಾಪ್ ಅದೇ ದಾರಿ ಅನುಸರಿಸಿದರು. ಓದುಗರು ಈ ಹಿಂದಿನಂತೆಯೇ ಅನೇಕ ಅಭಿಪ್ರಾಯ ಕೊಟ್ಟರು. ಆದರೆ, ಹಿಂದಿನ ದಿನವೇ ಹೇಳಿದಂತೆ ಪ್ರತಾಪ್, ಎಂ.ಎಫ್. ಹುಸೇನ್ ಬಗ್ಗೆ ಮಾತ್ರ ಲೇಖನ ಬರೆದರು.
ಈಗ ನನಗನ್ನಿಸುವುದು,
1) ಸುಮಾರು 11-12 ವರ್ಷಗಳಿಂದ ಯಾವುದೇ ಪತ್ರಿಕೆಯಲ್ಲಿ ಒಂದೇ ದಿನ ಒಬ್ಬನೇ ಲೇಖಕನ ಎರಡು ಲೇಖನಗಳು ಎದುರು ಬದರಾಗಿ ಪ್ರಕಟವಾಗಿದ್ದು ನಾನು ನೋಡಿಲ್ಲ.(ನಾನು ನೋಡಿಲ್ಲ ಎಂದಾಕ್ಷಣ ಆಗಿಲ್ಲ ಎಂದೇನೂ ಅಲ್ಲ. ಹಾಗೇನಾದರೂ ಇದ್ದರೆ ತಿಳಿಸಿ.) ಈ ರೀತಿ ಸಂಪ್ರದಾಯವನ್ನು ಮುರಿಯುವುದು ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ನೀಡುತ್ತದೆಯೇ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರಬಹುದೇ?
2) ಒಬ್ಬ ಲೇಖಕ ತಾನು ಏನು ಬರೆಯಬೇಕೆಂದು ಓದುಗರಲ್ಲಿ ಅಭಿಪ್ರಾಯ ಕೇಳುವುದು ಎಷ್ಟು ಸರಿ?
3) ಜನರ ಮನಕ್ಕೆ ಅನುಗುಣವಾಗಿ ಬರೆಯಬೇಕು ಎನ್ನುವುದು ಸರಿಯಾದರೂ, ಓದುಗರು ಬಯಸಿದ್ದನ್ನೇ ಕೊಡುವುದು ವ್ಯಾಪಾರವಾಗುವುದಿಲ್ಲವೇ? ಇದರಿಂದ ಲೇಖಕ ಏನು ಬರೆಯಬೇಕೆಂದು ಓದುಗರೇ Demand ಮಾಡುವ-ಯಾವ ಲೇಕನ ಇರಬೇಕೆಂದು ಅವರೇ ನಿರ್ಧರಿಸುವಂತಾದರೆ, ಲೇಖಕನ ಬೌದ್ಡಿಕ ಸ್ವಾತಂತ್ರ್ಯಕ್ಕೇನು ಬೆಲೆ?
4) ಇನ್ನೊಂದು ಮಗ್ಗುಲಿಂದ ಯೋಚಿಸಿದರೆ, ಒಂದು ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಬಗ್ಗೆ ಇಷ್ಟೊಂದು ಯುವಕರು ಚರ್ಚಿಸುತ್ತಿರುವುದು ಪತ್ರಿಕೋದ್ಯಮದ, ಅದರಲ್ಲೂ ಕನ್ನಡ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲವೇ?
5) ಹೀಗೇ ಬರೆಯಬೇಕು, ಹೀಗೇ ಓದಬೇಕು ಎಂಬಂತಹ ಸೂತ್ರಗಳ ಬಲೆಯಲ್ಲಿ ಬಿದ್ದು ಹೊರಳಾಡುವ, ನಿಂತ ನೀರಂತಾಗಿರುವ ಪತ್ರಿಕೋದ್ಯಮದಲ್ಲಿ ಇದು ಹೊಸ ಗಾಳಿ ಬೀಸುವ ಲಕ್ಷಣಗಳೇ ಅಥವಾ ಹೊಸದೊಂದನ್ನು ಮಾಡುವ ಭರದಲ್ಲಿ ಏನೇನೋ ಮಾಡಿದಂತಾಗುತ್ತದೆಯೇ?
ನನಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ