ಶುಕ್ರವಾರ, ಜೂನ್ 03, 2011

ಸಿಯಾಚಿನ್ ಮಹತ್ವ-- ಸೇನೆಗಷ್ಟೇ ಅಲ್ಲ, ರಾಜಕಾರಣಿಗಳಿಗೂ ತಿಳಿಯಲಿ



           ಜಾಗದಲ್ಲಿ ಭಾರತದ ನೂರಾರು ಸೈನಿಕರು ಪಹರೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಚೆಕ್‌ಪೋಸ್ಟ್‌ನಿಂದ ಕೇವಲ 400 ಮೀಟರ್ ದೂರದಲ್ಲಿ ಭಾರತದ ಸೈನ್ಯ ಇದೆ. ಭಾರತ ತಾನೇ ಅಭಿವೃದ್ದಿ ಪಡಿಸಿದ ಚೀತಾ ಹೆಲಿಕಾಪ್ಟರ್‌ಗಳು ಮಾತ್ರ ಅಲ್ಲಿಗೆ ಹೋಗಬಲ್ಲವು. 2 ರಿಂದ 30 ಸೆಕೆಂಡ್‌ನೊಳಗೆ ತನ್ನ ಕೆಲಸ ಮುಗಿಸಿ ಅಲ್ಲಿನ ಹೆಲಿಪ್ಯಾಡ್‌ನಿಂದ ಹಾರದಿದ್ದರೆ, ಶತ್ರುಗಳ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಇಂತಹ ದುರ್ಗಮ ಸ್ಥಳವೇ ಸಿಯಾಚಿನ್ ಗ್ಲೇಸಿಯರ್.

  ಕುಮಾವೂನ್ ರೆಜಿಮೆಂಟ್‌ನ ಮೇಜರ್ ಆರ್.ಎಸ್ ಸಂಧು ಅವರ ನೇತೃತ್ವದ ಬೆಟಾಲಿಯನ್ 1984ರಲ್ಲಿ ಕಾರ್ಗಿಲ್‌ನಿಂದ ಈಶಾನ್ಯಕ್ಕಿರುವ-ಎಪ್ಪತ್ತು ಕಿಲೋಮೀಟರ್ ಉದ್ದದ, ಸಮುದ್ರ ಮಟ್ಟದಿಂದ ಇಪ್ಪತ್ತು ಸಾವಿರ ಅಡಿ ಎತ್ತರವಿರುವ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿಕೊಂಡಿತು. ಸಾಮಾನ್ಯವಾಗಿ ಮೈನಸ್ 50 ಡಿಗ್ರಿ ತಾಪಮಾನವಿರುವ  ಸಿಯಾಚಿನ್ ಇಂದು ಭಾರತ-ಪಾಕಿಸ್ತಾನ ನಡುವಿನ ಮಾತುಕತೆಗಳ ಕೇಂದ್ರಬಿಂದುವಾಗಿದೆ. ಇದೇ ಪ್ರಕ್ರಿಯೆಯ ಮುಂದಿನ ಭಾಗವಾಗಿ ಕಳೆದ ತಿಂಗಳು 31ನೇ ತಾರೀಖು ಮಂಗಳವಾರ(ಮೇ 2011) ನವದೆಹಲಿಯಲ್ಲಿ ನಡೆದ 12ನೇ ಸುತ್ತಿನ ಮಾತುಕತೆಯೂ ಯಾವುದೇ ಫಲಿತಾಂಶವಿಲ್ಲದೇ ಮುಗಿದಿದೆ.
ಭಾರತ ನಿರ್ಮಿತ ಚೀತಾ ಹೆಲಿಕಾಪ್ಟರ‍್
1947ರಲ್ಲಿ ಜನಿಸಿದಾಗಿನಿಂದಲೂ  ಕಾಶ್ಮೀರವನ್ನು ಪಡೆಯುವುದೇ ತನ್ನ ಏಕೈಕ ಗುರಿ ಎಂದು ಹೋರಾಡುತ್ತಿರುವ ಪಾಕಿಸ್ತಾನ, ಭಾರತದ ಮೇಲೆ ಬೇರೆ-ಬೇರೆ ರೀತಿಯಿಂದ ಒತ್ತಡ ಹೇರುತ್ತಲೇ ಬಂದಿದೆ. 48, 65, ಹಾಗೂ 99ರಲ್ಲಿ ಭಾರತದೊಂದಿಗೆ ನೇರ ಯುದ್ಧವನ್ನೇ ಮಾಡಿ ಅದು ಸೋತಿದೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅದೇ ಪಾಕಿಸ್ತಾನ 90, 95, 96 ಹಾಗೂ 99ರಲ್ಲಿ ನಾಲ್ಕು ಬಾರಿ ಸಿಯಾಚಿನ್ ಮೇಲೆ ದಾಳಿ ಮಾಡಿರುವುದು ಹಲವರಿಗೆ ಗೊತ್ತಿಲ್ಲ. 1999ರಲ್ಲಂತೂ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ನವಾಜ್ ಷರೀಫ್, ಐತಿಹಾಸಿಕ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ಕೇವಲ 17 ದಿನಗಳಲ್ಲಿ ಸಿಯಾಚಿನ್ ಮೇಲೆ ಪಾಕ್ ದಾಳಿ ಮಾಡಿತು. 

          ಸಿಯಾಚಿನ್ ಎಂದರೆ ಕಾಡು ಗುಲಾಬಿಗಳು ಇರುವ ಸ್ಥಳ ಎಂದರ್ಥ. ಅದು ಯಾರು ಈ ಹೆಸರಿಟ್ಟರೋ, ಇಲ್ಲಿ ಗುಲಾಬಿಯ ಮಾತಿರಲಿ, ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತ ನೋಡಿದರೂ ಕಣ್ಣಿಗೆ ರಾಚುವ ಬಿಳಿ ಬಣ್ಣ. ಆದರೆ, ಕೆಲಕಾಲ ಇಲ್ಲಿ ಕಂಡದ್ದು ಎರಡೂ ದೇಶಗಳ ಸೈನಿಕರ ರಕ್ತದ ಕೆಂಪು ಬಣ್ಣ ಮಾತ್ರ. 95ರ ದಾಳಿಯಲ್ಲಿ ಪಾಕ್‌ನ 40 ಸೈನಿಕರು ಸಾವನ್ನಪ್ಪಿದರೆ, 96ರ ದಾಳಿಯಲ್ಲಿ ಭಾರತದ ಎಂ.ಐ-17 ಹೆಲಿಕಾಪ್ಟರ್ ನೆಲಕ್ಕುರುಳಿತು. ಸಿಯಾಚಿನ್‌ನ ಮತ್ತೊಂದು ವಿಶೇಷತೆ, ಅಲ್ಲಿ ಮದ್ದು ಗುಂಡಿಗಿಂತ ಹೆಚ್ಚಾಗಿ ಸೈನಿಕರು ಸಾಯುವುದು ವಾತಾವರಣದ ವೈಪರೀತ್ಯದಿಂದಾಗಿ ಎನ್ನುವುದು. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಗಡಿತ(Frostbite) ಹಾಗೂ ಹಿಮಪಾತಗಳಿಂದ ಅಲ್ಲಿ ಸಾವನ್ನಪ್ಪುತ್ತಿದ್ದರು. ಆದರೆ, ಆ ನಂತರ ಅದು ವರ್ಷಕ್ಕೆ 20-22 ಕ್ಕೆ ಇಳಿದು ಇದೀಗ ಸೈನ್ಯದ ’ಅಚ್ಚುಕಟ್ಟಿನ’ ವ್ಯವಸ್ಥೆಯ ಪರಿಣಾಮ, ಆರೋಗ್ಯದ ಕಾರಣಕ್ಕೆ ಯಾರೂ ಸಾಯುತ್ತಿಲ್ಲ. ಆದರೆ, ಈ ಅಚ್ಚುಕಟ್ಟಿನ ವ್ಯವಸ್ಥೆಗೆ ತಗಲುವ ವೆಚ್ಚ ಬಲು ದುಬಾರಿ. ಭಾರತದ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್‌ನಲ್ಲಿ ಸಾಗಿಸಬೇಕಾಗುತ್ತದೆ. ಅಲ್ಲಿಗೆ ತಲುಪುವ ಹೊತ್ತಿಗೆ ಒಂದು ಚಪಾತಿಯ ವೆಚ್ಚ ಬರೋಬ್ಬರಿ 500ರೂಪಾಯಿ ಆಗಿರುತ್ತದೆ. ಭಾರತ ಸರ್ಕಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 10 ಲಕ್ಷದಿಂದ 2ಕೋಟಿಯವರೆಗೆ!!. ಇಷ್ಟೆಲ್ಲಾ ಕಷ್ಟಪಟ್ಟು ಆ ಭೂಮಿಗಾಗಿ ಏಕೆ ಹೋರಾಡಬೇಕು? ಸುಮ್ಮನೆ ಸೈನ್ಯ ಹಿಂತೆಗೆದುಕೊಳ್ಳಬಾರದೇ ಎಂದು ಹಲವರು ಭಾರತಕ್ಕೆ ಉಪದೇಶ ನೀಡುತ್ತಾರೆ. ಆದರೆ, ಭಾರತೀಯ ಸೈನ್ಯ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಕಾರಣ, ಸಿಯಾಚಿನ್‌ಗಿರುವ Geographical ಹಾಗೂ Stratigical ಮಹತ್ವ.

ಐತಿಹಾಸಿಕ ಲಾಹೋರ್‌ ಒಪ್ಪಂದ
ಸಿಯಾಚಿನ್ ಇರುವುದು ಅಧಿಕೃತವಾಗಿ ಭಾರತ-ಪಾಕ್ ಗಡಿಗಳಲ್ಲಾದರೂ, ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ, ಯುದ್ಧದಲ್ಲಿ ಭಾರತದಿಂದ ವಶಪಡಿಸಿಕೊಂಡ POK ಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಆ ಪ್ರದೇಶದ ಮೂಲಕ ಅರಬ್ ದೇಶಗಳಿಗೆ ರಸ್ತೆ ನಿರ್ಮಿಸಿಕೊಂಡು ತನ್ನ ತೈಲ ಸಾಗಣಿಕೆಯನ್ನು ಸುಲಭಗೊಳಿಸಿಕೊಳ್ಳುವುದು ಚೀನಾದ ಹೊರ ಉದ್ದೇಶವಾದರೆ, ಗ್ಯಾಸ್ ಪೈಪ್‌ಲೈನ್ ಹೆಸರಿನಲ್ಲಿ ಸುರಂಗಗಳನ್ನು ಅಗೆದು ಮಿಸೈಲ್ ಅಡಗಿಸಿಟ್ಟು ಭಾರತವನ್ನು ಬೆದರಿಸುವುದು ಅದರ ಒಳ ಮರ್ಮ. ಪಾಕ್ ಚೀನಾಕ್ಕೆ ಬಿಟ್ಟುಕೊಟ್ಟಿರುವ ಪ್ರದೇಶ ಇರುವುದು ಸಿಯಾಚಿನ್‌ಗೆ ಹೊಂದಿಕೊಂಡಂತೆಯೇ. ಅಂದರೆ, ಸಿಯಾಚಿನ್ ಮೇಲೆ ನಿಂತರೆ, ಪಾಕಿಸ್ತಾನ-ಚೀನಾ ಎರಡೂ ದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸಬಹುದು, ಅಕ್ರಮ ಒಳನುಸುಳುವಿಕೆಯನ್ನು ತಡೆಯಬಹುದು. ಸಿಯಾಚಿನ್‌ಗಿರುವ ನಿಜವಾದ ಮಹತ್ವ ಅದು.

          1984ರಿಂದಲೂ ಸಿಯಾಚಿನ್ ತನಗೆ ಸೇರಬೇಕೆಂದು ವಾದಿಸುತ್ತಿದ್ದ ಪಾಕಿಸ್ತಾನ ಈಗ ರಾಗ ಬದಲಾಯಿಸಿದೆ. ಸಿಯಾಚಿನ್‌ನ ನಿರ್ವಹಣೆಗಾಗಿ ಎರಡೂ ದೇಶಗಳಿಗೆ ತಗಲುವ ವೆಚ್ಚ, ಸೈನಿಕರ ಮರಣವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಂದ ಎರಡೂ ಸೈನ್ಯಗಳನ್ನು ಹಿಂತೆಗೆದುಕೊಳ್ಳೋಣ ಎಂಬ ವಾದವನ್ನು ಮಂಡಿಸುತ್ತಿದೆ. ಕೇವಲ ಭಾರತದ ರಾಜಕಾರಣಿಗಳೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಸಾಧ್ಯವಾಗಿದ್ದರೆ, ಈ ಹಿಂದಿನ ಯುದ್ಧಗಳಲ್ಲಿ ಗೆದ್ದ ಭೂಮಿಯನ್ನು ವಾಪಸ್ ಪಾಕ್‌ಗೆ ಬಿಟ್ಟುಕೊಟ್ಟಂತೆ ಇದನ್ನೂ ನಮ್ಮ ನಾಯಕರು ಕೊಟ್ಟಿರುತ್ತಿದ್ದರೇನೋ!!. ಆದರೆ, ಭಾರತ ಸೇನೆಯ ಪ್ರಬಲ ವಿರೋಧದ ಪರಿಣಾಮ ಅದು ಇನ್ನೂ ನಮ್ಮ ಕೈಲಿದೆ. ಅಲ್ಲಿಂದ ಕಾಲ್ತೆಗೆದಂತೆ ನಟಿಸಿ, ಭಾರತದ ಸೇನೆ ವಾಪಸಾದ ನಂತರ ಸಿಯಾಚಿನ್ಅನ್ನು ಆಕ್ರಮಿಸಿಕೊಳ್ಳುವ ಪಾಕಿಸ್ತಾನದ ಬುದ್ದಿ ನಮ್ಮ ನಾಯಕರಿಗಿಂತ ಸೇನೆಯ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತು. ಯುದ್ಧ ನಡೆಸುತ್ತಿರುವುದು ನಾವಲ್ಲ, ಮುಜಾಹೀದೀನ್‌ಗಳು ಎಂದು ಕಾರ್ಗಿಲ್ ಯುದ್ಧದ ಪ್ರಾರಂಭದಲ್ಲಿ ಪಾಕ್ ಸೇನೆ ನೀಡಿದ್ದ ಮೋಸದ ಮಾತನ್ನು ನಮ್ಮ ಸೇನೆ ಇನ್ನೂ ಮರೆತಿಲ್ಲ.
          ಸುಮಾರು ಕೊನೆ ಹಂತಕ್ಕೆ ಬಂದ್ದಿದ್ದ ಸಿಯಾಚಿನ್ ಮಾತುಕತೆಯನ್ನು 2008ರಲ್ಲಾದ ಮುಂಬೈ ದಾಳಿಯ ನಂತರ ಭಾರತ ಸ್ತಗಿತಗೊಳಿಸಿತು. ಇದೀಗ ಅಮೆರಿಕದ ಕಡೆಯಿಂದ ಒತ್ತಡ ಹೇರುತ್ತಿರುವ ಪಾಕ್, ಮಾತುಕತೆಯನ್ನು ಮತ್ತೆ ಆರಂಭಿಸಿದೆ. ಮೊನ್ನೆ ದಿಲ್ಲಿಯಲ್ಲಿ ಭಾರತದ ರಕ್ಷಣಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಪಾಕಿಸ್ತಾನದ ಸೈಯದ್ ಅಥರ್ ಅಲಿ ನಡುವೆ ನಡೆದ ಮಾತುಕತೆಯೂ ಎಂದಿನಂತೆ ಮುರಿದು ಬಿದ್ದಿದೆ. ಕಾರಣ, 84ರಿಂದ ಅನುಸರಿಸಿಕೊಂಡು ಬರುತ್ತಿರುವ Actual Ground Position Line(AGPL) ಅನ್ನು ಅಧಿಕೃತ ಎಂದು ಪಾಕ್ ಒಪ್ಪಿಕೊಂಡರೆ ಮಾತ್ರ ಸೈನ್ಯದ ಹಿಂತೆಗೆತ ಎಂಬ ಭಾರತದ ಕಠಿಣ ನಿಲುವು. ಆದರೆ, ಎಂದಿನಂತೆ ಪಾಕ್ ಈ ನಿಬಂಧನೆಗೆ ಒಪ್ಪಿಲ್ಲ. ಇಲ್ಲೇ ತಿಳಿಯುತ್ತದೆ ಪಾಕ್‌ನ ಕುತಂತ್ರ! AGPL ಅನ್ನು ಅಧಿಕೃತ ಎಂದು ಒಪ್ಪಿಕೊಂಡರೆ ಸಿಯಾಚಿನ್ ಶಾಶ್ವತವಾಗಿ ಭಾರತಕ್ಕೆ ಸೇರುತ್ತದೆ, ತಾನು ಅದಕ್ಕಾಗಿ ಪಟ್ಟ ’ಶ್ರಮ’ವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬುದು ಅದಕ್ಕೆ ಗೊತ್ತು.

Click on Image to Enlarge
          ಪಾಕ್‌ನ ಇನ್ನೊಂದು ವಾದವೆಂದರೆ, ಸಿಯಾಚಿನ್ ಸಹ ಕಾಶ್ಮೀರಕ್ಕೇ ಸೇರಿರುವುದರಿಂದ ಅದನ್ನು ವಿವಾದಗ್ರಸ್ತ ಭೂಮಿ ಎಂದು ಪರಿಗಣಿಸಿ ಕಾಶ್ಮೀರ ಮಾತುಕತೆಯಲ್ಲೇ ಅದನ್ನೂ ಸೇರಿಸಬೇಕು ಎಂಬುದು. ಇದಕ್ಕೆ ಆಸ್ಪದ ಕೊಡದ ಭಾರತ, ಸಿಯಾಚಿನ್ ಅನ್ನು ಕಾಶ್ಮೀರ ಮಾತುಕತೆಯಿಂದ ದೂರವೇ ಇಟ್ಟಿದೆ. ಒಮ್ಮೆ ಪಾಕ್ ಕೈಗೆ ಸಿಯಾಚಿನ್ ಸಿಕ್ಕಿತೆಂದರೆ, ಅದನ್ನು ಪಡೆಯುವುದು ಚೀನಾಕ್ಕೆ ಬಹಳ ಸುಲಭದ ಕೆಲಸ. ಆ ಮೂಲಕ ಭಾರತವನ್ನು ಹೆದರಿಸಬಹುದು ಎಂಬುದು ರಕ್ಷಣಾ ವಿಮರ್ಷಕರ ಅಭಿಪ್ರಾಯ.

          ಪಾಕಿಸ್ತಾನದ ಮೇಲಿರುವ ಅಪನಂಬಿಕೆಯಿಂದ ಭಾರತವು ಸಿಯಾಚಿನ್‌ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿಲ್ಲ ಎಂಬುದು ಹೊರಗಿನ ಚಿತ್ರವಾದರೂ, ಸೇನೆ ಹಿಂತೆಗೆದುಕೊಂಡರೆ ಶಾಂತಿಯ ಹೆಸರಿನಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದು ನಮ್ಮ ನಾಯಕರು ಅದನ್ನು ಪಾಕಿಸ್ತಾನಕ್ಕೆ ಒಪ್ಪಿಸುತ್ತಾರೆ ಎಂಬ, ನಮ್ಮ ನಾಯಕರ ಮೇಲೆ ಸೇನೆಗಿರುವ ಬಲವಾದ (ಅಪ)ನಂಬಿಕೆಯೇ ಕಾರಣ ಎಂಬುದು ಸತ್ಯ. ಒಟ್ಟಿನಲ್ಲಿ ಇತಿಹಾಸದಿಂದ ನಾವು ಈಗಲಾದರೂ ಪಾಠ ಕಲಿಯಲೇ ಬೇಕು. ಪಾಕ್‌ನೊಂದಿಗೆ ವ್ಯವಹರಿಸುವಾಗ ಹಿಂದೆ ಆದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು, ಸೇನೆಯ ಮೇಲೆ ಅನಗತ್ಯ ಒತ್ತಡ ಹೇರದಿರುವುದು ನಮ್ಮ ನಾಯಕರ ಕರ್ತವ್ಯ.

          ಕೊನೆ ಹನಿ: ಇಡೀ ದೇಶದಲ್ಲಿ ನಮ್ಮ ನಾಯಕರ ನಿಜವಾದ ಬಂಡವಾಳ ಗೊತ್ತಿರುವುದು ಭಾರತೀಯ ಸೈನ್ಯಕ್ಕೆ ಮಾತ್ರ !. ನಮ್ಮ ಸೈನ್ಯದ ಮೇಲೆ ಅಭಿಮಾನ ಪಡಲು ಇನ್ನೊಂದು ಕಾರಣ ಸಿಕ್ಕಂತಾಯಿತು.

ಕಾಮೆಂಟ್‌ಗಳಿಲ್ಲ: