ಶನಿವಾರ, ಏಪ್ರಿಲ್ 09, 2011

ಊರಿಗೂರೇ ಹೊರಗಿದ್ದರೂ ಗೂಡು ಬಿಡದ ಯುವ ಹಕ್ಕಿಗಳು


     ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ತಿರುವು ಅಣ್ಣಾ ಹಜಾರೆಯವರ ಹೋರಾಟದಿಂದ ದೊರಕಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಜೆ.ಪಿ ಆಂದೋಲನ ಹಾಗೂ ಭಾರತ ಕ್ರಿಕೆಟ್ ಗೆದ್ದಾಗ ಬಿಟ್ಟರೆ ಇಷ್ಟು ಮಟ್ಟದಲ್ಲಿ ಯುವಕರು ಬೀದಿಗಿಳಿದದ್ದು ಇದೇ ಮೊದಲು. ಆದರೆ, ಇಂತಹ ಬಹುದೊಡ್ಡ ಹೋರಾಟದ ಸಮಯದಲ್ಲಿ ರಾಜಕೀಯ ಪಕ್ಷಗಳಲ್ಲಿರುವ ಯುವ ಮುಖಂಡರು ಏನು ಮಾಡುತ್ತಿದ್ದರು?

    ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಮಾತು ಪದೇ ಪದೇ ಕೇಳಿಬರುತ್ತಿರುತ್ತದೆ. ಹಾಗೆಯೇ, ಪ್ರತಿ ಸಲದ ಚುನಾವಣೆಗಳಲ್ಲೂ ಹಲವು ಐ.ಟಿ ಉದ್ಯೋಗಿಗಳು, ಕಾಲೇಜ್ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಠೇವಣಿ ಕಟ್ಟಿ ಚುನಾವಣೆಯಲ್ಲಿ ಸ್ಪರ್ದಿಸುತ್ತಾರೆ. ಆದರೆ, ಅವರು ಪಡೆಯುವ ಓಟುಗಳು ಸಾವಿರವನ್ನೂ ದಾಟುವುದಿಲ್ಲ. ಗೆಲ್ಲುವ ಮಾತಿರಲಿ, ಠೇವಣಿಯೂ ಬರುವುದಿಲ್ಲ. ಹಲವು ಬಾರಿ ಇಂತಹವರಿಗೆ ಗೆಲ್ಲಲೇಬೇಕೆಂಬ ಹಂಬಲವೂ ಇರುವುದಿಲ್ಲ. ತಾವು ಓಡಾಡುತ್ತಿರುವ ಸ್ನೇಹಿತರ ಮದ್ಯೆ, ತಮ್ಮ ವೃತ್ತಿ ಬಾಂಧವರ ನಡುವೆ ತಮ್ಮದೊಂದು ಹೆಸರಿನ ಛಾಪು ಮೂಡಿಸಿಕೊಳ್ಳಲೂ ಇಂತಹ ಕೆಲಸಗಳು ನಡೆಯುತ್ತವೆ. ಆದರೆ, ಈಗಾಗಲೇ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ, ಅಲ್ಲಿ ಕೆಲಸ ಮಾಡುತ್ತಿರುವ ಯುವಕರು ಗೆದ್ದು ಬರುತ್ತಿದ್ದಾರೆ. ಇಂದಿನ ವಯಸ್ಸಾದ ನಾಯಕರ ನಂತರ ಅಧಿಕಾರದ ಗದ್ದುಗೆ ಏರುವವರು ಇಂಥವರೇ. ಆದರೆ, ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವೊಬ್ಬ ಯುವ ರಾಜಕಾರಣಿಯೂ ತನ್ನ ಪಕ್ಷದ ಸುಳಿಯಿಂದ ಹೊರಬಂದು ಪ್ರತಿಭಟನೆಯಲ್ಲಿ ತೊಡಗಲಿಲ್ಲ್ಲ. ದೇಶದ ಇಂಗ್ಲಿಷ್ ಮಾಧ್ಯಮಗಳಿಂದ ’ಭಾರತದ ಯುವರಾಜ’ ಎಂದೆನಿಸಿಕೊಳ್ಳುತ್ತಿರುವ, " ಬ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡಬೇಕು. ಬ್ರಷ್ಟಾಚಾರಿಗಳಿಗೆ ಶಿಕ್ಷೆ ಇಪ್ಪತ್ತು ವರ್ಷಗಳ ಬದಲಾಗಿ ಆರು ತಿಂಗಳಲ್ಲೇ ಸಿಗುವಂತಾಗಬೇಕು. ನಾವು ಈ ವ್ಯವಸ್ಥೆಯನ್ನು ಬದಲಾಯಿಸಬೇಕು, ಯುವಕರು ರಾಜಕೀಯಕ್ಕೆ ಬರಬೇಕು" ಎಂದು ಮಹಾರಾಷ್ಟ್ರದಲ್ಲಿ ಬಾಷಣ ಬಿಗಿದಿದ್ದ  ರಾಹುಲ್ ಗಾಂಧಿ ಮನೆ ಬಿಟ್ಟು ಹೊರಡಲೇ ಇಲ್ಲ. ತಮ್ಮ ಪಕ್ಷವನ್ನು ಅದಿಕಾರಕ್ಕೆ ತಂದರೆ, "ಬ್ರಷ್ಟಾಚಾರದ ಮರವನ್ನು ಬುಡಮೇಲು ಮಾಡುತ್ತೇವೆ" ಎಂದು ಅಸ್ಸಾಂನಲ್ಲಿ ಬಡಬಡಾಯಿಸಿದ್ದ ವರುಣ್ ಗಾಂಧಿ ಮದುವೆಯ ಗುಂಗಿನಿಂದ ಹೊರಗೇ ಬರಲಿಲ್ಲ. ಕರುಣಾನಿಧಿಯವರ ಪುತ್ರಿ ಕನಿಮೋಳಿ 2ಜಿ ಹಗರಣದಲ್ಲಿ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂ 2009ರ ಓಟಿಗಾಗಿ ನೋಟು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇವರುಗಳನ್ನು ಹೊರತು ಪಡಿಸಿ, ವಂಶ ಪಾರಂಪರ್ಯಯವಲ್ಲದ ಅನೇಕ ’ಯುವ ಚೇತನಗಳೂ’!! ರಾಜಕಾರಣಿಗಳಾಗಿದ್ದಾರೆ. 


     ಕರ್ನಾಟಕದಲ್ಲಿ ಹಿಂದೆಂದೂ ಕೇಳರಿಯದಷ್ಟು ಮೊದಲನೇ ಬಾರಿ ಚುನಾವಣೆ ಗೆದ್ದವರಿದ್ದಾರೆ, ಅವರಲ್ಲಿ ಬಹುತೇಕರು ಯುವಕರು, ವಿದ್ಯಾವಂತರು, ವಿದೇಶದಿಂದ ಮರಳಿದವರು.... ಹೀಗೇ ಯುವ ರಾಜಕಾರಣಿಗಳ ದಂಡೇ ಇದೆ. ಕೃಷ್ಣ ಭೈರೇಗೌಡ, ಸಿ.ಟಿ. ರವಿ, ಸುನಿಲ್ ಕುಮಾರ್, ಜನಾರ್ಧನ ಸ್ವಾಮಿ.....ಯಂತಹ ಹಲವರು ಇಲ್ಲಿದ್ದಾರೆ. ಒಂದು ಆಶ್ಚರ್ಯದ ವಿಷಯವೆಂದರೆ, ಅಣ್ಣಾ ಹಜಾರೆಯವರ 98ಗಂಟೆಗಳ ಉಪವಾಸದ ಸಮಯದಲ್ಲಿ ಇವರಾರೂ ತಮ್ಮ ಗೂಡು ಬಿಟ್ಟು ಹೊರಗೆ ಬರಲೇ ಇಲ್ಲ. ಕಾರಣ ಸ್ಪಷ್ಟ. ತಾವು ಪ್ರತಿನಿಧಿಸುತ್ತಿರುವ ಪಕ್ಷದಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಅಥವಾ ಬೆಂಬಲ ಸೂಚಿಸಲು ಆಜ್ಞೆ ಬಂದಿಲ್ಲ. ಪಕ್ಷದ ಸೂಚನೆಯಿಲ್ಲದೇ ಬಾಗವಹಿಸಿದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ, "ತಮ್ಮ ಬವಿಷ್ಯ" ಮಂಕಾಗುತ್ತದೆ ಎಂದು. 
ಮುಂದೆ ನಮ್ಮನ್ನು ಆಳಲಿರುವ ಇವರು ಇದಾಗಲೇ ಅಧಿಕಾರದ, ಖುರ್ಚಿಯ ಆಸೆಗೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮೊದಲು ಇಂತಹ ಯವ ರಾಜಕಾರಣಿಗಳು ತಮ್ಮ ಆವರಣ ಮೀರಿ ರಾಜಕೀಯ ಮಾಡುವುದನ್ನು ಕಲಿಯಬೇಕು. ಪಕ್ಷದ ಸಿದ್ದಾಂತ ಏನೇ ಇರಲಿ, ವಿಷಯಾಧಾರಿತವಾಗಿ ರಾಜಕೀಯ ವಿರೋಧಿಗಳಿಗೂ ಬೆಂಬಲ ಸೂಚಿಸುವಷ್ಟು ದೊಡ್ಡ ಮನಸ್ಸಿನವರಾಗಬೇಕು. ಹೆಚ್ಚು ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಬೀದಿಗಿಳಿಯಬೇಕು, ವಯಸ್ಸಿನಲ್ಲಿ ಮಾತ್ರ ಅಲ್ಲ, ಮನಸ್ಸಿನಲ್ಲೂ ಯುವಕರಾಗಬೇಕು.

1 ಕಾಮೆಂಟ್‌:

Nagesh Hoysala ಹೇಳಿದರು...

’ಸಗಣಿ’ಯ ಬೂದಿಯಲ್ಲಿ ಅಸ್ಥಿಪಂಜರ ಕಂಡವರಿಗೆ, ’ಸಗಟು’ ಮತಗಳ ಮೇಲೇ ಕಣ್ಣು..