ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಕಾಮೆಂಟ್‌ಗಳಿಲ್ಲ: