ನಲವತ್ತು ವರ್ಷದ ಹಿಂದೆ ಮಹಾಭಾರತದಲ್ಲಿನ ದ್ರೌಪತಿ, ಕುಂತಿ, ಗಾಂಧಾರಿಯನ್ನು ಚಿತ್ರಿಸಿ ‘ಪರ್ವ’ ಕಾದಂಬರಿ ರಚಿಸಿದ್ದ ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ಮುರು ವರ್ಷದ ಹಿಂದೆ, ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿರಿಸಿಕೊಂಡು ‘ಉತ್ತರಕಾಂಡ’ ಕಾದಂಬರಿ ಹೊರತಂದಿದ್ದರು. ಇದೀಗ ಉತ್ತರಕಾಂಡವನ್ನು ‘ರಶ್ಮಿ ತೇರದಾಳ್’ ಇಂಗ್ಲಿಷ್‌ಗೆ ಅನುವಾದಿಸಿದ್ದು, ಏಕಾ(ವೆಸ್ಟ್‌ಲ್ಯಾಂಡ್) ಪ್ರಕಟಿಸಿದೆ. ಈ ಕುರಿತು ಭೈರಪ್ಪ ತಮ್ಮ ಮನದಾಳವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
----------------------------------------
-ರಮೇಶ ದೊಡ್ಡಪುರ
*ವಾಲ್ಮೀಕಿ ರಾಮಾಯಣದಲ್ಲಿದ್ದ ಸೀತೆಯ ಧ್ವನಿಯನ್ನು ಉತ್ತರ ಕಾಂಡವು ಹೆಚ್ಚು ಮಾಡಿತೇ? ಅಥವಾ ಅದು ಮೂಲದಲ್ಲಿಲ್ಲದ ಧ್ವನಿಯೇ?
-ನಾನು ಉತ್ತರಕಾಂಡ ಬರೆಯುವಾಗ ಮುಖ್ಯವಾದ ಅಂಶಗಳೆಲ್ಲಾ ರಾಮಾಯಣದಲ್ಲಿ ಇದ್ದ ಕಥೆಯೇ. ಉದಾಹರಣೆಗೆ ನೇಗಿಲ ಗೆರೆಯಲ್ಲಿ ಹೆಣ್ಣು ಮಗು ಜನಕನಿಗೆ ಸಿಕ್ಕಿದ್ದು, ನಂತರದಲ್ಲಿ ಜನಕನ ಹೆಂಡತಿಯೂ ಗರ್ಭಿಣಿಯಾಗಿ ಮತ್ತೊಂದು ಹೆಣ್ಣು ಜನಿಸಿ, ಅದಕ್ಕೆ ಊರ್ಮಿಳಾ ಎಂದು ಹೆಸರಿಟ್ಟಿದ್ದು, ಸೀತೆ ರಾ
ವಣನಿಂದ ಬಿಡುಗಡೆ ಹೊಂದಿ ಬರುವಾಗ ಅಲಂಕೃತಳಾಗಿ ಬರಲೆಂದು ರಾಮ ಆದೇಶಿಸಿದ್ದು, ನಂತರದಲ್ಲಿ ರಾಮ ತನ್ನ ವಂಶದ ಕೀರ್ತಿಗಾಗಿ ಯುದ್ಧಮಾಡಿ ನಿನ್ನನ್ನು ಬಿಡಿಸಿದ್ದೇನೆ. ನೀನು ಈಗ ಮುಕ್ತಳು. ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಹೇಳಿದ್ದು ಇವೆಲ್ಲಾ ರಾಮಾಯಣದ ಮೂಲ ಕಥೆಯೇ. ಸೀತೆ ವನವಾಸದಲ್ಲಿದ್ದಾಗ ಮಕ್ಕಳಿಗಾಗಿ ಹಂಬಲಿಸಿದ್ದು, ಅದನ್ನು ಧ್ವನಿಸಲೆಂದೇ ಸೀತೆ ಚಿನ್ನದ ಬಣ್ಣದ ಜೀವಂತ ಜಿಂಕೆ ಮರಿಯನ್ನು ಬೇಕೆಂದು ರಾಮನಲ್ಲಿ ಬೇಡಿಕೆ ಇಟ್ಟಿದ್ದು, ಜಿಂಕೆಯ ಮೇಲೆ ಪ್ರೀತಿ ಹುಟ್ಟಿದ್ದು ಸಹ ಒಂದು ಹೆಣ್ಣು ಸಹಜವಾಗಿ ವ್ಯಕ್ತಪಡಿಸುವ ಆಸೆಗಳಲ್ಲವೇ? ತನ್ನ ಗಂಡ ತನ್ನನ್ನು ತಿರಸ್ಕರಿಸಿದನೆಂದು ಸೀತೆ ಆಹಾರ ತೆಗೆದುಕೊಳ್ಳದೇ ಇರುವುದು, ಇದರಿಂದ ತನ್ನ ಸಖಿ ಸುಕೇಶಿ ಎದೆ ಹಾಲಿನ ಮಹತ್ವದ ಬಗ್ಗೆ ಹೇಳುವ ಮಾತನ್ನು ಸೀತೆ ನೆನೆಯುತ್ತಾಳೆ. ’ಊರ್ಮಿಳೆಯಲ್ಲಿರುವ ಆತ್ಮವಿಶ್ವಾಸ ನನ್ನಲ್ಲಿಲ್ಲ. ಏಕೆಂದರೆ ನಾನು ತಾಯಿಯ ಹಾಲು ಕುಡಿದು ಬೆಳೆದ ಮಗುವಲ್ಲ.’ ತಾಯಿಯ ಹಾಲು ಕುಡಿದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚೆಂಬ ಅರಿವು ಸೀತೆಗೆ ಉಂಟಾಗಿ ತನ್ನ ಮಕ್ಕಳಿಗೆ ಹಾಲುಣಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತಾಳೆ. ಇವೆಲ್ಲಾ ಸಹಜ ಪ್ರಕ್ರಿಯೆಗಳು. ’ತಾಯಿ ಹಾಲು ಕುಡಿಸುವುದು’, ’ವನವಾಸದ ಬಗ್ಗೆ ಸೀತೆಯ ಮಾತುಗಳು’, ’ಕಾಡಿನಲ್ಲಿ ಕಲ್ಲು, ಮುಳ್ಳು ಚುಚ್ಚುವುದು’ ಇವೆಲ್ಲಾ ನಿಜ ಜೀವನಕ್ಕೆ ಹತ್ತಿರವಾಗಿವೆ. ಲವ-ಕುಶರಿಗೆ ಜನ್ಮವಿತ್ತ ನಂತರ ರಾಮಾಯಣವನ್ನು ವಾಲ್ಮೀಕಿ ಪದ್ಯ ರೂಪದಲ್ಲಿ ರಚಿಸಿ ರಾಮನ ಮುಂದೆ ಹಾಡಿದಾಗ ರಾಮನಿಗೆ ಆಶ್ಚರ್ಯವಾಗಿ ಈ ಬಾಲಕರು ತನ್ನ ಮಕ್ಕಳೆಂದು ವಾಲ್ಮೀಕಿಯಿಂದ ತಿಳಿಯುತ್ತಾನೆ. ಅಂದರೆ ಹದಿನಾರು ವರ್ಷವಾದರೂ ಅವನಿಗೆ ತನ್ನ ಮಕ್ಕಳ ಗುರುತೂ ಸಿಕ್ಕುವುದಿಲ್ಲ. ಅದು ಮೂಲ ಉತ್ತರಕಾಂಡದಲ್ಲಿದೆ. ಸೀತೆಯ ಪ್ರತಿ ನಡೆಯೂ ವಾಲ್ಮೀಕಿ ರಾಮಾಯಣದಲ್ಲಿ ವ್ಯಕ್ತವಾಗಿದೆ. ಅದರಲ್ಲಿಲ್ಲದ ಸೀತೆಯ ಮನಸ್ಸಿನ್ನ ಅಂತರಾಳವನ್ನು ಉತ್ತರಕಾಂಡದಲ್ಲಿ ಸೇರಿಸಿಲ್ಲ.
ಸೀತೆಯ ಪ್ರತಿ ನಡೆಯನ್ನೂ ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ವರ್ಣಿಸಿದ್ದಾರೆ. ಮೂಲ ರಾಮಾಯಣದಲ್ಲಿ ಏನೇನು ಅಂಶಗಳಿವೆಯೋ ಅವನ್ನೇ ತೆಗೆದುಕೊಂಡು ನಾನು ಸಾಮಾನ್ಯ ಮನುಷ್ಯನ ಸಹಜ ಜೀವನಕ್ಕೆ ಹೊಂದುವಂತೆ ಕಥೆ ಬೆಳೆಸಿದ್ದೇನೆ.
*ಭಾರತದ ಮಹಾಕಾವ್ಯಗಳ ಆಧಾರಿತ ಕಾದಂಬರಿಗಳು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರವಾಗುವಾಗಿನ ಸಂದರ್ಭದ ಕುರಿತು.
-ಭಾರತದ ಯಾವುದೇ ಭಾಷೆಯ ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ಭಾರತದಲ್ಲಿರುವ ಓದುಗರಿಗಾಗಿಯೇ ಹೊರತು ಹೊರದೇಶದ ಜನಗಳಿಗಲ್ಲ. ಏಕೆಂದರೆ ಅನ್ಯದೇಶಗಳ ಜನಕ್ಕೆ ಮೊದಲನೆಯದಾಗಿ ರಾಮಾಯಣ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಪರದೇಶದ ಮೂಲ ಅನುವಾದಕರು ಮತ್ತು ಭಾರತೀಯ ಇಂಗ್ಲಿಷ್ ಅನುವಾದಕರು ಸೇರಿ ಕೃತಿಗಳನ್ನು ಅನುವಾದ ಮಾಡಬೇಕು. ಹಾಗಾಗಿ ಇಂಗ್ಲಿಷ್‌ಗೆ ಅನುವಾದ ಮಾಡುವುದು ಕಷ್ಟಕರ. ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಹೆಚ್ಚು ಕಷ್ಟವಲ್ಲ. ಏಕೆಂದರೆ ಎರಡೂ ಭಾಷೆಗಳ ಮಾತ್ರವಲ್ಲ ಇಡೀ ಭಾರತದಲ್ಲಿ ಸಂಸ್ಕೃತಿಗಳು, ನಿಜ ಜೀವನಕ್ಕೆ ಸಂಬಂಧಪಟ್ಟ ವಿವರಗಳು ಒಂದೇ ರೀತಿಯದ್ದು. ಇನ್ನೂರು ವರ್ಷ ಇಂಗ್ಲಿಷ್ ಭಾಷೆಯು ನಮ್ಮನ್ನು ಆಳಿದರೂ ಭಾಷೆಯ ಬೇರು ಆದ ಸಂಸ್ಕೃತಿಗಳು ದೂರದೂರಾದವು. ಆದ್ದರಿಂದ ಭಾರತೀಯ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಅನುವಾದ ಬಹಳ ಕಷ್ಟ.
*ಅನ್ಯ ಭಾಷೆ, ಸಂಸ್ಕೃತಿಗಳ ಅನುವಾದಿತ ಕೃತಿ ಓದುವಾಗಿನ ನಮ್ಮ ಮಾನಸಿಕ ಸಿದ್ಧತೆ ಹೇಗಿರಬೇಕು?
-ಉದಾಹರಣೆಗೆ ರಷ್ಯನ್ನಿನಿಂದ ಅನುವಾದ ಕೃತಿ ಓದುತ್ತೇವೆ ಎಂದಿಟ್ಟುಕೊಳ್ಳೋಣ. ಚಳಿ ಎಂದು ಅದರಲ್ಲಿ ಬರೆದಿದ್ದರೆ, ಅಲ್ಲಿನ ಚಳಿ ಎಂಥದ್ದು? ಎಂಬುದು ತಿಳಿದಿರಬೇಕು. ಅಲ್ಲಿನ ಚಳಿ ಮೈನಸ್ 15ರಿಂದ 20ರವರೆಗೆ ಇರುತ್ತದೆ. ರಷ್ಯಾಕ್ಕೆ ಪ್ರವಾಸ ತೆರಳಿದ್ದರೆ ಸರಿ. ಇಲ್ಲದಿದ್ದರೆ ಆ ಚಳಿ ವಾತಾವರಣದ ೆಟೊ, ವಿವಿರಗಳನ್ನಾದರೂ ತಿಳಿದಿರಬೇಕು. ಮದುವೆ ಎಂದು ಬರೆದಿರುತ್ತಾರೆ. ಮದುವೆ ಎಂದ ಕೂಡಲೆ ನಮ್ಮ ಸಮಾಜದ ಮದುವೆಯೇ ನೆನಪಾಗುತ್ತದೆ. ಅಪ್ಪ ಅಮ್ಮ ಮುಂದೆ ನಿಂತು ಮದವೆ ಮಾಡುವುದು, ಮದುವೆ ನಂತರ ಹುಡುಗನ ಮನೆಗೆ ತೆರಳುವುದು, ವಿಚ್ಛೇದನ ಆಗದೇ ಇರುವುದು, ತವರು ಮನೆಯಲ್ಲೆ ಮೊದಲ ಬಾಣಂತನ ಆಗುವುದು ಇಲ್ಲಿನ ನಂಬಿಕೆ. ಅಲ್ಲಿ ಮದುವೆಯಾದ ಕೂಡಲೆ ಅಪ್ಪ ಅಮ್ಮನಿಂದ ಬೇರೆ ಮನೆ ಮಾಡುತ್ತಾರೆ. ಸಂಸ್ಕೃತಿಯಲ್ಲಿನ ಈ ಭಿನ್ನತೆಯನ್ನು ಅರಿತು ಓದಬೇಕು.

*ಸೀತೆಯ ಧ್ವನಿಯು ಫೆಮಿನಿಸಂ ಹೆಸರಿನಲ್ಲಿ ನಡೆಯುತ್ತಿುವ ಪುರುಷ ವಿರೋಧಿ ಆಂದೋಲನಕ್ಕೆ ಪೂರಕವಾಗುವ ಸಾಧ್ಯತೆ ಇದೆಯೇ?
-ಸೀತೆ ಯಾವತ್ತೂ ಪುರುಷ ವಿರೋಧಿ ಆಗಲೇ ಇಲ್ಲ. ಅವಳ ಅಸಮಾಧಾನವೇನಿದ್ದರೂ ರಾಮನ ಕೆಲವು ನಿರ್ಧಾರಗಳ ಮೇಲೆ ಮಾತ್ರ. ಸೀತೆಗೆ ತನ್ನ ತಂದೆ ಜನಕ ಮಹಾರಾಜನ ಬಗ್ಗೆ ಅಪಾರ ಗೌರವವಿತ್ತು. ಆಶ್ರಯ ಕೊಟ್ಟ ವಾಲ್ಮೀಕಿ ಮಹರ್ಷಿಗಳು ಪುರುಷರೇ. ಅವರಲ್ಲಿಯೂ ಗೌರವ ಭಾವದಿಂದಲೇ ಇದ್ದಳು. ಮೈದುನ ಲಕ್ಷ್ಮಣನ ಮೇಲೆ ಸಹ ಅತ್ತಿಗೆ ತೋರುವಂತಹ ಅಂತಃಕರಣ ಇದ್ದೇ ಇತ್ತು. ಆದ್ಧರಿಂದ ‘ಇಡೀ ಪುರುಷ ಜಾತಿಯೇ ನಮ್ಮ ಶತ್ರು. ಪುರುಷ ಜಾತಿಯಿಂದ ದೂರ ಇರಬೇಕೆಂಬ’ ಪಾಶ್ಚಾತ್ಯ ಆಧುನಿಕ ಫೆಮಿನಿಸ್ಟ್ ರೋಷವು ಸೀತೆಯಲ್ಲಿ ಇರಲಿಲ್ಲ.
*ಭಾರತೀಯ ನೆಲೆಯ ಸ್ತ್ರೀವಾದದ ಪ್ರತೀಕ ಉತ್ತರಕಾಂಡ ಎಂದು ಅನೇಕರು ಹೇಳಿದ್ದಾರೆ. ಅದು ಸತ್ಯವೇ? ಹಾಗಾದರೆ ಭಾರತೀಯ ನೆಲೆಯಲ್ಲಿ ಸ್ತ್ರೀವಾದ ಎಂಬುದೊಂದು ಇದೆಯೇ? ಇದ್ದರೆ ಹೇಗೆ?
-ಪಶ್ಚಿಮ ದೇಶದಲ್ಲಿರುವ ಸ್ತ್ರೀವಾದವೇ ಬೇರೆ, ಭಾರತದ ಸ್ತ್ರೀ ವಾದವೇ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೇ ಸ್ತ್ರೀಯರಿಗೆ ಮತದಾನದ ಹಕ್ಕು ಕೊಟ್ಟಿದೆ. ಅನೇಕ ಮಹಿಳೆಯರು ರಾಯಭಾರಿಗಳಾದರು. ಇಂದಿರಾಗಾಂಧಿ ನಮ್ಮ ದೇಶದ ಪ್ರಧಾನಿ ಆಗಿದ್ದರು. ನಮ್ಮ ದೇಶದ ಮನೆಗಳಲ್ಲಿ ಯಜಮಾನಿಕೆ ನಡೆಯುವುದು ಹೆಣ್ಣಿನಿಂದಲೇ. ಸಂಸಾರ ನಿಭಾವಣೆಯೂ ಹೆಣ್ಣಿನದೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಶೇ.30ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಾಲಿಡುತ್ತಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಈಗಿನ ಸಮಾಜದಲ್ಲಿ ಗಂಡು ಮಕ್ಕಳಿಗೂ, ಹೆಣ್ಣು ಮಕ್ಕಳಿಗೂ ಬೇಧ ಮಾಡುವ ಹಳೆಯ ವರ್ತನೆ ಇಲ್ಲ. ಸಮಾನ ವಿದ್ಯಾಭ್ಯಾಸ ನೀಡುವ ಮನಸ್ಥಿತಿ ಅಧಿಕವಾಗಿದೆ. ಆದ್ದರಿಂದ ಭಾರತೀಯ ನೆಲೆಯ ಸ್ತ್ರೀವಾದ ಎಂಬುದು ಸರಿಯಲ್ಲ.
ಉತ್ತರಕಾಂಡದಲ್ಲಿ ಕೌಸಲ್ಯೆಗೆ ಅವಳ ತಂದೆ ಪುಟ್ಟ ರಾಜ್ಯವನ್ನೇ ಕೊಟ್ಟಿರುವ ಉಲ್ಲೇಖವಿದೆ. ಅದನ್ನೂ ನಾನು ಉತ್ತರಕಾಂಡದಲ್ಲಿ ನಮೂದಿಸಿದ್ದೇನೆ. ನಮ್ಮ ಧರ್ಮಶಾಸ್ತ್ರದಲ್ಲಿ ‘ಸ್ತ್ರೀಧನ’ ಎಂಬುದನ್ನು ಉಲ್ಲೇಖಿಸಿದೆ. ಯಾರೇ ಸ್ತ್ರೀಯರಿಗೆ ಕಾಣಿಕೆ ರೂಪದಲ್ಲಿಯೋ ಅಥವಾ ದಾನದ ರೂಪದಲ್ಲಿಯೋ ಏನೇ ಕೊಟ್ಟರೂ ಅದು ಅವಳಿಗೆ ಮಾತ್ರ ಸಲ್ಲುತ್ತದೆ. ಅದರಲ್ಲಿ ಗಂಡನಿಗೆ ಪಾಲಿಲ್ಲ. ಆದ್ದರಿಂದ ವಿದೇಶಿಯರ ಸ್ತ್ರೀವಾದ ಭಿನ್ನವಾದುದು. ಸ್ವೇಚ್ಛೆಯನ್ನೇ ಸ್ತ್ರೀವಾದ ಎಂದು ಒಪ್ಪುವವರು ವಿದೇಶಿಯರು. ನಮ್ಮ ದೇಶದಲ್ಲಿ ಸಂಸ್ಕೃತಿ, ಕೌಟುಂಬಿಕ ಬಂಧಗಳ ಗಟ್ಟಿತನ, ಸೋದರ ಸಂಬಂಧಗಳ ಬೆಸುಗೆ ಇವೆಲ್ಲಕ್ಕೂ ಗೌರವದ ಸ್ಥಾನವಿದೆ. ಆದ್ದರಿಂದ ಭಾರತದಲ್ಲಿ ಪಶ್ಚಿಮ ದೇಶಗಳಲ್ಲಿರುವಂಥ ಸ್ತ್ರೀವಾದ ಗಟ್ಟಿಯಾಗಿ, ವ್ಯಾಪಕವಾಗಿ ಬೇರುಬಿಟ್ಟಿಲ್ಲ.
*ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ವಿಶ್ಲೇಷಿಸಿದ ಅನೇಕ ಸಂದರ್ಭಗಳಲ್ಲಿ ಆಕ್ಷೇಪಗಳು, ಲೇಖಕನ ವಿರುದ್ಧ ಮಾತುಗಳು ಕೇಳಿಬರುತ್ತಿವೆ. ಆದರೆ ಭೈರಪ್ಪನವರು ಬರೆದಾಗ ಸಮಾಜ ಸ್ವೀಕರಿಸುತ್ತದೆ. ಕಾವ್ಯಗಳನ್ನು ಕಾದಂಬರಿಯಾಗಿಸುವಾಗ ಲೇಖಕನ ವೈಯಕ್ತಿಕ ಜೀವನವೂ ಗಣನೆಗೆ ಬರಬಹುದೇ?
-ನವ್ಯ ಸಾಹಿತ್ಯ ಬಂದ ಮೇಲೆ ಲೇಖಕ ತನ್ನ ದೌರ್ಬಲ್ಯಗಳನ್ನು ಹೊರ ಪ್ರಪಂಚಕ್ಕೆ ತಿಳಿಯುವಂತೆ ಘೋಷಿಸಿಕೊಳ್ಳುವುದು ಹೆಚ್ಚಾಗಿದೆ. ತಮ್ಮಲ್ಲೇ ದೌರ್ಬಲ್ಯಗಳಿರುವ ಮನುಷ್ಯ ಶುದ್ಧತೆಗೆ ಹೆಸರಾದ ಸೀತೆಯ ಕಥೆ ಬರೆದಾಗ ಅವಳಲ್ಲಿಯೂ ಆ ದೌರ್ಬಲ್ಯಗಳನ್ನು ಆರೋಪಿಸುತ್ತಾನೆ. ಅವಳ ಘನತೆಯನ್ನು ನಾಶಪಡಿಸುತ್ತಾನೆ. ಇದನ್ನು ಜನತೆ ಒಪ್ಪುವುದಿಲ್ಲ. ಆದರೆ ನನ್ನ ಕೃತಿಗಳನ್ನು ಜನತೆ ಒಪ್ಪಿಕೊಂಡಿದೆ. ಕಾರಣ ನಾನು ನಮ್ಮ ದೇಶದ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದೇನೆ. ಸಮಾಜದ ಸಂಸ್ಕೃತಿ ಆಧುನಿಕ ಕಾಲಕ್ಕೆ ಯಾವ ರೀತಿ ಇರಬೇಕು ಎಂಬುದಷ್ಟನ್ನೇ ನಾನು ವಿವರಿಸಿ ಬರೆಯುತ್ತೇನೆ. ನಮ್ಮ ದೇಶದಸಂಸ್ಕೃತಿಯನ್ನು ಲೇಖಕ ಒಪ್ಪುವುದಾದರೆ ಅದರ ಆಧಾರದ ಮೇಲೆ ಅವನು ವಿಮರ್ಶೆಗಳನ್ನುಮಾಡಲುಯೋಗ್ಯ. ಆದ್ದರಿಂದ ವೈಯಕ್ತಿಕ ಜೀವನ, ಅವನ ಬರವಣಿಗೆಯ ಮೇಲೆ ಮತ್ತು ಓದುಗರು ಕೃತಿಗಳನ್ನು ಸ್ವೀಕರಿಸುವುದರ ಮೇಲೆ ಪ್ರಭಾವ ಬೀರುತ್ತದೆ.
*ಕಾದಂಬರಿಗಳು ಮಾರಾಟ ಆಗುತ್ತವೆ. ಆದರೆ ತಾವೇ ಒಮ್ಮೆ ಹೇಳಿದಂತೆ ಅಂಚು ಕಾದಂಬರಿಯ ಕುರಿತು ಕರ್ನಾಟಕದಲ್ಲಿ ಚರ್ಚೆ, ಕ್ರಿಟಲ್ ಅನಾಲಿಸಿಸ್ ನಡೆಯಲೇ ಇಲ್ಲ. ಇತರ ಲೇಖಕರ ಕೃತಿಗಳೂ ಹೀಗೆ ಆಗುತ್ತಿವೆ. ಕಾದಂಬರಿಗಳ ಕುರಿತು ಸಾಹಿತ್ಯ ವಲಯದಲ್ಲಿ ಈ ಮೌನದ ಕುರಿತು ತಮ್ಮ ಅಭಿಪ್ರಾಯ?
-ನನ್ನ ಪುಸ್ತಕಗಳ ಮೇಲೆ ಸುಮಾರು 30ಕ್ಕೂ ಹೆಚ್ಚು ವಿಮರ್ಶಾತ್ಮಕ ಪುಸ್ತಕಗಳು ಬಂದಿವೆ. ಪತ್ರಿಕೆಗಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಬರೆಯುತ್ತಾರೆ. ‘ಅಂಚು’ ಕಾದಂಬರಿ ನನ್ನ ಬೇರೆಲ್ಲಾ ಕಾದಂಬರಿಗಳಿಗಿಂತ ಭಿನ್ನವಾಗಿದೆ. ಈ ಕಾದಂಬರಿ ತಕ್ಷಣಕ್ಕೆ ಅರ್ಥವಾಗದೆ ‘ಇದೊಂದು ಬೇರೆ ರೀತಿಯ ಕಾದಂಬರಿ’ ಎಂದು ಅನೇಕ ಓದುಗರು ಹೇಳಿದ್ದಾರೆ. ಆದರೆ ‘ಬೇರೆ ರೀತಿಯಲ್ಲಿ ಬರೆದಿರುವ ಕಾದಂಬರಿಯನ್ನು ಬೇರೆ ರೀತಿಯಲ್ಲೇ ಓದಿ ಅರ್ಥೈಸಿಕೊಳ್ಳಬೇಕು’. ಅದನ್ನು ಅರ್ಥಮಾಡಿಕೊಂಡು ಓದಿದರೆ ‘ಅಂಚು’ ಸಹಾ ರಸಮಯವಾದ ಕಾದಂಬರಿಯೇ. ಚರ್ಚೆ ನಡೆಯಲಿಲ್ಲ ಎಂಬುದನ್ನು ಅಂಚು ಕಾದಂಬರಿಯ ವೆಬಿನಾರ್‌ಗೆ ಸಂಬಂಧಪಟ್ಟಂತೆ ಹೇಳೀದ್ದೇ ಹೊರತು, ಬೇರೆ ಕಾದಂಬರಿಗಳಿಗಲ್ಲ. ಮುಂಬೈನ ಮನಃಶಾಸ್ತ್ರಜ್ಞೆ ಅಂಜಲಿ ಜೋಷಿ ಎಂಬುವವರು ‘ಅಂಚು’ ಕಾದಂಬರಿ ಬಹಳ ಗುಣಮಟ್ಟದ್ದೆಂದು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾರೂ ಈ ರೀತಿ ವಿಶ್ಲೇಷಣೆ ಮಾಡಲೇ ಇಲ್ಲ. ಕಾರಣ ಮನಃಶಾಸ್ತ್ರ ಓದಿರುವವರು ಕಡಿಮೆ ಇರಬಹುದೋ ಅಥವಾ ಕನ್ನಡ ಮನಃಶಾಸ್ತ್ರಜ್ಞರು ‘ಅಂಚು’ ಕಾದಂಬರಿಯನ್ನು ಓದಿಲ್ಲದೇ ಇರಬಹುದು.
*ಸೀತಾರಾಮ, ರಾಜಾರಾಮನಾಗುವ ಸಂದರ್ಭದಲ್ಲಿ ಅವನಲ್ಲಿ ಬದಲಾವಣೆಗಳು ಕಂಡವು ಎಂದು ಹೇಳಿದ್ದೀರಿ. ರಾಜನಾಗಿಯೂ ರಾಮನು ಒಬ್ಬ ಪತಿಯಾಗಿಯೇ ನಡೆದುಕೊಂಡಿದ್ದರೆ, ರಾಮ ಪೂಜ್ಯನಾಗುತ್ತಿದ್ದನೇ?
-ದೇವರ ಅವತಾರ ಎಂಬುದು ಪುರಾಣದಲ್ಲಿ ಬಂದಿದೆ. ರಾಮ, ಕೃಷ್ಣ, ಸೀತೆ, ಲಕ್ಷ್ಮಣ ಇವರೆಲ್ಲಾ ಅವತಾರ ರೂಪ ಎಂದು ಪುರಾಣದಲ್ಲಿ ಓದುತ್ತಲೇ ಬಂದಿದ್ದೇವೆ. ದೇವರ ಅವತಾರ ಎಂದರೆ ಅವನು ಆದರ್ಶನೇ ಆಗಿರಬೇಕು. ಅವನು ಮಾಡಿದ್ದೆಲ್ಲಾ ಸರಿಯಾಗಿಯೇ ಇರಬೇಕು. ರಾಮನಿಗೆ ಸೀತೆ ಶುದ್ಧಳೆಂದು ಗೊತ್ತಿತ್ತು. ಕಾವಲು ಕಾಯುತ್ತಿದ್ದ ರಾಕ್ಷಸ ಹೆಂಗಸರು, ವಿಭೀಷಣನ ಹೆಂಡತಿ ಇವರೆಲ್ಲಾ ಸೀತೆಯ ಶುದ್ಧತೆಗೆ ಸಾಕ್ಷಿ ಹೇಳಿದರೂ ರಾಮ ಈ ಸಾಕ್ಷಿಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾನೆ. ಅದು ರಾಮನಿಗೆ ಸಲ್ಲುವಂಥ ಮಾತೇ ಎಂಬ ಪ್ರಶ್ನೆ ಹುಟ್ಟುತ್ತೆ. ಭರತನ ಆಡಳಿತದಲ್ಲಿ ಪ್ರಜೆಗಳು ತೆರಿಗೆ ಕಟ್ಟದೇ ಬೊಕ್ಕಸ ಬರಿದು ಮಾಡಿರುತ್ತಾರೆ. ಆಡಳಿತ ಸುಸೂತ್ರವಾಗಿರಲಿಲ್ಲ. ರಾಜ್ಯದಲ್ಲಿ ದಾರಿದ್ರ್ಯ ತುಂಬಿತ್ತು. ಈ ಸಂದರ್ಭದಲ್ಲಿ ರಾಮ, ರಾಜ್ಯ ವಹಿಸಿಕೊಂಡು ಸುಸೂತ್ರವಾಗಿ ನಡೆಸಬೇಕಾದರೆ ಬೊಕ್ಕಸಕ್ಕೆ ಬರುವಂತಹ ತೆರಿಗೆ ಸಲ್ಲಬೇಕು. ಆದರೆ ತೆರಿಗೆ ಕಟ್ಟಲು ವಿರೋಧಿಸುವವರು ಸೀತೆಯ ಬಗ್ಗೆ ಗುಸುಗುಟ್ಟುವಿಕೆ ಶುರುಮಾಡಿದರು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಸೀತೆಯ ಶುದ್ಧತೆಯ ಪ್ರಶ್ನೆ ಎತ್ತುತ್ತಾರೆ. ಆದರೆ ರಾಮ, ರಾಜನಾಗಿದ್ದವನು ಗೂಢಚಾರರನ್ನು ಬಿಟ್ಟು ಯಾರು ಅಂತಹ ವದಂತಿ ಹಬ್ಬಿಸುತ್ತಿದ್ದಾರೋ ಅವರಿಗೆ ಶಿಕ್ಷೆ ಕೊಟ್ಟಿದ್ದರೆ ಜನತೆ ವದಂತಿಗಳನ್ನು ಕೈಬಿಟ್ಟು ಸುಮ್ಮನಾಗುತ್ತಿದ್ದರು. ಆದರೆ ರಾಮ, ಸೀತೆಯನ್ನು ಕಾಡಿಗೆ ಕಳಿಸಿ, ಇಬ್ಬರೂ ದುಃಖ ಅನುಭವಿಸುವ ಮೂಲಕ ಜನತೆಗೆ ಆದರ್ಶವನ್ನು ತೋರಿಸಬೇಕೆಂದು ಯೋಚಿಸುತ್ತಾನೆ. ವದಂತಿ ಹಬ್ಬಿಸಿದ ಪ್ರಜೆಗಳು ಸಹ ರಾಮ ಹೆಂಡತಿಯನ್ನು ತ್ಯಜಿಸಿದ್ದು ನೋಡಿ ‘ಸೀತೆ ಶುದ್ಧಳಲ್ಲವೆಂದು ರಾಮನು ಒಪ್ಪಿದನು’ ಎಂದು ತಿಳಿಯಬಹುದಿತ್ತಲ್ಲವೇ? ಗೌತಮ ಅಹಲ್ಯೆಯರನ್ನು ಕ್ಷಮಿಸಿ ಒಂದುಗೂಡಿಸಿದ ರಾಮ ತನ್ನ ಹೆಂಡತಿಯನ್ನೇಕೆ ತ್ಯಸಿಜಿದ? ಜನಕನ ಹೆಂಡತಿಯ ಗರ್ಭಸಂಜಾತೆ ಅಲ್ಲದ ಸೀತೆಯನ್ನು ಮದುವೆಯಾಗಲು ದಶರಥ ಒಪ್ಪದೇ ಇದ್ದರೂ, ಬಿಲ್ಲು ಮುರಿದಿದ್ದೇನೆ. ಸೀತೆಯನ್ನೇ ಮದುವೆಯಾಗುವುದಾಗಿ, ಇಲ್ಲವಾದಲ್ಲಿ ಮದುವೆಯೇ ಬೇಡವೆಂದು ತಿಳಿಸಿದ್ದ ಆದರ್ಶಪುರುಷ ರಾಮ. ಶಂಭೂಕನೆಂಬ ಶೂದ್ರನು ತ್ರೇತಾಯುಗದಲ್ಲಿ ತಪಸ್ಸು ಮಾಡುತ್ತಿರುವಾಗ ತಪಸ್ಸು ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಮಾಡುತ್ತಾನೆ. ಶೂದ್ರನಾದ ಅವನನ್ನು ಕೊಂದುಹಾಕುತ್ತಾನೆ. ಶಂಭೂಕ ವಧೆ ಮೂಲ ರಾಮಾಯಣದಲ್ಲೇ ಇದೆ. ಆದರ್ಶ ರಾಮನ ಗುಣಗಳು ರಾಜ್ಯಭಾರ ಮಾಡುವ ಹೊತ್ತಿಗೆ ಬದಲಾವಣೆಯಾಗಿದ್ದವು. ಎಂಬುದು ನನ್ನ ಭಾವನೆ. ಆದ್ದರಿಂದ ಮೊದಲು ಸೀತಾರಾಮನಾಗಿದ್ದವನು ನಂತರದಲ್ಲಿ ರಾಜಾರಾಮನಾದ. ರಾಮನ ಅವತಾರವನ್ನು ಒಪ್ಪಿಕೊಂಡರೆ ‘ಪೂಜ್ಯ’ ಎನ್ನಬಹುದು. ಅವನೊಬ್ಬ ಸಾಮಾನ್ಯ ಮನುಷ್ಯ ಎಂದು ಭಾವಿಸಿದರೆ ‘ಒಳ್ಳೆಯ ಮನುಷ್ಯ’ ಎನ್ನಬಹುದು. ಪೂಜ್ಯ ಎಂಬ ಶಬ್ದ ಇಲ್ಲಿ ಹೊಂದುವುದಿಲ್ಲ.
*ಉತ್ತಮ ಕಾದಂಬರಿ ಹೊರಬರಲು ಕಾದಂಬರಿಕಾರ ಜನಸಂಪರ್ಕ, ಪುಸ್ತಕ ಓದು, ಪ್ರವಾಸಗಳಲ್ಲಿ ಯಾವುದರ ಕುರಿತು ಹೆಚ್ಚು ಗಮನ ಕೇಂದ್ರೀಕಿರಸಬೇಕು? ವಸ್ತು ಆಯ್ಕೆಯಲ್ಲಿ ಲೇಖಕನ ಹಿನ್ನೆಲೆ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ?
-ಪುಸ್ತಕದ ಓದು, ಪ್ರವಾಸ, ಜನಸಂಪರ್ಕ ಎಲ್ಲವೂ ಕಾದಂಬರಿಕಾರನಿಗೆ ಮುಖ್ಯ. ನನ್ನ ಅನುಭವದಲ್ಲಿ ವಸ್ತುವನ್ನು ನಾನಾಗಿಯೇ ಆಯ್ಕೆ ಮಾಡಲ್ಲ. ಅದು ತಾನೇ ಹುಟ್ಟುತ್ತೆ. ತಾನೇ ಬೆಳೆಯುತ್ತೆ. ನಂತರದಲ್ಲಿ ನಾನು ಬರೆಯಲು ತೊಡಗುತ್ತೇನೆ. ನನ್ನ ಅನುಭವದಿಂದಲೇ ಪಾತ್ರಗಳು ಸೃಷ್ಟಿಯಾಗುವುದು. ನಮ್ಮ ಅನುಭವದ ಪ್ರಕಾರವೇ ನಮ್ಮ ಮನಸ್ಸು ಚಲಿಸುತ್ತೆ. ನೀವ್ಯಾಕೆ ಶ್ರೀನಿವಾಸ ಶ್ರೋತ್ರಿಗಳ ಪಾತ್ರವನ್ನು ಸೃಷ್ಟಿ ಮಾಡಿದಿರಿ, ಅಂಥವರನ್ನು ಎಲ್ಲಿ ನೋಡಿದ್ರಿ? ಅಂದರೆ ಅಂತಹ ಗುಣವುಳ್ಳ ಹಲವಾರು ಜನರನ್ನು ನೋಡಿದ್ದೆ. ಆ ಗುಣಗಳು ಬಹಳಷ್ಟು ಜನರಲ್ಲಿ ಇತ್ತು. ಈಗಲೂ ಕೆಲವರು ಇದ್ದಾರೆ.
*ಸೀತೆಯ ಪಾತ್ರವನ್ನು ಈಗಿನ ಸಮಾಜದ ಜನರ ಮಾನಸಿಕತೆಗೆ, ಸ್ಪಂದನೆಗೆ ಅನುಗುಣವಾಗಿ ಧ್ವನಿಸಲಾಗಿದೆ ಎಂದು ತಾವು ಹೇಳಿದ್ದೀರಿ. ಅಂದರೆ ಇನ್ನು 20-30 ವರ್ಷ ನಂತರ ಈ ಕಾದಂಬರಿಯನ್ನು ಮತ್ತೊಬ್ಬರು ಬರೆದರೆ ಅಂದಿನ ಸಮಾಜಕ್ಕೆ ಧ್ವನಿ ಬದಲಾಗುತ್ತದೆಯೇ? ಅಥವಾ ಕಾದಂಬರಿಯು ಮಾನವನ ಸಾರ್ವಕಾಲಿಕ ಸ್ವಭಾವವನ್ನು ಧ್ವನಿಸಿದೆಯೇ?
-ಇದು ಸಾರ್ವಕಾಲಿಕ. ವಾಸ್ತವವಾಗಿ ನಾನು ‘ವಂಶವೃಕ್ಷ’ಕ್ಕೆ ಹಿನ್ನುಡಿ ಬರೆದಿದ್ದೇನೆ. ಅದಕ್ಕೆ ‘ಯುಗಸಂಧಿ’ ಅಂತ ಹೆಸರಿಟ್ಟಿದ್ದೇನೆ. ಒಂದು ಸಮಾಜದ ನಂಬಿಕೆ ಯಾವಾಗ ಪೂರ್ತಿಯಾಗಿ ಬದಲಾಗುತ್ತೋ, ಆಗ ಮಾತ್ರ ಹೊಸ ಯುಗ ಎಂದು ಕರೆಯುವುದು. ರಾಮಾಯಣವನ್ನು ಹೊರತುಪಡಿಸಿ ನಮ್ಮ ಇಡೀ ಸಮಾಜದ ಆದರ್ಶ ಹೆಣ್ಣು ಎಂಬ ಕಲ್ಪನೆ ಬದಲಾದರೆ, ಮುಂದೆ ಬದಲಾದ ಸಮಾಜದಲ್ಲಿ ರಾಮಾಯಣ ಓದಿದರೆ ಸೀತೆ ಮತ್ತು ರಾಮನ ಪಾತ್ರ ಮತ್ತಷ್ಟು ಭಿನ್ನವಾಗಿ ಕಾಣಬಹುದು. ಆಧುನಿಕ ವಿಜ್ಞಾನ ಮತ್ತು ಆಧುನಿಕ ಕೈಗಾರಿಕೀಕರಣ ಬಂದ ಮೇಲೆ, ಖಗೋಳ ಜ್ಞಾನ ಮತ್ತು ಖಗೋಳ ಭೌತಶಾಸ್ತ್ರ, ಬಿಗ್ ಬ್ಯಾಂಗ್ ಥಿಯರಿ ಇವೆಲ್ಲಾ ಬಂದ ಮೇಲೆ ಪ್ರಪಂಚದ ದೃಷ್ಟಿಯ ಮೇಲೆ ಪ್ರಭಾವ ಬೀರಿವೆ. ಮೌಲ್ಯಗಳ ಬಗ್ಗೆ ಯೋಚಿಸಿದರೆ ಈಗಲೂ ಮೌಲ್ಯಗಳು ಮನುಷ್ಯನಲ್ಲಿ ಕಾಣುತ್ತಲೇ ಇವೆ. ಉದಾಹರಣೆಗೆ ಬಿಲ್‌ಗೇಟ್ಸ್ ದುಡಿದ ಹಣವನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ವೈಜ್ಞಾನಿಕವಾಗಿ ಯೋಚಿಸಿದರೂ ’ದುರಾಸೆ ಬೇಡ, ನಾವು ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ’ ಎಂಬ ಮನೋಭಾವ ಇದ್ದೇ ಇದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವವರು ಇದ್ದಾರೆ. ತಾನು ಮಾಡಿದ್ದು ತನ್ನ ಮಕ್ಕಳಿಗೆ ಮಾತ್ರ ಎಂಬ ಮನೋಭಾವ ಇರುವವರಿಗೆ ನೈತಿಕತೆ ಇರುವುದಿಲ್ಲ.
*ಪ್ರಸ್ತುತ ಸಂದರ್ಭದ ಬಗ್ಗೆ ಕೇಳುವುದದರೆ, ಅಂತಧರ್ಮೀಯ/ ಅನ್ಯ ನಂಬಿಕೆಗಳ ನಡುವೆ ಮದುವೆ ಆಗುವುದನ್ನು ತಡೆಯುವುದು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎನ್ನಲಾಗುತ್ತಿದೆಯಲ್ಲ?
-ಲವ್ ಜಿಹಾದ್ ಮೂಲಕವೂ ಮುಸ್ಲಿಮರು ಆಕ್ರಮಣ ನಡೆಸುತ್ತಿರುತ್ತಾರೆ. ಮುಸ್ಲಿಮರಲ್ಲಿ ಸೀಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಕಡಿಮೆ, ಹೋದರೂ ಬುರ್ಖಾ ಧರಿಸಿರುತ್ತಾರೆ. ಅವರು ಹೆಣ್ಣು ಎನ್ನುವುದು ತಿಳಿಯುತ್ತದೆಯೇ ವಿನಃ ಅವರ ಮುಖ ಕಾಣಿಸುವುದಿಲ್ಲ. ಆದರೆ ಹಿಂದುಗಳಲ್ಲಿ ಹೆಣ್ಣುಮಕ್ಕಳಿಗೆ ನಿರ್ಬಂಧಗಳು ಕಡಿಮೆ. ಯಾರನ್ನು ಬೇಕಾದರೂ ಮಾತನಾಡಿಸಬಹುದು, ತಡವಾಗಿಯೂ ಮನೆಗೆ ಬರಬಹುದು. ಇದನ್ನೇ ಬಳಸಿಕೊಳ್ಳುವ ಮುಸ್ಲಿಂ ಹುಡುಗರು ಅವರ ಸ್ನೇಹ ಸಂಪಾದಿಸಿ, ಹೋಟೆಲ್, ಪಾರ್ಕುಗಳಲ್ಲಿ ಸುತ್ತಾಡುತ್ತಾರೆ. ಲೈಂಗಿಕ ಆಸಕ್ತಿ ಕೆರಳುವ ವಯಸ್ಸಿನಲ್ಲಿರುವ ಹೆಣ್ಣುಮಕ್ಕಳು ಇದನ್ನು ನಿಜವೆಂದು ನಂಬುತ್ತಾರೆ. ೆಟೊಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ. ಮದುವೆ ಆಗಲು ಹುಡುಗಿ ಒಪ್ಪದಿದ್ದಾಗ ೆಟೊಗಳನ್ನು ತೋರಿಸಿ ಬೆದರಿಸುತ್ತಾರೆ, ತಮ್ಮ ಮತಕ್ಕೆ ಮತಾಂತರವಾಗುವಂತೆ ಮನವೊಲಿಸುತ್ತಾರೆ. ಇದರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಾನೂನು ರೂಪಿಸಿದೆ. 18 ವರ್ಷವಾದ ಹೆಣ್ಣು ಮಕ್ಕಳು, 21 ವರ್ಷವಾದ ಗಂಡು ಮಕ್ಕಳು ತಮಗಿಚ್ಛೆ ಬಂದವರನ್ನು ಮದುವೆಯಾಗಲು ಸಂವಿಧಾನಬದ್ಧ ಅಧಿಕಾರವಿದೆ. ನ್ಯಾಯಾಲಯದಲ್ಲಿ ಈ ಕಾನೂನು ಮಾನ್ಯತೆ ಕಳೆದುಕೊಳ್ಳಬಹುದು. ಹಿಂದು ಸಮಾಜ ಒಗ್ಗೂಡುವುದೊಂದೇ ಈ ಸಮಸ್ಯೆಗೆ ಪರಿಹಾರ. ಲವ್ ಜಿಹಾದ್ ನಡೆಸಿದವರ ಜತೆಗೆ ಉದ್ಯಮ, ವ್ಯಾಪಾರ ನಡೆಸದಿದ್ದರೆ ಸರಿಯಾಗುತ್ತದೆ. ಆದರೆ ಹಿಂದುಗಳಲ್ಲಿ ಒಗ್ಗಟ್ಟು ಇಲ್ಲ. ಅವನ ಮಗಳು ತಾನೆ ಎಂದುಕೊಂಡು ಸುಮ್ಮನಾಗುತ್ತಾರೆ.