ಶುಕ್ರವಾರ, ಫೆಬ್ರವರಿ 26, 2010

ನಿರೀಕ್ಷೆಯಿರುವುದು ನ್ಯಾಯದ್ದಲ್ಲ, ನಿರೀಕ್ಷಣಾ ಜಾಮೀನುಗಳದ್ದು


          'ಒಂದು ದೊಡ್ಡ ಮರ ಬಿದ್ದಾಗ ಭೂಮಿ ಅಲುಗಾಡುವುದು ಸಹಜ' ಎಂದಿದ್ದರು ನಮ್ಮ ಅಂದಿನ A Prime Minister with vision ,ರಾಜೀವ ಗಾಂಧಿಯವರು. ಅವರ ಈ ಹುಂಕಾರ ಬಂದದ್ದು 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಸೇಡಿಗಾಗಿ ಕಾಂಗ್ರೆಸ್ ಕಾರ್ಯಕರ್ತರು, ದೆಹಲಿಯ ಬೀದಿ-ಬೀದಿಗಳಲ್ಲಿ ಸಿಖ್ಖರನ್ನು ಹುಡುಕಿ-ಹುಡುಕಿ ಕೊಲ್ಲುತ್ತಿದ್ದ ಬಗ್ಗೆ ಪ್ರತಿಕ್ರಿಯೆಯಾಗಿ. ಇಂದಿರಾ ಗಾಂಧಿಯವರನ್ನು ಕೊಂದದ್ದು ಒಬ್ಬ ಸಿಖ್ಖ್ ಎಂಬ ಒಂದೇ ಕಾರಣಕ್ಕಾಗಿ 3000 ಸಿಖ್ಖರನ್ನು ಬಲಿತೆಗೆದುಕೊಂಡ ಈ ನರಮೇಧವನ್ನು ಕಾರ್ಯರೂಪಕ್ಕೆ ತಂದದ್ದು ಅಂದಿನ ದೆಹಲಿಯ ಲೋಕಸಭಾ ಸದಸ್ಯರುಗಳಾಗಿದ್ದ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್, ಹಾಗೂ ಇತರರು ಎಂಬ ಗುಮಾನಿ 27 ವರ್ಷಗಳ ನಂತರವೂ ಹಾಗೆಯೇ ಇದೆ, ಮೊಕದ್ದಮೆ ನಡೆಯುತ್ತಿದೆ, ನಡೆಯುತ್ತಲೇ ಇದೆ, ........ಲೇ ಇರುತ್ತದೆ ಎನ್ನುವ ನಂಬಿಕೆಯೂ ಅಷ್ಟೇ ಬಲವಾಗುತ್ತಾ ಇದೆ. ಮೊನ್ನೆ 26ನೇ ತಾರೀಖು ಈ ಮೊಕದ್ದಮೆಯಲ್ಲಿ ಸಜ್ಜನ್ ಕುಮಾರ್ ಗೆ ನೀರೀಕ್ಷಣಾ ಜಾಮೀನು ಸಿಕ್ಕಿದೆ. ಅದ್ಯಾರು Anticipatory bail ಎಂಬ ಇಂಗ್ಲೀಷ್ ಪದಕ್ಕೆ ನೀರೀಕ್ಷಣಾ ಜಾಮೀನು ಎಂದು ಹೇಳಿದರೋ, ಇಂತಹ ಪ್ರಕರಣಗಳಲ್ಲಿ 'ನೀರೀಕ್ಷಣೆ'ಯಲ್ಲೇ ನ್ಯಾಯದ ಸಾವೂ ಆಗಿಹೋಗುತ್ತದೆ.
ಚಿದಂಬರಂ ಮೇಲೆ ಶೂ ಎಸೆಯುತ್ತಿರುವ ಪತ್ರಕರ್ತ
          ಕಳೆದ ವರ್ಷ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಗೆ ಲೋಕಸಭಾ ಟಿಕೆಟ್ ನೀಡದಂತೆ, ಕುಪಿತ ಸಿಖ್ಖ್ ಪತ್ರಕರ್ತನೊಬ್ಬ ಚಿದಂಬರಂ ಮೇಲೆ ಶೂ ಎಸೆದು, ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆದದ್ದಾಯಿತು. ಆದರೆ ಆಗಬೇಕಾದ ಶಿಕ್ಷೆಯ ಸುಳಿವೇ ಇಲ್ಲ. ಅಲ್ಪ ಸಂಖ್ಯಾತರಿಗೆ ದೇಶದ ಸಂಪನ್ಮೂಲಗಳನ್ನು ಬಳಸುವ ಮೊದಲ ಅಧಿಕಾರ ಇದೆ ಎಂದು ಹೇಳುವ 'ಅಲ್ಪ'ರದೂ ಈ ಬಗ್ಗೆ ಜಾಣ ಮೌನ. ತಮ್ಮದೇ ಸಮುದಾಯದವರಾಗಿದ್ದರೂ ಸಹ ಇಂತಹ ಕೊಲೆಗಡುಕರನ್ನು ರಕ್ಷಿಸುವ ಕಾರ್ಯ ಒಂದೆಡೆ ಆಗುತ್ತಿದ್ದರೆ, ಗುರುಗೋವಿಂದ ಸಿಂಹ, ಬಂದಾ ಬಹದ್ದೂರರ ನೈಜ ಸಂತಾನಗಳೂ ಇಂದು ಇವೆ. ಪಾಕಿಸ್ತಾನದಲ್ಲಿ ಇರುವ ಅಲ್ಪಸಂಖ್ಯಾತ ಸಿಖ್ಖ್ ಯುವಕರನ್ನು ಅಪಹರಣ ಮಾಡಿ, ನಿನ್ನ ಜುಟ್ಟನ್ನು ಕತ್ತರಿಸು, ಇಸ್ಲಾಂ ಸ್ವೀಕರಿಸು ಎಂದೆಲ್ಲಾ ಎಷ್ಟೇ ಹಿಂಸಿಸಿದರೂ ಸಹ ಒಪ್ಪಿಕೊಳ್ಳದೇ ಪ್ರಾಣವನ್ನು ಬಲಿಕೊಟ್ಟೂ ಸಹ ತಮ್ಮ Identity ಯನ್ನು ಉಳಿಸಿಕೊಂಡ ಜಸ್ಪಾಲ್ ಸಿಂಗ್, ಮಹಾಲ್ ಸಿಂಗ್ ಇಂದಿನ ಯುವಕರಿಗೆ ನಿಜವಾದ ಮಾದರಿಗಳು. ಕೃತ್ಯವನ್ನು ಖಂಡಿಸಿ ಜಮ್ಮುವಿನ ಪೂಂಛ್ ನಿಂದ ಹಿಡಿದು ಅಮೇರಿಕಾದಲ್ಲಿರುವ ಸಿಖ್ಖರವರೆಗೂ ಎಲ್ಲರೂ ಕ್ರೋಧಗೊಂಡಿದ್ದರೂ ಸಹಿತ, ಈ ಬಗ್ಗೆ ನಮ್ಮ ಸರ್ಕಾರದ ಪ್ರತಿಕ್ರಿಯೆ ಏನು? Pakistan must ensure safety of Minorities ಎಂಬ ವಿದೇಶಾಂಗ ಸಚಿವ ಕೃಷ್ಣಾ ಅವರ ಸೀದಾ ಅನಿಸಿಕೆ, Hope Pakistan will take proper action ಎನ್ನುವ ರಕ್ಷಣಾ ಸಚಿವ ಆಂಟನಿ ಅವರ ಸಾದಾ ಹೇಳಿಕೆ. ಇದನ್ನೆಲ್ಲಾ ಪ್ರತಿಕಿಯೆ ಇನ್ನಲೂ ಆಗುವುದಿಲ್ಲ. ಇದು ಪುಕ್ಕಲುತನದ ಪರಮಾವಧಿ ಅಷ್ಟೆ. ಇಂತಹ ಭಾಷೆ ಪಾಕಿಸ್ತಾನಕ್ಕೆ ಅರ್ಥ ಅಗೋದಿಲ್ಲ ಎಂದು ಈ  'ಹಿರಿಯ’ರಿಗೆ ಗೊತ್ತಿಲ್ಲವೇ? 

ಸಜ್ಜನ್‌ ಕುಮಾರ್ ಮತ್ತು ಜಗದೀಶ್  ಟೈಟ್ಲರ್
          ಕರ್ನಾಟಕದಲ್ಲಿ ಚರ್ಚ್ ಮೇಲೆ ಧಾಳಿಯಾದರೆ ಅದು ಜಾರ್ಜ್ ಬುಷ್ ವರೆಗೆ ತಲುಪುತ್ತದೆ. ಕಸಬ್ಗೆ ತೊಂದರೆ ಆದರೆ ಪಾಕಿಸ್ತಾನಕ್ಕೆ ಕೇಳಿಸುತ್ತದೆ. ಆದರೆ ಸಿಖ್ಖರು ಎಲ್ಲಿ ಹೋಗಬೇಕು? 2002ರಲ್ಲಿ ನಡೆದ ಗೋಧ್ರಾ ನಂತರದ ಘಟನೆಗಳನ್ನು ಮಾತ್ರ ಎಳೆ ಏಳೆಯಾಗಿ ಬಿಡಿಸಲು ಹೋಗುವ ನಮ್ಮ ಜನ್ಮ’ದತ್ತ’ ಪತ್ರಕಾರರಿಗೆ, ಕಾಶ್ಮೀರಕ್ಕೆ ’ಸ್ವಾತಂತ್ರ್ಯ’ಕೊಡಬೇಕೆನ್ನುವ ’ರಾಯ’ರಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಇದೆಲ್ಲಾ ಒಂದು ಸಾಮಾನ್ಯ ವರದಿಯಾಗಿದೆ, ಸಿಖ್ಖರ ಹತ್ಯೆ ಬಗ್ಗೆ ಮಾತನಾಡುವುದು ಒಂದು ಕೋಮುವಾದಿ ಅಜೆಂಡಾ ಆಗಿಬಿಟ್ಟಿದೆ. 
          ಇಷ್ಟರ ಮಧ್ಯೆಯೂ  ಪಾಕಿಸ್ತಾನದೊಂದಿಗೆ ’ಶಾಂತಿ !’ಮಾತುಕತೆಗೆ ನಮ್ಮ ವಿದೇಶಾಂಗ ಸಚಿವರು ದುಂಬಾಲು ಬಿದ್ದು ಓಡಾಡುತ್ತಿದ್ದಾರೆ. 26/11 ರ ಮುಂಬೈ ಆಕ್ರಮಣಕ್ಕೆ ನ್ಯಾಯ ಸಿಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದುಕೊಂಡಿದ್ದವರಿಗೆ ನಿರಾಶೆ ಆಗಿದೆ. 
          ಆದರೆ, ಇಲ್ಲಿ ನಿಜವಾಗಿ ಕಾಡುವುದು ರಾಜಕೀಯ ಹಾಗೂ ಹಣದ ಆಮಿಷಕ್ಕೊಳಗಾಗಿ ಸಿಂಹಗಳಂತಿದ್ದ ಸಿಖ್ಖ್ ಸಮುದಾಯವೂ ನೀವೀರ್ಯವಾಯಿತೆ? ತಮ್ಮದೇ ಸಮುದಾಯದ ಪ್ರಧಾನಮಂತ್ರಿಯ ಸ್ಥಾನಕ್ಕೆ ಕುತ್ತು ತರಬಾರದೆಂದು ಅದು ಒಟ್ಟಾರೆ ಸರ್ಕಾರದ ಮೇಲೆ ಸುಮ್ಮನೆ ’ಗಾಳಿಯಲ್ಲಿ ಗುಂಡು’ ಹಾರಿಸುತ್ತಿದೆಯೇ? ಎಂಬ ಪ್ರಶ್ನೆ. ಹಾಗಂತ ಇವರೂ ಜಿಹಾದ್ ಮಾಡಬೇಕೆಂದಲ್ಲ. ಎಲ್ಲ ರಾಜಕೀಯವನ್ನೂ ಮರೆತು, ಪಕ್ಷ ರಹಿತವಾಗಿ ಸರ್ಕಾರದ ಮೇಲೆ ಒತ್ತಡ ತಂದರೆ ಪಾಕಿಸ್ತಾನದಲ್ಲಿರುವ, ಸಿಖ್ಖರನ್ನೊಳಗೊಂಡಂತೆ ಎಲ್ಲಾ ಹಿಂದೂಗಳಿಗೂ ರಕ್ಷಣೆ ಸಿಗಬಹುದು.

ಕಾಮೆಂಟ್‌ಗಳಿಲ್ಲ: