ಕೆಲವರು ಎಲ್ಲ ಮಸೀದಿಗಳ ಕೆಳಗೂ ದೇವಸ್ಥಾನವೊಂದನ್ನು ಹುಡುಕಲು ಮುಂದಾಗುವ ಮೂಲಕ ಹಿಂದೂ ಮುಖಂಡರಾಗಲು ಯತ್ನಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಡಿ.19ರಂದು ಪುಣೆಯಲ್ಲಿ ಮಾತನಾಡುತ್ತಾ ಹೇಳಿರುವುದು ಈಗ ಚರ್ಚೆಯ ವಿಷಯ.
ಮುಖ್ಯವಾಗಿ
ಈ ಮಾತಿಗೆ ವಿರೋಧ ಬರುತ್ತಿರುವುದು ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಹುಪಾಲು ಒಪ್ಪುವ, ಅದನ್ನು ಗೌವರಿಸುತ್ತಾ
ಬಂದಿರುವ ಸ್ವತಂತ್ರ ಚಿಂತಕರುಗಳು. ʼನಿಮ್ಮದು ಒಂದು ಸಂಘಟನೆ ಮಾತ್ರ. ನೀವೇನು ಇಡೀ ಹಿಂದೂ ಸಮಾಜದ
ವಕ್ತಾರರಲ್ಲʼ ಎಂದು ಕೆಲವರು ಹೇಳಿದರೆ ʼಮೋಹನ್ ಭಾಗವತ್ ಅವರಿಗೆ ವಯಸ್ಸಾಗಿದೆ, ಮೊದಲು ʼರಾಜೀನಾಮೆ ಕೊಡಿʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼಮೋಹನ್ ಭಾಗವತ್
ಅವರು ಮೋಹನ್‌ದಾಸ್ (ಕರಮ್‌ಚಂದದದ ಗಾಂಧಿ ಗಾಂಧಿ) ರೀತಿಯಲ್ಲಿ ಮಾತನಾಡುತ್ತಿದ್ದಾರೆʼ ಎಂದೂ ಆಕ್ಷೇಪಿಸಿದ್ದಾರೆ.
ಅಷ್ಟಕ್ಕೂ
ಯಾವುದೇ ಸಂದರ್ಭದಲ್ಲೂ ಇಡೀ ಹಿಂದೂ ಸಮಾಜ ತನ್ನ ಅಣತಿಯಂತೇ ನಡೆಯಬೇಕು ಎಂದು ಆರ್‌ಎಸ್‌ಎಸ್ ಎಂದಿಗೂ
ಹೇಳಿದಂತೆ ನನ್ನ ಸೀಮಿತ ತಿಳುವಳಿಕೆಯಲ್ಲಿ ಇಲ್ಲ. ಹಿಂದೂ ಸಮಾಜವೇ ಆರ್‌ಎಸ್‌ಎಸ್ ಅನ್ನು ತನ್ನ ರಕ್ಷಣೆ,
ದೇಶದ ಅಭಿವೃದ್ಧಿಗೆ ಒಂದು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡಿದೆ. ಹೀಗೆ ಆರ್‌ಎಸ್‌ಎಸ್ ಅನ್ನು ಹಿಂದೂ
ಮುಖಂಡರು ಟೀಕಿಸುವುದು ಹೊಸದೇನೂ ಅಲ್ಲವಲ್ಲ? ಇಸ್ಲಾಮಿಕ್ ಆಕ್ರಮಣಗಳ ಕುರಿತು ಆಳವಾದ ಅಧ್ಯಯನ ನಡೆಸಿ
ಸರಣಿ ಪುಸ್ತಕಗಳನ್ನು ರಚಿಸಿದ ಸೀತಾರಾಂ ಗೋಯೆಲ್ ಅವರು ಅನೇಕ ಬಾರಿ ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದಾರೆ.
“The
RSS is the biggest collection of duffers that ever came together in world
history” (1989) ಎನ್ನುವಂತೆ ಅನೇಕ ಬಾರಿ ತೆಗಳಿದ್ದಾರೆ. ವಾಯ್ಸ್ ಆಫ್ ಇಂಡಿಯಾ ಎಂಬ ಪುಸ್ತಕ ಸರಣಿಗಳ
ಮೂಲಕ ಹಿಂದೂಗಳನ್ನು ಜಾಗೃತಗೊಳಿಸಿದ್ದ ಸೀತಾರಾಮ್ ಗೋಯೆಲ್, ರಾಮಸ್ವರೂಪ್ ಅವರನ್ನು ಆರ್‌ಎಸ್‌ಎಸ್
ಎಂದಿಗೂ ತಿರಸ್ಕರಿಸಿಲ್ಲ. ಅಸಲಿಗೆ ಇಂದಿಗೂ ವಾಯ್ಸ್ ಆಫ್ ಇಂಡಿಯಾ ಸರಣಿಯನ್ನು ಮುಂದಿನ ಪೀಳಿಗೆಗೆ
ತಲುಪಿಸುತ್ತಿರುವುದು, ಅದನ್ನು ಅನುವಾದಿಸಿ ಬೇರೆ ಬೇರೆ ಭಾಷೆಯ ಜನರಿಗೆ ನೀಡುತ್ತಿರುವುದು ಆರ್‌ಎಸ್‌ಎಸ್‌ಗೆ
ಜತೆಗಿರುವ ಸಂಘಟನೆ/ಸಂಸ್ಥೆಗಳೆ..
ಅಂದು ಸೀತಾರಾಮ್ ಗೋಯಲ್ ಮುಂತಾದವರಾದರೆ ಇಂದು ಆನಂದ ರಂಗನಾಥನ್, ಸಾಯಿ ದೀಪಕ್,
ಜಿ.ಬಿ. ಹರೀಶ್ ಮುಂತಾದ ಚಿಂತಕರು ಆರ್‌ಎಸ್‌ಎಸ್ ಸರಸಂಘಚಾಲಕರನ್ನು ಟೀಕಿಸುತ್ತಿದ್ದಾರೆ. ಈ ಟೀಕೆಯೂ
ಮೊದಲನೆಯದಲ್ಲ. ʼಎಲ್ಲ ಮಸೀದಿಗಳ ಕೆಳಗೆ ಶಿವಲಿಂಗವನ್ನು ಏಕೆ ಹುಡುಕಬೇಕು?ʼ ಎಂದು ಈ 2021ರ ಜೂನ್‌ನಲ್ಲಿ
ಮೋಹನ್ ಭಾಗವತ್ ಅವರು ಹೇಳಿದಾಗಲೂ ಈ ರೀತಿ ಅನೇಕರು ಟೀಕಿಸಿದ್ದರು. ಇದು ʼಹಿಂದುತ್ವʼ ಗುಂಪುಗಳಲ್ಲಿ,
ವ್ಯಕ್ತಿಗಳಲ್ಲಿ, ಸಂಘಟನೆಗಳಲ್ಲಿ ಇರುವ ಮುಕ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುತ್ತದೆ.
ಏಕೆಂದರೆ ನನಗೆ ತಿಳಿದ ಮಟ್ಟಿಗೆ ಈಗಲೂ ಟೀಕೆ ಮಾಡುತ್ತಿರುವ
ಚಿಂತಕರನ್ನು ಆರ್‌ಎಸ್‌ಎಸ್ ನೇರವಾಗಿಯಾಗಲಿ, ಅದರ ವಲಯವಾಗಲಿ ʼಬ್ಲಾಕ್ʼ ಮಾಡುವ ʼತಿರಸ್ಕರಿಸುವʼ
ಕೆಲಸ ಮಾಡಿಲ್ಲ.
ಮೋಹನ್ ಭಾಗವತ್ ಅವರು ಕಳೆದ ನಾಲ್ಕೈದು ವಷಗಳಿಂದ ಆಡುತ್ತಿರುವ ಮಾತಿನಲ್ಲಿ ಒಂದು ಸಮಾನ ಅಂಶವಿರುವುದನ್ನು ಯಾರಾದರೂ ಗಮನಿಸಬಹುದು. ಅದು ಸಾಮಾಜಿಕ ಸದ್ಭಾವನೆ. 2021ರಲ್ಲಿ ಮೋಹನ್ ಭಾಗವತ್ ಅವರು ಮಾಡಿದ್ದ ಒಂದು ಭಾಷಣವನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯವಾಗಬಹುದು. ಮುಸ್ಲಿಂ ರಾಷ್ಟ್ರೀಯ ಮಂಚ್ ವತಿಯಿಂದ 2021ರ ಜುಲೈಯಲ್ಲಿ ಆಯೋಜಿಸಿದ್ದ ಡಾ. ಖ್ವಾಜಾ ಇಫ್ತಿಕಾರ್ ಅಹಮದ್ ಅವರ 'The Meeting of Minds': A bridging initiativeʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರು ಎಂದು ಹೇಳುವವರು ಹೆದರುವ ಅಗತ್ಯವಿಲ್ಲ, ಈ ದೇಶದ ಎಲ್ಲರ ಡಿಎನ್‌ಎ ಒಂದೇ ಎಂದು ಅಲ್ಲಿ ಪುನರುಚ್ಚರಿಸಿದ್ದರು. ಜತೆಗೆ, ಇಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದೇ ಹಿಂದೂಗಳ ಕಾರಣಕ್ಕೆ ಎಂದಿದ್ದರು. “ಯಾವುದೇ ಕಡೆಯಿಂದ ಅತಿಯಾದದ್ದು ನಡೆದರೆ ಅದನ್ನು ಇಲ್ಲಿನ ಬಹುಸಂಖ್ಯಾತರೇ ವಿರೋಧ ಮಾಡುತ್ತಾರೆ. ನಾನು ಉಗ್ರ ಭಾಷಣ ಮಾಡಿ ಕೆಲವು ಹಿಂದೂಗಳ ನಡುವೆ ಪ್ರಸಿದ್ಧ ಆಗಬಹುದು. ಆದರೆ ಇಡೀ ಹಿಂದೂ ಸಮಾಜ ನನ್ನನ್ನು ವಿರೋಧಿಸುತ್ತದೆ. ಹಿಂದೂ ಸಮಾಜ ಯಾವುದೇ ತೀವ್ರವಾದಕ್ಕೆ (ಅತಿ) ಬೆಲೆ ನೀಡುವುದಿಲ್ಲ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಕೋವಿಡ್ 19ರ ಸಂದರ್ಭದಲ್ಲಿ ಆನ್‌ಲೈನ್ ಭಾಷಣ ಸರಣಿಯಲ್ಲಿ ಮಾತನಾಡಿದ್ದ ಭಾಗವತ್ ಅವರು, “ಕೆಲವರು ಏನೋ ಮಾಡಿದರೆಂಬ ಕಾರಣಕ್ಕೆ ಇಡೀ ಸಮೂಹವನ್ನು ದೂಷಿಸಬಾರದು. ಭಾರತದ 130 ಕೋಟಿ ಜನರೂ ಭಾರತ ಮಾತೆಯ ಮಕ್ಕಳು, ಎಲ್ಲರೂ ಬಂಧುಗಳು ಎಂದು ತಿಳಿಯಬೇಕು.” ಎಂದಿದ್ದರು. ಇದು ಮುಸ್ಲಿಮರು ಕೋವಿಡ್ ನಿಯಮ ಮೀರುತ್ತಿರುವುದರಿಂದಲೇ ಕೋವಿಡ್ ಹರಡುತ್ತಿದೆ ಎಂಬ ನರೇಟಿವ್ ಕುರಿತು ಹೇಳಿದ ಮಾತು. ʼಯಾವುದೇ ಅತಿಗಳಿಗೆ ಬಲಿಯಾಗದೆ ಮಧ್ಯಮ ಮಾರ್ಗದಲ್ಲಿ ನಡೆಯಬೇಕಿದೆʼ ಎಂದೂ ಮೋಹನ್ ಭಾಗವತ್ ಅವರು ಭಾಷಣಗಳಲ್ಲಿ ಹೇಳಿದ್ದಾರೆ.
ಇದೀಗ ಮೋಹನ್ ಭಾಗವತ್ ಆಡಿರುವುದೂ ʼಎಲ್ಲ ಮಸೀದಿಗಳಲ್ಲಿ ಶಿವಲಿಂಗ ಏಕೆ ಹುಡುಕಬೇಕು?ʼ
ಎಂಬ ಹೇಳಿಕೆಯ ಮುಂದುವರಿಕೆಯ ಭಾಗವೆ. “ಯಾವುದೇ ಅತಿವಾದವು ಇಲ್ಲಿನ ಸಮಾಜದ ಲಕ್ಷಣವಲ್ಲ., ಅದನ್ನು
ಒಪ್ಪಲಾಗದು. ಭಾರತ ವಿಶ್ವಗುರು ಆಗಬೇಕಾದರೆ ತನ್ನ ಮೂಲ ಸ್ವಭಾವವನ್ನು ಬಿಡಬಾರದು” ಎಂದಿದ್ದಾರೆ. ಯಾರು
ಮೋಹನ್ ಭಾಗವತ್ ಅವರ ಮಾತುಗಳನ್ನು ವಿರೋಧಿಸುತ್ತಿದ್ದಾರೋ ಅವರು ಒಂದು ಪ್ರಮುಖ ವಿಚಾರ ಮರೆಯುತ್ತಿದ್ದಾರೆ.
ಅದೆಂದರೆ 1991ರಲ್ಲಿ ಜಾರಿಗೆ ಬಂದ ಪೂಜಾ ಸ್ಥಳಗಳ ಕಾಯ್ದೆ (ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್).
ಇದರ ಪ್ರಕಾರ, ಅಯೋಧ್ಯೆ ರಾಮಜನ್ಮಭೂಮಿ ವಿಚಾರವೊಂದನ್ನು ಬಿಟ್ಟು 1947ರ ಆಗಸ್ಟ್ 15ಕ್ಕೆ ಮುಂಚೆ
ಇದ್ದ ಎಲ್ಲ ನಂಬಿಕೆಗಳ ಪೂಜಾ ಕೇಂದ್ರಗಳೂ ಅಂದಿನ ಸ್ಥಿತಿಗೇ ಫ್ರೀಜ್ ಆಗುತ್ತವೆ. ಅವುಗಳ ಸ್ವರೂಪದಲ್ಲಿ
ಬದಲಾವಣೆ ಸಾಧ್ಯವಿಲ್ಲ. ಯಾವುದೇ ಇಂತಹ ಅರ್ಜಿಗಳನ್ನು ನ್ಯಾಯಾಲಯವೂ ವಿಚಾರಣೆ ಮಾಡುವಂತಿಲ್ಲ ಎಂದು
ಕಾಯ್ದೆ ಹೇಳುತ್ತದೆ. ಒಂದೆಡೆ ಕಾಯ್ದೆಯನ್ನು ಇಟ್ಟುಕೊಂಡು ಇನ್ನೊಂದೆಡೆ ಮಸೀದಿಗಳನ್ನು ಉತ್ಖನನ ಮಾಡಿ
ಎಂದು ಹೇಳುವುದು ಹೇಗೆ ಸರಿಯಾಗುತ್ತದೆ ಎನ್ನುವುದೂ ಪ್ರಶ್ನೆ. ಈಗಾಗಲೆ ಈ ಕಾಯ್ದೆಯನ್ನು ರದ್ದುಪಡಿಸುವಂತೆ
2020ರಿಂದಲೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆ ಕಾಯ್ದೆಯನ್ನು ರದ್ದುಪಡಿಸಲು ಸುಪ್ರೀಂಕೋರ್ಟ್
ಆದೇಶಿಸಬೇಕು ಅಥವಾ ಸ್ವತಃ ಕೇಂದ್ರ ಸರ್ಕಾರವೇ ಈ ಕಾಯ್ದೆಯನ್ನು ರದ್ದುಪಡಿಸಬೇಕು. ಈ ದೇಶವು ನೀತಿಗಳಿಂದ
ನಡೆಯಬೇಕೆ ವಿನಃ ನ್ಯಾಯಾಲಯಗಳಿಂದ ಅಲ್ಲ ಎನ್ನುವುದನ್ನೂ ಅನೇಕರು ಮರೆತಂತೆ ಕಾಣುತ್ತದೆ.
ಇದು ಬಲಪಂಥೀಯ ಎಂದು ಕರೆಯಲಾಗುವಕಡೆಯ ವಿಚಾರ. ಎಡಪಂಥೀಯ ಹಾಗೂ ʼಪ್ರಗತಿಪರರುʼ ಎಂದು ಹೇಳಿಕೊಳ್ಳುವವರಂತೂ ಕಳೆದ ನಾಲ್ಕೈದು ವರ್ಷಗಳಿಂದ
ಬೆತ್ತಲಾಗಿದ್ದಾರೆ. ಆರ್‌ಎಸ್‌ಎಸ್ ಎಂದಕೂಡಲೆ ಮುಸ್ಲಿಂ ವಿರೋಧಿ, ಸಂವಿಧಾನ ವಿರೋಧಿ, ಕೋಮುವಾದಿ
ಎಂದು ದಿನಬೆಳಗಾದರೆ ಅರಚಿಕೊಳ್ಳುತ್ತಿದ್ದವರು ಮೇಲೆ ಉಲ್ಲೇಖಿಸಿದ ಮೋಹನ್ ಭಾಗವತ್ ಅವರ ಮಾತುಗಳಿಗೆ
ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. ಹಿಂದೂ ಮುಸ್ಲಿಂ ಒಂದೇ ಡಿಎನ್‌ಎ, ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು
ಸೇರಿ ಯಾವದೇ ಹೇಳಿಕೆಯನ್ನೂ ಈ ʼಪ್ರಗತಿಪರರುʼ ಸ್ವಾಗತಿಸಿಲ್ಲ. ದೇಶದಲ್ಲಿ ಸಾಮಾಜಿಕ ಸಾಮರಸ್ಯ ಮೂಡಬೇಕು,
ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಬೇಕು ಎಂಬ ಧೋರಣೆ ಇವರಲ್ಲಿ ಕಾಣುತ್ತಿದೆ. ಆರ್‌ಎಸ್‌ಎಸ್, ಬಿಜೆಪಿ
ಸದಾ ಮುಸ್ಲಿಮರ ವಿರುದ್ಧ ಮಾತನಾಡುತ್ತಿರಬೇಕು, ಆಗಮಾತ್ರ ತಮ್ಮ ಬೇಳೆ ಬೇಯುತ್ತದೆ ಎಂಬ ಮಾನಸಿಕೆಯನ್ನು
ಹೊಂದಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ಮಾಡಿದ ಕಾನೂನುಬಾಹಿರ ಕ್ರಮಗಳನ್ನೂ ಈ ವರೆಗೆ ಖಂಡಿಸುತ್ತಿಲ್ಲ.
ಉದಾಹರಣೆಗೆ, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ
ನಿಧಿಯಿಂದ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಇದು ಎಸ್‌ಸಿಎಸ್‌ಟಿ
ಸಮುದಾಯಕ್ಕೆ ನೇರವಾಗಿ ಸಲ್ಲಬೇಕಿದ್ದ ಹಣ. ಆದರೆ ಜನರಲ್ ಆಗಿ ಎಲ್ಲರಿಗೂ ಬಳಕೆ ಆಗುವ ಯೋಜನೆಗಳಲ್ಲಿ,
ನಿರ್ದಿಷ್ಟ ಫಲಾನುಭವಿಗಳನ್ನು ಗುರುತಿಸದೇ ಇರುವ ಯೋಜನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕರ್ನಾಟಕದ
ಪ್ರಗತಿಪರ ಸಮುದಾಯವಾಗಲಿ, ತಾವು ದಲಿತ ಪರ ಎಂದು ಹೇಳಿಕೊಳ್ಳುವವರಾಗಲಿ ಈ ಕುರಿತು ಸರ್ಕಾರವನ್ನು ಟೀಕಿಸಲೇ
ಹೋಗುತ್ತಿಲ್ಲ. ಅಲ್ಲಿಗೆ, ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ತಾವು ಮಾರಿಕೊಂಡಿರುವುದು ಕಾಣುತ್ತದೆ.
ಇದರ ಬದಲಿಗೆ ಮನೀಶ್ ತಿವಾರಿಯವರಂತಹ ಕಾಂಗ್ರೆಸ್ ನಾಯಕರು, ʼಈ ಮಾತನ್ನು ಮೋಹನ್ ಭಾಗವತ್ ಅವರು
ತಮ್ಮ ಬೆಂಬಲಿಗರಿಗೆ ಹೇಳಲಿʼ ಎನ್ುವಂತಹ ಉಡಾಫೆ ಮಾತನ್ನು ಆಡಿದ್ದಾರೆ.
ಯಾವುದೇ ವ್ಯವಸ್ಥೆಯಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿರುವ ಆಂತರಿಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕಾಗುತ್ತದೆ. ಮೋಹನ್ ಭಾಗವತ್ ಅವರ ಮಾತುಗಳನ್ನು ಟೀಕಿಸುವ, ಹಾಗೂ ಟೀಕಿಸಿದವರನ್ನೂ ಒಟ್ಟಿಗೆ ಕರೆದೊಯ್ಯುವ ಸಂಪ್ರದಾಯ ರಾಷ್ಟ್ರೀಯ ವಿಚಾರಧಾರೆಯಲ್ಲಿ ಕಂಡುಬರುತ್ತಿದೆ. ಆದರೆ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರೂ ಕಾಂಗ್ರೆಸ್ ಪಕ್ಷವನ್ನು ಟೀಕಿಸಲೂ ಆಗದಂತಹ ಸ್ಥಿತಿಗೆ ಎಡಪಂಥ ಅಥವಾ ʼಪ್ರಗತಿಪರʼ ವಲಯ ತಲುಪಿದೆ. ಅಲ್ಲಿ ಸ್ವತಂತ್ರ ಚಿಂತನೆ ಎನ್ನುವುದೇ ಮಾಯವಾದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ ನೋಡಿದಾಗ ಚಿಂತಕ ವಲಯ (ಬುದ್ಧಿಜೀವಿಗಳು) ಬೆತ್ತಲಾಗಿದೆʼ ಎಂದು ಹೇಳಬಹುದು.
ಲೇಖಕ: ರಮೇಶ ದೊಡ್ಡಪುರ, ಪತ್ರಕರ್ತ. (ಲೇಖನದಲ್ಲಿನ ಅನಿಸಿಕೆಗಳು ವೈಯಕ್ತಿಕ)