ಲೇಬಲ್ಗಳು
ಗುರುವಾರ, ಜುಲೈ 08, 2021
ಭಾನುವಾರ, ಜುಲೈ 04, 2021
ಗುರುವಾರ, ಜುಲೈ 01, 2021
ಚೀನಾ ಕಮ್ಯುನಿಸ್ಟ್ ಸರ್ಕಾರದ ಸಾಫ್ಟ್ ಪವರ್ ಭಾರತದಲ್ಲೂ ಇದೆ: ತನಿಖಾ ವರದಿ
ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಸರ್ಕಾರಕ್ಕೆ ಇಂದಿಗೆ ನೂರು ವರ್ಷವಾಗಿದೆ. ರಾಷ್ಟ್ರೀಯವಾದಿ ರಿಪಬ್ಲಿಕ್ ಆಫ್ ಚೀನಾ ಸರ್ಕಾರದ ಜತೆಗೆ ನಾಗರಿಕ ಸಂಘರ್ಷದ ನಂತರ 1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಹೆಸರಿನಲ್ಲಿ ಸರ್ಕಾರ ಸ್ಥಾಪನೆ ಮಾಡಲಾಯಿತು. ತನ್ನ ಸರ್ಕಾರದ ಕುರಿತು ಸದಭಿಪ್ರಾಯ, ಸಾಫ್ಟ್‌ಕಾರ್ನರ್ ಹಾಗೂ ರಾಜತಾಂತ್ರಿಕ ಮೇಲುಗೈ ಸಾಧನೆಗೆ ವಿಶ್ವದ ಅನೇಕ ದೇಶಗಳಲ್ಲಿ ಸಮಾನಾಂತರ ಮಾರ್ಗವನ್ನು ಪಿಆರ್‌ಸಿ ಕಂಡುಕೊಂಡಿದೆ. ಅಂತಹ "ಫ್ರೆಂಡ್‌ಷಿಪ್ ಅಸೋಸಿಯೇಷನ್"ಗಳ ಕುರಿತು ಈ ತನಿಖಾ ವರದಿ.
ಚೀನಾ ಸ್ನೇಹ ಜಾಲ
"ಈಚೆಗೆ 1962 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ‘ದಾಗಲೂ ಪೀಕಿಂಗ್‌ವಾದಿ ಕಮ್ಯುನಿಸ್ಟರು ಅದನ್ನು ಆಕ್ರಮಣ ಎಂದು ಕರೆಯಲು ಸಿದ್ಧರಾಗಲಿಲ್ಲ. ಬದಲಾಗಿ, ಭಾರತವೇ ಚೀನದ ಭೂಭಾಗಗಳನ್ನು ಆಕ್ರಮಿಸಿದೆ ಎಂದು ಆಪಾದಿಸಿದರು. ಸರಕಾರವು ಭದ್ರತಾ ಕ್ರಮವಾಗಿ ಕೆಲವು ಪ್ರಮುಖ ಪೀಕಿಂಗ್‌ವಾದಿ ಪಿತೂರಿಗಾರ ಕಮ್ಯುನಿಸ್ಟರನ್ನು ಬಂಧಿಸಿದೊಡನೆ ಇಡೀ ಕಮ್ಯುನಿಸ್ಟ್ ಲೋಕವೆಲ್ಲ - ಎಡ, ಬಲ, ಮಧ್ಯ ಎಲ್ಲ’ಒಂದೇ ಸಮನೆ ಬೊಬ್ಬೆ ಇಟ್ಟವು. ರಷ್ಯದ ʼಪ್ರಾವ್ಡಾ’ ಭಾರತ ಸರ್ಕಾರದ ಕ್ರಮವನ್ನು ಉಗ್ರವಾಗಿ ಟೀಕಿಸಿತು. ಭಾರತ ಸರ್ಕಾರವೂ ಅದಕ್ಕೆ ಮಣಿದು -ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಿತು..."
"ಇದುವರೆಗಿನ ಮಿಕ್ಕೆಲ್ಲ ಆಕ್ರಮಣಕಾರಿಗಳಿಗಿಂತ ರಷ್ಯ-ಚೀನ ಆಕ್ರಮಣದ ಈ ಸ್ವರೂಪವು ಸಾವಿರ ಪಾಲು ಘಾತಕರವಾಗಿದೆ. ಏಕೆಂದರೆ ಈ ಆಕ್ರಮಣವನ್ನು ಆಕ್ರಮಣವೆಂದೇ ಭಾವಿಸದೆ ಅದನ್ನು ತಾತ್ವಿಕವಾಗಿ ಸ್ವಾಗತಿಸುವ ಗುಂಪು ಒಂದೊಂದು ದೇಶದಲ್ಲಿ ತಯಾರಾಗುತ್ತದೆ. ಇದು ವರೆಗಿನ ಅನ್ಯಾನ್ಯ ಆಕ್ರಮಕರು ಪರದೇಶದವರಾಗಿದ್ದು, ಅವರೇ ನೇರವಾಗಿ ಬಂದು ತಮ್ಮ ರಾಜ್ಯ ಚಲಾಯಿಸುತ್ತಿದ್ದುದರಿಂದ ಅವರನ್ನು ಶತ್ರುಗಳೆಂದು ಗುರುತಿಸಲು ಅಲ್ಲಿನ ಜನಕ್ಕೆ ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟರಾದರೋ ಆಯಾ ದೇಶದವರೇ ಆಗಿರುವ ಕಾರಣ, ಅವರ ನಿಜವಾದ ಬಣ್ಣ ಗೊತ್ತಾಗುವುದು ಸಾಮಾನ್ಯ ಜನಕ್ಕೆ ಕಷ್ಟವಾಗುತ್ತದೆ..."
ಇವು ಕರ್ನಾಟಕದ ಪ್ರಮುಖ ಚಿಂತಕರಲ್ಲೊಬ್ಬರಾದ ಹೊ.ವೆ. ಶೇಷಾದ್ರಿ ಅವರು ತಮ್ಮ ಕ್ರಾಂತಿಯಲ್ಲ, ಭ್ರಾಂತಿ(1970) ಕೃತಿಯಲ್ಲಿ ಕಮ್ಯುನಿಸ್ಟ್ ಕುರಿತು ಹೇಳುವ ಮಾತುಗಳು.
ಇನ್ನೊಂದೆಡೆ ಚಿಂತಕ ದೀನದಯಾಳ್ ಉಪಾಧ್ಯಾಯ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಹೀಗೆ ಬರೆಯುತ್ತಾರೆ. "ದೇಶದಲ್ಲಿ ಕಮ್ಯುನಿಸ್ಟ್ ಶಕ್ತಿಗೆ ನೆರವಾಗುತ್ತಿರುವ ಅತ್ಯಂತ ಹೆಚ್ಚಿನ ಒಂದೇ ಒಂದು ಸಹಕಾರೀ ಅಂಶವೆಂದರೆ ಪ್ರಧಾನ ಮಂತ್ರಿಯವರು ಅದರ ಬಗೆಗೆ ತಳೆದಿರುವ ಮೃದುಧೋರಣೆ, ಕಮ್ಯುನಿಸಮ್ ಸರಿಯಾದದ್ದೇ ಆಗಿದೆ. ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಕೆಟ್ಟವರೆಂಬ ಅವರ ಸಿದ್ಧಾಂತವು ದೇಶದಲ್ಲಿ ಕಮ್ಯುನಿಸಮ್ ಅನ್ನು ಗೌರವಾರ್ಹವನ್ನಾಗಿ ಮಾಡಿದೆ. ಅವರು ಮತ್ತು ಕಾಂಗ್ರೆಸ್ಸಿನ ಇತರ ಅವರ ಸಹ ಪ್ರಯಾಣಿಕರು ಸಿಪಿಐನ ನಿಜವಾದ ಶಕ್ತಿಯಾಗಿದ್ದಾರೆ. (ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರೆಹಗಳು- ಸಂಪುಟ 8- ಪುಟ76)".
ಭಾರತದ ರಾಜಕಾರಣ ಹಾಗೂ ಯುದ್ಧದ ಮೇಲೆ ಚೀನಾ ಪ್ರಭಾವದ ಕುರಿತು ರಾಷ್ಟ್ರೀಯ ಮಟ್ಟದ ಅನೇಕ ಚಿಂತಕರು ಈ ಮೇಲಿನಂತೆ ಗಮನ ಸೆಳೆದಿದ್ದಾರೆ. ಚೀನಾ ಎಂದೊಡನೆ ಪ್ರಮುಖವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಮೇಲೆ ಸಹಜವಾಗಿ ದೃಷ್ಟಿ ಹರಿಯುತ್ತದೆ. ಎರಡನೆಯದು, 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ಸಾರಿದಾಗ ನಮ್ಮ ನಾಯಕರು(ಪ್ರಧಾನಿ ನೆಹರೂ) ಸರಿಯಾಗಿ ನಿಭಾಯಿಸದೆ ತಲೆತಗ್ಗಿಸುವಂತಹ ಸೋಲನುಭವಿಸಬೇಕಾಯಿತು ಎಂಬುದು. ಮೂರನೆಯದು, ನಮ್ಮ ದೇಶದಲ್ಲಿರುವ ಕಮ್ಯುನಿಸ್ಟರು ಭಾರತದ ಸಂವಿಧಾನಕ್ಕೆ ಬದ್ಧವಾಗಿರದೆ ಚೀನಾ ಪರ ವಾಲುತ್ತಾರೆ ಎನ್ನುವುದು. ನಾಲ್ಕನೆಯದು, ಇತ್ತೀಚಿನ ದಶಕಗಳಲ್ಲಿ ಚೀನಾ ತನ್ನ ಅಗ್ಗದ ಸರಕನ್ನು ಭಾರತದಲ್ಲಿ ಡಂಪಿಂಗ್ ಮಾಡುತ್ತ ದೇಶಿ ಮಾರುಕಟ್ಟೆಯನ್ನು ಕಸಿದುಕೊಳ್ಳುತ್ತಿದೆ ಎಂಬುದು. ರಾಷ್ಟ್ರೀಯ ವಿಚಾರಧಾರೆಯ ಸಾಕಷ್ಟು ಚರ್ಚೆಗಳಲ್ಲಿ ಈ ವಿಚಾರಗಳು ವಿಸ್ತೃತವಾಗಿ ಬಹಿರಂಗಗೊಂಡಿವೆ. ಆದರೆ ಹೆಚ್ಚು ಪ್ರಚಲಿತವಿಲ್ಲದ ಅಂಶವೆಂದರೆ ಸದ್ಯ ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಣದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಎಂಬ ಆಡಳಿತವು ಸರ್ಕಾರ ಭಾರತ ಸೇರಿದಂತೆ ವಿವಿಧ ದೇಶಗಳ ಜನರಲ್ಲಿ ತನ್ನ ಪರ ಮೃದು ಧೋರಣೆ ತಳೆಯಲು ಬಳಸುವ ತಂತ್ರಗಳು.
ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳು
ಚೀನಾ ಗಣತಂತ್ರವನ್ನು ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.
![]() |
1952ರ ಮೇ 16ರಂದು ಚೀನಾ-ಭಾರತ ಫ್ರೆಂಡ್‌ಷಿಪ್ ಅಸೋಸಿಯೇಷನ್ ಉದ್ಘಾಟನೆ. |
ಈಗಾಗಲೆ ಅನೇಕರು ತಿಳಿಸಿರುವಂತೆ ಪಿಆರ್‌ಸಿ ಕುರಿತು ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಭಿಮಾನ. ಪಿಆರ್‌ಸಿಯನ್ನು ಒಂದು ದೇಶವಾಗಿ ಅನೇಕ ದೇಶಗಳಿಗೂ ಮೊದಲೇ ಗುರುತಿಸಿದರು. ಆದರೆ ಚೀನಾದ ಆಡಳಿತ, ನೆಹರೂ ತಿಳಿದಷ್ಟು ಪಾರದರ್ಶಕವಾಗಿರಲಿಲ್ಲ. ವಿಸ್ತಾರ ಮನೋಭಾವ ಹೊಂದಿದ್ದ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ, ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಆಕ್ರಮಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(ಸಿಪಿಎಎಫ್‌ಎಫ್‌ಸಿ) ಸ್ಥಾಪಿಸಿತು. ಸಿಪಿಎಎಫ್‌ಎಫ್‌ಸಿ ಮೂಲಕ ಭಾರತದಲ್ಲಿ ಐಸಿಎಫ್‌ಎ ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.
ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಐಸಿಎಫ್‌ಎ ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.
ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ
ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.
2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು.
ಸಿಪಿಎಎಫ್‌ಎಫ್‌ಸಿ ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗೆಯೇ ಉದಾಹರಣೆ. ಸಿಪಿಎಎಫ್‌ಎಫ್‌ಸಿಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. ಕಳೆದ ವರ್ಷದ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಇದೀಗ ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕುರಿತು ಸುದ್ದಿಯಾಗಿದ್ದರು. ಚೀನಾದ ವುಹಾನ್‌ನಲ್ಲಿ ಕರೊನಾ ವೈರಸ್ ಹರಡುವಿಕೆ ಆರಂಭವಾಯಿತು ಎನ್ನುವುದು ಇದೀಗ ಬಹುತೇಕ ಎಲ್ಲರೂ ಒಪ್ಪುವ ಮಾತು. ಆದರೆ ಚೀನಾದಲ್ಲಿ ಈ ಕುರಿತ ಅನೇಕ ಅಂತೆ ಕಂತೆಗಳು ಚಾಲ್ತಿಯಲ್ಲಿವೆ. ವುಹಾನ್‌ಗೆ ಕಳೆದ ವರ್ಷ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂಬುದು ಈ ಕಥೆಗಳ ಕೇಂದ್ರಬಿಂದು. ಇದೇ ಕಥೆಯನ್ನು ಜಗತ್ತಿಗೆ ಮಾರಲು ಹೊರಟ ಮೊದಲಿಗರೆಂದರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವ್ ಲಿಜಿಯಾನ್. ಬಹುಶಃ ವುಹಾನ್‌ಗೆ ಚೀನಾ ಸೇನೆಯು ಕರೊನಾ ವೈರಸ್ ಅನ್ನು ಪಸರಿಸಿತು ಎಂದು ಅವರು ತಿಳಿಸಿದ್ದರು. ನಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ಕಥೆ ಮಾರಲು ಸಹಾಯ ಮಾಡಿದವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದರು.
ಇಷ್ಟ ಮಟ್ಟಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನೆಚ್ಚಿನ ಸೇನಾನಿಯಾದ ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ಒಂದು ವರ್ಷದಿಂದ ದಕ್ಷಿಣ ಆಫ್ರಿಕಾ ದೇಶವು ಚೀನಾದ ಬೀಜಿಂಗ್‌ನಲ್ಲಿ ತನ್ನ ರಾಯಭಾರಿಯನ್ನು ನೇಮಿಸದೆ ಅವಮಾನ ಮಾಡಿದೆ, ಈ ಸಿಟ್ಟಿಗಾಗಿ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಕರೆಸಿಕೊಳ್ಳುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಅಸಲಿ ಬಣ್ಣ ಬಯಲಾಯಿತು. ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಚೀನಾದ, ಅದಕ್ಕಿಂತಲೂ ಹೆಚ್ಚಾಗಿ ಈಗಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ. ಆದರೆ ಸ್ನೇಹದ ಕುರಿತ ವೇದಿಕೆಯೊಂದಕ್ಕೆ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯನ್ನು ಚೀನಾ ನೇಮಕ ಮಾಡಿರುವುದರಿಂದಲೇ ಈ ಸಿಪಿಎಎಫ್‌ಎಫ್‌ಸಿ ಒಟ್ಟಾರೆ ಮನೋಭಾವನೆ ತಿಳಿಯುತ್ತದೆ.
ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ.
ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ. ಅಷ್ಟಕ್ಕೂ ಪ್ರಾಚೀನ ಚೀನ ಹಾಗೂ ಭಾರತದ ಸಂಸ್ಕೃತಿಯ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಈಗ 7 ದಶಕದಿಂದ ಚೀನಾದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಆ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುವುದಿಲ್ಲ.
ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ. ಇದರಿಂದಾಗಿಯೇ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಕ್ತವಾದಷ್ಟು ಧೋರಣೆಗಳು ಚೀನಾ ವಿರುದ್ಧ ಆಗುವುದೇ ಇಲ್ಲ. ಹಾಗೆಂದು ಈ ಸಂಘಟನೆ ಜತೆಗೆ ಗುರುತಿಸಿಕೊಂಡ ಮೇಲಿನ ಯಾವುದೇ ರಾಜಕೀಯ ನಾಯಕರ ದೇಶಭಕ್ತಿ ಪ್ರಶ್ನಿಸುವುದು ಇಲ್ಲಿನ ಉದ್ದೇಶವಲ್ಲ. ಅವರಿಗೇ ಅರಿವಿಲ್ಲದಂತೆ ಚೀನಾ ಯಾವ ರೀತಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.
ನೇರವಾಗಿ ಕಮ್ಯುನಿಸ್ಟರ ಜತೆಗೆ ಗುರುತಿಸಿಕೊಂಡವರು 1962ರ ಯುದ್ಧದಲ್ಲಿ ಭಾರತದ ಸೇನೆಯನ್ನೇ ಟೀಕಿಸಿದ್ದರು. ಆದರೆ ಇದೀಗ ಚೀನಾದ ಈ ಸ್ನೇಹ ಜಾಲಕ್ಕೆ ಸಿಲುಕುವ ಅನೇಕ ನೀತಿ ನಿರೂಪಕರು ಚೀನಾ ವಿರುದ್ಧ ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ. ಅಷ್ಟರ ಮಟ್ಟಿಗೆ ಚೀನಾ ಗೆದ್ದಂತೆ. ದೇಶದೊಳಗಿನವರ ಮನಸ್ಸಿನಲ್ಲಿ ತನ್ನ ಪರ ಧೋರಣೆಯನ್ನು ಬಿತ್ತಿ ಬಿಆರ್‌ಐನಂತಹ ಭಾರತ ವಿರೋಧಿ ಯೋಜನೆಯನ್ನು ಸಲೀಸಾಗಿ ಜಾರಿಗೊಳಿಸುವುದು ಚೀನಾದ ಉದ್ದೇಶ. ಭವಿಷ್ಯದಲ್ಲಿ ಬಿಆರ್‌ಐ ಕುರಿತ ಚರ್ಚೆ ಸಂಸತ್ತಿನಲ್ಲೊ, ಸಾರ್ವಜನಿಕ ವಲಯದಲ್ಲೊ ಬಂದರೆ ಈ ಮೃದುಧೋರಣೆ ಹೊಂದಿರುವ ನಾಯಕರು ಚೀನಾ ಸಹಾಯಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ಆ ದೇಶದ್ದು.
(ವರದಿಯನ್ನು ಬೇರೆಡೆ ಬಳಸಬಹುದು. ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಬಳಸಿಕೊಂಡರೆ ಮೂಲ ಲೇಖಕರ ಹಾಗೂ ಬ್ಲಾಗ್ ವಿಳಾಸವನ್ನು ನಮೂದಿಸುವಂತೆ ಮನವಿ