ಭಾನುವಾರ, ನವೆಂಬರ್ 01, 2020

ವಿಧಾನಸೌಧದಲ್ಲಿ “ಚೆಲ್ಲಿದರು ಮಲ್ಲಿಗೆಯ”: ಕರ್ನಾಟಕಕ್ಕೆ ಜಯವಾಗಲಿ ಎಂದ ದಿನ ಇಂದು

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಭಾಷಣ. 1973, ನವೆಂಬರ್‌ 1

1956ರಿಂದ ಮೈಸೂರು ರಾಜ್ಯವೆಂದಿದ್ದ ಪ್ರದೇಶ 1973ರ ನವೆಂಬರ್‌ 1ರಿಂದ "ಕರ್ನಾಟಕ ರಾಜ್ಯ”ವಾಯಿತು. ಕರ್ನಾಟಕಕ್ಕೆ ಜಯವಾಗಲಿ ಎಂಬ ಘೋಷಣೆ ಅಧಿಕೃತವಾಗಿ ಮೊಳಗಿದ ಮೊದಲ ದಿನ ಅದು. ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕದ ನಾಮಕರಣ ಘೋಷಣೆ ಮಾಡುತ್ತಿದ್ದಂತೆಯೇ ಶಾಸಕರಾದ ವಾಟಾಳ್‌ ನಾಗರಾಜ್‌ ಹಾಗೂ ಎಸ್‌. ಬಂಗಾರಪ್ಪ ಅಕ್ಷರಶಃ ಸದನದಲ್ಲಿ ಮಲ್ಲಿಗೆ ಹೂಗಳ ಮಳೆ ಸುರಿಸಿದರು. ದೇವರಾಜ ಅರಸರು ಮಾಡಿದ ಪ್ರಸ್ತಾವನೆಯ ಭಾಷಣ ಹಾಗೂ ನಾಮಕರಣಕ್ಕೆ ಒಪ್ಪಿಗೆ ದೊರೆತ ಅಪೂರ್ವ ಘಳಿಗೆಯ ಯಥಾವತ್‌ ವರದಿ ಇಲ್ಲಿದೆ.

--------------------------

ಮಾನ್ಯ ಅಧ್ಯಕ್ಷರೇ:
ವಿಶಾಲ ಮೈಸೂರಿನ ಮುಖ್ಯಮಂತ್ರಿಯಾದ ನಾನು, ರಾಜ್ಯದ ಹೆಸರನ್ನುಕರ್ನಾಟಕಎಂದು ಮಾರ್ಪಡಿಸುವ ಸರ್ಕಾರದ ನಿರ್ಣಯವನ್ನು ಸಭೆಯ ಮುಂದೆ ಮಂಡಿಸುತ್ತೇನೆ.ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ. ವಿಶಾಲ ಮೈಸೂರು ಆದ ಮೇಲೆ, ಈ ರಾಜ್ಯದ ಹೆಸರು ಬದಲಾವಣೆ ಆಗಬೇಕೆಂಬ ವಿಚಾರ ನಮ್ಮಇಡೀ ರಾಜ್ಯದ ಜನತೆಯ ಮನಸ್ಸನ್ನು ಸೆಳೆದು,
ಆ ಒಂದು ಮಹತ್ವದ ವಿಷಯ ಇದುವರೆಗೂ ಇತ್ಯರ್ಥವಾಗದೆ ಹಾಗೆಯೇ ವಿಚಾರದಲ್ಲಿಯೇ ಉಳಿದು ಬಂದಿದೆ. ಬಹು ಜನರ ಅಪೇಕ್ಷೆ ಬದಲಾವಣೆ ಆಗಬೇಕೆಂಬುದಾಗಿದ್ದರೂ ಅದಕ್ಕೆ ಒಂದು ಪ್ರಬಲ ವಿರೋಧವಿತ್ತು ಎಂದು ನನಗೆ ಗೊತ್ತು. ಆ ಕಾಲದಲ್ಲಿ ರಾಜ್ಯ ಎರಡು ಆಗಬೇಕು ಒಂದು ಆಡಳಿತ ದೃಷ್ಟಿಯಿಂದ, ಇನ್ನೊಂದು ಶಾಸ್ತ್ರೀಯ ದೃಷ್ಟಿಯಿಂದ, ಎಂದು ಹೇಳುವುದರಲ್ಲಿ ನಾನೂ ಒಬ್ಬನಾಗಿದ್ದೆ.
ಮೊದಲು ಕನ್ನಡ ಜನ ಎಲ್ಲಾ ಒಂದು ಕಡೆ ಸೇರೋಣ. ಅದು ಆಗಲಿ ಅನಂತರ ಹೆಸರಿನ ಬದಲಾವಣೆಯ ಬಗ್ಗೆ ನಿಧಾನವಾಗಿ ಯೋಜನೆ ಮಾಡಿ, ಇತರರು ಇದನ್ನು ಮನ ಒಲಿದು ಒಪ್ಪವ ರೀತಿ ಮಾಡಿ ಬದಲಾಯಿಸೋಣ ಎಂದು ಅದನ್ನು ಹಾಗೇ ಇಟ್ಟುಕೊಂಡರು. ಜನತೆ ಒಂದು ಕಡೆ ಹೆಸರು ಬದಲಾವಣೆ ಆಗಬೇಕು ಎಂದು ಇಚ್ಛೆಪಡುತ್ತಾ ಬಂದಿದ್ದರೆ, ಶಾಸನ ಸಭೆಯ ಆಡಳಿತ ಪಕ್ಷದವರು ಇದನ್ನು ಮುಂದೂಡಿಕೊಂಡು ಬಂದಿದ್ದಾರೆ.
1969ನೇ ಜುಲೈ ಕಾಂಗ್ರೆಸ್‌ ಪಕ್ಷದ ಚರಿತ್ರೆ ಬದಲಾವಣೆ ಆಯಿತು. ಆ ಬದಲಾವಣೆಯ ಪರಿಣಾಮವಾಗಿ ನಾವು ಇಲ್ಲಿ ಈ ಸಭೆಯಲ್ಲಿದ್ದೇವೆ. 1970-71ರಲ್ಲಿ ನಡೆದಂಥ ಮಧ್ಯಂತರ ಚುನಾವಣೆ ಕಾಲದಲ್ಲಿ ಅಲ್ಲಲ್ಲಿ ಈ ಹೆಸರು ಬದಲಾವಣೆ ಬಗ್ಗೆ ಬಹಿರಂಗವಾಗಿ, ಅಂತರಂಗವಾಗಿ ವಾದ-ವಿವಾದಗಳು ನಡೆಯುತ್ತಿದ್ದವು. ಮದ್ಯಂತರ ಚುನಾವಣೆ ಆದ ಮೇಲೆ 1972ರ ಚುನಾವಣೆಯ ಕಾಲಕ್ಕೆ ಈ ಹೆಸರಿನ ವಿಚಾರ ಬಹಳ ಪ್ರಬಲವಾಗಿ ಜನಸಾಮಾನ್ಯರ ಮನಸ್ಸನ್ನು ಸೆಳೆಯುವುದಕ್ಕೆ ಒಂದು ಕಾರಣವಾಯಿತು. ಈ ರಾಜಕೀಯ ತಿಕ್ಕಾಟದಲ್ಲಿ ನಾನು ಒಂದು ಕಡೆ ಮಾಡಿದಂಥ ಭಾಷಣದಿಂದ ಸ್ವಲ್ಪ ಕಿಡಿ ಹಾರಿತು. ಅದು ದೇಶದಾದ್ಯಂತ ವ್ಯಾಪ್ತಿಗೊಂಡಿತು.



ನನ್ನ ಅಭಿಪ್ರಾಯ ಏನೇ ಇರಲಿ. ಶ್ರೀ ಸಾಮಾನ್ಯರ ಅಭಿಪ್ರಾಯದಲ್ಲಿ ಅವರಿಗೆ ಈ ಬದಲಾವಣೆಯಿಂದ ಒಂದು ಆನಂದ, ಒಂದು ತೃಪ್ತಿ, ಒಂದು ಸಮಾಧಾನ, ಒಂದು ಭಾವೈಕ್ಯತೆ ಬರುವುದಾದರೆ ನಮಗೆ ಅದರಿಂದ ತೊಂದರೆ ಆಗುವುದು ಏನೂ ಇಲ್ಲ ಸಂತೋಷ ಎಂದು ಹೇಳುವುದರ ಜೊತೆಗೆ ನಾಳೆ ಚುನಾವಣೆ ಆದ ಮೇಲೆ ನಮ್ಮಪಕ್ಷ ಬಹುಮತ ಪಡೆದು ಬಂದು ಅಧಿಕಾರವನ್ನು ಪಡೆಯುವುದಾದರೆ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ನಿಮ್ಮಪ್ರತಿನಿಧಿಗಳು ಯಾರು ಇರುತ್ತಾರೆ ಅವರ ಅಭಿಪ್ರಾಯದಂತೆ ಹೋಗುವುದಕ್ಕೆ ನನ್ನ ಅಡ್ಡಿ ಇಲ್ಲ. ಹೆಸರು ಬದಲಾವಣೆ ಮಾಡೋಣ, ಬಹುಮತ ಅಭಿಪ್ರಾಯದಂತೆ ಹೋಗೋಣ ಎನ್ನುವ ಮಾತನ್ನು ಜನತೆಯ ಮುಂದೆ ನನ್ನ ಪಕ್ಷದ ಪರವಾಗಿ ಹೇಳಿದ್ದುಂಟು. ನಾನು, ನೀವು ಜನತೆಗೆ ಕೊಟ್ಟಂಥ ಮಾತನ್ನು ಉಳಿಸಿಕೊಳ್ಳುವುದಕೋಸ್ಕರ ಇವೊತ್ತು ತಮ್ಮ ಎಲ್ಲರ ಅಪ್ಪಣೆ ಪಡೆದು ಈ ಒಂದು "ಠರಾವನ್ನುನಾನು ಈ ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

 

ಮತ್ತೆ ಈ ಹೆಸರು ಯಾವುದು ಇರಬೇಕು ಎನ್ನುವ ಬಗ್ಗೆ ಕೂಡ ನಮ್ಮನಾಡಿನಲ್ಲಿ ಬಹಳ ಕಾಲ ಚರ್ಚೆಡೆದಿದೆ. ಇಂತಹ ಬದಲಾವಣೆಯನ್ನು ಮಾಡುವುದು ಎಂದರೆ ಕರ್ನಾಟಕ'” ಎಂದು ಮಾಡಬಹುದು ಎನ್ನುವ ಒಂದು ನಿರ್ಣಯವನ್ನು ಇಲ್ಲಿ ಮಂಡಿಸಿದ್ದೇನೆ. ಕರ್ನಾಟಕ ಎನ್ನುವ ಹೆಸರನ್ನು ಹಿಂದೆ ರಾಜ್ಯಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಇಟ್ಟುಕೊಂಡಿದ್ದರು. ಹೊಯ್ಸಳರು ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ಕರ್ನಾಟಕಎಂಬ ಹೆಸರನ್ನು ಇಡಬಹುದೆಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ.

ಒಂದೂವರೆ ತಿಂಗಳ ಹಿಂದೆ ಈ ಠರಾವನ್ನು ಕ್ಯಾಬಿನೆಟ್‌ ಮುಂದೆ ಬಂದಾಗ ಬಹು ಜನತೆ ಹಾಗೂ ಶಾಸಕರು ಅಭಿಪ್ರಾಯಪಡುವಂತೆ ನಮ್ಮರಾಜ್ಕಕ್ಕೆ ಒಂದು ಶಾಶ್ವತವಾದ ಹೆಸರನ್ನು ಇಟ್ಟು ಈಗಿನ ಹೆಸರನ್ನು ಬದಲಾವಣೆ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದೆವು. ನಾನು ತಮ್ಮ ಮುಂದೆ ಠರಾದಿನಲ್ಲಿ ಕರ್ನಾಟಕಎಂದು ಏನು ಹೆಸರನ್ನು ಇಟ್ಟಿದ್ದೇನೋ, ಅದೇ ಬಹುಮತ ಅಭಿಪ್ರಾಯ ಎಂದು ನನ್ನ ನಂಬಿಕೆ. ನಮ್ಮಪಕ್ಷದಲ್ಲಿ ಕೂಡ ಇದನ್ನು ಚರ್ಚೆಮಾಡಿ ಎಲ್ಲರೂ ಒಪ್ಪುವಂತೆ ಠರಾವನ್ನು ಇಲ್ಲಿ ತಂದಿದ್ದೇನೆ. ಒಂದು ಸಂತೋಷದ ವಿಚಾರ ಎಂದರೆ ನಮ್ಮಪಕ್ಷದಲ್ಲಿ ಕಿಲವು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಇದ್ದರೂ ಇದರಲ್ಲಿಲ್ಲ. ಎಲ್ಲರೂ ಇಂತಹ ಒಂದು ಬದಲಾವಣೆಯನ್ನು ಮಾಡಲು ಹೃದಯ ತುಂಬಿ ಒಪ್ಪಿದ್ದಾರೆ.

ಆದರೆ ಪ್ರಜಾಪ್ರಭುತ್ವದ ತತ್ವದ ನೀತಿಗೆ ಕಟ್ಟುಬಿದ್ದು ಬಹುಮತದ ಅಭಿಪ್ರಾಯದಂತೆ ಯಾವ ರೀತಿಯಲ್ಲಿ ಇರಬೇಕೆಂದು ತೀರ್ಮಾನ ಮಾಡುತ್ತಾರೋ ಆ ತೀರ್ಮಾನವನ್ನು ತೆಗೆದುಕೊಂಡು ಅದಕ್ಕೆ ನಾವೆಲ್ಲರೂ ಸಂತೋಷದಿಂದ ಒಪ್ಪಿಕೊಂಡು ಹೋಗೋಣ ಎಂದು ಎಲ್ಲರೂ ಒಂದು ದೊಡ್ಡ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. ಇದು ಒಂದು ಹರ್ಷದ ಸಂಗತಿ. ನಾವೆಲ್ಲ ಮೈಸೂರು ಇಲ್ಲವೇ ಕರ್ನಾಟಕ ದೇಶದಲ್ಲಿರಲಿ, ಇಡೀ ಭಾರತ ದೇಶದಲ್ಲಿ ಸೇವೆ ಮಾಡುತ್ತಿದ್ದರೂ ಕಾಲ ಸನ್ನಿವೇಶಕ್ಕೆ ತಕ್ಕ ಹಾಗೆ ಆರ್ಥಿಕವಾಗಿ, ಐಹಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಇದು ಮನುಷ್ಯನಿಗೆ ತೃಪ್ತಿ ತರುವ ವಿಚಾರವಾಗಿದ್ದರೂ ಒಂದು ರೀತಿಯಲ್ಲಿ ಇದರಲ್ಲಿ ಹೊಂದಿಕೊಂಡು ಹೋಗುವ ಒಂದು ಭಾವನೆ ಬೆಳೆಯಬೇಕು.

ಇದು ಮನುಷ್ಯನಿಗೆ ಆನಂದವನ್ನು ತರುವ ಒಂದು ಸಂಗತಿಯಾಗಿದೆ. ಇಂತಹ ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರುಗಳನ್ನು ನೋಡಿ ನಾವೂ ಆ ಆನಂದದಲ್ಲಿ ಭಾಗಿಯಾಗಬೇಕು. ನಮ್ಮರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಅವರಿಗೆ ಆನಂದ ಹಾಗೂ ಸಂತೋಷ ಉಂಟಾಗುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಎಂದರೆ ಶ್ರೀಮಾನ್‌ ಬೇಂದ್ರೆಯವರು, ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್‌ ಕೆ. ವಿ. ಪುಟ್ಟಪ್ಪನವರು ಮತ್ತೆ ಇನ್ನಿತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ಎಂದು ಮಾಡಬೇಕೆಂದು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದಾರೆ.

ಬುದ್ಧಿ ಜೀವಿಗಳೂ ಕೂಡ ಹೆಸರು ಬದಲಾವಣೆಯಾಗಬೇಕೆಂದು ಹೇಳಿದ್ದಾರೆ. ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೂ, ಬದಲಾವಣೆ ಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಆಡಳಿತ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ. ಇದು ಅವರೆಲ್ಲರ ಹಿರಿದಾದ ಆಸೆ, ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ, ಇಷ್ಟೊಂದು ಜನಕ್ಕೆ ಸಂತೋಷವಾಗಬೇಕಾದರೆ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವೂ ಸಹ ಭಾಗಿಯಾಗೋಣ. ನಮ್ಮ ಕೈಲಾದ ಅಲ್ಪ ಸೇವೆಯನ್ನು ಸಲ್ಲಿಸೋಣ ಎನ್ನುವ ಒಂದು ಸಂತೋಷದಿಂದ ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಕಾಲ ಬಂತಲ್ಲ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇಂತಹ ಒಂದು ನಿರ್ಣಯ ಇಲ್ಲಿ ಬಂದಿದೆ. ಇದನ್ನು ತಮ್ಮಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದು ಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ. ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರ ದೇಶಗಳಲ್ಲಿ ಇದ್ದಾರೆ. ಅದಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ.
ಈ ಹೆಸರು ಅಸ್ತಂಗತವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ವಿಶ್ವಾಸವಿದೆ. ಹೆಚ್ಚಿನ ಜನರಿಗೆ ಸಂಶೋಷ, ಆನಂದ ಉಂಟಾಗುತ್ತದೆ ಬದಲಾವಣೆಯಲ್ಲಿ ಹಳೆಯದು ಹೋಗಿ, ಹೊಸದು ಬರುವಾಗ ತೊಂದರೆ ಇಲ್ಲ. ಆನಂದ ಬರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ, ಹೊಸದನ್ನು ನೋಡಿ, ನಲಿದು ಸಂತೋಷ ಪಡುವ ಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣ ವಿಶ್ವಾಸ ನನಗೆ ಇದೆ. ಬಹುಮತದ ವಿಶ್ವಾಸವಲ್ಲ ನಾವೆಲ್ಲರೂ ಸೇರಿ ಒಮತದಿಂದ ಈ ಹೆಸರನ್ನು ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಮತ್ತು ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಕರೆದು ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ, ಹೆಸರನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು ಕನ್ನಡ ಜನಕೋಟಿ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು.

ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಕಾರ್ಯಕ್ಕೆ ಇವೂತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇವೆ. ನಾನು ಸರಕಾರದ ವತಿಯಿಂದ ಮಂಡಿಸಿದಂಥ ನಿರ್ಣಯಕ್ಕೆ ಎಲ್ಲ ಕಡೆಯಿಂದಲೂ, ಎಲ್ಲಾ ಪಕ್ಷಗಳಿಂದಲೂ ಸರ್ವತೋಮುಖವಾದ ಬೆಂಬಲ ಬಂದಿರತಕ್ಕದ್ದು ನನಗಂತೂ, ಬಹಳ ಸಂತೋಷ ಉಂಟುಮಾಡಿದೆ. ನಾನು ಮೊದಲೇ ಈ ಸಭೆಯಲ್ಲಿ ಅರಿಕೆ ಮಾಡಿಕೊಂಡ ಹಾಗೆ ಏನಾದರೂ ಇಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದ್ದರೂ, ಹೆಸರು ಬದಲಾವಣೆ ಆಗತಕ್ಕ ಕಾಲದಲ್ಲಿ ಮನಸ್ಸಿಗೆ ಸ್ವಲ್ಪ ನೋವು ಆದಂಥವರು ಕೂಡ ಅಂತಿಮವಾಗಿ ನಿರ್ಣಯಕ್ಕೆ ಬೆಂಬಲ ಕೊಟ್ಟಿದ್ದಾರೆ ಮತ್ತು ಬದಲಾವಣೆಯನ್ನು ಸ್ವಾಗತಿಸಿದ್ದಾರೆ, ನಾವು ಕರ್ನಾಟಕ ಎಂಬ ಹೆಸರು ಇಡಬೇಕು ಎಂಬುದನ್ನು ಕೂಡ ಒಪ್ಪಿದ್ದಾರೆ. ಆದಕಾರಣ ಮೂರು ದಿವಸಗಳಿಂದ ಮಾತನಾಡಿ ತಮ್ಮ ಹೃದಯದಿಂದ ಬಂದ ಬೆಂಬಲವನ್ನು ಕೊಟ್ಟಂಥ ಮಾನ್ಯ ಸದಸ್ಯರಿಗೂ, ಈ ಚರ್ಚೆಯಲ್ಲಿ ಭಾಗವಹಿಸದೆ ಮೌನದಿಂದ ಕುಳಿತು ಮಾತುಗಳನ್ನು ಕೇಳಿದವರಿಗೂ ಮತ್ತು ಮೌನದಿಂದಲೇ ಬೆಂಬಲ ಕೊಟ್ಟಂಥ ಎಲ್ಲಾ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ನಾನು ಅಪ್ಪಣೆ ಬೇಡುತ್ತೇನೆ. ಈ ಸಂದರ್ಭದಲ್ಲಿನಾನು ಈ ನಿರ್ಣಯವನ್ನು ಮಂಡಿಸುವುದಕ್ಕೆ ಮನಸ್ಸು ಮಾಡಿದ್ದಕ್ಕಾಗಿ ಅಥವಾ ತಂದಿದ್ದಕ್ಕಾಗಿ ನನ್ನ ಬಗ್ಗೆ ಕೆಲವರು ಒಳ್ಳೆಯ ಭಾಷಣವನ್ನು ಮಾಡಿದ್ದಾರೆ, ಮೆಚ್ಚುಗೆಯನ್ನು ನನ್ನ ಮಿತ್ರರು, ಎದುರು ಪಕ್ಷದಲ್ಲಿರತಕ್ಕ ನಾಯಕರು ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕಾರ್ಯಗಳು ಆಗುವಾಗ, ನಾವು ಒಂದೊಂದು ಕಾಲಕ್ಕೆ ನಿಮಿತ್ತ ಮಾತ್ರರಾಗುತ್ತೇವೆ ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ಹೆಮ್ಮೆ ಎಂದಲ್ಲ, ನಾನು ಒಂದು ನಿಮಿತ್ತವಾಗಿದ್ದೇನೆ, ಅದಕ್ಕೆ ಸಂದರ್ಭ ಕಾರಣ. ಇದರಿಂದ ಬರತಕ್ಕ ಕೀರ್ತಿ ಮೆಚ್ಚಿಗೆ ಇಡೀ ಸದನಕ್ಕೆ ಸೇರಿದ್ದು. ಅದರಲ್ಲಿ ನಾನೂ ಒಬ್ಬ ಇದ್ದೇನೆ ಅಷ್ಟೇ. ವೈಯಕ್ತಿಕವಾಗಿ ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ, ಜನಮನಕ್ಕೆ ಸ್ಪಂದಿಸಿದ್ದೇನೆ ನುಡಿದಂತೆ ನಡೆದಿದ್ದೇನೆ ಎಂಬ ನಂಬಿಕೆ. ತಿಳಿವಳಿಕೆ ಇಲ್ಲದೆ ಧ್ಹರ್ಯ ಬರುವುದಿಲ್ಲ. ನಡೆದ ವಿಚಾರವನ್ನು ಸರಿಯಾಗಿ ತಿಳಿಯಬೇಕಾದರೆ ನಿರ್ವಿಕಾರ ಮನಸ್ಸು ಬೇಕು. ಈ ದೃಷ್ಟಿಯಿಂದ ನಡೆಯುವುದಕ್ಕೆ ಧೈರ್ಯ ಮಾಡಿದೆ ಅಷ್ಟೇ.

ಯುಗಯುಗಾಂತರಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದು, ಬೆಂದು ಹಿಂದುಳಿದಿರತಕ್ಕೆ, ಜನ-ಜನಾಂಗಗಳ ಉದ್ದಾರ ಆಗಬೇಕು. ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಅದಕ್ಕೆ ಎಲ್ಲರ ತೆರೆದ ಹೃದಯದ ಸಹಕಾರಬೇಕು. ಈ ದಿಕ್ಕಿನಲ್ಲಿ ಅಂಜದೆ ನಾವು ನುಡಿದಂತೆ ನಡೆಯಬೇಕಾದುದ್ದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆಂದು ಹೇಳಿ ತಮಗೆ ಆಶ್ವಾಸನೆ ಕೊಡಬಲ್ಲೆ. ಕೆಲವು ಭಾಗಗಳಲ್ಲಿ ಕೆಲವು ತೊಂದರೆಗಳಿವೆ. ನೀರಿನ ಅಭಾವ, ಮಳೆ ಇಲ್ಲದೆ ತೊಂದರೆ, ಯಾವ ಭಾಗದಲ್ಲಿ ತೊಂದರೆಯಾದರೂ ಅದನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ. ಎಲ್ಲಿಯವರೆಗೆ ನಮಗೆ ಸರ್ಕಾರ ನಡೆಸುವ ಜವಾಬ್ದಾರಿ ಇರುತ್ತದೆಯೋ ಅಲ್ಲಿಯವರೆಗೆ ಆ ಭಾಗ, ಈ ಭಾಗ, ನಮ್ಮವರು, ನಿಮ್ಮವರು ಎಂಬ ಪಕ್ಷಪಾತಕ್ಕೆ ಎಡೆಯಲ್ಲ. ಎಲ್ಲ ಭಾಗಗಳೂ ನಮ್ಮ ರಾಜ್ಯ, ನಮ್ಮ ಜನ ಎಂಬ ಒಂದೇ ಗುರಿ ಎನ್ನುವ ಆಶ್ವಾಸನೆಯನ್ನು ಕೂಡಾ ನಾನು ಕೊಡುತ್ತೇನೆ.

ಕೊನೆಯದಾಗಿ ಒಂದು ಮಾತು. ಈ ನಿರ್ಣಯವನ್ನು ನನ್ನ ಒಂದು ಸ್ಥಾನದಿಂದ ತಂದಿರತಕ್ಕದ್ದು ಸಂತೋಷ ಎಂಬ ಅಭಿಪ್ರಾಯ, ಇವರು ಅರಸು ಮನೆತನದವರು ಆಗಿದ್ದರೂ ಇದನ್ನು ತಂದಿದ್ದಾರೆಂದು ಹೇಳಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಬೇಕಾದ ಅಗತ್ಯವಿಲ್ಲ. ನಾನು ಯಾವಾಗ ರಾಜಕೀಯದಲ್ಲಿ ಕಾಲಿಟ್ಟನೋ ಆವಾಗಿನಿಂದ ನಾನು ಅರಸು ಮನೆತನಕ್ಕೆ ಸೇರಿದವನು ಜನತೆಯೇ ಬೇರೆ ನಾನು ಬೇರೆ ಎಂದು ತಿಳಿದವನಲ್ಲ. ನಾನು ಹುಟ್ಟಿದ್ದು ಹಳ್ಳಿಯಲ್ಲಿ ಬೆಳೆದಿದ್ದು ಹಳ್ಳಿಯಲ್ಲಿ ಇದ್ದದ್ದೂ ಹಳ್ಳಿಯಲ್ಲಿ ದೇಶದ ವಿಚಾರ ಬಂದಾಗ ದೇಶಾಭಿಮಾನ ಇರುವಂಥವನು, ಯಾವ ಜಾತಿ, ಮತ ಭೇದವಿಲ್ಲದೆ, ಯಾರ್ಯಾರಿಗೆ ಸ್ವಾತಂತ್ರಾಭಿಮಾನ ಇದೆಯೋ, ಅವರೆಲ್ಲರೂ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಅಂತಹ ಹೋರಾಟ ಮಾಡಿದ ಲಕ್ಟೋಪಲಕ್ಷ ಜನರಲ್ಲಿ ನಾನೂ ಒಬ್ಬ. ನನಗೆ ತನ್ನ ಜಾತಿಯೆಂದು ಏನೂ ಹೆಚ್ಚಿನ ಪ್ರೀತಿಯೂ ಇಲ್ಲ ಅಥವಾ ಬೇರೆ ಜಾತಿಯವರಲ್ಲಿ ಕಡಿಮೆ ರೀತಿಯ ಪ್ರೀತಿಯೂ ಇಲ್ಲ. ನಾವೆಲ್ಲರೂ ಒಂದೇ ಜಾತಿಯವರು ಎಂಬ ಭಾವನೆ. ಈ ರಾಜತತ್ವಕ್ಕೆ ನಾನು ಎಂದೋ ವಿರೋಧಿ ಗಾಂಧೀಜಿಯವರು ಈ ರಾಜರುಗಳ ಬಗ್ಗೆ ಹೇಳಿದಾಗ ಅದು ಸರಿ ಎಂದು ನನಗೆ ತೋರಿ ಆಗಿನಿಂದಲೇ ವಿರೋಧವಾದ ಮನೋಭಾವ ಬೆಳೆದು ಬಂದಿತ್ತು. ಅವರ ವಿರುದ್ಧವಾಗಿ ಎದ್ದು ನಿಂತಿದ್ದೇನೆ.

ತಾವೆಲ್ಲರೂ ಈ ನಿರ್ಣಯವನ್ನು ವಿರೋಧ ಮಾಡದೆ ಸರ್ವಾನುಮತದ ಸ್ವಾಗತ ಮಾಡಿದ್ದಕ್ಕಾಗಿ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ಮಹತ್ತರವಾದ ನಿರ್ಣಯವನ್ನು ತಮ್ಮಅಧ್ಯಕ್ಷತೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುತ್ತಿದ್ದೇವೆ. ಇದು ಹೆಮ್ಮೆ ಮತ್ತು ಸಂತೋಷ ಪಡುವ ವಿಚಾರ. ತಮ್ಮಘನ ಅಧ್ಯಕ್ಷತೆಯಲ್ಲಿ ಈ ಒಂದು ಚರಿತ್ರಾರ್ಹವಾದ ಘಟನೆ ನಡೆದಿರುವುದು ನಮ್ಮಪುಣ್ಯ ಹಾಗೂ ಶುಭ ಸಂಕೇತವೆಂದು ತಿಳಿದು ನಾನು ತಮನ್ನು ಮತ್ತೊಮ್ಮೆ ಅಭಿನಂದಿಸಿ ಈ ನಿರ್ಣಯಕ್ಕೆ ತಮ್ಮೆಬರ ಬೆಂಬಲವನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಎಲ್ಲರೂ ಕರತಾಡನ ಮಾಡಿ ಸಂತೋಷ ವ್ಯಕ್ತಪಡಿಸಿದರು)


ಅಧ್ಯಕ್ಷರು:
ನಾನು ಈ ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಹಾಕುತ್ತೇನೆ, ಅದು ಹೀಗೆ:

ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ಕರ್ನಾಟಕ ಎಂಬುದಾಗಿ ಬದಲಾಯಿಸಬೇಕೆಂದೂ ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸ್ಸು ಮಾಡುತ್ತಾರೆ (ಎಲ್ಲಾ ಸದಸ್ಯರು ಜಯಕಾರ ಮಾಡಿದರು.)

ಅಧಕ್ಷರು:

ನಿರ್ಣಯದ ವಿರೋಧ ಯಾರು ಇಲ್ಲವಾದ್ದರಿಂದ ಈ ನಿರ್ಣಯವನ್ನು (ಸರ್ವಾನುಮತದಿಂದ) ಅಂಗೀಕರಿಸಲ್ಪಟ್ಟಿತ್ತು. The Resolution was Adopted


ಶ್ರೀ ವಾಟಾಳ್‌ ನಾಗರಾಜ್‌:
ಈ ಶುಭ ಸಂತೋಷದ ಸಮಯದಲ್ಲಿ ಸಂತೋಷ ಸೂಚಕವಾಗಿ ನಾನು ಈ ಮಲ್ಲಿಗೆ ಹೂಗಳನ್ನು ಎಲ್ಲರ ಮೇಲೆಯೂ ಚೆಲ್ಲುತ್ತೇನೆ. (ವಾಟಾಳ್‌ ನಾಗರಾಜರು ಮತ್ತು ಎಸ್‌. ಬಂಗಾರಪ್ಪನವರು ಮಲ್ಲಿಗೆ ಹೂಗಳನ್ನು ಚೆಲ್ಲಿದರು)

ಶ್ರೀ ಡಿ. ದೇವರಾಜ್‌ ಅರಸ್‌:
ನಾನು ಈಗ ಕರ್ನಾಟಕಕ್ಕೆ ಎಂದು ಹೇಳುತ್ತೇನೆ. ತಾವೆಲ್ಲರೂ ಒಕ್ಕಂಠದಿಂದ ಜಯವಾಗಲಿ ಎಂದು ಹೇಳಬೇಕು.

ಶ್ರೀ ಡಿ. ದೇವರಾಜ್‌ ಅರಸ್‌:
 ಕರ್ನಾಟಕಕ್ಕೆ.

ಎಲ್ಲ ಸದಸ್ಯರು:
ಜಯವಾಗಲಿ.
(ಎಲ್ಲಾ ಸಧಸ್ಮರು ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆಯನ್ನು ಮತ್ತು ಕರತಾಡನವನ್ನು
ಮಾಡಿದರು).

--------

(ಆಕರ: ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ: ಡಿ. ದೇವರಾಜ ಅರಸು. ಪ್ರಕಟಣೆ: ಗ್ರಂಥಾಲಯ ಉಪಸಮಿತಿ, ಕರ್ನಾಟಕ ವಿಧಾನಸಭೆ ಸಚಿವಾಲಯ. ಇಸವಿ: 2,000)