ಸಮಾಜದ ವಿವಿಧ ಸ್ತರಗಳನ್ನು ನಿರ್ವಹಿಸಲು ಸರ್ಕಾರದ ಮಟ್ಟದಲ್ಲಿ ವ್ಯವಸ್ಥೆ, ಇಲಾಖೆ ರೂಪಿಸಲಾಗಿದೆ. ಆದರೆ ಸಮಾಜದ ರಚನೆಗೂ ಸರ್ಕಾರದ ವ್ಯವಸ್ಥೆಗೂ ಸಂಬಂಧವೇ ಇಲ್ಲದೆ ಎಲ್ಲವೂ ಸರ್ಕಾರದ ಮೂಗಿನ ನೇರಕ್ಕೇ ನಡೆಯುತ್ತವೆ ಎಂಬುದಕ್ಕೆ ಇತ್ತೀಚಿನ ಕರ್ನಾಟಕ ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ನೂತನ ಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಡಿಸೆಂಬರ್ 14ಕ್ಕೆ ನೆರವೇರಿಸಲಾಗಿತ್ತು. ಸಾಲೂರು ಬೃಹನ್ಮಠದ ಗುರುಸ್ವಾಮೀಜಿಯವರು ಪೂಜೆಯನ್ನು ನೆರವೇರಿಸಿದ್ದರು. ಸುಳ್ವಾಡಿ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಬಿದರಹಳ್ಳಿ, ಎಂ.ಜಿ. ದೊಡ್ಡಿ, ದೊಡ್ಡಾನೆ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು. ಪೂಜೆಯ ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ತರಕಾರಿ ಅನ್ನ ನೀಡಲಾಯಿತು. ಆಹಾರ ಸೇವಿಸಿದ ಅರ್ಧಗಂಟೆ ನಂತರ ಅನೇಕರು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಭಯಭೀತ ವಾತಾವರಣ ನೋಡಿ ಬೆಚ್ಚಿದ ಜನರು ಪೊಲೀಸರಿಗೆ ಕರೆ ಮಾಡಿ ವಿವರಿಸಿದರು, ಕೆಲವರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ದೇವಸ್ಥಾನದ ಆವರಣದಲ್ಲಿ ನಡೆಯಬಾರದ್ದು ನಡೆದು ಹೋಗಿತ್ತು. ಆಹಾರ ಸೇವಿಸಿದ 150ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡರು. ಸ್ಥಳದಲ್ಲಿ, ಮೈಸೂರು ಆಸ್ಪತ್ರೆಯಲ್ಲಿ ಸೇರಿ 14 ಜನರು ಮೃತಪಟ್ಟರು. ಇನ್ನೂ ಅನೇಕರನ್ನು ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ. ಅನೇಕ ಮಕ್ಕಳು ತಂದೆ ತಾಯಿ ಕಳೆದುಕೊಂಡಿದ್ದಾರೆ. ಕುಟುಂಬದ ಏಕೈಕ ದುಡಿಯುವ ಮೂಲವಾಗಿದ್ದ ಮಹಿಳೆಯರು, ಪುರುಷರು ಮೃತಪಟ್ಟಿದ್ದಾರೆ. ಮಾನವನ ಧ್ವೇಷಕ್ಕೋ, ಅಸೂಯೆಗೋ, ಮೈಮರೆವಿನಿಂದಲೋ ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಂದೂ ಊಹಿಸದ ಘಟನೆ ನಡೆದುಹೋಗಿದೆ.
![]() |
ಕಿಚ್ಚುಗತ್ತಿ ಮಾರಮ್ಮ ದೇವಾಲಯ |
ಸಾಮಾನ್ಯವಾಗಿ ಯಾವುದೇ ಘಟನೆಗೆ ಪ್ರತಿಕ್ರಿಯಿಸುವಂತೆಯೇ ಈಗಿನ ಸರ್ಕಾರ, ಅಧಿಕಾರಿಗಳು ಸ್ಪಂದಿಸಿದರು. ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸುವುದು ಮೊದಲ ಹೆಜ್ಜೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇಂತಷ್ಟು ಲಕ್ಷ ‘ಪರಿಹಾರ’ ನೀಡಿ ಎಂದು ಒತ್ತಾಯಿಸುವುದು ಪ್ರತಿಪಕ್ಷಗಳ ಸಹಜಧರ್ಮ! ಮುಖ್ಯಮಂತ್ರಿ ಸಹ ಒಂದಿನಿತೂ ತಡ ಮಾಡದೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ‘ಪರಿಹಾರ’ ಘೋಷಿಸಿ ತಮ್ಮ ಮಾನವೀಯತೆ ಮೆರೆದರು. ಅದು ರೈಲಿರಲಿ, ಕಟ್ಟಡದಲ್ಲಿ ಅಗ್ನಿ ಅವಘಡವಾಗಲಿ, ಬಸ್ ಅಪಘಾತವಾಗಲಿ... ಮೃತಪಟ್ಟವರ ಕುಟುಂಬಕ್ಕೆ ನೀಡುವ ಹಣಕ್ಕೆ ಪರಿಹಾರ ಎಂದು ಯಾರು ಹೆಸರಿಟ್ಟರೋ ಗೊತ್ತಿಲ್ಲ. ಸರ್ಕಾರ ನೀಡುವ ಹಣದಿಂದ ಕುಟುಂಬದವರ ನೋವು ಪರಿಹಾರವಾಯಿತು ಎಂದು ಇದರ ಅರ್ಥವೇ? ಅನೇಕ ವೇಳೆ ರಸ್ತೆ ನಿರ್ವಹಣೆ, ಬೆಂಕಿ ರಕ್ಷಣೆ ಸಾಧನಗಳ ನಿರ್ವಹಣೆ ವಿಷಯದಲ್ಲಿ ಕಾನೂನನ್ನು ಸರಿಯಾಗಿ ಜಾರಿ ಮಾಡದೆ ಅಪಘಾತ ಉಂಟಾಗಿದ್ದರಿಂದ ಸರ್ಕಾರ ತಾನು ಮಾಡಿದ ಪಾಪಕ್ಕೆ ಕಂಡುಕೊಂಡ ಪರಿಹಾರವೇ?
ಸುಲ್ವಾಡಿ ಗ್ರಾಮದ ಘಟನೆ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತಮುತ್ತಲಿದ್ದ ಆಹಾರ ಪದಾರ್ಥ, ಭಕ್ತರ ವಾಂತಿಯ ಮಾದರಿ ಸೇರಿ ಕುರುಹುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟರು. ಮೇಲ್ನೋಟಕ್ಕೇ ಆಹಾರದಲ್ಲಿ ಏನೋ ಬೆರೆಸಲಾಗಿದೆ ಎಂಬುದು ತಿಳಿದಿದ್ದರೂ, ಸಸ್ಯಗಳಿಗೆ ಕ್ರಿಮಿ ಕೀಟ ಬಾರದಂತೆ ಸಿಂಪಡಿಸುವ ಮೋನೋ ಕ್ರೋಟೋಫೋಸ್ ಬೆರೆಸಲಾಗಿದೆ ಎಂಬುದು ಪ್ರಯೋಗಾಲಯ ವರದಿ ಹೇಳಿದೆ. ರೈತರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಕೀಟನಾಶಕವನ್ನು ಅದ್ಯಾವ ದುರ್ಬದ್ಧಿಯವ ಬೆರೆಸಿ ಜೀವಕ್ಕೆರವಾದ ಎಂಬುದು ತಿಳಿಯಬೇಕಷ್ಟೆ.
ಈ ಎಲ್ಲದರ ನಡುವೆ ರಾಜ್ಯದ ಎಲ್ಲ ದೇವಸ್ಥಾನಗಳನ್ನು ನಿರ್ವಹಿಸುವ ಗುತ್ತಿಗೆ ಪಡೆದಂತೆ ವರ್ತಿಸುವ ಸರ್ಕಾರದ ಮುಜರಾಯಿ ಇಲಾಖೆ ‘ಮುಂಜಾಗ್ರತಾ’ ಕ್ರಮ ಕೈಗೊಂಡಿದೆ. ಧಾರ್ಮಿಕ ದತ್ತಿ ಆಯುಕ್ತರು ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ದೇವರ ನೈವೇದ್ಯ ಹಾಗೂ ದಾಸೋಹ ತಯಾರಿಸುವ ಅಡುಗೆ ಮನೆಗೆ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ. ಅಡುಗೆ ಕೋಣೆಗೆ ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ತಯಾರಿಸಿದ ಅಡುಗೆ ಅಥವಾ ನೈವೇದ್ಯ ವಿತರನೆಗೆ ಯೋಗ್ಯ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಭಕ್ತರಿಗೆ ನೀಡಬೇಕು ಎಂದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ದೇವಾಲಯದ ಆವರಣದಲ್ಲಿ ಭಕ್ತರೇ ತಯಾರಿಸಿ ವಿತರಿಸುವ ಆಹಾರ ನೀಡಲು ಪೂರ್ವ ಅನುಮತಿ ಕಡ್ಡಾಯ. ಆರೋಗ್ಯ ಇಲಾಕೆಯ ಆರೋಗ್ಯ ಅಧೀಕ್ಷಕರಿಂದ ದೃಢೀಕರಿಸಿಕೊಂಡು ವಿತರಣೆ ಮಾಡಬೇಕು ಎಂದು ಶನಿವಾರ ಹೊರಡಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.
![]() |
ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪುಟ-2 |
![]() |
ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪುಟ-1 |
ಭಾರತದಂತಹ, ವಿಶ್ವದ ಯಾವುದೇ ದೇಶಕ್ಕೆ ಹೋಲಿಸಲಾಗದ ಜನಸಂಖ್ಯೆ, ವೈವಿಧ್ಯತೆ, ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ಮಾತ್ರ ಇಂಥ ಆದೇಶ ಹೊರಡಿಸಲು ಸಾಧ್ಯ. ನೆಲದ ಮಣ್ಣಿನ ಊಟವನ್ನೇ ತಿನ್ನುತ್ತಿದ್ದರೂ ತಲೆಯಲ್ಲಿ ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಇರಿಸಿಕೊಂಡಿರುವ, ಎಲ್ಲವನ್ನೂ ಸರ್ಕಾರ ನಿಯಂತ್ರಿಸಬೇಕು ಎಂಬ ಸಮಾಜವಾದದ ಮನೋಭಾವ ಹೊಕ್ಕಿರುವುದು ಇದರಿಂದ ತಿಳಿಯುತ್ತದೆ.
ಮುಜರಾಯಿ ಇಲಾಖೆಯ ಅಧೀನದಲ್ಲಿ 34,892 ದೇವಸ್ಥಾನಗಳಿವೆ. ಈ ಪೈಕಿ ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚಿನ ‘ಆದಾಯ’ ಗಳಿಸುವ 164, ವಾರ್ಷಿಕ 5-25 ಲಕ್ಷ ರೂ.ವರೆಗಿನ 283 ಹಾಗೂ ಉಳಿದ 34 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಕ್ರಮವಾಗಿ ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಲಾಗಿದೆ. ಇನ್ನು, ದೇವರ ದಯೆಯಿಂದ ಸರ್ಕಾರದ ಅಧೀನಕ್ಕೆ ಒಳಪಡದ ಸುಮಾರು 1.5 ಲಕ್ಷಕ್ಕೂ ಹೆಚ್ಚು ಖಾಸಗಿ, ಟ್ರಸ್ಟ್, ಊರು ದೇವಸ್ಥಾನಗಳು, ಗುಡಿಗಳಿವೆ. ಅನೇಕ ದೇವಸ್ಥಾನಗಳಲ್ಲಿ ದಿನದ ಎರಡು ಹೊತ್ತು ನೈವೇದ್ಯ ಮಾಡಲಾಗುತ್ತದೆ. ಸಾವಿರಾರು ದೇವಸ್ಥಾನಗಳಲ್ಲಿ ದಾಸೋಹ ವ್ಯವಸ್ಥೆಯಿದೆ. ಲಕ್ಷಾಂತರ ಜನರು ಆಹಾರ ಸೇವನೆ ಮಾಡುತ್ತಾರೆ. ದೇವಸ್ಥಾನಕ್ಕೆ ಹರಕೆ ಹೊತ್ತು ಮನೆಯಲ್ಲಿ ಆಹಾರ ತಯಾರಿಸಿ ಅಲ್ಲಿದ್ದ ಭಕ್ತರಿಗೆ ವಿತರಿಸುವ ಪದ್ಧತಿ ಬಹುತೇಕ ದೇವಸ್ಥಾನದಲ್ಲಿದೆ. ಇಂತಹ ಬೃಹತ್ ವ್ಯವಸ್ಥೆಯನ್ನು, 200-225 ಅಧಿಕಾರಿಗಳನ್ನು ಹೊಂದಿರುವ ಮುಜರಾಯಿ ಇಲಾಖೆ ನಿಭಾಯಿಸಲು ಸಾಧ್ಯವೇ?
ಇನ್ನು, ಪ್ರಸಾದ ಎಂಬುದಕ್ಕೊಂದು ಧಾರ್ಮಿಕ, ಆಗಮ ವ್ಯವಸ್ಥೆಯಿದೆ ಎಂಬುದೇ ಅಧಿಕಾರಿಗಳಿಗೆ ತಿಳಿದಿಲ್ಲ. ನೈವೇದ್ಯ ಎಂಬುದೇ, ದೇವರಿಗೆ ಮೊದಲು ಆಹಾರ ನೀಡುವ ಕೈಂಕರ್ಯ. ದೇವರು ಆಸ್ವಾದಿಸಿ ಬಿಟ್ಟದ್ದನ್ನು ಪ್ರಸಾದ ಎಂದು ಭಕ್ತರು ಸೇವಿಸುತ್ತಾರೆ. ಅಂಥದ್ದರಲ್ಲಿ, ದೇವರಿಗೂ ಮೊದಲೇ ಮುಜರಾಯಿ ಇಲಾಖೆ ಅಧಿಕಾರಿಯೋ, ಸರ್ಕಾರಿ ವೈದ್ಯನೋ ಸೇವಿಸಿ ನೀಡಿದ್ದನ್ನು ‘ನೈವೇದ್ಯ’ ಮಾಡುವುದು ಹೇಗೆ? ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತೇವಾದರೂ ಹರಿಯ ಆಹಾರಕ್ಕೇ ಕೈಹಾಕಬಾರದು ಅಲ್ಲವೇ? ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಾಥಮಿಕ ಜ್ಞಾನವೂ ಇಲ್ಲ ಎಂಭುದನ್ನು ಇದು ನಿರೂಪಿಸುತ್ತದೆ. ತಲೆತಲಾಂತರಗಳಿಂದ ನಮ್ಮ ಸಮಾಜದಲ್ಲಿ ರಾಮನವಮಿಗೆ ಪಾನಕ, ಮಕ್ಕಿಗೆ, ಕೋಸಂಬರಿ ನೀಡುವ ಸಂಪ್ರದಾಯವಿದೆ. ದಾರಿಯಲ್ಲಿ ನಿಂತು ಸಾವಿರಾರು ಜನರು ರಾಮನ ಪ್ರಸಾದವೆಂದು ಭಾವಿಸಿ ಸ್ವೀಕರಿಸುತ್ತಾರೆ. ವಿಶ್ವದಲ್ಲೆ ಅತ್ಯಂತ ವಿಕೇಂದ್ರೀಕೃತ ಈ ವ್ಯವಸ್ಥೆಗಳನ್ನು ನಿಯಂತ್ರಿಸಲು ಸಾಧ್ಯವೇ?
ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ, ನಮ್ಮಿಡೀ ಸರ್ಕಾರಿ ವ್ಯವಸ್ಥೆ ನಡೆದುಕೊಳ್ಳುತ್ತಿರುವ ಪ್ರಾತಿನಿಧಿಕವಷ್ಟೆ. ಭಾರತದ ಅಗಾಧತೆ ಹಾಗೂ ಇಲ್ಲಿನ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ಕಾರದ ವ್ಯವಸ್ಥೆ ಎಡವುತ್ತಲೇ ಬಂದಿದೆ. ವಿಷ ಸೇವನೆ ಒಂದು ಅಪರಾಧ ಪ್ರಕರಣ. ಅದನ್ನು ನಿಭಾಯಿಸಲು ಪೊಲೀಸರಿದ್ದಾರೆ, ಕಾನೂನಿದೆ, ನ್ಯಾಯಾಂಗವಿದೆ. ಇದರ ಮಧ್ಯೆ ತನ್ನ ಮೂಗು ತೂರಿಸಿ ಅನವಶ್ಯಕ ಗೊಂದಲ ಸೃಷ್ಟಸುವ ಅವಶ್ಯಕತೆಯೇನಿದೆ?
ರಾಜಕೀಯವೇ ಕೇಂದ್ರವಾಗುವ ಅಪಾಯ
ರಾಜಕೀಯವೇ ಸಮಾಜದ ಎಲ್ಲ ಆಗುಹೋಗುಗಳಿಗೂ ಕೇಂದ್ರ ಎಂಬ ಮನೋಭಾವವೂ ಇದರ ಹಿಂದೆ ಇದೆ. ಸಮಾಜದ್ದು ಎಂಬುದು ಯಾವುದೂ ಇಲ್ಲ. ಎಲ್ಲವೂ ಸರ್ಕರಕ್ಕೆ ಸೇರಿದ್ದು. ನಿನ್ನ ಜಮೀನೂ ಸರ್ಕಾರದ್ದು. ಅಲ್ಲಿ ಎಲ್ಲರೂ ಒಟ್ಟಿಗೆ ದುಡಿಯಬೇಕು. ಉಳುವವನು, ಕೂಲಿ, ಕಟಾವು ಮಾಡುವವನಿಂದ ಮೊದಲುಗೊಂಡು ಅವರ ಕೆಲಸದ ಪ್ರಮಾಣ ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ಲಾಭ ಹಂಚಿಕೆ ಮಾಡಬೇಕು ಎಂಬ ಕಮ್ಯೂನಿಸ್ಟ್ ಹಾಗೂ ಸಮಾಜವಾದದ ಸಿದ್ಧಾಂತ ಭಾರತೀಯರ ತಲೆ ಹೊಕ್ಕಿದೆ. ಲೋಕಸಭೆ, ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ,... ಹೀಗೆ ಸರ್ಕಾರದ ಶಕ್ತಿಕೇಂದ್ರದ ಸುತ್ತಲೇ ಹೆಚ್ಚು ಕೆಲಸ ಮಾಡುವ ಮಾಧ್ಯಮಗಳಿಗೂ ಇದು ಗಾಢವಾಗಿದೆ. ಎಲ್ಲ ವರದಿಗಳಲ್ಲೂ, ಕೊನೆಗೆ ‘ಈ ಕುರಿತು ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಕಾದುನೋಡೋಣ’ ಎಂಬ ಸಾಮಾನ್ಯ ಒಕ್ಕಣೆ ಕಾಣಬಹುದು. ಭಾರತ ಆಧ್ಯಾತ್ಮಿಕ ತಳಹದಿಯ ದೇಶ. ಇಲ್ಲಿ ಸತ್ಯವಂತನೇ, ಸನ್ಯಾಸಿಯೇ ಕೇಂದ್ರಬಿಂದು ಎಂಬಂತಿತ್ತು. ನಿಧಾನವಾಗಿ ಈ ಮನಸ್ಥಿತಿ ಬದಲಾಗಿ ರಾಜಕೀಯ ಕೇಂರಿತ ಸಮಾಜವಾಗಿ ಬದಲಾವಣೆ ಆಗುತ್ತಿದ್ದೇವೆ. ಸರ್ಕಾರವೂ ತನ್ನ ಮಿತಿಯನ್ನು ಮರೆತು ತಾನು ಸಮಾಜದ ಎಲ್ಲ ಅಂಗಗಳನ್ನೂ ನಿಯಂತ್ರಿಸಬಲ್ಲೆ, ನಾನೇ ಸಾರ್ವಭೌಮ ಎಂಬ ಭ್ರಮಾಲೋಕದಲ್ಲಿ ತೇಲುತ್ತದೆ. ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣ ಹೊರತುಪಡಿಸಿ ಸಮಾಜದ ಯಾವುದೇ ವಿಷಯ ತನ್ನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಶಾಸಕಾಂಗ ಹೇಳುವುದೇ ಇಲ್ಲ.
ನ್ಯಾಯಾಂಗವೂ ಈ ನಿಟ್ಟಿನಲ್ಲಿ ಅನೇಕ ಬಾರಿ ಶಾಸಕಾಂಗದ ಜತೆಗೆ ಸ್ಪರ್ಧೆಗಿಳಿದ ಉದಾಹರಣೆಗಳಿವೆ. ಶಬರಿಮಲೆ ದೇವಸ್ಥಾನ ಪ್ರವೇಶ ಪ್ರಕರಣ, ಸಲಿಂಗ ಕಾಮ ಹಾಗೂ ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ತೀರ್ಪಿತ್ತಿದ್ದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿರುವ ವಿಷಯಗಳು. ಸಂವಿಧಾನದ ಘನತೆಯನ್ನು, ಭಾವನೆಯನ್ನು ಎತ್ತಿಹಿಡಿಯಬೇಕಾದ್ದು ಪ್ರತಿ ಭಾರತೀಯನ ಕರ್ತವ್ಯವಾದರೂ, ಸಮಾಜದ ಸಂರಚನೆ ಅರ್ಥ ಮಾಡಿಕೊಂಡು ಹೆಜ್ಜೆ ಇಡುವ ಜವಾಬ್ದಾರಿ ಎಲ್ಲರಿಗೂ ಇರಬೇಕು.
ಸಮಾಜದ ಪ್ರತಿ ಸಮಸ್ಯೆಗೂ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದು ಶಾಸಕಾಂಗ ಹಾಗೂ ಅನೇಕ ಬಾರಿ ನ್ಯಾಯಾಂಗದ ಬಲವಾದ ನಂಬಿಕೆ. ಭಾರತದಲ್ಲಿ 2009ರವರೆಗೆ ಆಡಳಿತ ನಡೆಸಿದ ಸರ್ಕಾರಗಳು ತಮ್ಮ ಐದು ವರ್ಷದ ಆಡಳಿತದಲ್ಲಿ ಸರಾಸರಿ 317 ಕಾನೂನು ಜಾರಿ ಅಥವಾ ಮಸೂದೆ ಅಂಗೀಕರಿಸಿವೆ. 2009-14ರ ಯುಪಿಎ-2 ಅವಧಿಯಲ್ಲಿ 179 ಮಸೂದೆಗಳು ಅಂಗೀಕರಿಸಲ್ಪಟ್ಟಿತ್ತು. ಸದ್ಯ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಇಲ್ಲಿವರೆಗೆ 109 ಮಸೂದೆಗಳಿಗೆ ಒಪ್ಪಿಗೆ ನೀಡಿದೆ. ಇದರಲ್ಲಿ ಹೊಸ ಕಾನೂನುಗಳು, ಇರುವ ಕಾನೂನಿಗೆ ತಿದ್ದುಪಡಿ ಸೇರುತ್ತವೆ. ಸಮಸ್ಯೆ ಹೊಸದಾಗಿದ್ದರೂ ಈಗಾಗಲೆ ಇರುವ ಕಾನೂನುಗಳ ಮೂಲಕವೇ ಅವನ್ನು ನಿರ್ವಹಿಸುವ ಸಾಧ್ಯತೆಯನ್ನೂ ಪರಿಗಣಿಸುವುದಿಲ್ಲ. ಸತೀ ಪದ್ಧತಿ ನಿಷೇಧಕ್ಕೆ ಹೊಸ ಕಾನೂನು ರೂಪಿಸಲಾಯಿತು. ಈ ವೇಳೆಗಾಗಲೆ ಆತ್ಮಹತ್ಯೆ ಪ್ರಯತ್ನವನ್ನು ಅಪರಾಧ ಎಂದು ಕಾನೂನು, ಅದಕ್ಕೆ ಶಿಕ್ಷೆಯ ಪ್ರಮಾಣ ಇತ್ತು. ಸತಿ ಪದ್ಧತಿಯನ್ನೂ ಆತ್ಮಹತ್ಯೆಯ ಮತ್ತೊಂದು ವಿಧ ಎಂದು ಪರಿಗಣಿಸಿದರೆ ಇಡೀ ಸಮಸ್ಯೆಯನ್ನು ಹಳೆಯ ಕಾನೂನಿನಲ್ಲೆ ನಿಭಾಯಿಸಬಹುದಿತ್ತು ಎಂಬುದು ಕೆಲವು ತಜ್ಞರ ಅಭಿಪ್ರಾಯ.
ತಮ್ಮ ಹೊಣೆಗಾರಿಕೆಯನ್ನು ಕಡಿಮೆಮಾಡಿಕೊಂಡು, ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಅನೇಕ ಬಾರಿ ಕಾರ್ಯಾಂಗವೂ ಹೊಸ ಕಾನೂನು, ಆದೇಶದ ಮೊರೆ ಹೋಗುತ್ತದೆ. ಮುಂದೆ ಮತ್ತೊಂದು ದೇವಸ್ಥಾನದಲ್ಲಿ ವಿಷ ಸೇವನೆ ಪ್ರಕರಣ ದಾಖಲಾದರೆ, ನ್ಯಾಯಾಲಯ ತಮ್ಮ ಮೇಲೆ ಆಘಾತ ಮಾಡಬಹುದು. ಅದಕ್ಕೆಂದೇ ತಮ್ಮ ರಕ್ಷಣೆ ಸಲುವಾಗಿ ಒಂದು ಆದೇಶ ಹೊರಡಿಸೋಣ. ನ್ಯಾಯಾಲಯ ಕೇಳಿದರೆ ಇದನ್ನು ತೋರಿಸಿದರಾಯಿತು ಎಂಬ ಮನೋಭಾವವೂ ಇರುತ್ತದೆ. ಇಂತಹ ಆದೇಶಗಳು ಅನೇಕ ಬಾರಿ ಲಾಭಕಾರಕವೂ ಹೌದು. ಇದೀಗ ಕೆಲವು ಸಿಸಿಟಿವಿ ಮಾರಾಟಗಾರರು ಮುಜರಾಯಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿರಲಿಕ್ಕೂ ಸಾಕು. ಇಂತಿಷ್ಟು ಅಡುಗೆ ಮನೆಗೆ ಸಿಸಿಟಿವಿ ಅಳವಡಿಕೆಗೆ ಟೆಂಡರ್, ಅದರಲ್ಲಿ ಕಮಿಷನ್ ದಂಧೆಗೆ ಈ ಆದೇಶ ರಹದಾರಿಯೂ ಆಗಬಹುದು.
ಕರ್ನಾಟಕದಲ್ಲಿ ಆರು ಕೋಟಿ ಜನರಿದ್ದು, ಈ ಪೈಕಿ ಎಲ್ಲ ಇಲಾಖೆಗಳ, ಎಲ್ಲ ಸ್ತರದ ಸರ್ಕಾರಿ ನೌಕರರ ಸಂಖ್ಯೆ ಕೇವಲ 6 ಲಕ್ಷವೂ ಇಲ್ಲ. ತನಗೂ ಒಂದು ಮಿತಿಯಿದೆ ಎಂಬುದನ್ನು ಸರ್ಕಾರಿ ವ್ಯವಸ್ತೆ ಮೊದಲು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಅವಶ್ಯಕ ಕ್ರಮಗಳನ್ನು ಸಾಮೂಹಿಕ ಮಾಧ್ಯಮಗಳ ಮೂಲಕ ಪಸರಿಸಬಹುದು. ಪ್ರತಿ ವ್ಯಕ್ತಿಯ ಮೇಲೆ ಕಣ್ಗಾವಲಿಡುವ, ನಿಯಂತ್ರಿಸುವ ಮನಸ್ಥಿತಿ ಅಸಾಧ್ಯ.