ಸೋಮವಾರ, ಡಿಸೆಂಬರ್ 23, 2013

ಮಿಗ್-21 ಯುಗಾಂತ್ಯ: ತೇಜಸ್ ಉದಯ

-------------------------------------------------------------------------------------------------
1971ರ ಯುದ್ಧದಲ್ಲಿ ಪಾಕಿಸ್ತಾನದೊಂದಿಗೆ ಸೆಣೆಸಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಡಿ.15ರ ನಾಲ್ಕು ದಿನ ಹಿಂದಷ್ಟೇ, ಯುದ್ಧದ ಮ್ಯಾನ್ ಆಫ್ ದಿ ಮ್ಯಾಚ್ ಮಿಗ್-21 ವಿಮಾನ ನಿವೃತ್ತಿ ಘೋಷಿಸಿತ್ತು. ಇತ್ತ ಐದು ದಿನ ನಂತರ ಡಿ.20ಕ್ಕೆ ಮಿಗ್ ವಿಮಾನದ ಸ್ಥಾನ ತುಂಬಬಲ್ಲ ತೇಜಸ್ ವಾಯುಪಡೆಗೆ ಸೇರ್ಪಡೆಯಾಗಿದ್ದು ಯೋಗಾಯೋಗವೇ ಇರಬೇಕು.
-------------------------------------------------------------------------------------------------
            14 ಡಿಸೆಂಬರ್ 1971ರ ಆ ದಿನ ಭಾರತದ ಪಾಲಿಗೆ ಸುವಣಾಕ್ಷರಗಳಲ್ಲಿ ಬರೆದಿಡಬೇಕಾದ್ದು. ಬಾಂಗ್ಲಾದೇಶಿಗಳನ್ನು(ಅಂದಿನ ಪೂರ್ವ ಪಾಕಿಸ್ತಾನ)ತಮ್ಮ ಹಿಡಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳುತ್ತೇವೆ ಎಂದು ನಂಬಿದ್ದ ಪಾಕಿಸ್ತಾನ ಸರ್ಕಾರಕ್ಕೆ ಬುದ್ಧಿ ಕಲಿಸಿದ್ದು ಆ ಅಂತಿಮ ಆಘಾತ. ಡಿಸೆಂಬರ್ ಮೂರರಿಂದ ಆರಂಭಗೊಂಡಿದ್ದ ಬಾಂಗ್ಲಾದೇಶ ವಿಮೋಚನಾ ಕದನದಲ್ಲಿ ಪ್ರಾರಂಭದಿಂದಲೇ ಭಾರತ ಮೇಲುಗೈ ಸಾಧಿಸಿತ್ತಾದರೂ, ಭಾರತೀಯ ವಾಯುಸೇನೆಯ 28ನೇ ಸ್ಕಾಡ್ರನ್ ಪೈಲಟ್ ಮಿಗ್-21 ವಿಮಾನದಿಂದ ಹಾರಿಬಿಟ್ಟ ಬಾಂಬ್ ಢಾಕಾದಲ್ಲಿದ್ದ ಗವರ್ನರ್ ಕಚೇರಿ ಬಳಿಗೇ ಬಿತ್ತು ನೋಡಿ, ಪಾಕಿಸ್ತಾನ ಹೌಹಾರಿಹೋಯಿತು. ಉರ್ದು ಭಾಷೆಯನ್ನು ಬಂಗಾಳಿ ಮುಸ್ಲಿಮರ ಮೇಲೆ ಬಲವಂತವಾಗಿ ಹೇರಲು ಹೋಗಿದ್ದ ಪಾಕಿಸ್ತಾನಕ್ಕೆ ಅಂತಿಮ ಗುದ್ದು ನೀಡಿ ಡಿ.15ರಂದು ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ಕಾರಣವಾಗಿದ್ದು ಅಂದಿನ ಸೋವಿಯತ್ ಒಕ್ಕೂಟ ನಿರ್ಮಿಸಿದ್ದ ಮಿಗ್-21 ಯುದ್ಧ ವಿಮಾನ.
          ಮಿಗ್-21 ವಿಮಾನ. ಬಾಂಗ್ಲಾ ಸ್ವತಂತ್ರವೆಂದು ಘೋಷಣೆಯಾಗುವ ಮುನ್ನ ಭಾರತೀಯ ವಾಯುಸೇನೆ ಪಾಕ್‍ನ ಒಟ್ಟು ನಾಲ್ಕು ವಿಮಾನಗಳನ್ನು ಧರೆಗುರುಳಿಸಿತ್ತು. ತೇಝ್‍ಗಾಂವ್ ರನ್‍ವೇ ಮೇಲೆ ಮಿಗ್-21 ಸಿಡಿಸಿದ ಬಾಂಬ್‍ಗಳು ಕುಳಿ ತೋಡಿದ್ದರಿಂದಾಗಿ ಪಾಕ್‍ನ ಎಲ್ಲ `ಸಬ್ರೆ' ವಿಮಾನಗಳು ನಿಲ್ದಾಣದ ಹ್ಯಾಂಗರ್‍ನಲ್ಲೇ ಉಳಿದವು. ಢಾಕಾದ ಗವರ್ನರ್ ಕಚೇರಿ ಬಳಿಗೇ ಬಾಂಬ್ ಸ್ಫೋಟಿಸುವಷ್ಟು ನಿಖರ ದಾಳಿ ನಡೆಸಲು ಭಾರತೀಯ ವಾಯುಸೇನೆ ಪೈಲಟ್ ಬಳಸಿದ್ದು, ಸಾಮಾನ್ಯ ಪ್ರವಾಸಿಗರು ಬಳಸುವ ಟೂರಿಸ್ಟ್ ಗೈಡ್ ಎಂದರೆ ಎಂಥವರಿಗೂ ಅಚ್ಚರಿಯಾಗಬಹುದು. ಅಂದಿನಿಂದಲೂ ಭಾರತೀಯ ಸೇನೆಯ ಬಲಗೈನಂತಿರುವ ಮಿಗ್-21 ವಿಮಾನ ಯುಗ ಇದೀಗ ಅಂತಿಮ ಹಂತಕ್ಕೆ ಬಂದು ಮುಟ್ಟಿದೆ.

 ಪಾಕ್ ಹಾರಾಟಕ್ಕೆ ಕೊನೆ ತೆರೆಯೆಳೆಯುವ ಮುನ್ನ ಮಿಗ್-21 ವಿಮಾನ ಕೇವಲ ಇಂಟರ್ನಲ್ ಟ್ವಿನ್ ಬ್ಯಾರಲ್ ಗನ್ ಮೂಲಕವೇ ಪಾಕ್‍ನ `ಪಿಎಎಫ್ ಎಫ್-104' ವಿಮಾನವನ್ನು ಹೊರದುರುಳಿಸಿದ್ದು ಗನ್ ಬಲಕ್ಕಿಂತ ಹೆಚ್ಚಾಗಿ ಭಾರತೀಯ ಯೋಧರ ಅಂತಃಶಕ್ತಿ ಮತ್ತು ಅದಕ್ಕನುಗಣವಾಗಿದ್ದ
1961ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾದ ಮಿಗ್-21 ವಿಮಾನಗಳು 1965ರ ಪಾಕ್ ಯುದ್ಧದಲ್ಲೇ ತಮ್ಮ ಝಲಕ್ ತೋರಿಸಿದ್ದವು. ಕನಸು ಕಾಣುವಷ್ಟು ಸುಲಭವಾಗಿ ತಮಗಿಚ್ಚೆ ಬಂದಂತೆ ತಿರುಗಿಸಬಹುದಾಗ, ಪಲ್ಟಿ ಹೊಡೆಸಬಹುದಾದ, ತಟ್ಟನೆ 1300 ಕಿಮೀ ಪ್ರತಿ ಗಂಟೆ ವೇಗಕ್ಕೆ ಚಲಿಸಬಹುದಾದ ವಿಮಾನಗಳಿಗೆ ಭಾರತೀಯ ಪೈಲಟ್‍ಗಳು ಮನಸೋತಿದ್ದರು. ಮಿಗ್-21 ಇದ್ದರೆ ಸಾಕು ವಿಶ್ವವದ ಯಾವುದೇ ಶಕ್ತಿ ತಮ್ಮನ್ನು ಹಿಡಿದಿಡಲು ಸಾಧ್ಯವಿಲ್ಲವೆಂಬ ಪೈಲಟ್‍ಗಳ ಪ್ರತಿಕ್ರಿಯೆ ಗಮನಿಸಿದ ಭಾರತ ಸರ್ಕಾರ, ಒಂದು ಹಂತದಲ್ಲಿ ವಾಯುಸೇನೆಯ ಶೇ.60ರಷ್ಟು ಯುದ್ಧ ವಿಮಾನಗಳು ಮಿಗ್‍ನಿಂದ ತುಂಬುವಷ್ಟು ಖರೀದಿಸಿತು. ಪ್ರಸಕ್ತ ವಾಯುಸೇನೆ ಮುಖ್ಯಸ್ಥ ಎನ್‍ಎಕೆ ಬ್ರೌನೆ ಕಳೆದವಾರ ಹೇಳಿದಂತೆ ಪ್ರಸಕ್ತ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶೇ.80 ಪೈಲಟ್‍ಗಳು ಒಂದಿಲ್ಲೊಂದು ಸಮಯದಲ್ಲಿ ಮಿಗ್ ವಿಮಾನಗಳನ್ನು ಚಲಾಯಿಸಿದ್ದಾರೆ. ಆದರೇನು ಮಾಡೋದು? ಎಲ್ಲಾ ಮಾನವ ನಿರ್ಮಿತ ವಸ್ತುಗಳಿಗೂ ಒಂದು ಅಂತ್ಯವಿರುವಂತೆ, ಮಿಗ್ ವಿಮಾನ ಭಾರತೀಯ ಸೇನೆಗೆ ತನ್ನ 50 ವರ್ಷದ ಅತ್ಯಮೂಲ್ಯ ಸೇವೆಗೆ ಅಂತಿಮ ವಿದಾಯ ಹೇಳುತ್ತಿದೆ. ಇನ್ನೇನು ಕೊನೇ ಹೆಜ್ಜೆಯಷ್ಟೇ ಬಾಕಿಯಿದ್ದು, ಇನ್ನು 10 ವರ್ಷಗಳಲ್ಲಿ ಮಿಗ್ ವಿಮಾನವನ್ನು ಕೇವಲ ವಸ್ತುಸಂಗ್ರಹಾಲಯದಲ್ಲಿ ಮಾತ್ರ ನೋಡಲು ಸಾಧ್ಯ.
50 ವರ್ಷಗಳಿಂದ ಭಾರತಕ್ಕೆ ಸಲ್ಲಿಸಿದ ಸೇವೆಯಿಂದ ಮಿಗ್-21ಕ್ಕೆ ನಿವೃತ್ತಿ ಘೋಷಿಸುವ ಕಾರ್ಯಕ್ರಮ ಕಳೆದ ವಾರ ಪಶ್ಚಿಮಬಂಗಾಳದ ಕಾಲೈಕುಂಡಾ ವಾಯುನೆಲೆಯಲ್ಲಿ ಬ್ರೌನೆ ಸಮ್ಮುಖದಲ್ಲಿ ನಡೆಯಿತು. ತ್ರಿಶೂಲ್ ಬ್ರೇಕ್ ಹಾರಾಟ ಕಸರತ್ತು ನಡೆಸುವ ಮೂಲಕ ಮಿಗ್-21 ವಿಮಾನದ ಅಂತಿಮ ಹಾರಾಟಕ್ಕೆ ಮಿಗ್-27 ವಿಮಾನಗಳು ನಾಂದಿ ಹಾಡಿದವು. ಇನ್ನೂ 27 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಎಲ್. ನಾಗರಾಜನ್ ಮಿಗ್-21ರ ಅಂತಿಮ ಹಾರಾಟ ನಡೆಸಿ ವಿಮಾನದ ಫಾರ್ಮ್-700(ಸೇವೆಯಿಂದ ನಿವೃತ್ತಿಗೆಂದು ನೀಡುವ ಅರ್ಜಿ) ನೀಡುವ ಸಮಯ ತಾಂತ್ರಿಕವಾಗಿರುವ ಬದಲಿಗೆ ಭಾವನಾತ್ಮಕವಾಗಿದ್ದು, ಮಿಗ್ ಹೆಗ್ಗಳಿಕೆ.
ಇಷ್ಟೆಲ್ಲಾ ಹೆಗ್ಗಳಿಕೆಯ ಮಿಗ್‍ನ ಮತ್ತೊಂದು ಮುಖವೂ ಇದೆ.
ಭಾರತೀಯ ಸೇನೆಗೆ ತನ್ನ  ಸೇವೆ ಅವಧಿಯಲ್ಲಿ ಮಿಗ್ ಅಪಘಾತದಲ್ಲಿ ಒಟ್ಟು 218 ಜನರು ಸಾವನ್ನಪ್ಪಿದ್ದಾರೆ. ವಾಯುಸೇನೆ ಕೊಂಡ ಅಥವಾ ತಯಾರಿಸಿದ 872 ವಿಮಾನಗಳ ಪೈಕಿ ಅರ್ಧದಷ್ಟನ್ನು ಅಂದರೆ 482 ವಿಮಾನಗಳು ಅಪಘಾತದಲ್ಲಿ ಭಸ್ಮವಾಗಿರುವ ವಿಚಾರವನ್ನು ರಕ್ಷಣಾ ಸಚಿವರು ಕಳೆದ ವರ್ಷ ರಾಜ್ಯ ಸಭೆಗೆ ಉತ್ತರದಲ್ಲಿ ತಿಳಿಸಿದ್ದರು. ಮøತಪಟ್ಟವರಲ್ಲಿ 171 ಪೈಲಟ್, ಇತರೆ ಸೇವೆಗೆ ಸೇರಿದ 8ಮತ್ತು 39 ನಾಗರಿಕರು ಸೇರಿದ್ದಾರೆ.

ಜನರು ಸಾವಿಗೀಡಾದದ್ದನ್ನು ನೋಡಿದ ನಾಗರಿಕರು, ಮಾಧ್ಯಮಗಳು ಮತ್ತು ತಜ್ಞರು `ಹಾರಾಡುವ ಶವಪೆಟ್ಟಿಗೆಗಳು', `ವಿಧವೆಯರ ಕಾರ್ಖಾನೆ' ಎಂಬ ಎರಡೆರಡು ಹೆಸರನ್ನು ಮೆಗ್-21ಕ್ಕಿಟ್ಟರು. ವಿಮಾನದಲ್ಲಿನ ತಾಂತ್ರಿಕ ದೋಷ ಸರಿಪಡಿಸಲು ಡಿಆರ್‍ಡಿಒ, ಎಚ್‍ಎಎಲ್ ನಡೆಸಿದ ಎಲ್ಲ ಪ್ರಯತ್ನಗಳೂ ನೀರಿನಲ್ಲಿ ಹೋಮವಾದವೇ ಹೊರತು ಮಿಗ್ ಕ್ರ್ಯಾಷ್ ತಡೆಯಲಾಗಲಿಲ್ಲ. ಯಾವುದೇ ವಿಮಾನದಿಂದಲೂ ಸಾಧ್ಯವಿಲ್ಲದ, ಸುಮಾರು 350 ಕಿಮೀ ವೇಗದಲ್ಲಿ ಲ್ಯಾಂಡ್ ಆಗುವ ಮತ್ತು ವಿಶೇಷ ಕ್ಯಾನೋಪಿ ವಿನ್ಯಾಸದ ಕಾರಣ ರನ್‍ವೇ ಸ್ಪಷ್ಟವಾಗಿ ಕಾಣಿಸದ ಪರಿಣಾಮ ಹೆಚ್ಚಿನ ದುರಂತಗಳು ಸಂಭಿಸಿವೆ ಎನ್ನಲಾಗುತ್ತದೆ.

 ಮಿಗ್-21
            ಇದೆಲ್ಲದರ ಹೊರತಾಗಿ ಸೇನೆ ಅಧಿಕಾರಿಗಳ ಮೇಲೆಯೂ ಆಪಾದನೆಗಳಿವೆ. ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪೈಲಟ್‍ಗಳಾದರೆ, ವಿಮಾನದಲ್ಲಿ ಒಂದು ಸಣ್ಣ ತೊಂದರೆ ಕಾನಿಸಿಕೊಂಡರೂ ಸಾಕು `ಎಜೆಕ್ಟ್' ಬಟನ್ ಒತ್ತಿ ಸೊಯ್ಯನೆ ಪ್ಯಾರಾಚೂಟ್‍ನಲ್ಲಿ ಹೊರಗೆ ಹಾರಿಬಿಡುತ್ತಾರೆ. ಆದರೆ ಭಾರತದಲ್ಲಿ ಹಾಗಲ್ಲ. ಮಿಗ್ ವಿಮಾನಗಳು ಉತ್ಕೃಷ್ಠತೆ ಹೊಂದಿವೆ ಎಂದು ನಿರೂಪಿಸಬೇಕೆಂದು ಪಣ ತೊಟ್ಟಿದ್ದ ಅಧಿಕಾರಿಗಳು ಪೈಲಟ್‍ಗಳಿಗೆ ವಿಮಾನವನ್ನು ಕಡ್ಡಾಯವಾಗಿ ಲ್ಯಾಂಡ್ ಮಾಡಲೇಬೇಕೆಂದು ಮೌಖಿಕ ಆದೇಶ ನೀಡಿದ್ದರು ಎಂಬ ಮಾತೂ ಇದೆ. ವಿಮಾನದ ಬಾಲಕ್ಕೆ ಬೆಂಕಿ ಹೊತ್ತಿಕೊಂಡಿದ್ದ ನಂತರವೂ ಹೇಗಾದರೂ ಲ್ಯಾಂಡ್ ಮಾಡಬೇಕೆಂಬ ಧಾವಂತದಲ್ಲಿಯೇ ಹಲವು ದುರಂತಗಳು ನಡೆದುಹೋಗಿ ಪೈಲಟ್‍ಗಳು ಸಾವನ್ನಪ್ಪಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಮಿಗ್ ಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಧಿಕಾರಿಗಳು, ಬಹುತೇಕ ವಿಮಾನ ಅಪಘಾತಗಳಿಗೆ ಪೈಲಟ್‍ಗಳ ತಪ್ಪುಗಳೇ ಕಾರಣ ಎಂದು ಬೇರೆ ಹೇಳಿದ್ದು ಬಹಳಷ್ಟು ಪೈಲಟ್ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದ್ದು ಸುಳ್ಳಲ್ಲ. ಇದೆಲ್ಲದರ ಕಾರಣ ದೆಹಲಿ ಇಂಡಿಯಾ ಗೇಟ್ ಬಳಿ 2003ರಲ್ಲಿ ಪ್ರತಿಭಟನೆ ನಡೆಸಿದ ಮಿಗ್ ಸ್ವರ್ಗಸ್ಥ ಪೈಲಟ್‍ಗಳ ಕುಟುಂಬ ಸದಸ್ಯರು, ಮಿಗ್ ವಿಮಾನಗಳನ್ನು ಕ್ರ್ಯಾಷ್‍ಪ್ರೂಫ್ ಮಾಡಬೇಕೆಂದು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಲ್ಲಿ ಮನವಿ ಮಾಡಿದ್ದರು.
ತೇಜಸ್
ಮಿಗ್ ವಿಮಾನ ಪತನಕ್ಕೆ ಪೈಲಟ್‍ಗಳನ್ನು ದೋಷಿ ಮಾಡುವುದರ ಹಿಂದೆ ರಾಜಕೀಯ, ಭ್ರಷ್ಟಾಚಾರ, ದೇಶದ್ರೋಹದ ಎಳೆಯನ್ನೇ ಹಿಡಿದು ಬಾಲಿವುಡ್ ಮಿಸ್ಟರ್ ಪಫೆಕ್ಟ್ ಅಮೀರ್ ಖಾನ್ ನಿರ್ಮಿಸಿದ ರಂಗ್ ದೇ ಬಸಂತಿ ಸಿನಿಮಾ ಸಹ ತೆರೆ ಕಂಡಿತು. ಮಿಗ್ ವಿಮಾನ ಪತನವಾಗುವುದರಿಂದ ನಾಗರಿಕರು ಸಾಯುತ್ತಾರಾದ್ದರಿಂದ ಎಜೆಕ್ಟ್ ಮಾಡದೇ ಸುರಕ್ಷಿತ ಸ್ಥಳದಲ್ಲಿ ಕ್ರ್ಯಾಷ್ ಮಾಡಿ ವಾಯುಸೇನೆ ಪೈಲಟ್ ಸ್ನೇಹಿತನೊಬ್ಬ ತಾನೂ ಸಾವನ್ನಪ್ಪುತ್ತಾನೆ. ವಿಮಾನ ಪತನವಾಗಲು ಪೈಲಟ್ ತಪ್ಪು ಕಾರಣ ಎಂದು ರಾಜಕಾರಣಿ ದೂರಿದ್ದನ್ನು ಸಹಿಸಲಾರದ ಸ್ನೇಹಿತರ ಪ್ರತೀಕಾರವೇ ಸಿನಿಮಾದ ಕೇಂದ್ರ ಕಥೆ.
ಇಷ್ಟು ವರ್ಷಗಳ ಪರಿಶ್ರಮದ ನಂತರ ಇದೀಗ ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ(ಎಲ್‍ಸಿಎ)ಮಿಗ್-21ಕ್ಕೆ ಪರ್ಯಾಯವಾಗಿ ಗೋಚರಿಸುತ್ತಿದೆ. ಮಿಗ್-21ಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಬಹುದಾದ ವಿನ್ಯಾಸದ ತೇಜಸ್ ಬೆಂಗಳೂರಿನ ಎಚ್‍ಎಲ್‍ನಲ್ಲೇ ನಿರ್ಮಾಣವಾಗುತ್ತಿರುವುದು ನಮಗೂ ಹೆಮ್ಮೆಯ ಸಂಗತಿ. 2011ರಲ್ಲೇ ತೇಜಸ್ ಪ್ರಾರಂಭಿಕ ಹಾರಾಟ ಅನುಮತಿ ಪಡೆದಿದೆ. ಇದೀಗ ಇದೇ ಡಿ.20ರಂದು ಎರಡನೇ ಹಾರಾಟ ಅನುಮತಿಯನ್ನು ತೇಜಸ್ ಪಡೆಯಲಿದ್ದು, ಭಾರತೀಯ ಸೇನೆಗೆ ರಕ್ಷಣಾ ಸಚಿವ ಎ.ಕೆ. ಆಂಟನಿಯವರಿಂದ ಹಸ್ತಾಂತರವಾಗಲಿದೆ. ತೇಜಸ್ ಸೇರ್ಪಡೆ ಭರವಸೆ ಕಾರಣವೇ ವಾಯುಸೇನೆ ಮಿಗ್ 21ಕ್ಕೆ ಗೇಟ್‍ಪಾಸ್ ನೀಡುತ್ತಿದೆ ಎನ್ನಲಾಗಿದೆ. ಇಷ್ಟಾದ ನಂತರವೂ ತೇಜಸ್ ಈಗಲೇ ಯುದ್ಧಕ್ಕೆ ತೆರಳಲು ಅನುಮತಿಯಿಲ್ಲ. ಮೊದಲಿಗೆ ವಾಯುಸೇನೆ ಪೈಲಟ್‍ಗಳು ತರಬೇತಿ ಪಡೆಯಬೇಕು. ಆಕಾಶದಲ್ಲಿಯೇ ಇಂಧನ ಭರಿಸುವ ತಂತ್ರಜ್ಞಾನ ಸೇರಿದಂತೆ ವಿಮಾನದಕ್ಕೆ ಮತ್ತಷ್ಟು ತಾಂತ್ರಿಕ ಗುಣಲಕ್ಷಣಗಳನ್ನು ಎಚ್‍ಎಎಲ್, ಡಿಆರ್‍ಡಿಒ ಸೇರಿಸಿದ ನಂತರ, 2014ರ ಕೊನೆಯ ಭಾಗದಲ್ಲಿ ಅಂತಿಮ ಹಾರಾಟ ಅನುಮತಿ(ಎಫ್‍ಒಎಸ್) ಪಡೆದ ನಂತರವಷ್ಟೇ ತೇಜಸ್ ಯುದ್ಧ ಸನ್ನದ್ಧ. ಇದೀಗ ಭಾರತದ ಬಳಿಯಿರುವ 200ಕ್ಕೂ ಹೆಚ್ಚು ಮಿಗ್ ವಿಮಾನಗಳು ಹಂತ ಹಂತವಾಗಿ 2018ರ ವೇಳೆಗೆ ಹೊರಹೋಗಲಿವೆ.
               ಇಷ್ಟೆಲ್ಲಾ ಆದ ನಂತರವೂ ಮಿಗ್-21 ಎಂಬ ಪ್ರೀತಿಪಾತ್ರ ಸಂಗಾತಿ ನೆನಪು ಮಾತ್ರ ಎಲ್ಲ ಬದುಕಿರುವ ವಾಯುಸೇನೆ ಪೈಲಟ್‍ಗಳ ಮನದಿಂದ ಮಾಸಲು ಸಾಧ್ಯವಿಲ್ಲ ಎಂಬುದು ಕಳೆದ ವಾರ ಕಾಲೈಕುಂಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಒಟ್ಟಿನಲ್ಲಿ ಮಿಗ್-21 ವಿಮಾನ, ಬಾಲಿವುಡ್‍ನ ಯಾವುದೇ `ವಿಲನ್ ಕಮ್ ಹೀರೋ' ಪಾತ್ರಗಳಿಗಿಂತ ಕಡಿಮೆಯಿಲ್ಲದಷ್ಟು ಗೊಂದಲ ಮೂಡಿಸುವುದಂತೂ ಸತ್ಯ.