ಕಾಲಗತಿ ತಡೆಯಲು ಹೋಗಿ ಗತಕಾಲ ಸೇರಿಬಿಟ್ಟರೆ?
ಕರ್ನಾಟಕದ ಜನಸಂಖ್ಯೆಯನ್ನು ಅದಷ್ಟೋ ವರ್ಷ ಮುಕ್ಕೋಟಿ-ಮುಕ್ಕೋಟಿ ಎನ್ನುತ್ತಲೇ ಇದ್ದರು. ಆದರೆ ಅದ್ಯಾವಾಗ ಚತುಷ್ಕೋಟಿ, ಪಂಚಕೋಟಿಯಾಗಿ, ಆರುಕೋಟಿಗೆ ಬಂದಿತೋ ಎಂಬುದು ತಿಳಿಯಲೇ ಇಲ್ಲ. ಇತಿಹಾಸ ಬರೆಯುವುದು ಈಗ ಅಷ್ಟೇನೂ ಸುಲಭದ ಕೆಲಸವಲ್ಲ. 1095ರಿಂದ 1272ರ ವರೆಗಿನ 179ವರ್ಷಗಳಲ್ಲಿ ಕ್ರಿಶ್ಚಿಯನ್ನರು ಮುಸ್ಲಿಮರ ವಿರುದ್ಧ 9ಬಾರಿ ಕ್ರೂಸೆಡ್ ನಡೆಸಿದರು ಎಂದು ಹೈಸ್ಕೂಲ್ ಪಾಠಗಳಲ್ಲಿ ಹೇಳಿದಷ್ಟು ಸಲೀಸಾಗಿ, ಕೇವಲ 239 ದಿನಗಳ ಸದಾನಂದಗೌಡರ ಆಡಳಿತವನ್ನು ವರ್ಣಿಸಲು ನಮಗೆ ಸಾಧ್ಯವಿಲ್ಲ. ದಿನಕ್ಕೆ ನೂರಾರು ಬೆಳವಣಿಗೆಗಳು, ಕನ್ನಡದ ನಾಲ್ಕೈದು-ಹಿಂದಿ ಇಂಗ್ಲಿಷ್‌ನ ಏಳೆಂಟು ನ್ಯೂಸ್‌ಚಾನೆಲ್‌ಗಳು, ಊರುತುಂಬಾ ಅಂತರ್ಜಾಲ, ತಲೆತುಂಬಾ ಮಾಹಿತಿಯ ಮಹಾಪೂರ. ಸೋಜಿಗವೆಂದರೆ ಇಷ್ಟೆಲ್ಲಾ ಇದ್ದೂ ಸಹ ವೋಟಿಗಾಗಿ ನೊಟು ಪ್ರಕರಣದಲ್ಲಿ ಬಿ.ಜೆ.ಪಿ ಸಂಸದರನ್ನು ಜೈಲಿಗಟ್ಟಿದ್ದು ಸರಿಯೋ ತಪ್ಪೋ ಎಂದು ಎದುರಾಳಿಗಳಿಗೂ ಮನವರಿಕೆಯಾಗುವಂತೆ-ಗಂಟೆಗಟ್ಟಲೆ ಚರ್ಚೆಯ ನಂತರವೂ-ಮಾಡಲು ಘಟಾನುಘಟಿ ವಕೀಲರಾದ ಅರುಣ್ ಜೈಟ್ಲಿ, ಅಭಿಷೇಕ್ ಸಿಂಘ್ವಿ, ಆನಂದ್ ಶರ್ಮ, ಕಪಿಲ್ ಸಿಬಲ್, ರವಿಶಂಕರ್ ಪ್ರಸಾದ್ ಅಂಥವರಿಗೇ ಸಾಧ್ಯವಾಗುತ್ತಿಲ್ಲ. ಟಿ.ವಿ ಚರ್ಚೆಯ ನಂತರ ಯಾವೊಬ್ಬನೂ ಸಹ ತನ್ನ ಮೊದಲಿದ್ದ ಮನೋಭಾವವನ್ನು ಬದಲಿಸಿಕೊಂಡು ತೆರಳಿದ ಒಂದೇ ಒಂದು ಉದಾಹರಣೆ ಇಲ್ಲ. ಹಾಗಿದ್ದಾಗ, ಮೊಘಲರ ಆಡಳಿತದಲ್ಲಿ ಜನಜೀವನ, ಕೃಷ್ಣದೇವರಾಯನ ಕಾಲದ ಆಡಳಿತ ಎಂದೆಲ್ಲಾ ಇದಮಿತ್ಥಂ ಎಂದು ಹೇಗೆ ಹೇಳಲು ಸಾಧ್ಯ? ತನ್ನ ಓದಿಗೆ ನಿಲುಕಿದ, ತನ್ನ ಜ್ಞಾಪಕದಲ್ಲಿ ಉಳಿದ, ತನ್ನ ಪೂರ್ವಾಗ್ರಹ ಮನಸ್ಸಿನಿಂದ ಒಬ್ಬ ತಜ್ಞ ಬರೆದ ಲೇಖನವನ್ನೇ ಇತಿಹಾಸ ಎನ್ನಬಹುದೇ ಹೊರತು ಇತಿ + ಹಾಸ ಎನ್ನುವಂತೆ ಹೀಗೇನಡೆದದ್ದು ಎನ್ನಲಾಗದು.
ಎರಡು ದಿನ ಟಿ.ವಿ, ಪೇಪರ್ ನೋಡದೇ ನಿಮ್ಮ ಸ್ನೇಹಿತರ ಅಡ್ಡಾಗೆ ಹೋಗಿ ಅವರ ಮಾತು ಕೇಳಿಸಿಕೊಳ್ಳಿ. ಏನೋ ಹೊಸ ವಿಚಾರಗಳು, ಒಂದಕ್ಕೂ ಲಿಂಕ್ ಸಿಗುತ್ತಾ ಇಲ್ಲ, ಯಾವುದೋ ಹೊಸ ಪ್ರಪಂಚಕ್ಕೆ ಬಂದಂತಹ ಅನುಭವ. ಎರಡೇ ದಿನದಲ್ಲಿ ನೀವು ಔಟ್‌ಡೇಟೆಡ್ ಆಗಿರುತ್ತೀರಿ. ಕಾಲದ ವೇಗಕ್ಕೆ ಸೆಡ್ಡು ಹೊಡೆದು ವರ್ಷಗಟ್ಟಲೆ ನಿಂತಲ್ಲೇ ನಿಂತಿರುವುದು ಟಿ.ವಿ ಧಾರಾವಾಹಿಗಳೆಂಬ ಗಟ್ಟಿಗಿತ್ತಿಯರೇ ಹೊರತು, ಸುದ್ದಿಗಳೆಂಬ ಮಿಣುಕು ಹುಳಗಳಲ್ಲ.
ಖಳನಟ ವಜ್ರಮುನಿ ಕೆನ್ನೆಯಂತಹ ರಸ್ತೆಗಳಲ್ಲಿ ಕುಟುಕುಟು ಶಬ್ದ ಮಾಡಿಕೊಂಡು, ಇವತ್ತೇ ಮನೆ ಸೇರುತ್ತೇನೋ ಇಲ್ಲವೋ ಎನ್ನುತ್ತಿದ್ದ ಲೂನಾದಂತೆ ಚಲಿಸುತ್ತಿದ್ದ ಕಾಲಚಕ್ರ ಇಂದು ಹೇಮಾಮಾಲಿನಿ ಕೆನ್ನೆಯಂತಹ ನ್ಯಾಷನಲ್ ಹೈವೇಗಳಲ್ಲಿ 200ಕಿ.ಮೀ ವೇಗದಲ್ಲಿ ಹಾರ್ಲೆ ಡೇವಿಡ್‌ಸನ್‌ನಂತೆ ಚಲಿಸುತ್ತಿದೆಯೇನೋ ಎನ್ನಿಸುತ್ತಿದೆ.


ಈ ವೇಗದ ಚಕ್ರಕ್ಕೆ ಸಿಕ್ಕಿ ನರಳಿದ ಮತ್ತೊಬ್ಬ, ನಮ್ಮ ರೈತ. ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಅವನನ್ನು ಇದ್ದಕ್ಕಿದ್ದಂತೆ ಜಾಗತೀಕರಣ ಎಂಬ ಒಲಿಂಪಿಕ್ ರೇಸ್‌ಗಿಳಿಸಿ, ಇಲ್ಲಿ ಎಲ್ಲರೂ ಸಮಾನರು, ಸಮಾನ ಅವಕಾಶಗಳು ಎನ್ನಲಾಯಿತು. ಫಲಿತಾಂಶ-ಓಡಲಾಗದ ರೈತ ಮುಗ್ಗರಿಸಿ ಬಿದ್ದ. ಮಣ್ಣು ಮುಕ್ಕಿದ್ದು ಇಡೀ ದೇಶ. ಮಕಾಡೆ ಮಲಗಿದ ಅವನ ಮೇಲೆ ರತ್ನಗಂಬಳಿ ಹಾಸಿ ಎಂ.ಎನ್.ಸಿ ಗಳಿಗೆ ಸ್ವಾಗತ, ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ಗಳು, ರೈತರ ಫಲವತ್ತಾದ ಭೂಮಿ ಅವರ ಕೈಗಿತ್ತು ಭರ್ಜರಿ ಒಚಿಣ ಊಟಗಳು. ಬೆಳೆದ ಫಸಲಿನ ಬೆಲೆ ಇಳಿಕೆ, ಮಾರುಕಟ್ಟೆ ಸಮಸ್ಯೆ, ದಲ್ಲಾಳಿಗಳ ದಬ್ಬಾಳಿಕೆ ನಡುವೆಯೂ ತಾನು ಕೃಷಿ ಮಾಡುತ್ತೇನೆಂದರೆ ಬಂಗಾಳದಲ್ಲಿ ಗುಂಡಿನ ಧಾಳಿ, ಕರ್ನಾಟಕದಲ್ಲಿ ಗ್ರೆಗೊರಿ ಪತ್ರಾವೋನ ಮನೆ ನೆಲಸಮ, ಕೊನೆಗೆ ತನ್ನ ಜಮೀನಿಗೇ ತಾನು ಅತಿಕ್ರಮ ಪ್ರವೇಶಿಗ ಎಂಬ ಹಣೆಪಟ್ಟಿ.
ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಂತೂ ಹಿಂದುಳಿದವರ ಸಂಖ್ಯೆ ದಿನೇದಿನೇ ಏರುತ್ತಲೇ ಇದೆ. ಕಂಪ್ಯೂಟರ್ ಕ್ಲಾಸ್‌ಗಳಿಗೆ ಹೋಗಿ ವಿಂಡೋಸ್ ಎಕ್ಸ್‌ಪಿ ಯನ್ನು ಕಲಿತು ಹೊರಗೆ ಬರುವಷ್ಟರಲ್ಲಿ ವಿಂಡೋಸ್ 7, 8ರ ಅವತಾರ ಆಗಿಹೋಗಿವೆ. ನನ್ನದು ಕಲರ್ ಮೊಬೈಲ್ ಗೊತ್ತಾ ! ಎಂದು ಹೆಮ್ಮೆಪಡುತ್ತಿರುವಾಗಲೇ ಐಫೋನ್ ಗಳು ಲಗ್ಗೆ ಇಟ್ಟಿವೆ. ಸಾಲ ತೀರಿಸಿಕೊಂಡ ದ್ವಿಚಕ್ರ ವಾಹನ ಪೂರ್ಣ ತನ್ನದಾಗುವ ಮೊದಲೇ ಅದು ಹಳೇ ಮಾಡೆಲ್ ಪಟ್ಟಿ ಸೇರಿಬಿಟ್ಟಿರುತ್ತದೆ.
ಎಲ್ಲಿಗೆ ಮುಟ್ಟಬಹುದು ಈ ವೇಗದ ಸ್ಪರ್ಧೆ? ಇದಕ್ಕೆಲ್ಲ ಮೂಲ ಪುರುಷರು ಯಾರು? ಅಮೆರಿಕ, ಚೀನಾ, ರಷ್ಯಾ, ರಾಜಕಾರಣಿಗಳು, ಬಹುರಾಷ್ಟ್ರೀಯ ಕಂಪೆನಿಗಳು, ಸರ್ಕಾರಿ ಅಧಿಕಾರಿಗಳು,.... ಯಾರು? ಕಾರಣ ಯಾರೇ ಇರಲಿ. ನಿಜವಾಗಲೂ ಬೇಕಿತ್ತಾ ಕಣ್ಣಿಗೆ ಏನೂ ಕಾಣದಂತೆ ಮಾಡುವ, ಗೊಂದಲದ ಧೂಳಲ್ಲಿ ನಮ್ಮನ್ನು ದಾರಿತಪ್ಪಿಸುವ ಈ ವೇಗ?