ಗುರುವಾರ, ಜುಲೈ 21, 2011

ಸರ್ಕಾರಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಕಲಿಯುವ ಹಕ್ಕಿಲ್ಲವೇ?


ಗೀತೋಪದೇಶ
         ರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎಂದರೆ ಪ್ರಯೋಗಾಲಯದಲ್ಲಿ ಸಾಕುವ ಇಲಿಗಳಂತೆ ಆಗಿದ್ದಾರೆ. ಅವರಿಗೆ ತಮ್ಮದೇ ಆದ ಭಾವನೆಗಳಿಲ್ಲ, ತಮಗೆ ಬೇಕಾಗಿರುವುದನ್ನು ಕೇಳುವ ಸ್ವಾತಂತ್ರ್ಯವೂ ಇಲ್ಲ. ದೇಶದಲ್ಲಿ ನಡೆಯುವ ಯಾವುದೇ ಹೊಸ ಪ್ರಯೋಗಗಳು ಸರ್ಕಾರಿ ಶಾಲೆಗಳಲ್ಲೇ ನಡೆಯುತ್ತವೆ ಅವಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಹಾಗೂ ಶಿಕ್ಷರನ್ನೇ ಉಪಯೋಗಿಸಿಕೊಳ್ಳಲಾಗುತ್ತದೆ. ಬುದ್ದಿಜೀವಿಗಳು, ಸಮಾಜವಾದಿಗಳೆನಿಸಿಕೊಂಡವರು ಎ.ಸಿ ರೂಮ್‌ಗಳಲ್ಲಿ ಕೂತು ತಾವು ವಿಶ್ವವಿದ್ಯಾಲಯದ ಮಟ್ಟದಲ್ಲಿ ಓದಿದ ವಿದೇಶೀ ಹರುಕು-ಮುರುಕು ಸರಕುಗಳನ್ನು ಸರ್ಕಾರಿ ಶಾಲಾ ಮಕ್ಕಳ ತಲೆಗೆ ಕಟ್ಟುತ್ತಿದ್ದಾರೆ.
  
ಇತ್ತ ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಪಠ್ಯದಲ್ಲಿ ಹಿಂದೆಲ್ಲಾ ಇದ್ದ ದೇಸೀ, ಸ್ಥಳೀಯ, ಭಾವನಾತ್ಮಕ ಪಾಠಗಳನ್ನೆಲ್ಲಾ ಕಳೆದುಕೊಂಡು ಕಾಗಕ್ಕ-ಗೂಬಕ್ಕನ ಕಥೆಗಳನ್ನು ಕಲಿಯುತ್ತಿದ್ದರೆ, ಅತ್ತ ಖಾಸಗಿ ಶಾಲೆಗಳು, International ಶಾಲೆಗಳು ತಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದಗಣಿತ, ಸಂಸ್ಕ್ಕತಗಳನ್ನು ಸರ್ಕಾರಿ ಪಠ್ಯಕ್ರಮದ ಹೊರತಾಗಿ ಕಲಿಸುತ್ತಿವೆ. ಶಾಲೆಗಳಲ್ಲಿ ಹೇಳಿಕೊಡದಿದ್ದಲ್ಲಿ ವಿಶೇಷವಾದ ಭಗವದ್ಗೀತೆ, ವೇದಗಣಿತ ಕ್ಲಾಸ್‌ಗಳಿಗೆ ಹಣತೆತ್ತು ಹೋಗುತ್ತಿದ್ದಾರೆ. ತಮ್ಮ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳು ಬರುತ್ತವೆ ಎಂದು ಹೇಳಿಕೊಳ್ಳುವುದು ಇಂದು ನಗರಗಳ ಪೋಷಕರಿಗೆ ಹೆಮ್ಮೆಯ ಮಾತಾಗಿದೆ. ಆದರೆ, ಸರಿಯಾಗಿ ಶಾಲೆಯ ಫೀಸನ್ನೇ ಕಟ್ಟಲು ಹೆಣಗುವ  ಸರ್ಕಾರಿ ಶಾಲಾ ಮಕ್ಕಳಿಗೆಲ್ಲಿಂದ ಬರಬೇಕು ಭಗವದ್ಗೀತೆ ಕ್ಲಾಸ್‌ನ ಭಾಗ್ಯ? 

Students of Universal Public School
 receiving their prizes  for Bhagavadgita Competition 
ಸಮಾಜ, ಸಮಾಜವಾದ ಎಂದೆಲ್ಲಾ ಹಾರಾಡುವ ನಮ್ಮ ಬುದ್ದಿಜೀವಿಗಳೆನ್ನುತ್ತಾರೆ, ’ಶಾಲೆಗಳಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಪಾಠಗಳನ್ನು ಕಲಿಸಬೇಕು, ಪಾಠಗಳು ಜಾತ್ಯಾತೀತವಾಗಿರಬೇಕು’ ಎಂದು. ಆದರೆ ಅವರು ಸಮಾಜಶಾಸ್ತ್ತ್ರದ ಮೂಲತತ್ವಗಳಲ್ಲೇ ಇರುವ, ’ಕಲೆ, ಮೌಲ್ಯ, ನೈತಿಕತೆ, ನಂಬುಗೆಗಳು, ಆದರ್ಶಗಳು-ಇಂತಹ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪದ್ಧತಿಯನ್ನು ಬಳಸುವುದು ಹಾಗೂ ಅದನ್ನು ಅಳೆಯುವುದು ಸಾಧ್ಯವಿಲ್ಲ’ ಎಂಬ ಮಾತನ್ನು ಮರೆತಂತಿದೆ. ಇವರ ’ವೈಜ್ಞಾನಿಕ’ ಎಂಬ ಪದ ಹಿಡಿದುಕೊಂಡು ಶಾಲಾ ಪಠ್ಯಕ್ರಮ ತಯಾರಿಸಿದರೆ, ಮಕ್ಕಳಿಗೆ ಮೇಲೆ ಹೇಳಿದ ಯಾವ ವಿಷಯಗಳನ್ನೂ ಕಲಿಸಲಾಗುವುದಿಲ್ಲ. ಬದಲಿಗೆ ಮಕ್ಕಳ ತಲೆ ಇಂಟರ್ನೆಟ್‌ನಂತೆ ಬೇಕು-ಬೇಡದ ಎಲ್ಲಾ ವಿಷಯಗಳನ್ನೂ ತುಂಬಿಕೊಂಡಿರುವ ಗೊಬ್ಬರ ಗುಂಡಿಯಾಗುತ್ತದೆ. ಇನ್ನು ಇವರು ಹೇಳುವ ಜಾತ್ಯಾತೀತ ಎಂಬ ತತ್ವವನ್ನು ಪ್ರಪಂಚದ ಯಾವ ದೇಶ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಹೇಳಿ? ಅದೊಂದು ಮುಖವಾಡ ಅಷ್ಟೆ. 

          ಇಂದಿನ ಶಿಕ್ಷಣದಲ್ಲಿ IQ(Intelligent Quotient) ಅನ್ನು ಮಾತ್ರ ಬೋಧಿಸಲಾಗುತ್ತಿದೆ. ಆದಷ್ಟೂ ಮಾಹಿತಿಗಳನ್ನು ಮಕ್ಕಳ ತಲೆಗೆ ತುಂಬುವುದು ಅದರ ಉದ್ದೇಶ. ಇದರ ಮಧ್ಯೆ ಕಳೆದು ಹೋಗುತ್ತಿರುವ EQ(Emotional Quotient) ಎಂಬ ಮೌಲ್ಯ, ನೈತಿಕತೆ, ಭಕ್ತಿಗಳಂತಹ ಗುಣಗಳನ್ನು ಕಲಿಸುವ ಗೋಜಿಗೆ ಇಂದಿನ ಶಿಕ್ಷಣ ಪದ್ಧತಿ ಹೋಗುತ್ತಿಲ್ಲ. 

          ಯಾವುದೇ ದೇಶದ ಅಭಿವೃದ್ದಿಯಾದರೂ ಕೂಡಾ ಅದು ಅಲ್ಲಿನ ಸ್ಥಳೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎನ್ನುವುದೂ ಸಹ ಸಮಾಜಶಾಸ್ತ್ತ್ರದ ಇನ್ನೊಂದು ಮಾತು. ಭಾರತೀಯ ಸಮಾಜವು ಭಗವದ್ಗೀತೆ, ರಾಮಾಯಣ, ಮಹಾಭಾರತಗಳನ್ನು ತನ್ನ ಮನಸ್ಸಿನಲ್ಲಿ ಸಾವಿರಾರು ವರ್ಷಗಳಿಂದಲೂ ಉಳಿಸಿಕೊಂಡು ಬಂದಿದೆ, ಅದರಂತೆಯೇ ನಡೆಯುತ್ತಿದೆ. ಅಥವಾ ಸಮಾಜ ಇರುವಂತೆಯೇ ಈ ಗ್ರಂಥಗಳು ರಚನೆಗೊಂಡಿವೆ, ಎರಡೂ ಒಂದಕ್ಕೊಂದು ಪೂರಕ. ಭಾರತ ಅಭಿವೃದ್ದಿಯಾಗಬೇಕಾದರೆ ಅದು ಈ ಸಮಾಜದ ಅವಿಭಾಜ್ಯ ಅಂಗಗಳಾದ ಇವುಗಳನ್ನು ತಿಳಿದುಕೊಂಡವರಿಂದ ಮಾತ್ರವೇ ಹೊರತು, ಕೇವಲ ವಿದೇಶೀ ತತ್ವಜ್ಞಾನಿಗಳ ಪುಸ್ತಕಗಳಿಂದ ಪದಗಳನ್ನು ಗಟ್ಟು ಹೊಡೆದವರಿಂದ ಅಲ್ಲ. 

          ಭಗವದ್ಗೀತೆಯನ್ನು ಕೇವಲ ಒಂದು ಧರ್ಮದ ಗ್ರಂಥ ಎಂದು ಯಾರಾದರೂ ಹೇಳಿದರೆ, ಮಹಾತ್ಮಾ ಗಾಂಧಿಯವರನ್ನು ’ರಾಷ್ಟ್ತ್ರಪಿತ’ ಎಂದು ಕರೆಯುವ ಹಾಗೆಯೇ ಇಲ್ಲ. ಕಾರಣ, ಅವರೇ ಹೇಳಿರುವಂತೆ ತಮ್ಮ ಮನಸ್ಸಿನಲ್ಲಿ ಗೊಂದಲಗಳು ಉಂಟಾದಾಗಲೆಲ್ಲಾ ಆ ಸ್ಥಿತಿಯಿಂದ ಹೊರಬರಲು ಅವರಿಗೆ ಸಹಕರಿಸುತ್ತಿದ್ದುದು ಭಗವದ್ಗೀತೆಯ ಶ್ಲೋಕಗಳೇ ಹೊರತು, ’ಸರ್ವಸಮಾನತೆಯನ್ನು ಸಾರುವ’ ! ಬುದ್ದಿಜೀವಿಗಳು ಬರೆದ ಪಠ್ಯಪುಸ್ತಕಗಳಲ್ಲ. ಇನ್ನು, ಭಗವದ್ಗೀತೆಯನ್ನು ಅವೈಜ್ಞಾನಿಕ ಎಂದು ಯಾರಾದರೂ ಹೇಳಿದರೆ, ಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಅವರನ್ನು ವಿಜ್ಞಾನಿಯಲ್ಲ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಐನ್‌ಸ್ಟೀನ್‌ಗೆ ಭಗವದ್ಗೀತೆಯ ಮುಂದೆ  ಪ್ರಪಂಚದ ಉಳಿದೆಲ್ಲಾ ಜ್ಞಾನವೂ ಅನುಪಯೋಗಿಯಂತೆ ಕಾಣುತ್ತಿತ್ತು.

          ಕೇವಲ, ಬಿಜೆಪಿ ಸರ್ಕಾರ ಭಗವದ್ಗೀತೆಗೆ ಬೆಂಬಲವಾಗಿ ನಿಂತಿದೆ ಎಂದೋ, ಒಬ್ಬರು ಸ್ವಾಮೀಜಿಯವರ ನೇತೃತ್ವದಲ್ಲಿ ಇದರ ಅಭಿಯಾನ ನಡೆಯುತ್ತಿದೆ ಎಂದೋ, ಕಾಗೇರಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿಯೋ ಅರಚಾಡುವ ಬದಲು, ಭಾರತದ ಮಾನಸಿಕತೆಯನ್ನೊಮ್ಮೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಭಗವದ್ಗೀತೆಯಲ್ಲಿ ಇಲ್ಲಿನ ಮಣ್ಣಿನ ವಾಸನೆ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವರ್ಷಗಳಿಂದ ಅದು ಜನಮಾನಸದಲ್ಲಿ ಉಳಿದುಕೊಂಡು ಬಂದಿದೆ. ಬಿಜೆಪಿ ಸರ್ಕಾರ, ಕಾಗೇರಿ, ಸ್ವಾಮೀಜಿಗಳು ಇರಲಿ-ಬಿಡಲಿ, ಬುದ್ದಿಜೀವಿಗಳು ಎಷ್ಟೇ ಅರಚಾಡಲಿ, ಅದು ಇದ್ದೇ ಇರುತ್ತದೆ, ಇದು ಸತ್ಯ. ಆದರೆ, ಈ ಸತ್ಯ ಕೇವಲ ಹಣವಂತರ ಮಕ್ಕಳಿಗೆ, ಖಾಸಗಿ ಶಾಲಾ ಮಕ್ಕಳಿಗೆ ಸಿಕ್ಕರೆ ಸಾಕೇ ಅಥವಾ ನಮ್ಮ ಸರ್ಕಾರೀ ಶಾಲೆಗೆ ಬರುವ ಬಡ ಮಕ್ಕಳಿಗೂ ಬೇಕೇ-ಬೇಡವೇ ಎಂಬುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ.