
ಅದು ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸರಿಯಾದ ಪ್ರತಿಪಕ್ಷವಿಲ್ಲದೇ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ. ವಾಸ್ತವವಾಗಿ ಅದು ಪ್ರಜಾಪ್ರಭುತ್ವವೇ ಅಲ್ಲದ ಸರ್ವಾಧಿಕಾರಿ ಸರ್ಕಾರವಾಗುತ್ತದೆ. ಇದರಿಂದ ಜನತೆಗೆ ದೊರೆಯುವ ಲಾಭ ಸೊನ್ನೆ. ಪ್ರತಿಪಕ್ಷವನ್ನು ನಿರ್ನಾಮ ಮಾಡಿ ಮೂವತ್ತು ವರ್ಷ ಅಧಿಕಾರ ಚಲಾಯಿಸಿದ ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ನೇತೃತ್ವದ ಸರ್ಕಾರವೇ ಇದಕ್ಕೆ ಉದಾಹರಣೆ. ಒಂದು ಕಾಲದಲ್ಲಿ ದೇಶದ ಬಹುಪಾಲು ಉದ್ಯಮದ ಕೇಂದ್ರವಾಗಿದ್ದ ರಾಜ್ಯ ಮೂವತ್ತು ವರ್ಷಗಳಲ್ಲಿ ಹಾಳು ಕೊಂಪೆಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ಕಾಂಗ್ರೆಸ್ ಬಲಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಹಿಂದೆ ಸಿದ್ಧರಾಮಯ್ಯನವರು ಅಹಿಂದ ಚಳುವಳಿಯ ಹಿನ್ನೆಲೆಯಲ್ಲಿ ಜೆ.ಡಿ.ಎಸ್ ನಿಂದ ಬೇರ್ಪಡಿಸಿಕೊಂಡು ಹೊಗುತ್ತಾರೆನ್ನುವ ಸಂದರ್ಭದಲ್ಲಿ, ಕಟ್ಟಾ ಬಿ.ಜೆ.ಪಿ ಬೆಂಬಲಿಗ ಹಿರಿಯರೊಬ್ಬರ ಜೊತೆ ಅವರ ವಕೀಲ ಸ್ನೇಹಿತನ ಮನೆಗೆ ಹೋಗಿದ್ದೆ. ತನ್ನ ಇಂಗಿತವನ್ನು ಹೇಳಲೋ ಅಥವಾ ಬಂದಿದ್ದ ಹಿರಿಯರನ್ನು ಮೆಚ್ಚಿಸಲೋ 'ಸಿದ್ಧರಾಮಯ್ಯ ಪಕ್ಷದಿಂದ ಹೊರಗೆ ಹೋಗಿ ಜೆ.ಡಿ.ಎಸ್ ಎರಡು ಹೋಳಾದರೆ ಇದರಿಂದ ಬಿ.ಜೆ.ಪಿ ಗೆ ಲಾಭ ಹೆಚ್ಚು' ಎಂದರು ವಕೀಲರು. ಅದಕ್ಕೆ ಈ ಹಿರಿಯರು ಹೇಳಿದ್ದು, 'ಅದು ಯಾವುದೇ ಪಕ್ಷವಿರಬಹುದು-ಒಡೆಯುವುದರಿಂದ ಕೇವಲ ರಾಜಕೀಯ ಪಕ್ಷಗಳಿಗೆ ಲಾಭವಿರಬಹುದೇ ಹೊರತು ಜನತೆಗೆ ಅದರಿಂದ ಯಾವ ಲಾಭವೂ ಇಲ್ಲ. ನಕಾರಾತ್ಮಕ ಪ್ರಕ್ರಿಯೆಗಳಿಂದ ಸಕಾರಾತ್ಮಕ ಫಲಿತಾಂಶ ದೊರಕಲು ಸಾಧ್ಯವಿಲ್ಲ. ಈ ರೀತಿಯ ಪ್ರಕ್ರಿಯೆಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ' ಎಂದು ಹೇಳಿದರು. ತಕ್ಷಣವೇ ವಕೀಲ ಸ್ನೇಹಿತನ ಮುಖ ಪೆಚ್ಚಾಯಿತು. ಸುಮಾರು ಐದು ವರ್ಷಗಳ ಹಿಂದೆ ನಡೆದ ಈ ಘಟನೆ ಕಾಂಗ್ರೆಸ್ ಪಾದಯಾತ್ರೆಯನ್ನು ನೋಡಿದಾಗ ನೆನಪಾಯಿತು.
![]() |
Picture:analogengineering.com |
ಇಷ್ಟೆಲ್ಲವನ್ನೂ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಸಮರ್ಥಿಸಲು ಇಲ್ಲಿ ಹೇಳುತ್ತಿಲ್ಲ. ಬದಲಾಗಿ ಈಗಿನ ಪಾದಯಾತ್ರೆಗೂ ಕಾಂಗ್ರೆಸ್ ನ ಇಲ್ಲಿಯವರೆಗಿನ ಧೋರಣೆಗಳಿಗೂ ಸಂಬಂಧ ಕಲ್ಪಿಸಿ ಒಂದು ದೊಡ್ಡ ಮೋಸದ ಜಾಲವನ್ನು ಸಮರ್ಥಿಸಲು ಯಾರೂ ಮುಂದಾಗಬಾರದು. ಮುಂದೆ ಮತಾಂತರ-ಗೋಹತ್ಯೆ-ಭಯೋತ್ಪಾದನೆಯ ವಿಷಯಗಳು ಬಂದಾಗ ಆ ಪಕ್ಷವನ್ನು ಅಗತ್ಯವಿದ್ದಲ್ಲಿ ವಿರೋಧಿಸೋಣ. ಆದರೆ, ಇದು ಸರಿಯಾದ ಕಾಲವಲ್ಲ. ಈ ಯಾತ್ರೆಯಿಂದ ಕಾಂಗ್ರೆಸ್ನಲ್ಲಿ ನಾಲ್ಕೈದು ಜನ ಪ್ರಭಾವಿ ನಾಯಕರು ಹೊರಹೊಮ್ಮಿ ಪ್ರತಿಪಕ್ಷ ಗಟ್ಟಿಯಾದರೆ ಲಾಭ ಯಾರಿಗೆ? ಪ್ರಜಾಪ್ರಭುತ್ವಕ್ಕೇ ಅಲ್ಲವೇ? ಅಷ್ಟೇ ಅಲ್ಲದೇ ಪ್ರತಿಪಕ್ಷಕ್ಕೆ ವಿದೇಶಗಳಲ್ಲಿ Government-in-Waiting ಎಂದು ಹೇಳುತ್ತಾರೆ. ಅಧಿಕಾರದ ಗದ್ದುಗೆ ಏರಬೇಕೆನ್ನುವುದು ಪ್ರತಿಯೊಂದು ವಿರೋಧಪಕ್ಷದ ಗುರಿಯಾಗಿರುತ್ತದೆ, ಇದಕ್ಕೆ ಕಾಂಗ್ರೆಸ್ ಕೂಡಾ ಹೊರತಲ್ಲ. ಈ ದಿಕ್ಕಿನಲ್ಲಿ ಚರ್ಚೆ ಮುಂದುವರಿಯಲಿ. ದಯವಿಟ್ಟು ಈ ಲೇಖನ ಬರೆದವ ನಾನು ಯಾವ ಪಕ್ಷದವನು ಎಂಬುದರಿಂದ ಯೋಚಿಸಲು ಪ್ರಾರಂಭಿಸದಿರೋಣ, ನಿಜ ಪ್ರಜಾಪ್ರಭುತ್ವವಾದಿಗಳಾಗೋಣ.