ಬುಧವಾರ, ಮಾರ್ಚ್ 31, 2010

ಎಲ್ಲಾರಿಗೂ ದೊಡ್ದಪುರದ ರಮೇಶನ ದೊಡ್ಡ ನಮಸ್ಕಾರಗಳು.....

               ಅಲ್ಲಿ-ಇಲ್ಲಿ ಕೇಳಿದ್ದು-ಓದಿದ್ದು ಎಲ್ಲಾನೂ ಸೇರಿಸಿ ಅವಾಗವಾಗ ಲೇಖನಗಳನ್ನ ಬರೀತಾ ಇರ್ತೀನಿ. ನೀವು ಹೋದಾಗ-ಬಂದಾಗ-ಬಿಡುವಾದಾಗಲೆಲ್ಲಾ ಇದನ್ನ ಒದ್ತಾ ಇರಿ. ನಿಮಗೆ ಸರಿ-ತಪ್ಪು ಅನ್ಸಿದ್ದನ್ನ ಇನ್ನೊಬ್ರಿಗೆ ಬೇಜಾರಗ್ದಿರೋ ರೀತಿ ಕಾಮೆಂಟ್ ಮಾಡಿ. ನೀವೂ ಅವಾಗವಾಗ ಬರ್ದು-ಗಿರ್ದು ಮಾಡ್ತಾ ಇರಿ.

ಇಂತಿ,
ರಮೇಶ ದೊಡ್ಡಪುರ

ಕೊಟ್ಟಾರೆ ಕೊಡು ಶಿವನೇ ಚಿರಂಜೀವಿಯಗಿಸೋ ವರವಾ...!

               ಹಳ ದಿನಗಳಿಂದ ಅದೇಕೋ ಅದೇ ವಿಷಯ ತಲೆಯನ್ನು ಕೊರೀತಾ ಇತ್ತು. ಹೀಗೆಲ್ಲಾ ಯಾಕೆ ಆಗುತ್ತೆ? ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ, ಬಟ್ಟೆಯನ್ನು ಬದಲಿಸಿದಂತೆ ದೇಹವನ್ನು ಆತ್ಮವು ಬದಲಿಸುತ್ತದೆ ಎಂದು. ಆದರೂ ಏಕೆ ಈ ಜನಕ್ಕೆ ಆಗಿಹೋಗಿರುವ ಒಬ್ಬ ’ಆಪ್ತ’ನ ಸಾವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ?....

               ಅವತ್ತು ಆಫೀಸ್ ಮುಗಿಸಿಕೊಂಡು ಬಿರಬಿರನೆ ಮನೆಕಡೆಗೆ ಹೊರಟು ಖೋಡೇಸ್ ವೃತ್ತದ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ಕಾಯುತ್ತಾ ನಿಂತಿದ್ದೆ. ತಕ್ಷಣ ಆಶ್ಚರ್ಯ, ನಗು, ಕೋಪ ಎಲ್ಲಾ ಒಟ್ಟೊಟ್ಟಿಗೇ ಆದ ಅನುಭವ. ಪೇಪರ್ ಮಾರುವ ಹುಡುಗನ ಕೈಲಿದ್ದ ಹಳದೀ(ಪೀತ) ಪತ್ರಿಕೆಯೊಂದರ ಮುಖಪುಟದಲ್ಲಿ ಬರೆದಿತ್ತು, "ಸಿಂಹ ಸಾಯಲಿಲ್ಲ- ಗುರಿಯಿಟ್ಟು ಹೊಡೆದರು". ಸಾಹಸ ಸಿಂಹ ವಿಷ್ಣುವರ್ಧನ್ ಸಾವಿನ ಕುರಿತು ಬರೆಯಲಾಗಿದ್ದ ತಲೆಯಿಲ್ಲದ ತಲೆಬರಹ ಅದು. ಇನ್ನು ಅದನ್ನು ಕೊಂಡು ಓದಿ ಒಂಭತ್ತು ರೂಪಾಯಿ ಹಾಳುಮಾಡಿಕೊಳ್ಳುವಷ್ಟು ಮೂರ್ಖನಾಗಿಲ್ಲದಿದ್ದರಿಂದ ಒಳಗೆ ಏನಿರಬಹುದೆಂದು ಊಹಿಸಿ ಸುಮ್ಮನಾದೆ.

               ತಕ್ಷಣ ಟ್ಯೂಬ್ ಲೈಟ್ ಹತ್ತಿಕೊಂಡಿತು! ಆ ಗಲಾಟೆಗಳಿಗೆಲ್ಲಾ ಇಂತಹ ಪತ್ರಿಕೆಗಳೇ ಕಾರಣ ಇರಬಹುದು. ಇಲ್ಲ ಸಲ್ಲದ್ದನ್ನೆಲ್ಲಾ ’ಬರೆ’ದು ತಮಾಷೆ ನೋಡುವ ಇಂಥವರಿಂದಲೇ ಇದೆಲ್ಲ. ತಿಳಿನೀರಿನಂತಿರುವ ಜನರ ಮನಸ್ಸಿಗೆ ಕಲ್ಲೆಸೆದು ತರಂಗಗಳನ್ನು ನೋಡುತ್ತಾ, ಏಳುವ ಬಗ್ಗಡವನ್ನು ಬಣ್ಣಿಸುತ್ತಾ ಕೂರುವವರು ಇವರು ಎನ್ನಿಸಿತು.

               ವಿಷ್ಣುವರ್ಧನ್ ನಿಧನದ ನಂತರ ನಡೆದ ಗಲಭೆಗಳನ್ನೆಲ್ಲಾ ನೆನೆಸಿಕೊಂಡರೆ ನಿಜವಾಗಲೂ ಬೇಸರವಾಗುತ್ತದೆ. ಯಾಕೆ ಬೇಕು ಈ ಜನಕ್ಕೆ ಈ ಪರಿಯ ಹುಚ್ಚು? ಒಬ್ಬ ಮನುಷ್ಯನ ಪ್ರಾಣ ಹೋದದ್ದಕ್ಕೆಲ್ಲಾ ಈ ಪಾಟಿ ಪ್ರತಿಕ್ರಿಯೆಯಾ? "ವಿಷ್ಣುವರ್ಧನ್ನೂ ಒಬ್ಬ ಮನುಷ್ಯ ತಾನೇ? ಅವನು ಸತ್ತದ್ದಕ್ಕೆ ಇವರೆಲ್ಲಾ ಯಾಕೆ ಬಾಯಿ ಬಡ್ಕೋ ಬೇಕು?" ಅಂದ್ರು ಗೆಳೆಯರೊಬ್ಬರು. ಹೌದು ಅನ್ನಿಸಿತ್ತು, ಆ ಸಮಯಕ್ಕೆ. ಆದರೂ, ಒಬ್ಬರ ಮೇಲೆ ಈ ಪಾಟಿ ಭಕ್ತಿ, ಪ್ರೀತಿಗಳನ್ನು ಇಟ್ಟುಕೊಳ್ಳಲು ಸಾಧ್ಯವೇ? ಆ ವ್ಯಕ್ತಿ ಜನರ ಮನಸ್ಸಿನಲ್ಲಿ ಏಳಿಸಿ ಹೋಗಿರುವ ಕಂಪನ ಯಾವ ರೀತಿಯದ್ದು ಅನ್ನಿಸಿತು. ೨೦೦೬ ರಲ್ಲಿ ವರನಟ ರಾಜ್ ಕುಮಾರ್ ನಿಧನದ ಸಮಯದಲ್ಲಿ ಆದ ಗಲಭೆ, ಗೋಲಿಬಾರ್ ವಿಷಯಗಳೆಲ್ಲಾ ಇನ್ನೂ ಹಸಿಯಾಗಿವೆ. ಸ್ವಲ್ಪ ಹೆಚ್ಚಿಗೆ ದೊಂಬಿಯಾದರೂ ಏಟು ಬೀಳುತ್ತದೆ ಅನ್ನುವುದು ಗೊತ್ತಿದೆ. ಆದರೂ ಈ ಜನ ಬೀದಿಗಿಳಿದು ತಮ್ಮ ಹತಾಶೆ, ಆಕ್ರೋಶಗಳನ್ನು ತೀರಿಸಿಕೊಳ್ಳುತ್ತಾರೆ. ಇನ್ನು, ಯಾರೋ ದುಡ್ಡು ಕೊಟ್ಟು ಇದನ್ನೆಲ್ಲಾ ಮಾಡಿಸುತ್ತಾರೆ ಎನ್ನುವುದು ಅರ್ಧ ಸತ್ಯ ಎನ್ನಿಸುತ್ತದೆ. ಈ ಗಲಾಟೆ, ದೊಂಬಿಗಳನ್ನೆಲ್ಲಾ ಬದಿಗಿಟ್ಟು ಒಮ್ಮೆ ನೋಡಿದರೆ, ನಿಧನರಾದ ಇಂತಹವರ ಜೀವನವೇ ಧನ್ಯ ಎನ್ನಿಸುತ್ತದೆ. ’ಒಬ್ಬ ಮನುಷ್ಯ ಎಷ್ಟು ದೊಡ್ಡವನು ಎಂದು ಅವನು ಸತ್ತ ನಂತರ ಅವನಿಗಾಗಿ ಎಷ್ಟು ಜನ ಕಂಬನಿ ಮಿಡಿಯುತ್ತಾರೆ ಎನ್ನುವುದರಿಂದ ತಿಳಿಯುತ್ತದೆ’ ಎಂದು ಎಲ್ಲೋ ಕೇಳಿದ ನೆನಪು.

               ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ತೀರಿಕೊಂಡಾಗಲಂತೂ ೬೦-೭೦ ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳಿದವರಿಗೆ ರಾಜಶೇಖರರೆಡ್ಡಿ ತೀರಿಕೊಂಡದ್ದಕ್ಕಿಂತಲೂ ದೊಡ್ಡ ಆಘಾತವಾಗಿರುತ್ತದೆ. ಇನ್ನೂ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ, ಇವನು ಅದ್ಯಾವಾಗ ಸಾಯ್ತಾನೋ ಅಂದೇ ಈ ದೇಶ ಉದ್ಧಾರ ಆಗುತ್ತೆ ಅಂತ ಜನರ ಬಾಯಿಯಿಂದ ಬೈಯ್ಯಿಸಿಕೊಳ್ಳುತ್ತಿರುವ ಅದೆಷ್ಟೋ ರಾಜಕಾರಣಿಗಳಿಗೆ ರಾಜಶೇಖರರೆಡ್ಡಿ ಒಂದು ಆದರ್ಶವಾಗಬೇಕು. (ಇದರರ್ಥ ಬೇಗ ಸಯಬೇಕು ಅಂತಲ್ಲ, ಬದುಕಿರೋವರೆಗೆ ಒಂದಷ್ಟು ಒಳ್ಳೇ ಕೆಲಸ ಮಾಡ್ಬೇಕು ಅಂತ).

               ದಿಟ್ಟ ನಿಲುವು ಎಂದು ಹೇಳಿಕೊಳ್ಳುವ ಅನೇಕ ಪತ್ರಿಕೆಗಳು, ಟಿ.ವಿ ವಾಹಿನಿಗಳು ಅನೇಕ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು-ಸುಳ್ಳು ಬರೆಯುತ್ತಿರುತ್ತವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನ, ವೈ.ಎಸ್.ಆರ್ ಸಾವಿನ ಹಿಂದೆ ಅಂಬಾನಿ ಸೋದರರ ಸಂಚಿದೆ ಎಂಬ ಸಣ್ಣ ಸುದ್ದಿ ನೋಡಿದ ತಕ್ಷಣ ಹಿಂದೆ-ಮುಂದೆ ಯೋಚಿಸದೇ, "ರಿಲಯನ್ಸ್" ಎಂದು ಬರೆದಿದ್ದ ಯಾವ ಅಂಗಡಿ, ವ್ಯಾಪಾರವನ್ನೂ ಬಿಡದೇ ಚಚ್ಚಿ ಹಾಕುತ್ತಾರೆ ಅಂದರೆ ರಾಜಶೇಖರರೆಡ್ಡಿ ಇವರಲ್ಲಿ ತುಂಬಿಹೋಗಿರುವ ಭಾವನೆ ಎಂತಹದ್ದು? ನಿಜಕ್ಕೂ ವೈ.ಎಸ್.ಆರ್ ಗೊಂದು ಹ್ಯಾಟ್ಸಾಫ್.

               ಆಗಲೇ ಹೇಳಿದಂತೆ (ನಾನಲ್ಲ, ಕೃಷ್ಣ ಹೇಳಿದಂತೆ) ಹುಟ್ಟಿದ ಮೇಲೆ ಎಂದಾದರೂ ಸಾಯಲೇ ಬೇಕು. ಹಾಗೆಯೇ ಇಂದು ತಮಿಳು ತೆಲುಗು, ಹಿಂದಿ ಚಿತ್ರರಂಗದ ದೇವತೆಗಳೂ ಸಹಾ.....! ಹಾಗಾದಾಗ ಈ ಜನರ ಪಾಡೇನು? ಏಕೆಂದರೆ ಒಬ್ಬ ರಾಜ್ ಕುಮಾರ್ ಮೇಲೆ ಜನರು ಇಟ್ಟಿರುವಷ್ಟೇ ಪ್ರೀತಿಯನ್ನು ರಜನೀಕಾಂತ್ ಮೇಲೆ ಇಟ್ಟಿರುವವರ ಗತಿಯೇನು ಎಂದು ಊಹಿಸಿಕೊಂಡರೇ ಭಯವಾಗುತ್ತದೆ. ಒಬ್ಬ ಕರುಣಾನಿಧಿ, ಒಬ್ಬ ಜಯಲಲಿತಾ, ಒಬ್ಬ ಚಿರಂಜೀವಿ, ಒಬ್ಬ ಅಮಿತಾಭ್, ಒಬ್ಬ ಶಾರೂಖ್....... ರನ್ನೂ ಸಹಾ ಜನ ಅಷ್ಟೇ ಆರ‍ಾಧಿಸುತ್ತಾರೆ. ಅಂತಹ ಸಮಯದಲ್ಲಿ ಆಗುವ ಕೋಲಾಹಲಗಳನ್ನು ತಡೆಯಲು ಯಾರು ಏನು ತಾನೇ ಮಾಡಲು ಸಾಧ್ಯ? ಸರ್ಕಾರದಿಂದ ಪ್ರತಿಯೊಬ್ಬನಿಗೂ ಪೋಲೀಸ್ ಕಾವಲು ಹಾಕಲಂತೂ ಆಗುವುದಿಲ್ಲ. ಇನ್ನೇನು ಮಾಡಬಹುದು?

               ನಮ್ಮವರು ತೀರಿಕೊಂಡಾಗ, ಮನಸ್ಸಿಗೆ ಆಘಾತವಾದಾಗ, ಪ್ರಪಂಚವೇ ತಲೆಕೆಳಕಾದಂತೆ ಅನ್ನಿಸಿದಾಗ, ಜೀವನವೇ ಬೇಡವೆನಿಸಿದಾಗ ನಮ್ಮ ಜನಕ್ಕೆ ಅದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ-ಸಾಮರ್ಥ್ಯಗಳನ್ನು ಕೊಡು ಎಂದು ಆ ದೇವರಲ್ಲಿ ಪ್ರಾರ್ಥಿಸಬಹುದು ಅಥವಾ ನಮ್ಮ ನೆಚ್ಚಿನ ಸಿನಿಮಾ ತಾರೆಯರು, ರಾಜಕಾರಣಿಗಳು, ಗುರುಗಳನ್ನೆಲ್ಲರನ್ನೂ ಹನುಮಂತನಂತೆ ಚಿರಂಜೀವಿಗಳನ್ನಾಗಿಸು ಎಂದು ಬೇಡಬಹುದಷ್ಟೇ.

               ಹುಲು ಮಾನವರು ನಾವು. ಆ ದೈತ್ಯ ಪ್ರೀತಿಯ ಮುಂದೆ ಇನ್ನೇನು ಮಾಡಲು ಸಾಧ್ಯ?